ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಒಕ್ಕಲಿಗರ ಸಂಘದ ಚುನಾವಣೆಗೆ ಸಿದ್ಧತೆ

Mainashree
Updated On : 2 Jan 2014, 10:19 am

ಹಾಸನ: ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿಯ ಮೂರು ಸದಸ್ಯ ಸ್ಥಾನಗಳಿಗೆ  ಜ.5ರಂದು ಮತದಾನ ನಡೆಯಲಿದ್ದು, ಸಕಲ ಸಿದ್ಧತೆ ಮಾಡಲಾಗಿದೆ ಜ. 6ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.
ಹಾಸನ ಜಿಲ್ಲೆಯಿಂದ ಮೂವರು ನಿರ್ದೇಶಕರನ್ನು ಆಯ್ಕೆ ಮಾಡಬೇಕಾಗಿದ್ದು, 21 ಮಂದಿ ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ಮತದಾನ ತಾಲೂಕಿನ ನಿಗದಿತ  ಕೇಂದ್ರಗಳಲ್ಲಿ  ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಇಲ್ಯಾಸ್ ಉಲ್ಲಾ ಷರೀಫ್ ಗುರುವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಜಿಲ್ಲೆಯಲ್ಲಿ ಒಟ್ಟು 25,944  ಮತದಾರರು ಇದ್ದಾರೆ. ಹಾಸನದಲ್ಲಿ 10, 499,  ಹೊಳೆನರಸೀಪುರ- 1111, ಚನ್ನರಾಯಪಟ್ಟಣ - 7408,  ಅರಸೀಕೆರೆ - 2149, ಬೇಲೂರು - 1664, ಸಕಲೇಶಪುರ - 1666, ಆಲೂರು - 645,  ಅರಕಲಗೂಡು - 802 ಮತದಾರರು ಇದ್ದಾರೆ.  
ಭದ್ರತಾ ವ್ಯವಸ್ಥೆ: ಜ. 4ರಂದು ಮಧ್ಯಾಹ್ನ 2.30 ರಿಂದ ಮಸ್ಟರಿಂಗ್ ಕಾರ್ಯ ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ನಡೆಯಲಿದ್ದು, ನಿಯೋಜಿತ ಚುನಾವಣಾ ಸಿಬ್ಬಂದಿ ಅಂದೇ  ತಾಲೂಕು ಕೇಂದ್ರಗಳಲ್ಲಿ ನಿಗದಿಪಡಿಸಿರುವ ಮತದಾನ ಕೇಂದ್ರಗಳಿಗೆ  ತೆರಳಲಿದ್ದಾರೆ. ಸೂಕ್ತ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ.
ಪೊಲೀಸರ ಬಳಕೆ: ಜಿಲ್ಲೆಯಲ್ಲಿನ ಎಲ್ಲಾ ಮತಕೇಂದ್ರಗಳಿಗೆ ಮೀಸಲು ಸಿಬ್ಬಂದಿ ಸೇರಿ ಒಟ್ಟು 280 ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳಲಾಗಿದೆ. ಭದ್ರತಾ ವ್ಯವಸ್ಥೆಗಾಗಿ ಮತದಾನ ದಿನ ಹಾಗೂ ಮತ ಎಣಿಕೆ ದಿನ ಹಾಗೂ ಇತರೆ ಭದ್ರತೆಗಾಗಿ  ಒಟ್ಟು  206 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳಲಾಗಿದೆ. ಇದರೊಂದಿಗೆ ಎಲ್ಲ ತಾಲೂಕು ಮತಕೇಂದ್ರಗಳಿಗೆ ಜಿಲ್ಲಾ ಸಶಸ್ತ್ರ ಪಡೆ ಮತ್ತು ರಾಜ್ಯ ಮೀಸಲು ಪಡೆ ಪೊಲೀಸರನ್ನು ಬಳಸಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಗುರುತಿನ ಚೀಟಿ ಕಡ್ಡಾಯ: ಮತದಾನ ದಿನ ಹಾಗೂ ಮತ ಎಣಿಕೆ ಸಮಯಕ್ಕೆ ಒಬ್ಬ ಅಭ್ಯರ್ಥಿಗೆ ತಾಲೂಕಿಗೆ ಒಬ್ಬ ಏಜೆಂಟರಂತೆ ನೇಮಕ ಮಾಡಲು ಅವಕಾಶ ನೀಡಲಾಗಿದೆ. ಜ. 5ರಂದು ಮತದಾನ ಬೆಳಗ್ಗೆ 8ರಿಂದ ಸಂಜೆ 4ರವರೆಗೆ ನಡೆಯುತ್ತದೆ. ಮತದಾನ ಕೇಂದ್ರದಲ್ಲಿ ಮೊಬೈಲ್ ಬಳಕೆಯನ್ನು ನಿಷೇಧಿಸಿದೆ. ಮತದಾನ ಮಾಡಲು ಒಕ್ಕಲಿಗರ ಸಂಘದ ಗುರುತಿನ ಚೀಟಿ ಕಡ್ಡಾಯ. ಬೇರೆ ಯಾವುದೇ ದಾಖಲೆಗಳನ್ನು ಪರಿಗಣಿಸಿ, ಮತದಾನಕ್ಕೆ ಅವಕಾಶ ಇರುವುದಿಲ್ಲ ಎಂದು ತಿಳಿಸಿದ್ದಾರೆ.
ಸ್ಟ್ರಾಂಗ್ ರೂಂನಲ್ಲಿ ಭದ್ರತಾ ವ್ಯವಸ್ಥೆ: ಮತದಾನ ಪೂರ್ಣಗೊಂಡ ನಂತರ ಎಲ್ಲ ಮತ ಕೇಂದ್ರಗಳಿಂದ ಬರುವ ಮತ ಪೆಟ್ಟಿಗೆಗಳನ್ನು ಮತ ಎಣಿಕೆ ಕೇಂದ್ರವಾದ ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿನ ಸ್ಟ್ರಾಂಗ್ ರೂಂನಲ್ಲಿ ಸೂಕ್ತ ಭದ್ರತಾ ವ್ಯವಸ್ಥೆಯೊಂದಿಗೆ ಇಡಲಾಗುವುದು. ಮತ ಎಣಿಕೆಯು ಜ. 6ರಂದು ಬೆಳಗ್ಗೆ 9 ರಿಂದ ಹಾಸ ನಗರದ ಸರ್ಕಾರಿ ಮಹಿಳಾ  ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾರಂಭವಾಗಲಿದೆ ಎಂದು ಹೇಳಿದ್ದಾರೆ. ಸಹಾಯಕ ಚುನಾವಣಾಧಿಕಾರಿಗಳಾದ ಸುಭಾಷ್ ಚಂದ್ರ ಬೋಸ್, ಉಬೇದುಲ್ಲಾ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement