ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ನಾಗರಿಕತೆಯಿಂದ ಖಗೋಳಶಾಸ್ತ್ರ

Mainashree
Updated On : 3 Jan 2014, 11:18 am

ಕನ್ನಡಪ್ರಭ ವಾರ್ತೆ, ಹಾಸನ, ಜ.3
ನಾಗರಿಕತೆಯಲ್ಲಿ ನೆಲೆನಿಂತವರಿಗೆ ಕರಾರುವಾಕ್ ದಿನದ ಮಹತ್ವ ತಿಳಿಯಲು, ಆದಿವಾಸಿಗಳಿಗೆ ಋತು ಚಕ್ರ ತಿಳಿಯಲು ಗುರುತಿಗಾಗಿ ಬಂಡೆ, ಮರದ ಹಲಗೆ, ಗೋಡೆಯ ಮೇಲೆ ಗೆರೆ ಎಳೆಯಲು ಪ್ರಾರಂಭ ಮಾಡಿದರು. ಅದು ಖಗೋಳ ಶಾಸ್ತ್ರ ಹುಟ್ಟಲು ಕಾರಣವಾಯಿತು. ಅದನ್ನು ದಾಖಲಿಸುವ ಕಾರಣವಾಗಿ ಕ್ಯಾಲೆಂಡರ್ ಹುಟ್ಟಲು ಕಾರಣವಾಯಿತು ಎಂದು ಭಾರತ ಜ್ಞಾನ- ವಿಜ್ಞಾನ ಸಮಿತಿಯ  ಜಿಲ್ಲಾ ಕಾರ್ಯದರ್ಶಿ ಎಚ್.ಎ. ಅಹಮ್ಮದ್ ತಿಳಿಸಿದರು.
ನಗರದ ಉತ್ತರ ಬಡಾವಣಾ ಘಟಕ ಬಿಜಿವಿಎಸ್ ಹೊಸಲೈನ್ ರಸ್ತೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಹೊಸ ವರ್ಷಾಚರಣೆಯಲ್ಲಿ ಜನವರಿ ಮೊದಲ ವರ್ಷ ಏಕೆ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದ ಅವರು, ಗೋಡೆಗಳೇ ಮೊದಲ ಕ್ಯಾಲೆಂಡರ್ ಆಗಿ ಭೂಮಿಯ ಮೇಲೆ ಬೆಳೆದು ಬಂದಿತು ಎಂದರು.
ಸೋಪಾನ ಪಥ: ಬೇಟೆ, ಆಹಾರ, ಕೃಷಿ ಕಾರ್ಯಗಳಿಗೆ ಗುರುತು ನೀಡಿದ್ದು ಆಕಾಶದ ನಕ್ಷತ್ರ ಮತ್ತು ಸೂರ್ಯ- ಚಂದ್ರರ ಚಲನೆ. ತನ್ನ ಬದುಕಿನ ಸುಖವನ್ನು ಸುಲಭೀಕರಿಸಿಕೊಳ್ಳುವ ಸಲುವಾಗಿ ಅನಿವಾರ್ಯವಾಗಿ ಸೃಷ್ಟಿಸಿಕೊಂಡ ವೈಜ್ಞಾನಿಕ ಸೋಪಾನದ ಪಥ ಎಂದು ಹೇಳಿದರು.
ರೋಮಲಸ್ ಕ್ಯಾಲೆಂಡರ್: ಕ್ರಿ.ಪೂ. 6ನೇ ಶತಮಾನದಲ್ಲಿ ಈಜಿಫ್ಟಿನಲ್ಲಿ ಉಗಮ, ಚಂದ್ರಕಲೆ ಆಧರಿಸಿ ಮೊದಲ ಚಾಂದ್ರಮಾನ ಪಂಚಾಂಗ ರಚನೆ ಮಾಡಿದರು. ತಿಂಗಳಿಗೆ 30 ದಿನದ ಲೆಕ್ಕ ಇಟ್ಟರು. ಕ್ರಿ.ಪೂ. 4000ರ ವೇಳೆಗೆ ಋತುಗೂ ಚಂದ್ರನಿಗೂ ಸಂಬಂಧವಿಲ್ಲ ಎನ್ನುವುದನ್ನು ಅರಿತ ಅವರು ನೈಲ್ ನದಿ ಉಕ್ಕೇರುವಿಕೆಯ ಲೆಕ್ಕಾಚಾರದಿಂದ ಋತುಚಕ್ರ ಕ್ರಮಕ್ಕೆ ಸೂರ್ಯ ಸಂವತ್ಸರದ ಅವಧಿ 360 ಎಂದು ನಿರ್ಧಾರಕ್ಕೆ ಬಂದರು.
ನಂತರ ಅವಧಿ 365 ಎಂದು ತಿಳಿದ ಮೇಲೆ ಹೆಚ್ಚುವರಿ 5 ದಿನ ಏನು ಮಾಡಬೇಕೆಂದು ಗೊತ್ತಾಗದೆ ಗೊಂದಲಕ್ಕೆ ಬಿದ್ದು ವರ್ಷದ ಕೊನೆಗೆ ಅವುಗಳನ್ನು ಸೇರ್ಪಡೆ ಮಾಡಿ ಅವು ಅಶುಭ ಎಂದು ಭಾವಿಸಿ, ಆ ದಿನಗಳಲ್ಲಿ ಯಾವ ಕೆಲಸವೂ ಇಲ್ಲ ರಜೆ ಎಂದು ಘೋಷಿಸಲಾಯಿತು ಎಂದರು.
ರೋಮ್ ಸಾಮ್ರಾಜ್ಯದಲ್ಲಿ ಮೊಟ್ಟ ಮೊದಲ ವೈಜ್ಞಾನಿಕ ಅಧಿಕೃತ ಕ್ಯಾಲೆಂಡರ್ ಹೊರೆ ರೋಮುಲಸ್‌ನಿಂದ 10 ತಿಂಗಳಿಗೆ ಪ್ರಾರಂಭವಾಗುತ್ತದೆ. ಚಿಗುರು ಕಾಣಿಸುವ ಮಾರ್ಚ್ ತಿಂಗಳು ಮೊದಲ ತಿಂಗಳಾಗಿ ಪ್ರಾರಂಭಗೊಳ್ಳುತ್ತದೆ ಎಂದು ಹೇಳಿದರು. ಗ್ರೀಕರ ಕತ್ತಲೆ ಮತ್ತು ಬೆಳಕಿನ ಸಂಕೇತದ 2 ತಲೆಯ ಜಾನೂಸ್ ದೇವತೆಯ ಹೆಸರಿನಲ್ಲಿ ಜನವರಿ ಮೊದಲ ಸ್ಥಾನಕ್ಕೆ ಲಗ್ಗೆ ಇಟ್ಟಿತು. ಆದರೆ ಕಡ್ಡಾಯಗೊಳಿಸಲಿಲ್ಲ ಹಾಗಾಗಿ ಮಾರ್ಚ್ ಮತ್ತು ಜನವರಿ ಎರಡೂ ತಿಂಗಳ ಗೊಂದಲ ಮುಂದುವರಿದುಕೊಂಡು ಬಂತು. ಇದನ್ನು ಜೂಲಿಯಸ್ ಸೀಸರ್ ಹಾಗೂ ಕ್ರಿಶ.17-18ನೇ ಶತಮಾನದಲ್ಲಿ ಪೋಪ್ ಗ್ರೆಗರಿ ಇನ್ನಷ್ಟು ವೈಜ್ಞಾನಿಕವಾಗಿ ಸೌರ ಚಲನೆಯಿಂದ ಗಟ್ಟಿಗೊಳಿಸಿದರು. ಹಾಗಾಗಿ ಜನವರಿ ಮೊದಲ ತಿಂಗಳಾಗಿ ಎಣಿಸಲ್ಪಡುತ್ತಿದೆ ಎಂದರು.
ಹೊಸ ವರ್ಷದ ಅಂಗವಾಗಿ ಬಡಾವಣಾ ವಾಸಿಗಳಿಗೆ ನಾನಾ ಸಾಂಸ್ಕೃತಿಕ ಸ್ಪರ್ಧೆ, ರಸಪ್ರಶ್ನೆ ನಡೆಸಲಾಯಿತು. ವಿದ್ಯಾರ್ಥಿಗಳು, ಮಕ್ಕಳು, ಗೃಹಿಣಿಯರು, ಪುರುಷರು ಹಾಗೂ ವಯೋವೃದ್ಧರು ಸಾಂಸ್ಕೃತಿಕ ಸಂವಹನ ನಡಸುವ ಮೂಲಕ ಕೇಕ್ ಕತ್ತರಿಸಿ, ಸಿಹಿ- ವಿತರಿಸಿ ಪರಸ್ಪರ ಶುಭಾಶಯ ಹೇಳುತ್ತಾ, 2014ರ ಹೊಸ ವರ್ಷವನ್ನು ಬರಮಾಡಿಕೊಂಡರು.
ತೀರ್ಪುಗಾರರಾಗಿ ಶಿಕ್ಷಕಿ ಪರ್ವಿನ್ ತಾಜ್, ರೇಷ್ಮಾ, ಲಾವಣ್ಯ, ಗೋಪಾಲಕೃಷ್ಣ, ಟೀಕರಾಜ್, ಗುರುರಾಜ್, ಸುಭದ್ರಮ್ಮ, ಮಮತ ಶಿವು ಇದ್ದರು. ಬಿಜಿವಿಎಸ್ ಕಾರ್ಯದರ್ಶಿ ರವೀಶ್ ನಿರೂಪಿಸಿದರು. ಸಂಚಾಲಕಿ ರೇಖಾ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಧ್ಯಕ್ಷ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಭಾಗ್ಯ ಸ್ವಾಗತಿಸಿದರು. ಜಿ.ಎಸ್.ಎಸ್. ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಅಗಲಿದ ಬಿಜಿವಿಎಸ್ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಶಿಕ್ಷಣ ಹಕ್ಕು ಕಾಯ್ದೆಯ ರೂವಾರಿ ವಿನೋದ್ ರೈನ, ಮಹಾರಾಷ್ಟ್ರದ ವಿಚಾರವಾದಿ ನರೇಂದ್ರ ದಾಬೋಲ್ಕರ್, ಜಗತ್ತಿನ ಮಾನವತಾವಾದದ ದಂತಕಥೆ ನೆಲ್ಸನ್ ಹಾಗೂ ರಾಷ್ಟ್ರಕವಿ ಜಿ.ಎಸ್.ಎಸ್ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement