ಆಲ್ದೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ದಲಿತರ ಮೇಲೆ ಹಲ್ಲೆ
ಕ.ಪ್ರ.ವಾರ್ತೆ ಟಿ. ನರಸೀಪುರ ಜ.3
ಕ್ಷುಲ್ಲಕ ಕಾರಣಕ್ಕೆ ನಾಲ್ವರು ದಲಿತ ಯುವಕರ ಮೇಲೆ ಸವರ್ಣೀಯ ಸಮುದಾಯದ ಯುವಕರ ಗುಂಪೊಂದು ಜಾತಿ ನಿಂದನೆ ಮಾಡಿ, ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವ ಘಟನೆ ಟಿ.ನರಸೀಪುರ ತಾಲೂಕು ಗಡಿಯ ಚಾಮರಾಜನಗರ ತಾಲೂಕಿನ ಆಲ್ದೂರು ಗ್ರಾಮದಲ್ಲಿ ನಡೆದಿದೆ.
ಆಲ್ದೂರು ಗ್ರಾಮದ ದಲಿತ ಕೇರಿಯ ಅವಿನಾಶ್, ಆರ್.ಮಹೇಶ್, ನಾಗ ಹಾಗೂ ಪುಟ್ಟಮಾದ ಎಂಬವರ ಮೇಲೆ ಸವರ್ಣೀಯ ಕಿಡಿಗೇಡಿ ಯುವಕರ ಗುಂಪು ದೊಣ್ಣೆ, ಮಚ್ಚು ಹಾಗೂ ಕಲ್ಲುಗಳಿಂದ ಹೊಡೆದು ಗಾಯಗೊಳಿಸಿದೆ. ತಲೆಗೆ ತೀವ್ರ ಪೆಟ್ಟು ತಿಂದ ಗಾಯಾಳು ಯುವಕರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಪಡೆಯುತ್ತಿದ್ದಾರೆ.
ಕುದೇರು ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಆಲ್ದೂರು ಗ್ರಾಮದ ಸವರ್ಣೀಯರಾದ ಸೋಮಪ್ಪ ಎಂಬವರ ಪುತ್ರ ರಾಜು, ಲೇಟ್ ಪುಟ್ಟಸ್ವಾಮಿ ಪುತ್ರ ರವಿ, ಲೇಟ್ ಗುರುಮಲ್ಲಪ್ಪ ಎಂಬುವರ ಪುತ್ರ ಬಸವರಾಜು, ಮಲ್ಲಪ್ಪ ಪುತ್ರ ಹೇಮಚಂದ್ರ, ಮರಿಸ್ವಾಮಿಗೌಡ ಪುತ್ರ ಚೆಲುವ, ಶಂಭುಲಿಂಗಪ್ಪ ಪುತ್ರ ಚಂದ್ರು, ನಾಗರಾಜಪ್ಪ ಪುತ್ರ ಪುತ್ತು, ಲೇಟ್ ಮೂರ್ತಿ ಪುತ್ರ ರವಿ, ಹೊಟೇಲ್ ಮಹದೇವಪ್ಪ ಪುತ್ರ ಕುಳ್ಳ ಎಂಬವರ ವಿರುದ್ಧ ಮೊಕದ್ದಮೆ ದಾಖಲಾಗಿದೆ.
ಲೈಟ್ ಹೊರುವ ದಲಿತರು: ಚಾ.ನಗರ ತಾಲೂಕಿನ ಆಲ್ದೂರು ಗ್ರಾಮದಲ್ಲಿ ಹೊಸ ವರ್ಷದ ದಿನವೇ ನಡೆಯುವ ಶ್ರೀ ಶಂಭುಲಿಂಗೇಶ್ವರ ಉತ್ಸವದ ಮೆರವಣಿಗೆಯಲ್ಲಿ ಗಾಯಾಳು ದಲಿತ ಸಮುದಾಯ ಯುವಕರೆಲ್ಲರೂ ವಿದ್ಯುತ್ ದೀಪ (ಲೈಟ್ ಅನ್ನು) ಹೊತ್ತು ನಡೆದುಕೊಂಡು ಬರುವುದು ರೂಢಿಯಲ್ಲಿದೆ. ಅದರಂತೆ ಕಳೆದ ಜ.1ರ ರಾತ್ರಿ ನಡೆಯುತ್ತಿದ್ದ ಉತ್ಸವದಲ್ಲಿ ಯಾರೂ ಕುಣಿಯಬಾರದು ಎಂಬ ಪಂಚಾಯಿತಿ ಕಟ್ಟೆಯ ಕಟ್ಟಪ್ಪಣೆ ಇದ್ದರೂ ಸವರ್ಣೀಯ ಯುವಕರಾದ ಚಲುವ, ಹೇಮಚಂದ್ರ ಮತ್ತು ರವಿ ಅವರು ಕುಣಿಯಲು ಆರಂಭಿಸಿದ್ದಾರೆ. ಕುಣಿಯುವಾಗ ಮೈ ಕೈ ತಾಗುವುದರಿಂದ ದಲಿತರು ಲೈಟ್ ಹಿಡಿದು ನಡೆಯಲು ಕಷ್ಟವಾಗುವುದರಿಂದ ಕುಣಿತಕ್ಕೆ ಆಕ್ಷೇಪ ವ್ಯಕ್ತಪಡಿಸಲಾಗಿದೆ. ಹೀಗಾಗಿ ದಲಿತ ಯುವಕರ ಮೇಲೆ ಹಲ್ಲೆ ಮಾಡಿ, ದೌರ್ಜನ್ಯ ಎಸಗಲಾಗಿದೆ.
ಆರೋಪಿಗಳ ಬಂಧನಕ್ಕೆ ಆಗ್ರಹ: ಆಲ್ದೂರಿನಲ್ಲಿ ದಲಿತ ಯುವಕರ ಮೇಲೆ ಹಲ್ಲೆ ಮಾಡಿ, ಕೊಲೆ ಬೆದರಿಕೆ ಹಾಕಿರುವ ಆರೋಪಿಗಳನ್ನು ಕೂಡಲೇ ಬಂಧಿಸಿ, ಕಾನೂನಿನಡಿ ಶಿಕ್ಷೆಗೆ ಒಳಪಡಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಆಲಗೂಡು ಶಿವಕುಮಾರ್ ಚಾಮರಾಜನಗರ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.