ವೀರ ಯೋಧರಿಗೆ ನಮನ
ಹಾಸನ: ಅಸ್ಪೃಶ್ಯರು ಹಾಗೂ ದಲಿತರ ಶಿಕ್ಷಣಕ್ಕಾಗಿ ವೀರ ಮರಣವನ್ನಪ್ಪಿದ ಕೊರೆಗಾಂವ್ ವೀರಯೋಧರ ಮಡಿದ ನೆನಪಿಗಾಗಿ ದಲಿತ ಸಾಹಿತ್ಯ ಪರಿಷತ್, ಸಮತಾ ಸೈನಿಕ ದಳ ಆಡುವಳ್ಳಿ ಹಾಗೂ ಅಂಬೇಡ್ಕರ್ ಯುವಕ ಸಂಘದ ವತಿಯಿಂದ ನಗರದಲ್ಲಿ ಇತ್ತೀಚೆಗೆ ಪಂಜಿನ ಮೆರವಣಿಗೆ ನಡೆಯಿತು.
ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ದಸಾಪ ಕಾರ್ಯಕರ್ತರು ಎನ್.ಆರ್. ವೃತ್ತ ಮಾರ್ಗವಾಗಿ ಅಂಬೇಡ್ಕರ್ ಪ್ರತಿಮೆವರೆಗೂ ಮೆರವಣಿಗೆ ನಡೆಸಿದರು.
ಈ ಸಂದರ್ಭ ಮಾತನಾಡಿದ ಸಮತಾ ಸೈನಿಕ ದಳದ ಆರ್ಪಿಐ ಸತೀಶ್, ಕೊರೆಂಗಾವ್ ಯೋಧರ ಹೋರಾಟದಿಂದಲೇ ದಲಿತರು ಹಾಗೂ ಅಸ್ಪ ೃಶ್ಯರು ಶಿಕ್ಷಣ ಪಡೆಯುವಂತಾಗಿದ್ದು, ಈ ದಿನ ಐತಿಹಾಸಿಕ ದಿನವಾಗಿದೆ. ಹೋರಾಟದಲ್ಲಿ ವೀರಮರಣವನ್ನಪ್ಪಿದ 21 ವೀರ ಯೋಧರನ್ನು ಪ್ರತಿ ವರ್ಷ ನೆನಪಿಸಿಕೊಳ್ಳಬೇಕೆಂದು ಹೇಳಿದರು. ದಸಾಪ ಜಿಲ್ಲಾಧ್ಯಕ್ಷ ಹೆತ್ತೂರು ನಾಗರಾಜ್ ಮಾತನಾಡಿ, ಕೊರೆಂಗಾವ್ ಹೋರಾಟ ಮತ್ತು ದಲಿತರ ಶಿಕ್ಷಣಕ್ಕಾಗಿ ಪ್ರಾಣ ಕೊಟ್ಟವರನ್ನು ನೆನಪಿಸಿಕೊಳ್ಳುವ ಮೂಲಕ ಅವರ ಹೆಸರನ್ನು ಅಜರಾಮರಗೊಳಿಸಬೇಕು. ದಲಿತ ನಾಯಕರ ಶಿಕ್ಷಣಕ್ಕೆ ಕಾರಣರಾದವರು ಸಿದ್ದನಾಕ ಎಂಬ ವ್ಯಕ್ತಿ ಮತ್ತು 21 ಜನ ಹುತಾತ್ಮ ಯೋಧರು. ಬಾಬಾ ಸಾಹೇಬ್ ಅಂಬೇಡ್ಕರ್ ಬದುಕಿದ್ದಾಗ ಪ್ರತಿ ಜ. 1ರಂದು ಕೊರೆಂಗಾವ್ಗೆ ಬಂದು ವೀರ ನಮನ ಸಲ್ಲಿಸುತ್ತಿದ್ದರು. ಜ. 1ನೇ ದಿನವನ್ನು ದಲಿತರಿಗೆ ಶಿಕ್ಷಣ ಸಿಕ್ಕ ದಿನವನ್ನಾಗಿ ಆಚರಿಸಬೇಕೆಂದು ಹೇಳಿದರು. ನಿಟ್ಟೂರು ಅಂಬೇಡ್ಕರ್ ಸಂಘದ ಅಧ್ಯಕ್ಷ ನಿಟ್ಟೂರು ಸ್ವಾಮಿ, ಬ್ಯಾಕರವಳ್ಳಿ ವೆಂಕಟೇಶ್, ಮಧು, ಆಡುವಳ್ಳಿ ಹೇಮಂತ್, ಗಣೇಶ್ ಆಡುವಳ್ಳಿಯ ಅಂಬೇಡ್ಕರ್ ಯುವಕ ಸಂಘ, ದಸಾಪ, ನಿಟ್ಟೂರು ಅಂಬೇಡ್ಕರ್ ಸಂಘದ ಸದಸ್ಯರು ಪಂಜು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.