ಮಹಿಳೆಯ ಮಾಂಗಲ್ಯ ಸರ ಅಪಹರಣ
ಹೊಳೆನರಸೀಪುರ: ತಾಲೂಕಿನ ಹಳ್ಳಿಮೈಸೂರು ಸಮೀಪದ ಗೋಹಳ್ಳಿ ಗ್ರಾಮದಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಮಹಿಳೆಯೊಬ್ಬರ ಚಿನ್ನದ ಸರವನ್ನು ಪಾಲೀಶ್ ಮಾಡಿಕೊಡುವುದಾಗಿ ನಂಬಿಸಿ ಆಕೆಯ ಮಾಂಗಲ್ಯ ಸರವೂ ಸೇರಿದಂತೆ ಸುಮಾರು 80 ಗ್ರಾಂನ ಸುಮಾರು ಎರಡೂವರೆ ಲಕ್ಷ ರು. ಬೆಲೆಯ ಚಿನ್ನದ ಸರವನ್ನು ಲಪಟಾಯಿಸಿದ ಘಟನೆ ಇತ್ತೀಚೆಗೆ ನಡೆದಿದೆ.
ಆಗಂತುಕರ ಜಾಲ: ಗೋಹಳ್ಳಿ ಗ್ರಾಮದ ನಳಿನಿ ಎಂಬಾಕೆಯೇ ಚಿನ್ನದ ಸರವನ್ನು ಕಳೆದುಕೊಂಡ ಮಹಿಳೆ. ಗುರುವಾರ ಮದ್ಯಾಹ್ನ ಎರಡು ಗಂಟೆ ಸಮಯದಲ್ಲಿ ಆಗಂತುಕರಿಬ್ಬರು ಬೈಕ್‌ನಲ್ಲಿ ನಳಿನಿ ಅವರ ಮನೆಗೆ ತೆರಳಿ ತಾವು ದೂರದ ಊರಿಂದ ಬಂದಿದ್ದು, ಚಿನ್ನವನ್ನು ಪಾಲಿಶ್ ಮಾಡಿಕೊಡುವುದಾಗಿ ನಂಬಿಸಿದ್ದಾರೆ.
ಕುಕ್ಕರ್ ನಾಟಕ: ಅಮಾಯಕ ಮಹಿಳೆ ನಳಿನಿ ಈ ಅಗುಂತುಕರ ಮಾತಿಗೆ ಮರುಳಾಗಿ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ತೆಗೆದು ಅವರ ಕೈಗೆ ನೀಡಿದ್ದಾರೆ. ಚಾಲಾಕಿ ಆಗಂತುಕರು ಸರವನ್ನು ಕುಕ್ಕರ್‌ನಲ್ಲಿ ಬಿಸಿ ಮಾಡಬೇಕಿದೆ.
ಆದ್ದರಿಂದ ಮನೆಯಲ್ಲಿರುವ ಕುಕ್ಕರ್ ತರುವಂತೆ ಸಲಹೆ ನೀಡಿದ್ದಾರೆ. ನಳಿನಿ ಅಗುಂತಕರ ಮಾತಿನ ಮೋಡಿಗೆ ಬಿದ್ದು ಮನೆಯಲ್ಲಿದ್ದ ಅಡುಗೆ ಮಾಡುವ ಕುಕ್ಕರ್ ತಂದು ಕೊಟ್ಟಿದ್ದಾರೆ.
ಆಗಂತುಕರು ಕುಕ್ಕರ್‌ನಲ್ಲಿ ಮಾಂಗಲ್ಯ ಸರದ ಜೊತೆಗೆ ನೀರು ಹಾಗೂ ಅನಿಲ ಬೆರೆತ ನೀರು ಬೆರೆಸಿ ಅದನ್ನು ಒಲೆ ಮೇಲಿಟ್ಟು ಒಂದೆರಡು ವಿಷಲ್ ಕೂಗಿಸಿಕೊಂಡು ತರುವಂತೆ ತಿಳಿಸಿದ್ದಾರೆ. ನಳಿನಾ ಅವರು ಕುಕ್ಕರ್ ಅನ್ನು ಅಡುಗೆ ಮನೆಗೆ ಕೊಂಡೊಯ್ದು ಒಲೆಯ ಮೇಲಿರಿಸಿ ಬಂದಿದ್ದಾರೆ.
ಮೋಸ ಮಾಡಿ ಪರಾರಿ: ಆಗಂತುಕರು ನಳಿನಿ ಅವರನ್ನು ಮಾತಿಗೆಳೆದು ಸ್ವಲ್ಪ ಸಮಯ ಕಳೆದ ನಂತರ ಕುಕ್ಕರ್ ಕೂಗುವುದರೊಳಗೆ ಹೊರ ಹೋಗಿ ಬರುವುದಾಗಿ ತಿಳಿಸಿ, ಬೈಕಿನಲ್ಲಿ ಜಾಗ ಖಾಲಿ ಮಾಡಿದ್ದಾರೆ.
ಆದರೆ ಎಷ್ಟು ಹೊತ್ತಾದರೂ, ಅಗುಂತಕರು ಮರಳಿ ಬಂದಿಲ್ಲ. ನಂತರ ಅನುಮಾನಗೊಂಡು ಕುಕ್ಕರನ್ನು ಕೆಳಗಿಳಿಸಿ ತೆರೆದು ನೋಡಲಾಗಿ ಕುಕ್ಕರ್‌ನಲ್ಲಿ ಒಂದೆರಡು ಕಲ್ಲುಗಳನ್ನು ಹೊರತುಪಡಿಸಿ, ಇನ್ನೇನೂ ಇಲ್ಲದ್ದನ್ನು ಕಂಡು ನಳಿನಿ ಹೌಹಾರಿದ್ದಾರೆ.
ಆದರೆ, ವಿಷಯ ತಿಳಿದ ಕುಟುಂಬ ಸದಸ್ಯರು ಅಗುಂತಕರನ್ನು ಹುಡುಕುವ ಪ್ರಯತ್ನ ವಿಫಲವಾದ ನಂತರ ನಳಿನಿ ಅವರು ಇಲ್ಲಿನ ಗ್ರಾಮಾಂತರ ಠಾಣೆಗೆ ಆಗಮಿಸಿ, ಚಿನ್ನದ ಸರ ಕಳೆದುಕೊಂಡ ವಿಷಯವನ್ನು ತಿಳಿಸಿದ್ದಾರೆ.
ದೂರು ದಾಖಲಿಸಿಕೊಂಡಿರುವ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮಂಜುನಾಥ್, ಆರೋಪಿಗಳ ಪತ್ತೆಗೆ ಕ್ರಮಕೈಗೊಂಡಿರುವುದಾಗಿ ತಿಳಿಸಿದ್ದಾರೆ.