ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮಾರ್ಚ್ ಅಂತ್ಯಕ್ಕೆ ಪ್ರಮುಖ ರಸ್ತೆಗಳ ಅಭಿವೃದ್ಧಿ

Mainashree
Updated On : 3 Jan 2014, 9:51 am

ಕ.ಪ್ರ.ವಾರ್ತೆ  ಸಕಲೇಶಪುರ  ಜ.3
ಮಾರ್ಚ್ ಅಂತ್ಯದ ವೇಳೆಗೆ ತಾಲೂಕಿನ ಪ್ರಮುಖ ರಸ್ತೆಗಳನ್ನು ಸಂಪೂರ್ಣ ಅಭಿವೃದ್ಧಿಗೊಳಿಸಲಾಗುವುದು ಶಾಸಕ ಎಚ್.ಕೆ. ಕುಮಾರಸ್ವಾಮಿ ಹೇಳಿದರು.
ಗುರುವಾರ ಪಟ್ಟಣದ ಅರೇಹಳ್ಳಿ ಬೀದಿಯಲ್ಲಿ ನಡೆದ ಬ್ಯಾದನೆಯಿಂದ ಬ್ಯಾಕರವಳ್ಳಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಕಳೆದ ಹಲವು ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಬ್ಯಾದನೆ ಬ್ಯಾಕರವಳ್ಳಿ ಕೇರೋಡಿ 33  ಕಿ.ಮೀ. ಉದ್ದದ ಮಹಾತ್ವಾಕಾಂಕ್ಷೆ ರಸ್ತೆ ಕಾಮಗಾರಿಯನ್ನು ರು. 16.5 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ ಎಂದರು.
ಏಪ್ರಿಲ್ ಅಂತ್ಯಕ್ಕೆ ಪೂರ್ಣ: ರಾಜ್ಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಅನುದಾನದಿಂದ ತಾಲೂಕಿನ ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚಿನ ನೆರವಿನ ಭರವಸೆ ದೊರೆತಿದೆ. ರಾಷ್ಟ್ರೀಯ ಹೆದ್ದಾರಿ ಮಾದರಿಯಲ್ಲಿ ಗುಣಮಟ್ಟದ ರಸ್ತೆ ಕಾಮಗಾರಿ ಆಗಲಿದ್ದು, ಒಂದೇ ಹಂತದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಂಡು ಏಪ್ರಿಲ್ ತಿಂಗಳ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದರು.
ಮನವಿ: ಕ್ಷೇತ್ರಕ್ಕೆ ಹೊಸದಾಗಿ 117 ಕೀಮಿ ರಸ್ತೆ ಮಂಜೂರಾಗಿದೆ. ತಾಲೂಕಿನ ಜನ್ನಾಪುರ-ವಣಗೂರು ನಡುವಿನ 48 ಕಿ.ಮೀ. ಚಂಗಡಹಳ್ಳಿ- ಉಚ್ಚಂಗಿಯ 27 ಕಿ.ಮೀ.  ರಸ್ತೆ ಅಭಿವೃದ್ಧಿಗೊಳಿಸಲಾಗುತ್ತಿದ್ದು, ಕಾಮಗಾರಿ ಮುಕ್ತಾಯದ ಹಂತಕ್ಕೆ ಬಂದಿದೆ. ಸುಸೂತ್ರ ಕಾಮಗಾರಿಗೆ ಸ್ಥಳೀಯ ಜನರು ಕೈ ಜೋಡಿಸಿ ಸಹಕರಿಸುವಂತೆ ಶಾಸಕರು ಮನವಿ ಮಾಡಿದರು.
ಹೆಚ್ಚು ದಿನ ಬಾಳಿಕೆ: ಗ್ರಾಮಗಳ ಸಂಪರ್ಕ ರಸ್ತೆ ಅಭಿವೃದ್ಧಿಗೆ ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿದೆ. ರಸ್ತೆಗಳು ಗಟ್ಟಿಮುಟ್ಟಾಗಿರಬೇಕಾದರೆ ಗುಣಮಟ್ಟದ ಕೆಲಸ ನಡೆಯಬೇಕು. ಈ ವಿಷಯದಲ್ಲಿ ಸಾರ್ವಜನಿಕರು ಮುತುವರ್ಜಿ ವಹಿಸಿದರೆ ರಸ್ತೆ ಬಹಳಷ್ಟು ದಿನ ಬಾಳಿಕೆ ಬರುತ್ತದೆ ಎಂದರು.
ಪ್ರತಿಭಟನೆ ನಡೆದಿದ್ದವು: ಕಳೆದೆರಡು ವರ್ಷಗಳಿಂದ ಪ್ರತಿಭಟನೆಗಳ ಮೂಲಕ ಸಾರ್ವಜನಿಕರ ಅಧಿಕಾರಿಗಳ ಗಮನ ಸೆಳೆದಿದ್ದ ರಸ್ತೆ ಕಾಮಗಾರಿಗೆ ಕೊನೆಗೂ ಚಾಲನೆ ನೀಡಲಾಗಿದ್ದು, ಈ ಮೂಲಕ ಸ್ಥಳೀಯರ ಪ್ರತಿಭಟನೆಗಳಿಗೆ ಬ್ರೇಕ್ ಹಾಕಿದಂತಾಗಿದೆ. ಈ ಹಿಂದೆ, ಹೊಂಡಮಯವಾಗಿದ್ದ ರಸ್ತೆಯಲ್ಲಿ ಮಳೆಗಾಲದಲ್ಲಿ ನಡೆದಾಡುವುದೂ ನರಕ ಸದೃಶ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ರಸ್ತೆಯನ್ನು ದುರಸ್ತಿಪಡಿಸುವಂತೆ ಒತ್ತಾಯಿಸಿ ಸ್ಥಳೀಯರು ಹಲವು ಬಾರಿ ಪ್ರತಿಭಟನೆ ನಡೆಸಿದ್ದರು.
ಪುರಸಭೆ ಅಧ್ಯಕ್ಷ ಸತೀಶ್, ಉಪಾದ್ಯಕ್ಷ ಮುಖೇಶ್, ತಾಪಂ ಅಧ್ಯಕ್ಷೆ ಮಂಜುಳ, ಜಿಪಂ ಸದಸ್ಯೆ ಸುಲೋಚನ ರಾಮಕೃಷ್ಣ, ಪುರಸಭೆ ಸದಸ್ಯರಾದ ರುದ್ರಕುಮಾರ್, ಸಮೀರ್ ಖಾನ್ ಶೋಭಾವತಿ, ಸಂತೋಷ್, ಉಮೇಶ್, ಗಿರೀಶ್, ವೆಂಕಟೇಶ್, ನಿರ್ವಾಣಯ್ಯ, ಲಲಿತಮ್ಮ ಜೆಡಿಎಸ್ ನಾಯಕರಾದ ನಾಗರಾಜ್, ರಾಮಕೃಷ್ಣ, ಸುಪ್ರದೀಪ್ತ್ ಯಜಮಾನ್ಸ್ ಚಿನ್‌ಪ್ರಸಾದ್ ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement