ವೈಯಕ್ತಿಕ ದ್ವೇಷ: ಗ್ರಾಮ ಪಂಚಾಯ್ತಿ ಸದಸ್ಯನ ಕೊಲೆ ಯತ್ನ
ರಾಮನಾಥಪುರ: ಇಲ್ಲಿನ ಪಂಚಾಯ್ತಿ ವ್ಯಾಪ್ತಿಗೆ ಬರುವ ಬಿಳಗೂಲಿ ಗ್ರಾಮದಲ್ಲಿ ಬುಧವಾರ ರಾತ್ರಿ ಸ್ಥಳೀಯ ಪಂಚಾಯ್ತಿ ಸದಸ್ಯ ರಾಮೇಗೌಡರ ಮೇಲೆ ಕೊಲೆ ಯತ್ನ ನಡೆಸಲಾಗಿದೆ.
ಸದಸ್ಯರಾದ ರಾಮೇಗೌಡ ಮತ್ತು ಹಿರಣ್ಣಯ್ಯ ಇಬ್ಬರೂ ಒಂದೇ ಗ್ರಾಮದವರಾಗಿದ್ದು, ಕಳೆದ 2 ವರ್ಷಗಳಿಂದ ಎರಡು ಕುಟುಂಬಗಳಲ್ಲಿ ಕ್ಷುಲ್ಲಕ ಕಾರಣದಿಂದಾಗಿ ಜಗಳ ಶುರುವಾಗಿತ್ತು. ನಂತರದ ದಿನಗಳಲ್ಲಿ ದ್ವೇಷ ಹಗೆತನಕ್ಕೆ ತಿರುಗಿತ್ತು.
ಈ ಹಿನ್ನೆಲೆಯಲ್ಲಿ ಗ್ರಾಮದ ಹಿರಿಯ ಮುಖಂಡರು ಎರಡೂ ಕುಟುಂಬಗಳನ್ನು ಕರೆದು ಬುದ್ಧಿ ಹೇಳಿದ್ದರು. ಅನ್ಯೋನ್ಯತೆಯಿಂದ ಇರುವಂತೆ ತಿಳಿಹೇಳಿ ಕಳುಹಿಸಿದ್ದು, ಯಾವ ಪ್ರಯೋಜನಕ್ಕೂ ಬರಲಿಲ್ಲ. ಆದರೆ ಇತ್ತೀಚೆಗೆ ಮಕ್ಕಳ ವಿಚಾರಕ್ಕೆ ಜಗಳವಾಯಿತು. ಇದು, ಇನ್ನಷ್ಟು ಕೆರಳಿಸಿದಂತಾಗಿದೆ.
ತನ್ನ ಚಿಕ್ಕಪ್ಪನ ಮಗ ರವಿ ಮನೆ ಊಟ ಮುಗಿಸಿ, ಬುಧವಾರ ರಾತ್ರಿ 9.30ರ ವೇಳೆಗೆ ತಮ್ಮ ಮನೆಗೆ ಹಿಂದಿರುಗುತ್ತಿದ್ದಾಗ ರಾಮೇಗೌಡರಮೇಲೆ ಹಲ್ಲೆ ನಡೆಸಲು ಯತ್ನಿಸಲಾಯಿತು. ಹಿರಣ್ಣಯ್ಯನ ಕಡೆಯವರು ಎದುರಿನಿಂದ ಬುಲೇರೋ ಜೀಪ್ಮ್‌ತ್ತು ಡಿಸ್ಕವರಿ ಬೈಕ್‌ನಲ್ಲಿ ಬಂದರು. ಇದನ್ನು ಕಂಡು ಕ್ಷಣ ಕಾಲ ತಬ್ಬಿಬ್ಬಾಗಿ ತಪ್ಪಿಸಿಕೊಳ್ಳಲು ಚರಂಡಿ ನೆಗೆದು ಓಡಲು ರಾಮೇಗೌಗಡರು ಯತ್ನಿಸಿದರೂ ಸಾಧ್ಯವಾಗಿಲ್ಲ. ಹಿಂದಿನಿಂದ ಬಂದ ಬುಲೇರೋ ಜೀಪ್ ಡಿಕ್ಕಿ ಹೊಡೆದ ಪರಿಣಾಮ ಆಯ ತಪ್ಪಿ ಚರಂಡಿಗೆ ಬಿದ್ದರು. ತಕ್ಷಣ ಅಲ್ಲಿಯೇ ಇದ್ದ ಸ್ಥಳೀಯರು ಹೊರಕ್ಕೆಳೆದು ಸ್ಥಳೀಯ ಕೊಣನೂರು ಆಸ್ಪತ್ರೆಗೆ ತುರ್ತು ಚಿಕಿತ್ಸೆಗೆ ಕರೆದೊಯ್ಯಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ, ರಾಮೇಗೌಡರನ್ನು ಇಲ್ಲಿನ ವೈದ್ಯಾಕಾರಿಗಳ ಸೂಚನೆಯ ಮೇರೆಗೆ ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸದ್ಯದಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇತ್ತ ಸುದ್ದಿ ತಿಳಿದು ಉದ್ರಿಕ್ತಗೊಂಡ ರಾಮೇಗೌಡನ ಕುಟುಂಬದವರು ಹಲ್ಲೆಗೆ ಯತ್ನಿಸಿದ ಬುಲೇರೋ ಜೀಪ್ ಮತ್ತು ಡಿಸ್ಕವರಿ ಬೈಕನ್ನು ಜಖಂಗೊಳಿಸಿ ಹಿರಣ್ಣಯ್ಯನ ಮನೆ ಕಿಟಕಿ ಗ್ಲಾಸುಗಳನ್ನು ಒಡೆದು ಹಾಕಿ ಮನೆಗೆ ಬೆಂಕಿ ಹಚ್ಚುವ ಯತ್ನ ಕೂಡ ನಡೆದಿದೆ. ತಕ್ಷಣ ಸುದ್ದಿ ತಿಳಿದ ಕೊಣನೂರು ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಸುಬ್ಬರಾಜೇ ಅರಸ್ ತಮ್ಮ ಸಿಬ್ಬಂದಿಗಳೊಂದಿಗೆ ತಕ್ಷಣ ಧಾವಿಸಿ ಬಂದು ಆಗಬಹುದಿದ್ದ ಅನಾಹುತವನ್ನು ತಪ್ಪಿಸಿ ರಾತ್ರಿ ಇಲ್ಲಿ ಮೊಕ್ಕಾಂ ಹೂಡಿದ್ದರು. ಎರಡೂ ಕುಟುಂಬದವರ ದೂರುಗಳನ್ನು ಪೊಲೀಸರು ದಾಖಲಿಸಿ ಕೊಂಡಿದ್ದಾರೆ.