ಕಾರ್ಯಾಲಯಗಳು ದೇಗುಲಗಳಾಗಲಿ
ಅರಸೀಕೆರೆ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಾಲಯಗಳು ಮಹತ್ವದ ಪಾತ್ರಗಳನ್ನು ವಹಿಸುವುದರ ಮೂಲಕ ದೇಶ ಭಕ್ತಿಗೆ ಪ್ರೇರಣೆ ನೀಡುವ ದೇವಾಲಯಗಳಾಗಬೇಕು .ಆಗ ಮಾತ್ರ ಸಂಘ ನಿವಾಸದ ನಿರ್ಮಾಣ ಸಾರ್ಥಕತೆ ಆಗುತ್ತದೆ ಎಂದು ಕುಟುಂಬ ಪ್ರಬೋಧನ್ ಅಖಿಲ ಭಾರತ ಕಾರ್ಯಮಂತ್ರಿ ಸು. ರಾಮಣ್ಣ ಹೇಳಿದ್ದಾರೆ.
ಚಟುವಟಿಕೆಗಳು ನಡೆಯುತ್ತಿರಬೇಕು: ಪಟ್ಟಣದ ಕೇಂದ್ರ ಅಂಚೆ ಕಚೇರಿ ಮುಂಭಾಗದಲ್ಲಿ ಮಂಗಳವಾರ ನಡೆದ ಯಾದವ ಸೇವಾ ಪ್ರತಿಷ್ಠಾನದ ನೂತನ ಸಂಘ ನಿವಾಸ ಕಟ್ಟಡವನ್ನು ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣ ಮಾಡಿ ಮಾತನಾಡಿದ ಅವರು ಆರ್ಎಸ್ಎಸ್ ಕಾರ್ಯಾಲಯ ವಾಸದ ಮನೆಯಲ್ಲ. ಅದು ಪ್ರತಿ ಹಿಂದುವಿನ ಮನೆಯಾಗಿದ್ದು, ಈ ಮನೆಯಲ್ಲಿ ಒಂದು ಸೀಮಿತ ದೇವರಿಗೆ ಪ್ರಾಧಾನ್ಯತೆ ನೀಡದೇ ಭಾರತ ಮಾತೆ ಪ್ರಾಧಾನ್ಯತೆ ನೀಡುವ ಶ್ರದ್ಧಾ ಕೇಂದ್ರವಾಗಬೇಕು. ಈ ಕೇಂದ್ರದಲ್ಲಿ ಪ್ರತಿಯೊಬ್ಬ ಹಿಂದುವಿಗೂ ಶಾಂತಿ ದೊರಕುವುದರೊಂದಿಗೆ ಸಂಘದ ದಿನ ನಿತ್ಯದ ಏಕಾತ್ಮ ಸ್ತೋತ್ರ ಮೊಳಗಬೇಕು ಮತ್ತು ಜೊತೆಜೊತೆಯಲ್ಲಿ ದೇಶಭಕ್ತರ ಮತ್ತು ಮಹಾತ್ಮರ ಚಿತ್ರಗಳು ರಾರಾಜಿಸುವುದರೊಂದಿಗೆ ಪ್ರತಿ ನಿತ್ಯ ಸಂಘ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರಬೇಕು ಎಂದರು. ಬೆಂಗಳೂರಿನಲ್ಲಿ 1962 ರಲ್ಲಿ ನಿರ್ಮಾಣ ಮಾಡಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೇಶವ ಕೃಪ ಸಂಘ ನಿವಾಸ ಇಂದಿಗೂ ಬಾಗಿಲನ್ನು ಮುಚ್ಚದೇ ಮತ್ತು ಬೀಗವನ್ನು ಹಾಕದೇ ದಿನದ 24 ಗಂಟೆಗಳ ಕಾಲ ಸದಾ ತೆರೆದಿರುತ್ತದೆ. ಸಂಘದ ಬಗ್ಗೆ ಸಲ್ಲದ ಕಲ್ಪನೆಗಳನ್ನು ಕಲ್ಪಿಸಿಕೊಂಡಿದ್ದ ಅನೇಕ ಮಹನೀಯರು ಖುದ್ದಾಗಿ ಈ ಕಾರ್ಯಾಲಯಕ್ಕೆ ಭೇಟಿ ನೀಡುವುದರ ಮೂಲಕ ಅಲ್ಲಿಯ ನೈಜ ಸ್ಥಿತಿಯನ್ನು ಅರಿತು ಸಂಘದ ಹಿತೈಷಿಗಳಾಗಿದ್ದಾರೆ ಎಂದು ಹೇಳಿದರು.
ಪುಣ್ಯಸ್ಥಳವಾಗಬೇಕು: ಸಂಘವು ಎಂದಿಗೂ ಬಾಗಿಲನ್ನು ಹಾಕುವುದಿಲ್ಲ .ಬೀಗ ಹಾಕುವ ಸಂದರ್ಭ ಬಂದ ದಿನವೆಂದರೆ ,1972 ರಲ್ಲಿ ತುರ್ತು ಪರಿಸ್ಥಿತಿ ಬಂದಾಗ ಮತ್ತು ಅನೇಕ ಸಂದರ್ಭಗಳಲ್ಲಿನ ವೇಳೆಗಳಲ್ಲಿ ಸರ್ಕಾರವೇ ಬೀಗ ಹಾಕಿದೆಯೇ ಹೊರತು ಸಂಘ ಎಂದೂ ತನ್ನ ಕಾರ್ಯಾಲಯಕ್ಕೆ ಬಾಗಿಲು ಮುಚ್ಚಿ ಬೀಗ ಹಾಕಿರುವುದಿಲ್ಲ.
ಆದ್ದರಿಂದ ಆರ್ಎಸ್ಎಸ್ ಕಾರ್ಯಾಲಯ ಸದಾ ಪ್ರೇರಣೆ ನೀಡುವ ತಾಣವಾಗುವುದರೊಂದಿಗೆ ಹಿಂದು ಸಮಾಜವನ್ನು ಭವ್ಯ ಆಸ್ತಿಯನ್ನಾಗಿ ಮಾಡುವ ಪುಣ್ಯಸ್ಥಳವಾಗಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ತಾಲ್ಲೂಕು ಸಂಘ ಚಾಲಕರಾದ ಕೊ.ರಾ ಶ್ರೀನಿವಾಸಮೂರ್ತಿ ಇದ್ದರು.
ಕಾರ್ಯಕ್ರಮಕ್ಕೂ ಮುಂಚೆ ಸಂಘ ನಿವಾಸದಲ್ಲಿ ಸತ್ಯನಾರಾಯಣ ಪೂಜೆ ಮತ್ತು ಭಾರತಮಾತಾ ಪೂಜನಾ ಕಾರ್ಯಕ್ರಮ ನಡೆಯಿತು.