ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸಂಸ್ಕೃತಿ ಗೊತ್ತಿಲ್ಲದವರು ಅಧಿಕಾರ ಹಿಡಿಯಬಾರದು

Mainashree
Updated On : 2 Jan 2014, 10:19 am

ಅರಸೀಕೆರೆ: ರಾಷ್ಟ್ರೀಯ ಪರಿಕಲ್ಪನೆ ಮತ್ತು ದೇಶದ ಸಂಸ್ಕೃತಿಯ ಅರಿವು  ಇಲ್ಲದವರು ದೇಶದ ಆಡಳಿತ ಚುಕ್ಕಾಣಿ ಹಿಡಿದರೆ ರಾಷ್ಟ್ರದ ಸಮಗ್ರ ಅಭಿವೃದ್ಧಿ ಕುಂಠಿತವಾಗುತ್ತದೆ ಎಂದು ಮಾಜಿ ಅಡ್ವೊಕೇಟ್ ಜನರಲ್ ಅಶೋಕ್ ಹಾರನಹಳ್ಳಿ ಹೇಳಿದ್ದಾರೆ
ಪಟ್ಟಣದ ಓಲ್ಡ್ ಮಿಡ್ಲ್ ಸ್ಕೂಲ್ ಆವರಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಏರ್ಪಡಿಸಿದ್ದ ತರುಣ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದ ಆಡಳಿತ ನಡೆಸುವವರಿಗೆ ರಾಷ್ಟ್ರದ ಇತಿಹಾಸ ಪ್ರಜ್ಞೆ ಅವಶ್ಯಕ. ಎಷ್ಟೇ ಉತ್ತಮವಾದ ಸಂವಿಧಾನ ಇದ್ದರೂ, ಸರಿಯಾದವರ ಕೈಯ್ಯಲ್ಲಿ ಅದು ಸಿಗದಿದ್ದರೆ ಏಳ್ಗೆ ಅಸಾಧ್ಯ. ಜನರಿಗೆ ಅನುಕೂಲ ಆಗಬೇಕಾದರೆ ಕಾನೂನಿನ ಅರಿವು ಹಾಗೂ ಅದರ ಸದ್ಬಳಕೆ ಅವಶ್ಯಕ ಎಂದರು.
ಶಿಸ್ತುಬದ್ಧ ಸಂಘಟನೆ: ಸ್ವಾತಂತ್ರ್ಯಾ ನಂತರ ರಾಷ್ಟ್ರದಲ್ಲಿ ಇದ್ದ 500ಕ್ಕೂ ಹೆಚ್ಚು ಪ್ರಾಂತ್ಯಗಳನ್ನು ಕೆಲವು ರಾಜರ ವಿರೋಧದ ನಡುವೆಯೂ ದಿಟ್ಟ ನಿಲುವು ತೆಗೆದುಕೊಂಡು ಒಂದುಗೂಡಿಸಿ ಭಾರತ ಸರ್ಕಾರದ ಒಕ್ಕೂಟ ರಚನೆ ಮಾಡಿದ ಅಂದಿನ ಗೃಹ ಮಂತ್ರಿ ಉಕ್ಕಿನ ಮನುಷ್ಯ ಸರ್ದಾರ್ ಪಟೇಲ್ ಕಾರ್ಯ ಸ್ಮರಣೀಯ.  ಹಿಂದೂ ಧರ್ಮ ವಿಶಿಷ್ಟವಾದ ಧರ್ಮ ವಿಶ್ವವ್ಯಾಪಕ ದೃಷ್ಟಿಕೋನ ಹೊಂದಿದೆ. ಆದರೆ ನಮ್ಮವರಿಗೆ ತತ್ವದ ಔನತ್ಯವಾಗಲೀ, ಒಳ್ಳೆಯ ವಿಚಾರವಾಗಲಿ ಅರಿವಿಲ್ಲ.
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಶಿಸ್ತುಬದ್ಧ ಸಂಘಟನೆಯಾಗಿ, ಪ್ರಾಮಾಣಿಕತೆ ಹಾಗೂ ಬದ್ಧತೆಯಿಂದ ರಾಷ್ಟ್ರೀಯತೆ ಹಾಗೂ ಸೇವೆಯ ಬಗ್ಗೆ ಕಾರ್ಯವೆಸಗುತ್ತಿದೆ ಎಂದರು.
ಪಟೇಲರ ವಿರೋಧವಿತ್ತು: ಸಮಾರಂಭದಲ್ಲಿ ಪ್ರಮುಖ ಭಾಷಣ ಮಾಡಿದ ಸಂಘದ ಹಿರಿಯ ಪ್ರಚಾರಕರಾದ ಸು.ರಾಮಣ್ಣ ಮಾತನಾಡಿ, ಸಂಘವು ಮೌಲಿಕವಾದ ಕಾರ್ಯ ಚಟುವಟಿಕೆಯಲ್ಲಿ ತೊಡಗಿದ್ದು ಒಳ್ಳೆಯ ತಳಪಾಯ ಹಾಕುವ ಕೆಲಸ ಮಾಡುತ್ತದೆ. ಆರ್.ಎಸ್.ಎಸ್‌ನವರು ಎಂದೂ ಪ್ರಚಾರ ಪ್ರಿಯರಲ್ಲ. ಕೆಲವು ಪಟ್ಟ ಭದ್ರ ಹಿತಾಸಕ್ತರು ತಮ್ಮ ಸ್ವಾರ್ಥಕ್ಕೋಸ್ಕರ ಸಂಘದ ಬಗ್ಗೆ ತಪ್ಪು ಕಲ್ಪನೆಯ ಅಪಪ್ರಚಾರ ಮಾಡುತ್ತಾರೆ. ಮಹಾತ್ಮ ಗಾಂಧಿ ಕೊಲೆಗೂ ಆರ್.ಎಸ್.ಎಸ್.ಗೂ ಸಂಬಂಧವಿಲ್ಲ. ಸರ್ದಾರ್ ವಲ್ಲಭಭಾಯಿ ಪಟೇಲ್‌ರಿಗೆ ಆರ್.ಎಸ್.ಎಸ್ ಬಗ್ಗೆ ಗೌರವವಿತ್ತು. 1948ರಲ್ಲಿ ಆರ್.ಎಸ್.ಎಸ್ ನಿಷೇಧಿಸಿದ್ದರ ಬಗ್ಗೆ ಪಟೇಲ್ ಅವರು ವಿರೊಧ ವ್ಯಕ್ತಪಡಿಸಿದ್ದರು.
ಕರೆ: ರಾಜಕೀಯ ರಾಷ್ಟ್ರ ರಾಜಕಾರಣದ ಒಂದು ಭಾಗ ಅಷ್ಟೆ. ಅಧಿಕಾರ ರಾಜಕಾರಣ ಪಕ್ಷ ರಾಜಕಾರಣದಲ್ಲಿ ಆರ್‌ಎಸ್‌ಎಸ್‌ಗೆ ಆಸಕ್ತಿ ಇಲ್ಲ. ರಾಷ್ಟ್ರೀಯತೆಯ ಪ್ರಬಲವಾದ ಪ್ರವಾಹವನ್ನು ದೇಶಾದ್ಯಂತ ಪ್ರವಹಿಸುವಂತೆ ಮಾಡುವುದೇ ಆರ್‌ಎಸ್‌ಎಸ್ ಧ್ಯೇಯ.
ಇಂದು ರಾಷ್ಟ್ರದ 40 ಸಾವಿರ ಗ್ರಾಮಗಳಲ್ಲಿ ಆರ್‌ಎಸ್‌ಎಸ್ ಶಾಖೆಗಳಿವೆ. ಅಲ್ಲದೇ, ವಿದೇಶಗಳಲ್ಲೂ ಸಂಘದ ಶಾಖೆಗಳು ನಡೆಯುತ್ತಿವೆ. ದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ ರಾಷ್ಟ್ರೀಯತೆಯ ಆಧಾರದ ಮೇಲೆ ರಾಜಕಾರಣ ಮಾಡುವುದು ಇಂದಿನ ಅವಶ್ಯಕತೆ. ಹಿಂದೂ ಸಮಾಜ ಜಾಗೃತವಾಗಬೇಕು ಹಾಗೂ ಸಂಘಟಿತವಾಗಬೇಕು ಎಂದು ಅವರು ಕರೆ ನೀಡಿದರು.
ತಾಲೂಕು ಕಾರ್ಯವಾಹಕ ಶಿವಶಂಕರ್ ಸ್ವಾಗತಿಸಿದರು. ಪ್ರಕಾಶ್ ವಂದಿಸಿದರು. ವೇದಿಕೆಯಲ್ಲಿ ಆರ್.ಎಸ್.ಎಸ್.ನ ಮೈಸೂರು ವಿಭಾಗದ ಸಂಘ ಚಾಲಕ್ ಡಾ. ವಾಮನ್‌ರಾವ್ ಬಾಪಟ್ ಮತ್ತು ಅರಸೀಕೆರೆ ತಾಲೂಕು ಸಂಘ ಚಾಲಕ.ಆರ್. ಶ್ರೀನಿವಾಸಮೂರ್ತಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement