ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಆಟೋ ಗ್ಯಾಸ್ ದರ ಏರಿಕೆಗೆ ಆಕ್ರೋಶ

Mainashree
Updated On : 3 Jan 2014, 9:50 am

ಕ.ಪ್ರ.ವಾರ್ತೆ  ಹಾಸನ  ಜ. 3
ಆಟೋ ಗ್ಯಾಸ್ ಮತ್ತು ಅಡುಗೆ ಅನಿಲದ ದರವನ್ನು ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ಏರಿಸಿರುವುದನ್ನು ಖಂಡಿಸಿ ಶುಕ್ರವಾರ ಹಾಸನ ಆಟೋ ಚಾಲಕರ ಮತ್ತು ಮಾಲೀಕರ ಸಂಘ ಹಾಗೂ ಭಾರತೀಯ ಜನತಾ ಪಾರ್ಟಿ (ಬಿಜೆಪಿ)ಯ ಯುವ ಮೋರ್ಚಾ ಕಾರ್ಯಕರ್ತರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ನಗರದಲ್ಲಿ ನಾನಾ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದು ಕೆಲ ಸಮಯ ಧರಣಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ಆಕ್ರೋಶ: ಕೇಂದ್ರ ಸರ್ಕಾರವು ಮೇಲಿಂದ ಮೇಲೆ ಗ್ಯಾಸ್‌ನ ದರವನ್ನು ಏರಿಕೆ ಮಾಡಿಕೊಂಡೇ ಬರುತ್ತಿದೆ. ಪ್ರಸ್ತುತ ಏಕಾಏಕಿ ಗ್ಯಾಸ್‌ನ ದರವನ್ನು ರು. 12 ಏರಿಕೆ ಮಾಡಿದೆ. ಇದರಿಂದ ಆಟೋ ಚಾಲಕರಿಗೆ ತೊಂದರೆಯಾಗಿದ್ದು, ಕಡು ಬಡವರಾಗಿರುವ ಆಟೋ ಚಾಲಕರು ಏರಿಕೆಯಾದ ಗ್ಯಾಸ್ ದರದಿಂದ ಸಂಕಷ್ಟ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ರೀತಿ ದರವನ್ನು ಏರಿಕೆ ಮಾಡುವುದರಿಂದ ಆಟೋ ರಿಕ್ಷಾಗಳನ್ನು ಓಡಿಸಿ ಜೀವನ ನಡೆಸಲು ಕಷ್ಟವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒತ್ತಾಯ: ದಿನೇ ದಿನೇ ಅಗತ್ಯ ವಸ್ತುಗಳ ಬೆಲೆಗಳು ಏರಿಕೆಯಾಗಿರುವುದರಿಂದ ವಸ್ತುಗಳನ್ನು ಕೊಂಡುಕೊಳ್ಳಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಆಟೋಗಳ ಬಿಡಿ ಭಾಗಗಳ ದರಗಳು ಏರಿಕೆಯಾಗಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಏಕಾಏಕಿ ಗ್ಯಾಸ್ ದರಗಳನ್ನು ಏರಿಕೆ ಮಾಡಿರುವುದ ಆಟೋ ಚಾಲಕರನ್ನು ಮತ್ತೆ ಸಂಕಷ್ಟಕ್ಕೆ ಸಿಲುಕಿಸಿದೆ. ಆದ್ದರಿಂದ ಕೇಂದ್ರ ಸರ್ಕಾರ ಕೂಡಲೇ ಗ್ಯಾಸ್ ದರವನ್ನು ಕಡಿತಗೊಳಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ವೈ.ಎಂ. ಅಬ್ಬಾಸ್, ಕಾರ್ಯದರ್ಶಿ ಸಮೀರ್ ಶಾನ್, ಕಾರ್ತಿಕ್, ಗುಡೇಗೌಡ, ಲೋಕೇಶ್ ಕುಮಾರ್, ಹೇಮಂತ್ ಕುಮಾರ್, ಹರೀಶ್ ಕುಮಾರ್, ಟಿ.ಡಿ. ಲಕ್ಷ್ಮಣ್, ಯೋಗೇಶ್, ರವಿಶಂಕರ್, ಕುಮಾರ್, ಎಂ.ಎಸ್. ಗಿರೀಶ್, ಮಂಜುನಾಥ್, ಪ್ರಕಾಶ್ ಹಾಗೂ ಇತರರು ಇದ್ದರು.
ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ: ನಿರಂತರವಾಗಿ ಆಟೋ ಗ್ಯಾಸ್ ಸಿಲಿಂಡರ್ ಮತ್ತು ಗೃಹೋಪಯೋಗಿ ಅಡುಗೆ ಅನಿಲದ ಬೆಲೆಗಳನ್ನು ಏರಿಸುವುದರ ಮೂಲಕ ಜನ ಸಾಮಾನ್ಯರ ಜೊತೆ ಚೆಲ್ಲಾಟವಾಡುತ್ತಿರುವ ಕೇಂದ್ರದ ಯುಪಿಎ ಸರ್ಕಾರದ ಜನ ವಿರೋಧಿ ನೀತಿ ಖಂಡನೀಯ ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಬಿಜೆಪಿ ಕಚೇರಿಯಿಂದ ಮೆರವಣಿಗೆ ಪ್ರಾರಂಭಿಸಿ ಎನ್.ಆರ್. ವೃತ್ತ, ಬಿ.ಎಂ.ರಸ್ತೆಯ ಮೂಲಕ ಜಿಲ್ಲಾಧಿಕಾರಿಗೆ ಬಂದು ಕೆಲ ಸಮಯ ಧರಣಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ಆರೋಪ: ಕೇಂದ್ರದ ಯುಪಿಎ ಸರ್ಕಾರದ ಅಸಮರ್ಪಕ ನೀತಿಗಳಿಂದಾಗಿ ಡಾಲರ್ ಬೆಲೆಯ ಎದುರು ರೂಪಾಯಿಯ ಮೌಲ್ಯ ಅಪಮೌಲ್ಯಕ್ಕೀಡಾಗಿದೆ. ಇದರಿಂದ ತೈಲ ಬೆಲೆಗಳು ಏರಿಕೆಯಾಗಿದೆ ಎಂಬ ಸಬೂಬನ್ನು ಹೇಳುವ ಕೇಂದ್ರದ ಯುಪಿಎ ಸರ್ಕಾರ, ರುಪಾಯಿ ಮೌಲ್ಯ ಕುಸಿತದ ತಡೆಗೆ ಅಗತ್ಯವಾದ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವಲ್ಲಿ ಮಾತ್ರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದರು.
ಕಿಡಿ: ಸ್ವತಃ ಆರ್ಥಿಕ ತಜ್ಞರಾದ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಅನುಭವಿ ಹಣಕಾಸು ಮಂತ್ರಿ ಪಿ. ಚಿದಂಬರಂ ದೇಶದ ಆರ್ಥಿಕ ವ್ಯವಸ್ಥೆಯ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಿಂದಾಗಿ ಮಾರುಕಟ್ಟೆಯಲ್ಲಿ ದಿನನಿತ್ಯದ ವಸ್ತುಗಳು ಗಣನೀಯವಾಗಿ ಏರಿಕೆಯಾಗಿದೆ. ಪ್ರಯಾಣ ದರ ಹೆಚ್ಚಳವಾಗಿದೆ. ಹಣದುಬ್ಬರ ಏರಿಕೆಯಾಗಿದೆ. ಇವೆಲ್ಲದರಿಂದ ಮಧ್ಯಮ ವರ್ಗದ ಜನರು ಜೀವನ ನಡೆಸುವುದೇ ಕಷ್ಟವಾಗಿದೆ. ಕೇಂದ್ರ ಸರ್ಕಾರದ ತಪ್ಪು ಆರ್ಥಿಕ ನೀತಿಗಳ ಪರಿಣಾಮವನ್ನು ಸಾಮಾನ್ಯ ಜನರು ಅನುಭವಿಸುವಂತಾಗಿದೆ ಎಂದು ಕಿಡಿಕಾರಿದರು.
ಹಗರಣ, ಭ್ರಷ್ಟಾಚಾರಗಳಲ್ಲಿ ಮುಳುಗಿರುವ ಕೇಂದ್ರ ಯುಪಿಎ ಸರ್ಕಾರದ ನಾಯಕರು ಜನಸಾಮಾನ್ಯರ ಈ ಬವಣೆಯನ್ನು ಅರಿಯುವಲ್ಲಿ ಸಂಪೂರ್ಣವಾಗಿ ಎಡವಿದೆ. ಆದ್ದರಿಂದ ಕೂಡಲೇ ಸರ್ಕಾರ ಅಗತ್ಯವಾದ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಏರಿಕೆ ಮಾಡಿರುವ ಆಟೋ ಗ್ಯಾಸ್ ಮತ್ತು ಗೃಹ ಬಳಕೆಯ ಗ್ಯಾಸ್ ದರವನ್ನು ಇಳಿಕೆ ಮಾಡಬೇಕು. ಇಲ್ಲವಾದಲ್ಲಿ ಈ ವಿರುದ್ಧ ಉಗ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಚೆನ್ನಕೇಶವ್, ನಾಗೇಶ್, ವಿಜಯ್ ಕುಮಾರ್, ವೇಣು ಕುಮಾರ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement