ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸುದ್ದಿ ಸಂಕ್ಷೇಪ

Mainashree
Updated On : 1 Jan 2014, 11:02 am

ಆರೋಗ್ಯದತ್ತ ಗಮನ ನೀಡಿ: ಶ್ರೀ
ಅರಸೀಕೆರೆ: ಶ್ರೀಮಂತಿಕೆಯ ಜೀವನದ ಆಸೆಗೆ ಜೋತು ಬಿದ್ದು ಮನುಷ್ಯ ಹಣ ಗಳಿಸಲು ಹಗಲಿರುಳು ಎನ್ನದೇ ದುಡಿಯುತ್ತಿದ್ದಾನೆ ವಿನಃ ತನ್ನ ಆರೋಗ್ಯದ ಕಡೆ ಗಮನ ನೀಡದೆ ಇರುವುದರಿಂದ ನಾನಾ ಕಾಯಿಲೆಗೆ ತುತ್ತಾಗುತ್ತಿದ್ದಾನೆ ಎಂದು ಮಾಡಾಳು ಶ್ರೀ ಗುರು ಬಸವಕುಮಾರ ಆಶ್ರಮದ ಶ್ರೀ ತೋಂಟದಾರ್ಯ ಸ್ವಾಮಿಜಿ ವಿಷಾದಿಸಿದರು. ಲಿಂಗೈಕ್ಯ ಶ್ರೀ ನೀಲಾಲೋಚನ ಶ್ರೀಗಳ 21ನೇ ವರ್ಷದ ಪುಣ್ಯಾರಾಧನೆ ಅಂಗವಾಗಿ ತಾಲೂಕಿನ ಮಾಡಾಳು ಗ್ರಾಮದ ಶ್ರೀ ಗುರು ಬಸವಕುಮಾರ ಆಶ್ರಮದಲ್ಲಿ ಅರಸೀಕೆರೆ, ತುಮಕೂರು ಸೆಂಟ್ರಲ್, ತಿಪಟೂರು ಹಾಗೂ ಕಡೂರು ರೋಟರಿ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ  ಸೋಮವಾರ ಆಯೋಜಿಸಿದ್ದ ಉಚಿತ ನೇತ್ರಾ ತಪಾಸಣೆ ಮತ್ತು ಚಿಕಿತ್ಸೆ, ರಕ್ತ ಗುಂಪು ತಪಾಸಣೆ, ದಂತ ಚಿಕಿತ್ಸೆ, ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಅರಸೀಕೆರೆ ರೋಟರಿ ಸಂಸ್ಥೆಯ ಅಧ್ಯಕ್ಷ ಪ್ರವೀಣ್ ಕುಮಾರ್ ಮಾತನಾಡಿ, ನಾವು ಫಾಸ್ಟ್  ಫುಡ್ ಜೀವನ ಶೈಲಿಯನ್ನು ಆಳವಡಿಸಿಕೊಂಡಿರುವುದರಿಂದ ನಾನಾ ರೋಗಗಳು ನಮ್ಮ ದೇಹದ ಮೇಲೆ ಫಾಸ್ಟಗಿಯೇ ದಾಳಿ ಮಾಡುತ್ತಿದೆ. ಉತ್ತಮ ಆಹಾರ ಸೇವನೆ ಜೊತೆಗೆ ಕಾಲ ಕಾಲದಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಆರೋಗ್ಯವಂತರಾಗಿ ಬದುಕೋಣವೆಂದು ಕರೆ ನೀಡಿದರು.
ಸಹ ಶಿಕ್ಷಕರಿಗೆ ಮುಂಬಡ್ತಿ
ಹಾಸನ: ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ವೃಂದದಿಂದ ಸರ್ಕಾರಿ ಪ್ರೌಢಶಾಲಾ ಸಹಶಿಕ್ಷಕ ಗ್ರೇಡ್-2 ವೃಂದಕ್ಕೆ, ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕರು ಗ್ರೇಡ್-2 ಹುದ್ದೆಯಿಂದ ಪ್ರೌಢಶಾಲಾ ದೈಹಿಕ ಶಿಕ್ಷಕರು ಗ್ರೇಡ್-1 ಹುದ್ದೆಗೆ ಹಾಗೂ ಪ್ರಾಥಮಿಕ ಶಾಲಾ ಸಂಗೀತ ಶಿಕ್ಷಕರ ಹುದ್ದೆಗಳಿಂದ ಪ್ರೌಢ ಶಾಲಾ ಸಂಗೀತ ಶಿಕ್ಷಕರಿಗೆ ಗ್ರೇಡ್-2 ಹುದ್ದೆಗೆ ಬಡ್ತಿ ನೀಡಲಾಗುತ್ತದೆ. ಬಡ್ತಿ ಹೊಂದಲು ಅರ್ಹತೆ ಹೊಂದಿರುವ ಶಿಕ್ಷಕರು ಆಯಾ ಕ್ಷೇತ್ರ ಶಿಕ್ಷಣಾಕಾರಿಗಳ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಡಿಡಿಪಿಐ ಜಿ.ಆರ್. ಬಸವರಾಜ ತಿಳಿಸಿದ್ದಾರೆ.
ಅಗ್ನಿ ಅವಘಡ ಪ್ರಾತ್ಯಕ್ಷಿಕೆ ಪ್ರದರ್ಶನ
ಅರಕಲಗೂಡು: ಅಗ್ನಿ ಆಕಸ್ಮಿಕ ಅಥವಾ ಅಗ್ನಿ ಅವಘಡಗಳು ಸಂಭವಿಸದಂತೆ ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಕುರಿತು ಅರಿವು ಕಾರ್ಯಕ್ರಮ ತಾಲೂಕಿನ ಅಂಕನಾಯಕನಹಳ್ಳಿ ಗ್ರಾಮದಲ್ಲಿ ನೆರವೇರಿತು. ಪಟ್ಟಣದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಅರಕಲಗೂಡು ಅಗ್ನಿ ಶಾಮಕ ದಳದ ಸಿಬ್ಬಂದಿ ಪ್ರಾತ್ಯಕ್ಷಿಕೆ ನೀಡಿ ಬೆಂಕಿ ನಂದಿಸಿದರು.
ವೃತ್ತಿ ನೈಪುಣ್ಯತೆ ಅಗತ್ಯ: ಗೋ.ಮ
ಅರಸೀಕೆರೆ: ವಿದ್ಯಾರ್ಥಿಗಳು ತಮ್ಮ ಜ್ಞಾನಾರ್ಜನೆ ಜತೆಗೆ ಅನೇಕ ಕರಕುಶಲ ವಸ್ತುಗಳ ಬಗ್ಗೆ ವೃತ್ತಿ ನೈಪುಣ್ಯತೆ ಬೆಳೆಸಿಕೊಳ್ಳುವುದು ಸೂಕ್ತ ಎಂದು ವಿಧಾನ ಪರಿಷತ್ ಸದಸ್ಯ ಗೋ. ಮಧುಸೂದನ್ ಕಿವಿಮಾತು ಹೇಳಿದರು. ಜಿಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ತಾಲೂಕು ವೃತ್ತಿ ಶಿಕ್ಷಕರ ಸಂಘದ ಆಶ್ರಯದಲ್ಲಿ ಸೋಮವಾರ ಪಟ್ಟಣದ ಶ್ರೀಗುರುಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ  ಪ್ರೌಢಶಾಲಾ ವೃತ್ತಿ ಶಿಕ್ಷಣದ ವಸ್ತುಪ್ರದರ್ಶನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ತಾ.ಪಂ. ಅಧ್ಯಕ್ಷ ಹೆಚ್.ಟಿ. ಶಿವಮೂರ್ತಿ, ಪುರಸಭೆ ಅಧ್ಯಕ್ಷ ಮೋಹನ್ ಕುಮಾರ್ ಉಪನಿರ್ದೇಶಕರ ಕಚೇರಿಯ ಅಧಿಕಾರಿ ಪುಟ್ಟರಾಜು, ವಿಷಯ ಪರಿವೀಕ್ಷಕ ಚನ್ನಯ್ಯ ಮಾತನಾಡಿದರು. ನಾನಾ ಸಂಘಗಳ ಪದಾಧಿಕಾರಿಗಳು ಇದ್ದರು.
ಗೀತ ಜಯಂತಿ
ಅರಕಲಗೂಡು: ಪಟ್ಟಣದ ಶ್ರಿ ನಂಜುಂಡೇಶ್ವರ ಮತ್ತು ಶ್ರೀ ಕನ್ನಿಕಾಪರಮೇಶ್ವರಿ ದೇವಾಲಯದಲ್ಲಿ ಗೀತಾ ಜಂಯಂತಿ ಪ್ರಯುಕ್ತ ಭಗವದ್ಗೀತಾ ಪಠಣ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಹಿರಿಯ ವಕೀಲರಾದ ಜನಾರ್ಧನಗುಪ್ತ ಅವರು ಗೀತೆಯ ಮಹತ್ವವನ್ನು ಕುರಿತು ಉಪನ್ಯಾಸ ನೀಡಿದರು. ಸಮಾರಂಭದಲ್ಲಿ ದೇವಾಲಯ ಸಮಿತಿಯ ಪದಾಧಿಕಾರಿಗಳಾದ ಎ.ಎನ್. ರಾಮಚಂದ್ರ ಶ್ರೇಷ್ಠಿ, ಶಶಿಕುಮಾರ್, ಎ.ಜಿ. ರಾಮನಾಥ್, ವಿಪ್ರ ಮಹಿಳಾ ಸಮಾಜದ ಅಧ್ಯಕ್ಷೆ ಜಯಲಕ್ಷ್ಮಮ್ಮ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement