ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸುದ್ದಿ ಸಂಕ್ಷೇಪ

Mainashree
Updated On : 3 Jan 2014, 9:53 am

ಗ್ರಾಪಂ ಅಧ್ಯಕ್ಷರಾಗಿ ಗೀತಾ ಆಯ್ಕೆ
ಜಾವಗಲ್: ಹೋಬಳಿಯ  ಉಂಡಿಗನಾಳು ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಗುರುವಾರ ಗೀತಾ ಸಿದ್ದಪ್ಪ ಅವಿರೋಧ ಆಯ್ಕೆಯಾಗಿದ್ದಾರೆಂದು ತಾಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಚುನಾವಣಾಧಿಕಾರಿ ಟಿ.ಎನ್. ಮೂರ್ತಿ ಘೋಷಿಸಿದ್ದಾರೆ.  ನೂತನ ಅಧ್ಯಕ್ಷೆಯನ್ನು ಗ್ರಾಮ ಪಂಚಾಯ್ತಿ ಸದಸ್ಯರು, ಮಾಜಿ ಪ್ರಧಾನ್ ಎಂ.ಪಿ. ಮಲ್ಲೇಶಪ್ಪ ಮತ್ತಿತರರು ಅಭಿನಂದಿಸಿದರು. ಪಿ.ಡಿ.ಓ ಬಾಲಕೃಷ್ಣನಾಯ್ಕ, ಕಾರ್ಯದರ್ಶಿ ಯೋಗೀಶ್ ಇದ್ದರು.
ಮಂಜುನಾಥ್‌ಗೆ ಸನ್ಮಾನ
ಹಾಸನ: ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ  ಎಂ.ಎನ್. ಮಂಜುನಾಥ್ ಅವರು ಇತ್ತೀಚೆಗೆ ತಮ್ಮ ಸೇವೆಯಿಂದ ವಯೋ ನಿವೃತ್ತಿ ಹೊಂದಿದ ಪ್ರಯುಕ್ತ ತೋಟಗಾರಿಕೆ ಉಪನಿರ್ದೇಶಕ  ಶಕೀಲ್ ಅಹಮದ್ ಅಧ್ಯಕ್ಷತೆಯಲ್ಲಿ ಸನ್ಮಾನ ಸಮಾರಂಭ ನಡೆಯಿತು. ಸಮಾರಂಭದಲ್ಲಿ ಹಾಸನ ತಾಲೂಕು ದಂಡಾಧಿಕಾರಿ ಮಂಜುನಾಥ್, ಕಂದಲಿ ಕೃಷಿ ವಿಜ್ಞಾನ ಕೇಂದ್ರದ ಬಸವರಾಜ್, ಅರಣ್ಯಾಧಿಕಾರಿ ಚಂದ್ರೇಗೌಡ, ನಿವೃತ್ತ ಗೃಹ ರಕ್ಷಕ ದಳದ ಕಮಾಂಡೆಂಟ್ ಎಚ್.ಎಂ. ಶಿವಣ್ಣ, ಹೇಮಾವತಿ ತೋಟಗಾರಿಕೆ ಸಂಘದ ಉಪಾಧ್ಯಕ್ಷೆ ಸುಜಾತ ನಾರಾಯಣ್, ತಾಲ್ಲೂಕಿನ ರೈತ ಬಾಂಧವರು ಹಾಗೂ ಕಚೇರಿಯ ಸಿಬ್ಬಂದಿ ಇದ್ದರು.
ಮಡಿವಾಳ ಸಂಘ ಪುನಾರಚನೆ
ಹೊಳೆನರಸೀಪುರ: ತಾಲೂಕು ಮಡಿವಾಳರ ಸಂಘದ ಕಾರ್ಯಕಾರಿ ಸಮಿತಿಯನ್ನು ಪುನಾರಚಿಸಲಾಗಿದ್ದು, ನೂತನ ಅಧ್ಯಕ್ಷರಾಗಿ ಎಚ್.ಎಂ. ಯೋಗೇಶ್, ಗೌರವಾಧ್ಯಕ್ಷರಾಗಿ ಎಚ್.ಎಸ್. ಕೃಷ್ಣಪ್ಪ ಮತ್ತು ಎಂ. ರಾಮಚಂದ್ರ, ಪ್ರಧಾನ ಕಾರ್ಯದರ್ಶಿಯಾಗಿ ಎಚ್.ಎಂ. ವಿಜಯಕುಮಾರ್ ಆಯ್ಕೆಗೊಂಡಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.
ಆಯ್ಕೆ: ನೂತನ ಕಾರ್ಯಕಾರಿ ಸಮಿತಿಯಲ್ಲಿ ಉಪಾಧ್ಯಕ್ಷರಾಗಿ ಎಚ್.ಎಸ್. ಬಾಬು ಹಾಗೂ ಎಚ್.ಎಸ್. ನರಸಿಂಹಯ್ಯ, ಖಜಾಂಚಿಯಾಗಿ ಯೋಗಾನರಸಿಂಹ, ಸಹ-ಕಾರ್ಯದರ್ಶಿಗಳಾಗಿ ಎಚ್.ಬಿ. ರಾಜು, ಎನ್. ನಾರಾಯಣ ಮತ್ತು ಬಸವರಾಜು, ಸಮನ್ವಯ ಸಮಿತಿಯ ಸದಸ್ಯರಾಗಿ ಎಚ್.ಸಿ. ಚಂದ್ರಶೇಖರ್, ಗವಿರಂಗ, ಎಚ್.ಸಿ. ಸುಬ್ರಹ್ಮಣ್ಯ ಹಾಗೂ ಚಂದ್ರಯ್ಯ ಆಯ್ಕೆಗೊಂಡಿದ್ದಾರೆ. ನೂತನ ಸಮಿತಿಯ ನಿರ್ದೇಶಕರಾಗಿ ಎ. ವಿಜಯಕುಮಾರ್, ಲೆಕ್ಕ ಪರಿಶೋಧಕರಾಗಿ ರಾಮಚಂದ್ರು, ಪಿ. ಕೃಷ್ಣಪ್ಪ, ಪಿ. ಲಕ್ಷ್ಮಣ, ಬಸವರಾಜು, ಎಚ್.ಎಸ್. ರಾಮಶೆಟ್ಟಿ, ಶಿವಯೋಗ, ಎಚ್.ಎಸ್. ಸದಾಶಿವ, ಎಚ್.ಎಸ್. ಕೇಶವಮೂರ್ತಿ, ಎಚ್.ಬಿ.ಚಲುವರಾಜು, ಎಚ್.ಜಿ. ರಾಘು, ಎಚ್.ಜೆ. ಮಾಚಿದೇವ, ಎ. ಶಂಕರ್ ಹಾಗೂ ಎಚ್.ಜೆ.ದೇವರಾಜು ಆಯ್ಕೆಗೊಂಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಛಾಯಾಚಿತ್ರ ಸ್ಪರ್ಧೆ
ಹಾಸನ: ಜಿಲ್ಲಾ ಮಟ್ಟದ ಛಾಯಾಚಿತ್ರ
ಸ್ಪರ್ಧೆ ಮತ್ತು ಕ್ರಿಕೆಟ್ ಪಂದ್ಯಾವಳಿಯು ಜ. 5 ರಂದು ಹಾಸನ ತಾಲೂಕು ಛಾಯಾಗ್ರಾಹಕರ ಸಂಘದವತಿಯಿಂದ ನಡೆಯಲಿದೆ.
ಕಾರ್ಯಕ್ರಮವನ್ನು ಶಾಸಕ ಎಚ್.ಎಸ್. ಪ್ರಕಾಶ್ ಉದ್ಘಾಟಿಸುವರು.
ನಗರಸಭೆ ಅಧ್ಯಕ್ಷೆ ಶ್ರೀವಿದ್ಯಾ, ಅಂತಾರಾಷ್ಟ್ರೀಯ ಖ್ಯಾತ ವನ್ಯಜೀವಿ ಛಾಯಾಗ್ರಾಹಕ ತಿಪ್ಪೆಸ್ವಾಮಿ, ಸಂಘದ ತಾಲೂಕು ಅಧ್ಯಕ್ಷ ಡಿ.ಬಿ. ಮೋಹನ್ ಕುಮಾರ್, ಮೈಸೂರು ಮಹಾನಗರ ಪಾಲಿಕೆ ಸದಸ್ಯ ಹಾಗೂ ಉರಗ ತಜ್ಞ ಸ್ನೇಕ್ ಶ್ಯಾಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್, ಜಿಲ್ಲಾ ಪಂಚಾಯ್ತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎ. ನಂಜುಂಡಸ್ವಾಮಿ ಹಾಗೂ ಇತರರು ಭಾಗವಹಿಸುವರು.

ಸೆರೆ ಸಿಕ್ಕ ಭಾರಿ ಗಾತ್ರದ ಕಾಳಿಂಗ ಸರ್ಪ

ಸಕಲೇಶಪುರ: ತಾಲೂಕಿನ ದುದ್ದುವಳ್ಳಿ ಗ್ರಾಮದಲ್ಲಿ ಕಳೆದ 3 ದಿನಗಳ ಹಿಂದೆ ಕಾಣಿಸಿಕೊಂಡ ಭಾರಿ ಗಾತ್ರದ ಕಾಳಿಂಗ ಸರ್ಪವನ್ನು ಹಿಡಿದು, ಅರಣ್ಯಾಧಿಕಾರಿಗಳ ಸಹಕಾರದಿಂದ ಬಿಸ್ಲೆ ರಕ್ಷಿತ ಅರಣ್ಯಕ್ಕೆ ಬಿಟ್ಟ ಘಟನೆ ಬುಧವಾರ ನಡೆದಿದೆ.
ಗ್ರಾಮದ ರಾಮೇಗೌಡ ಎಂಬವರ ಮನೆಯ ಸಮೀಪ ಕಳೆದ ಮೂರು ದಿನಗಳ ಹಿಂದೆ 15 ಅಡಿ ಕಾಳಿಂಗ ಸರ್ಪ ಕಾಣಿಸಿಕೊಂಡು ಭಾಗದ ಗ್ರಾಮಸ್ಥರನ್ನು ಬೆಚ್ಚಿ ಬೀಳಿಸುವಂತೆ ಮಾಡಿತು.
ಸುದ್ದಿಯನ್ನು ಯಸಳೂರು ವಲಯ ಅರಣ್ಯಾಧಿಕಾರಿಗೆ ತಿಳಿಸಿದ ಕೂಡಲೇ ಕಾರ್ಯಪ್ರವೃತ್ತರಾದ ಅರಣ್ಯ ಸಿಬ್ಬಂದಿ, ಗ್ರಾಮಸ್ಥರ ಸಹಾಯದಿಂದ ಕಾಳಿಂಗ ಸರ್ಪವನ್ನು ಓಡಿಸಲು ಎಷ್ಟೇ ಪ್ರಯತ್ನಿಸಿದರೂ ಆಗದಿದ್ದಾಗ ಪಟ್ಟಣದ ಫರ್ಹಾನ್ ಎಂಬವರನ್ನು ಸ್ಥಳಕ್ಕೆ ಕರೆಸಿ, ಕಾಳಿಂಗ ಸರ್ಪ ಸೆರೆಹಿಡಿದರು. ಕಾಳಿಂಗ ಸರ್ಪವನ್ನು ಸಮೀಪದ ಬಿಸ್ಲೆ ರಕ್ಷಿತಾರಣ್ಯಕ್ಕೆ ಬಿಡಲಾಯಿತು.

ಏತ ನೀರಾವರಿಗಾಗಿ 4 ದಿನ ಜಾಥಾ
ಚನ್ನರಾಯಪಟ್ಟಣ: ಹಿರೀಸಾವೆ ಜುಟ್ಟನಹಳ್ಳಿ ಏತ ನೀರಾವರಿ ಯೋಜನೆಯನ್ನು ಕೈಗೆತ್ತಿಕೊಳ್ಳುವಂತೆ ಕಳೆದ 10 ವರ್ಷಗಳಿಂದ ಒತ್ತಾಯ ಮಾಡುತ್ತಿದ್ದರೂ ಸರ್ಕಾರ ಗಮನ ಹರಿಸದ ಕಾರಣ, ಜ.16ರಿಂದ 20ರವರಗೆ ಕಾಲ್ನಡಿಗೆ ಹಾಗೂ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಪರಮ ಗಂಗಾಧರ್ ತಿಳಿಸಿದರು.
ಆಗ್ರಹ: ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜುಟ್ಟನಹಳ್ಳಿ ಹಾಗೂ ಹಿರೀಸಾವೆ ಏತ ನೀರಾವರಿ ಯೋಜನೆಯನ್ನು ಕೈಗೆತ್ತಿಕೊಳ್ಳುವಂತೆ ಕಳೆದ 10 ವರ್ಷಗಳಿಂದ ಸರ್ಕಾರಕ್ಕೆ ಹಿರೀಸಾವೆ ಹಾಗೂ ಶ್ರವಣಬೆಳಗೊಳ ಹೋಬಳಿಯ ರೈತರು ಮನವಿ ಸಲ್ಲಿಸುತ್ತಿದ್ದರೂ ಈ ಬಗ್ಗೆ ಸರ್ಕಾರ ನಿರ್ಲಕ್ಷ ತೋರಿರುವುದನ್ನು ಖಂಡಿಸಿ ಹಾಗೂ ಕಾಮಗಾರಿಯನ್ನು ಕೂಡಲೇ ಕೈಗೆತ್ತಿಕೊಳ್ಳುವಂತೆ ಆಗ್ರಹಿಸಿದರು.
ಹಿರೀಸಾವೆಯಿಂದ ಚನ್ನರಾಯಪಟ್ಟಣದವರೆಗೆ ನಾಲ್ಕು ದಿನಗಳ ಕಾಲ ಕಾಲ್ನಡಿಗೆ ಹಾಗೂ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮನವಿ: ಜ.16ರಿಂದ ಹಿರೀಸಾವೆಯಿಂದ ಕಾಲ್ನಡಿಗೆ ಪ್ರಾರಂಭಿಸಿ, ಜುಟ್ಟನಹಳ್ಳಿ ಮಾರ್ಗವಾಗಿ ಶ್ರವಣಬೆಳಗೊಳದಿಂದ ಚನ್ನರಾಯಪಟ್ಟಣಕ್ಕೆ ಆಗಮಿಸಿ ಕಾವೇರಿ ನೀರಾವರಿ ನಿಗಮ ಹಾಗೂ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಎಚ್ಚರಿಕೆ: ನಾಲ್ಕು ದಿನಗಳ ಕಾಲ್ನಡಿಗೆಯ ಸಂದರ್ಭದಲ್ಲಿ ಏತ ನೀರಾವರಿ ಯೋಜನೆಗೊಳಪಡುವ ಗ್ರಾಮಗಳಿಗೆ ತೆರಳಿ ಜನತೆಗೆ ಯೋಜನೆಯ ಮನವರಿಕೆ ಮಾಡಿ ಅವರೊಂದಿಗೆ ಚನ್ನರಾಯಪಟ್ಟಣಕ್ಕೆ ಆಗಮಿಸಿ ಮನವಿ ಸಲ್ಲಿಸಲಾಗುವುದು. ಇದಕ್ಕೂ ಸರ್ಕಾರ ಕಾಮಗಾರಿ ಕೈಗೊಳ್ಳಲು ಮುಂದಾಗದಿದ್ದರೆ ಉಗ್ರ ಹೋರಾಟದ ಹಾದಿ ಹಿಡಿಯಲಾಗುವುದು ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement