20ನಿಮಿಷ 20ಸುದ್ದಿ
11ರಂದು ಜಿಎಸ್ಎಸ್ ಕವನ ಗಾಯನ ಸ್ಪರ್ಧೆ
ಹಾಸನ: ನಗರದ ಉತ್ತರ ಬಡಾವಣೆಯ ಎಸ್ಜಿಆರ್ ಶಾಲಾ ಆವರಣದಲ್ಲಿ ಜ.11ರಂದು ಬೆಳಗ್ಗೆ 10ಕ್ಕೆ ಜಿ.ಎಸ್.ಎಸ್. ಕವನ ಗಾಯನ ಸ್ಪರ್ಧೆಯನ್ನು ಹಾಸನ ತಾಲೂಕು ಭಾರತ ಜ್ಞಾನ ವಿಜ್ಞಾನ ಸಮಿತಿ ಆಯೋಜಿಸಿದೆ. ಸ್ಪರ್ಧೆಯು 16 ವರ್ಷದೊಳಗಿನ (ಪ್ರೌಢಶಾಲಾ ಹಂತ) ಹಾಗೂ 16 ವರ್ಷದ ನಂತರದ ಸಾರ್ವಜನಿಕರಿಗೆ ಪ್ರತ್ಯೇಕವಾಗಿ ಹಮ್ಮಿಕೊಳ್ಳಲಾಗಿದೆ. ಡಾ.ಜಿ.ಎಸ್.ಎಸ್ ಕವನ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವವರು ಜ.9 ರೊಳಗಾಗಿ, ತಮ್ಮ ಹೆಸರು, ವಿದ್ಯಾರ್ಹತೆ, ವಯಸ್ಸು, ಹಾಡುವ ಕವನದ ಶೀರ್ಷಿಕೆ ಮತ್ತು ಜಿ.ಎಸ್.ಎಸ್ರವರ ಯಾವ ಕವನ ಸಂಕಲನದಿಂದ ಆಯ್ದುಕೊಳ್ಳಲಾಗಿದೆ ಎಂಬ ವಿವರಗಳೊಂದಿಗೆ ಕಾರ್ಯದರ್ಶಿ, ಭಾರತ ಜ್ಞಾನ ವಿಜ್ಞಾನ ಸಮಿತಿ, ಹಾಸನ ತಾಲೂಕು ಎಸ್.ಜಿ.ಆರ್. ಶಾಲಾ ಆವರಣ ಹೊಸಲೈನ್ ರಸ್ತೆ ಉತ್ತರ ಬಡಾವಣೆ ಹಾಸನ ಇಲ್ಲಿಗೆ ಪತ್ರದ ಮೂಲಕ ಅಥವಾ ಅಂಚೆ ಮೂಲಕ ಕಳುಹಿಸಿಕೊಡಬಹುದು ಅಥವಾ ಛ್ಜಿಢಡ.ಡಟಿಣ್ಠಜಜ್ಝಜಿಜಿಟಛ್ಝಟ.್ಛ್ಟಟ ಇ- ಮೇಲ್ ವಿಳಾಸಕ್ಕೆ ಮೇಯ್ಲ್ ಮಾಡಬಹುದು. 9481492407 ಮತ್ತು 9844641868 ಗಳಿಗೆ ಎಸ್.ಎಂ.ಎಸ್. ಮೂಲಕವೂ ಕಳುಹಿಸಿ ನೋಂದಣಿ ಮಾಡಿಕೊಳ್ಳಬಹುದು.
ಆನ್ಲೈನ್ ಅರ್ಜಿ: ಮಾಹಿತಿ ನೀಡಲು ಸೂಚನೆ
ಅರಕಲಗೂಡು: 2013-14 ನೇ ಸಾಲಿನಲ್ಲಿ ವರ್ಗಾವಣೆಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದು, ಆದರೂ ವರ್ಗಾವಣೆಗೊಳ್ಳದ ಪತಿ- ಪತ್ನಿ ಪ್ರಕರಣದ ಶಿಕ್ಷಕರು ತಾವು ಮದುವೆಯಾದ ದಿನಾಂಕ ಮತ್ತು ಪತಿ-ಪತ್ನಿಯರ ವಿವರಗಳನ್ನು ಆನ್ಲೈನ್ನಲ್ಲಿ ಅಪ್ಲೋಡ್ ಮಾಡಬೇಕಿರುವುದರಿಂದ ಸಂಬಂಧಿಸಿದ ಶಿಕ್ಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ವಿವರಗಳನ್ನು 2014ರ ಜ. 6ರೊಳಗೆ ಸಲ್ಲಿಸಲು ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ರೇವಣ್ಣ ತಿಳಿಸಿದ್ದಾರೆ.
ಮಾಹಿತಿ ಕೋರಿದ ಶಿಕ್ಷಣ ಸಚಿವರು: 2013-14 ನೇ ಸಾಲಿನಲ್ಲಿ ವರ್ಗಾವಣೆಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದು, ಆದರೂ ವರ್ಗಾವಣೆಗೊಳ್ಳದ ಪತಿ- ಪತ್ನಿ ಪ್ರಕರಣದ ಶಿಕ್ಷಕರು ತಾವು ಮದುವೆಯಾದ ದಿನಾಂಕ ಮತ್ತು ಪತಿ-ಪತ್ನಿಯರ ವಿವರಗಳನ್ನು ಆನ್ಲೈನ್ನಲ್ಲಿ ಅಪ್ಲೋಡ್ ಮಾಡುವಂತೆ ಶಿಕ್ಷಣ ಸಚಿವರು, ಇಲಾಖೆಗೆ ತಿಳಿಸಿದ್ದಾರೆ.
ಜಾವಗಲ್ನಲ್ಲಿ ಆಧಾರ್ ಕಾರ್ಡ್ ಕೇಂದ್ರ ಆರಂಭ
ಜಾವಗಲ್: ಜಾವಗಲ್ನಲ್ಲಿ ಆಧಾರ್ ಕಾರ್ಡ್ ನೋಂದಣಿ ಕೇಂದ್ರವನ್ನು ಪುನರಾರಂಭಿಸಲಾಗಿದೆ ಎಂದು ನಾಡಕಚೇರಿ ಉಪತಹಸೀಲ್ದಾರ್ ಅಶೋಕ್ ತಿಳಿಸಿದ್ದಾರೆ. ಗ್ರಾಮ ಪಂಚಾಯ್ತಿ ಕಚೇರಿ ಆವರಣದಲ್ಲಿ ಇತ್ತೀಚೆಗೆ ಆರಂಭಿಸಲಾಗಿದ್ದು ಜಾವಗಲ್ ಹೋಬಳಿಯ ಜನತೆ ಇದರ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದ್ದಾರೆ. ಆಧಾರ್ ಕಾರ್ಡ್ ನೋಂದಣಿ ಮಾಡಿಸಿಕೊಳ್ಳದೇ ಇರುವವರು ಕೂಡಲೇ ನೋಂದಣಿ ಮಾಡಿಸಿಕೊಳ್ಳುವಂತೆ ತಿಳಿಸಿದ್ದಾರೆ. ಹೋಬಳಿಯ ಜನತೆ ಪ್ರತಿದಿನ ಬೆಳಿಗ್ಗೆ 10ರಿಂದ ಸಂಜೆ 5.30ರ ಒಳಗೆ ಕೇಂದ್ರಕ್ಕೆ ಬಂದು ನೋಂದಣಿ ಮಾಡಿಸಿಕೊಳ್ಳುವಂತೆ ಕಾರ್ವಿ ಡಾಟ ಮ್ಯಾನೇಜ್ಮೆಂಟ್ ಸರ್ವೀಸಸ್ನ ದಿವಾಕರ್ ತಿಳಿಸಿದ್ದಾರೆ.
ಅಂಚೆ ಇಲಾಖೆಯಲ್ಲಿ ಎಂಟಿಎಸ್ಗಳ ನೇಮಕ
ಹಾಸನ: ಕರ್ನಾಟಕ ಅಂಚೆ ವೃತ್ತದಡಿಯಲ್ಲಿ 82 ಬಹುಕಾರ್ಯ ಸಿಬ್ಬಂದಿ (ಮಲ್ಟಿ ಟಾಸ್ಕಿಂಗ್ ಸ್ಟಾಫ್ಗಳನ್ನು ಭರ್ತಿ ಮಾಡಲು ಜ.13 ರೊಳಗೆ ಅಂಚೆ ಮೂಲಕ ಅರ್ಜಿ ಕರೆದಿದ್ದಾರೆ. ಅರ್ಜಿಯನ್ನು ಸ್ಪೀಡ್ ಪೋಸ್ಟ್ ಎಡಿ ರೀತಿಯಲ್ಲೇ ಸಲ್ಲಿಸಬೇಕು. ಅಭ್ಯರ್ಥಿಗಳು, 10ನೇ ತರಗತಿ ಪಾಸಾಗಿದ್ದು, ಜ.13ರಂತೆ 18 ವರ್ಷದಿಂದ 27 ವರ್ಷಗಳೊಳಗಿರಬೇಕು. ನಿಯಮಾನುಸಾರ ವಯೋವುತಿಯಲ್ಲಿ ಸಡಿಲಿಕೆ ಇರುತ್ತದೆ. ಅರ್ಜಿ ಶುಲ್ಕ ರು. 200 ಪರಿಶಿಷ್ಟ ಜಾತಿ, ಪಂಗಡ, ಮಹಿಳಾ, ಅಂಗವಿಕಲ ಅಭ್ಯರ್ಥಿಗಳಿಗೆ ವಿನಾಯ್ತಿ ಇದೆ. ಆಯ್ಕೆಯು 100 ಅಂಕಗಳ ಬಹು ಆಯ್ಕೆ ವಿಧಾನದ ಪರೀಕ್ಷೆಯ ಮೂಲಕ. ಅವಧಿ 90 ನಿಮಿಷಗಳು. ಭಾಗ- ಎ ಸಾಮಾನ್ಯ ವಿಜ್ಞಾನ, 25 ಪ್ರಶ್ನೆಗಳು, 25 ಅಂಕಗಳು. ಭಾಗ -ಬಿ ಗಣಿತ, 25 ಪ್ರಶ್ನೆಗಳು, 25 ಅಂಕಗಳು. ಭಾಗ -ಸಿ 25 ಅಂಕಗಳ ಇಂಗ್ಲಿಷ್ ಭಾಷಾ ಪರೀಕ್ಷೆ ಮತ್ತು 25 ಅಂಕಗಳ ಕನ್ನಡ ಭಾಷಾ ಪರೀಕ್ಷೆ ಇರುತ್ತದೆ.
ಅರ್ಹತೆಯುಳ್ಳ ಆಸಕ್ತ ಯುವಕರು ಹೆಚ್ಚಿನ ವಿವರಕ್ಕಾಗಿ ಹಾಸನದ ಕೃಷಿಕ್ ಸರ್ವೋದಯ ಫೌಂಡೇಷನ್ ಅನ್ನು ಖುದ್ದಾಗಿ ಅಥವಾ ಮೊ. 9845493336 ಮೂಲಕ ಸಂಪರ್ಕಿಸಿ ಪಡೆಯಬಹುದು. ಕೃಷಿಕ್ ಸರ್ವೋದಯ ಫೌಂಡೇಷನ್ನಲ್ಲಿ ಪರೀಕ್ಷೆಗೆ ಮಾರ್ಗದರ್ಶನ ನೀಡಲಾಗುವುದು.
ಕೈ ಬೀಸಿ ಕರೆಯುತ್ತಿರುವ ಅಪಾಯದ ಬಾವಿ
ಅರಕಲಗೂಡು: ತಾಲೂಕಿನ ದೊಡ್ಡಮಗ್ಗೆ ಹೋಬಳಿ ಯಲಗತವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ವಡ್ಡರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸಮೀಪದ ವಸತಿ ಪ್ರದೇಶದಲ್ಲಿ ತೋಡಿರುವ ಕೊಳವೆ ಬಾವಿಯೊಂದರಲ್ಲಿ ನೀರು ಬಾರದ ಕಾರಣಕ್ಕಾಗಿ ಹಾಗೆಯೇ ಬಿಡಲಾಗಿದೆ. ಈ ಪ್ರದೇಶದಲ್ಲಿ ಮಕ್ಕಳು ಆಡುವ ಹಾಗೂ ಓಡಾಡುವ ಕಾಲು ರಸ್ತೆ ಪ್ರದೇಶದಲ್ಲೇ ಇದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಈಗಾಗಲೇ ಇಂತಹ ಕೊಳವೆ ಬಾವಿಗಳಲ್ಲಿ ಹಲವು ಮಕ್ಕಳು ಸಿಲುಕಿ ಅಸು ನೀಗಿರುವ ಪ್ರಕರಣಗಳು ಆಗಿ ಹೋಗಿದ್ದರೂ ಇಲ್ಲಿನ ಗ್ರಾಮ ಪಂಚಾಯಿತಿ ಅಧಿಕಾರಿಗಳಾಗಲೀ, ಚುನಾಯಿತ ಸದಸ್ಯರುಗಳಾಗಲೀ ಇತ್ತ ಗಮನ ಹರಿಸುತ್ತಿಲ್ಲ. ಇನ್ನಾದರೂ, ಈ ವಿಫಲ ಕೊಳವೆ ಬಾವಿಯನ್ನು ಮುಚ್ಚಿಸುವ ಕೆಲಸ ಮಾಡಬೇಕಿದೆ.
ಜಾವಗಲ್ ಪೊಲೀಸರಿಂದ ರಸ್ತೆ ಸುರಕ್ಷತಾ ಸಪ್ತಾಹ
ಜಾವಗಲ್: ಜಾವಗಲ್ ಪೊಲೀಸ್ ಠಾಣೆ ವತಿಯಿಂದ ಶುಕ್ರವಾರ ಪಟ್ಟಣದಲ್ಲಿ 25ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮವನ್ನು ಆಚರಿಸಲಾಯಿತು. ರಾಷ್ಟ್ರೀಯ ಹೆದ್ದಾರಿ 234ರಲ್ಲಿ ಆಟೋಚಾಲಕರು, ಮ್ಯಾಕ್ಸಿಕ್ಯಾಬ್ ಚಾಲಕರ ಜಾಥಾ ಕಾರ್ಯಕ್ರಮಕ್ಕೆ ಪೊಲೀಸ್ಠಾಣಾಧಿಕಾರಿ ಸಿ.ಪಿ. ನವೀನ್ ಚಾಲನೆ ನೀಡಿದರು. ನಂತರ ಠಾಣೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಚಾಲಕರು ಕಡ್ಡಾಯವಾಗಿ ವಾಹನಕ್ಕೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳು, ಚಾಲನ ಪರವಾನಗಿ, ಇನ್ಷೂರೆನ್ಸ್ಗಳನ್ನು ಹೊಂದಿರಬೇಕೆಂದು ತಿಳಿಸಿದರು. ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಕರೆ ನೀಡಿದರು. ಸಮವಸ್ತ್ರ ಧರಿಸುವುದು, ನಿಗದಿತ ಸ್ಥಳದಲ್ಲಿ ವಾಹನ ನಿಲ್ಲಿಸುವುದು, ವಾಹನಗಳ ಫುಟ್ಬೋರ್ಡ್ ಮೇಲೆ ಜನರನ್ನು ನಿಲ್ಲಿಸದಿರುವುದು. ನಿಗದಿತ ಸಂಖ್ಯೆಯ ಪ್ರಯಾಣಿಕರನ್ನು ಮಾತ್ರವೇ ಕರೆದುಕೊಂಡು ಹೋಗುವುದು, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡದಿರುವುದು, ಮುಂತಾದ ನಿಯಮಗಳ ಬಗ್ಗೆ ಮಾಹಿತಿ ನೀಡಿ ಚಾಲಕರು ಪೊಲೀಸರೊಂದಿಗೆ ಸಹಕರಿಸುವಂತೆ ತಿಳಿಸಿದರು. ಸಿಬ್ಬಂದಿಗಳಾದ ತಿಮ್ಮೇಗೌಡ, ಶಿವರುದ್ರಪ್ಪ, ಮಲ್ಲೇಶ್, ಶಿವರಾಮ್, ಮಂಜೇಗೌಡ, ಸುಮ ಇದ್ದರು.
ಶಿಕ್ಷಣ ಎಲ್ಲರ ಜ್ಞಾನಗಂಗೆ: ಶಾಸಕ ಕುಮಾರಸ್ವಾಮಿ
ಆಲೂರು: ಶಿಕ್ಷಣ ಎಲ್ಲರ ಜ್ಞಾನಗಂಗೆ, ನಮ್ಮ ಗುರಿ ಯಾವಾಗಲೂ ಶಿಕ್ಷದ ಕಡೆಗೆ ಸಾಗಬೇಕು ಎಂದು ಕ್ಷೇತ್ರದ ಶಾಸಕ ಎಚ್.ಕೆ. ಕುಮಾರಸ್ವಾಮಿ ತಿಳಿಸಿದರು. ತಾಲೂಕಿನ ಗಂಜಿಗೆರೆಯ ಶ್ರೀ ವೆಂಕಟರಮಣಸ್ವಾಮಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು. ಕಳೆದ ಸಾಲಿನಲ್ಲಿ 10ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ದಾನಿಗಳಿಂದ ಕೆ.ಟಿ. ನಿಂಗರಾಜು, ಹಿರಿಯ ನಾಗರಿಕ ಪ್ರಶಸ್ತಿ ಪುರಸ್ಕೃತ ಬಿ.ಸಿ. ರಾಮೇಗೌಡರನ್ನು ಸನ್ಮಾನಿಸಲಾಯಿತು. ಜಿಪಂ ಸದಸ್ಯ ಪುರುಷೋತ್ತಮ್, ಪರಿಸರವಾದಿ ಎಚ್.ಪಿ.ಮೋಹನ್, ತಾಪಂ ಸದಸ್ಯ ಜಿ.ಆರ್. ರಂಗನಾಥ್, ಸಂಸ್ಥೆಯ ಅಧ್ಯಕ್ಷೆ ನಾಗಮ್ಮ, ನಿವೃತ್ತ ಶಿಕ್ಷಕರ ಕೆ.ಟಿ. ನಿಂಗರಾಜು, ಕಾಫಿ ಬೆಳೆಗಾರ ಕೆ.ಎಂ. ನಂಜುಂಡಪ್ಪ, ಎಪಿಎಂಸಿ ನಿರ್ದೇಶಕ ಬಿ.ಕೆ. ಲಿಂಗರಾಜು, ಎಚ್.ಪಿ. ಜಗದೀಶ್, ಗ್ರಾಮದ ಮುಖಂಡರು, ಮುಖ್ಯೋಪಾಧ್ಯಾಯಿನಿ ಭವಾನಿ ಇತರರು ಇದ್ದರು.
ಇಂದಿನಿಂದ ಬೋಧನಾ ತರಗತಿ ಆರಂಭ
ಹಾಸನ: ಗೊರೂರಿನ ಎ.ಎನ್.ವಿ. ಕಾಲೇಜಿನ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಅಧ್ಯಯನ ಕೇಂದ್ರದಲ್ಲಿ ದಾಖಲಾಗಿರುವ ಪ್ರಥಮ, ದ್ವಿತೀಯ ಮತ್ತು ತೃತೀಯ ಬಿಎ ವಿದ್ಯಾರ್ಥಿಗಳಿಗೆ ವಾರಂತ್ಯ ಬೋಧನಾ ಸಮಾಚಲೋನ ತರಗತಿಗಳನ್ನು ಜ. 5ರಿಂದ ಹಮ್ಮಿಕೊಳ್ಳಲಾಗಿದೆ. ತರಗತಿಗಳು ಪ್ರತಿ ಭಾನುವಾರ ಎರಡನೇ ಶನಿವಾರ, ಸರ್ಕಾರಿ ರಜಾ ದಿನಗಳಲ್ಲಿ ಮಾತ್ರ ನಡೆಯುತ್ತವೆ.
ಜ. 5ರಂದು ಎಲ್ಲಾ ವಿದ್ಯಾರ್ಥಿಗಳು ತಪ್ಪದೇ ಹಾಜರಾಗಿ ತರಗತಿಗಳ ವೇಳಾಪಟ್ಟಿಯನ್ನು ಪಡೆದುಕೊಳ್ಳಬೇಕು. ಬಿಕಾಂ ತರಗತಿಗಳಿಗೆ ದಾಖಲಾಗಿರುವ ವಿದ್ಯಾರ್ಥಿಗಳಿಗೆ ಹಾಸನದ ಕಲಾ ಕಾಲೇಜಿನ ಅಧ್ಯಯನ ಕೇಂದ್ರದಲ್ಲಿ ತರಗತಿಗಳನ್ನು ನಡೆಸಲಾಗುತ್ತದೆ. ಎ.ಎನ್.ವಿ. ಕಾಲೇಜಿನ ಅಧ್ಯಯನ ಕೇಂದ್ರವನ್ನು ಆಯ್ಕೆ ಮಾಡಿಕೊಂಡಿರುವ ವಿದ್ಯಾರ್ಥಿಗಳು, ಇದರ ಸದುಪಯೋಗ ಪಡೆಯಬೇಕೆಂದು ಅಧ್ಯಯನ ಕೇಂದ್ರದ ಸಂಯೋಜಕ ಡಾ.ಎಂ.ಆರ್. ಚಂದ್ರಶೇಖರ್ ತಿಳಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಅಧ್ಯಯನ ಕೇಂದ್ರದ ಕಚೇರಿಯನ್ನು ಸಂಪರ್ಕಿಸಬಹುದು.
ಶ್ರೀಗಳ ಆರಾಧನಾ ಮಹೋತ್ಸವ
ಹಾಸನ: ನಗರದ ಜವರನಹಳ್ಳಿ ವಿರಕ್ತಮಠದ ತ್ರಿಮೂರ್ತಿ ಗುರುಗಳಾದ ಲಿಂಗೈಕ್ಯ ಶ್ರೀ ದೊಡ್ಡಶಾಂತವೀರ ಶಿವಯೋಗಿ, ಶ್ರೀ ಚಿಕ್ಕಶಾಂತವೀರ ಶಿವಯೋಗಿ ಹಾಗೂ ಶ್ರೀ ಸಂಗಮೇಶ್ವರ ಸ್ವಾಮೀಜಿಯವರ ಆರಾಧನಾ ಮಹೋತ್ಸವವನ್ನು ಜ.6 ರಂದು ಬೆಳಗ್ಗೆ 11ಕ್ಕೆ ನಗರದ ಜವೇನಹಳ್ಳಿ ಮಠದಲ್ಲಿ ಆಯೋಜಿಸಲಾಗಿದೆ. ತಿಪಟೂರಿನ ಷಡಕ್ಷರಮಠದ ಶ್ರೀ ರುದ್ರಮುನಿ ಸ್ವಾಮೀಜಿ ಸಾನಿಧ್ಯದಲ್ಲಿ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಜವೇನಹಳ್ಳಿ ಮಠಾಧಿಪತಿ ಶ್ರೀ ಸಂಗಮೇಶ್ವರ ದೇವರು ನೇತೃತ್ವ ವಹಿಸುವರು. ಬೆಳಗ್ಗೆ 8 ಗಂಟೆಗೆ ತ್ರಿಮೂರ್ತಿ ಗುರುಗಳ ಗದ್ದುಗೆಗಳಿಗೆ ರುದ್ರಾಭಿಷೇಕ ಹಾಗೂ ಮಹಾಮಂಗಳಾರತಿ ನಡೆಯಲಿದೆ. ಮಧ್ಯಾಹ್ನ 1ಕ್ಕೆ ಪ್ರಸಾದ ವಿನಿಯೋಗ ನಡೆಯಲಿದೆ.
9ಕ್ಕೆ ತಾಲೂಕು ಮಟ್ಟದ ಕಲಿಕೋತ್ಸವ
ಅರಕಲಗೂಡು: ತಾಲೂಕು ಮಟ್ಟದ ಕಲಿಕೋತ್ಸವ ಕಾರ್ಯಕ್ರಮ ಇದೇ ಗುರುವಾರ ಬೆಳಿಗ್ಗೆ 9.30ಕ್ಕೆ ಇಲ್ಲಿನ ಶಿಕ್ಷಕರ ಭವನ ಮತ್ತು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ರೇವಣ್ಣ ತಿಳಿಸಿದ್ದಾರೆ. ಈಗಾಗಲೇ ಕ್ಲಸ್ಟರ್ ಮಟ್ಟದಲ್ಲಿ ಕಲಿಕೋತ್ಸವ ಕಾರ್ಯಕ್ರಮಗಳು ನಡೆದಿದ್ದು, ಇದೇ ತಿಂಗಳು 9ರಂದು ತಾಲೂಕು ಮಟ್ಟದಲ್ಲಿ ನಡೆಯಲಿದೆ. ಎಲ್ಲಾ ಜನಪ್ರತಿನಿಧಿಗಳು, ಸಾರ್ವಜನಿಕರು, ಪೋಷಕರು ಮತ್ತು ಎಸ್.ಎಡಿ.ಎಂ.ಸಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ.
'ಮಹಿಳೆಯರು ಕುಟುಂಬ ಆರೋಗ್ಯಕ್ಕೆ ಒತ್ತು ನೀಡಬೇಕು'
ಹಾಸನ: ಮಹಿಳೆಯರು ತಮ್ಮ ಕುಟುಂಬದ ಸದಸ್ಯರ ಆರೋಗ್ಯದ ಬಗ್ಗೆಯೂ ಹೆಚ್ಚಿನ ಒತ್ತು ನೀಡಬೇಕು ಎಂದು ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಡಾ. ಎ. ಸಾವಿತ್ರಿ ಹೇಳಿದ್ದಾರೆ.
ನಗರದ ಸಮೀಪ ಹರಳಹಳ್ಳಿ ಗ್ರಾಮ ಪಂಚಾಯ್ತಿ ಬಳಿ ಇರುವ ಸರ್ಕಾರಿ ಶಾಲೆಯಲ್ಲಿ ಹರಳಹಳ್ಳಿ ಮತ್ತು ದಾಸರಕೊಪ್ಪಲು ಗ್ರಾಮಪಂಚಾಯ್ತಿ ಮತ್ತು ಹೇಮಾವತಿ ಮಹಿಳಾ ಸಂಘ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಮಹಿಳೆಯರಿಗಾಗಿ ಆರೋಗ್ಯ ತಿಳುವಳಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಿವಿಮಾತು: ಮಹಿಳೆಯರು ಮೊದಲು ಉದಾಸೀನ ಭಾವನೆ ಹೊರಗೆ ಹಾಕುವ ಮೂಲಕ ಕಾಯಿಲೆ ಬಂದಾಗ ವೈದ್ಯರಿಂದ ಸಲಹೆ ಪಡೆಯಬೇಕೆಂದು ಕಿವಿಮಾತು ಹೇಳಿದರು. ನಂತರ, ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು. ಹರಳಹಳ್ಳಿ ಗ್ರಾಪಂ ಅಧ್ಯಕ್ಷೆ ಗುಣವತಿ, ಹೇಮಾವತಿ ಮಹಿಳಾ ಸಂಘದ ಅಧ್ಯಕ್ಷೆ ಪದ್ಮಶರ್ಮ, ಗ್ರಾಪಂ ಸದಸ್ಯೆ ಸರೋಜ ಇತರರು ಇದ್ದರು. ಎನ್.ಆರ್. ವಿಜಯಲಕ್ಷ್ಮಿ ನಿರೂಪಿಸಿದರು. ಜಯಲಕ್ಷ್ಮಿ ಪ್ರಾರ್ಥಿಸಿದರು. ಲೀಲಾವತಿ ಸ್ವಾಗತಿಸಿದರು.
ಜಿಲ್ಲೆಯ ವಿವಿಧೆಡೆ ಇಂದು ವಿದ್ಯುತ್ ವ್ಯತ್ಯಯ
ಹಾಸನ: ವಿದ್ಯುತ್ ಪ್ರಸರಣ ಮಾರ್ಗದ ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಜ.5ರಂದು ಜಿಲ್ಲೆಯ ನಾನಾ ಕಡೆ ವಿದ್ಯುತ್ ವ್ಯತ್ಯಯವಾಗಲಿದೆ. ಹಾಸನ ನಗರ, ಸಕಲೇಶಪುರ, ಬೇಲೂರು, ಅರಕಲಗೂಡು, ಆಲೂರು ತಾಲೂಕುಗಳಲ್ಲಿ, ಭಾಗಶ- ಮೂಡಿಗೆರೆ ಮತ್ತು ಶನಿವಾರಸಂತೆ ಹೋಬಳಿ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಳಲ್ಲಿ ಬೆಳಗ್ಗೆ 1 ರಿಂದ ಮಧ್ಯಾಹ್ನ 1ರವರೆಗೆ ವಿದ್ಯುತ್ ವ್ಯತ್ಯಯವಾಲಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಹಾಸನ ಪ್ರಸರಣ ಮಾರ್ಗಗಳ ಪಾಲನಾ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕೋರಿದ್ದಾರೆ.
'ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಪೋಷಕರ ಪಾತ್ರ ಮುಖ್ಯ'
ಹಾಸನ: ಮಕ್ಕಳ ಶೈಕ್ಷಣಿಕ ಪ್ರಗತಿ ಮತ್ತು ಶಾಲೆಯ ಅಭಿವೃದ್ಧಿಯಲ್ಲಿ ಪೋಷಕರ ಪಾತ್ರವು ಮುಖ್ಯವಾಗಿದೆ ಎಂದು ಮಾಡೆಲ್ ಶಾಲೆಯ ಪ್ರಾಂಶುಪಾಲ ಎಸ್.ಎಂ.ಮಲ್ಲೇಶಪ್ಪ ಅಭಿಪ್ರಾಯಪಟ್ಟರು. ಮಾಡೆಲ್ ಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಪೋಷಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಶಿಕ್ಷಣದಿಂದ ಜೀವನ ಮಟ್ಟ ಸುಧಾರಣೆಯಾಗುತ್ತದೆ ಮತ್ತು ಸಮಾಜದಲ್ಲಿ ಗೌರವ ಸಂಪಾದಿಸಬಹುದಾಗಿದೆ ಎಂದರು. ಪೋಷಕರು ಶಾಲೆಯೊಂದಿಗೆ ನಿಕಟ ಸಂಪರ್ಕ ಹೊಂದಿ, ತಮ್ಮ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಗಮನ ಹರಿಸಬೇಕೆಂದರು. ಮಕ್ಕಳ ವಿದ್ಯಾಭ್ಯಾಸದಲ್ಲಿ ಪೋಷಕರ ಸಹಕಾರ ಮಖ್ಯವಾಗಿದೆ ಎಂದರು. ಶಿಕ್ಷಕಿಯರಾದ ಶಂಕುತಲಾ, ನೂತನ, ಲಕ್ಷ್ಮೀ ಮಾತನಾಡಿದರು ಸಂಸ್ಥೆಯ ಖಂಜಾಂಚಿ ರೂಪ ವಿನಾಯಕ್, ನಿರ್ದೇಶಕ ಗುರುಮೂರ್ತಿ, ಶಿಕ್ಷಕ ನಿಡಘಟ್ಟ ಗುರುಮೂರ್ತಿ, ಮುಖ್ಯ ಶಿಕ್ಷಕ ಪ್ರಸನ್ನಕುಮಾರ್ ಇದ್ದರು. ಪುರುಷರಿಗೆ ಸ್ಲೋಬೈಕ್ ರೇಸ್, 100 ಮೀ. ಓಟ, 3 ಕಾಲಿನ ಓಟ, ವಾಲಿಬಾಲ್, ಭಾವಗೀತೆ, ಜನಪದ ಗೀತೆ, ಮಹಿಳೆಯರಿಗೆ ಭಾವಗೀತೆ, ಜನಪದ ಗೀತೆ, ತ್ರೋಬಾಲ್, ಮ್ಯೂಸಿಕಲ್ ಚೇರ್, ನಿಂಬೆಹಣ್ಣು ಮತ್ತು ಚಮಚದ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
4ಎಚ್ಎಸ್ಎನ್ 5ಪಿ
ಜಾವಗಲ್ನ ಮಾಡೆಲ್ ಶಾಲೆಯಲ್ಲಿ ಪೋಷಕರ ದಿನಾಚರಣೆ ಕಾರ್ಯಕ್ರಮವನ್ನು ಸಂಸ್ಥೆಯ ನಿರ್ದೇಶಕ ಮರುಳಪ್ಪ ಉದ್ಘಾಟಿಸುತ್ತಿದ್ದಾರೆ.
ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಮೀಸಲಾತಿ
ಹಾಸನ: ಮಕ್ಕಳ ಶಿಕ್ಷಣ ಹಕ್ಕು ಕಾಯಿದೆ- 2009ರ ಅಡಿಯಲ್ಲಿ ಬೇಲೂರು ತಾಲ್ಲೂಕಿನಲ್ಲಿರುವ 31 ಅನುದಾನ ರಹಿತ ಶಾಲೆಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಮತ್ತು ದುರ್ಬಲ ವರ್ಗದ ಹಾಗೂ ಅವಕಾಶ ವಂಚಿತ ವಿದ್ಯಾರ್ಥಿಗಳಿಗೆ 2014-15 ನೇ ಸಾಲಿನಲ್ಲಿ ಶೇ.25 ಸೀಟುಗಳನ್ನು ದಾಖಲಾತಿಗಾಗಿ ಕಾಯ್ದಿರಿಸಲಾಗಿದೆ. ಜ. 6ರಂದು ಎಲ್ಲಾ ಅನುದಾನ ರಹಿತ ಶಾಲೆಗಳಲ್ಲಿ ಹಾಗೂ ಬೇಲೂರು ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿಯಲ್ಲಿ ಶಾಲಾವಾರು ಕಾಯ್ದಿರಿಸಿದ ಸೀಟುಗಳ ಪಟ್ಟಿ ಪ್ರಕಟಿಸಲಾಗುವುದು. ಕಾಯ್ದಿರಿಸಿದ ಶೇ25 ಸೀಟುಗಳ ಪೈಕಿ ಶೇ. 7.5 ಪರಿಶಿಷ್ಟ ಜಾತಿ ಶೇ. 1.5 ಪರಿಶಿಷ್ಟ ಪಂಗಡ,ಶೇ 16 ಇತರೆ ಹಿಂದುಳಿದ ವರ್ಗಗಳಿಗೆ ಹಂಚಿಕೆ ಮಾಡಲಾಗಿದೆ, ದಾಖಲಾತಿ ಅರ್ಜಿ ನಮೂನೆಗಳನ್ನು ಸಂಬಂದಪಟ್ಟ ಶಾಲೆಯಲ್ಲಿ ಹಾಗೂ ಈ ಕಚೇರಿಯಲ್ಲಿ ಜ. 7ರಿಂದ ಪಡೆಯಬಹುದು ಎಂದು ತಿಳಿಸಿದ್ದಾರೆ. ದಾಖಲಾತಿ ಅರ್ಜಿಯ ಎಲ್ಲಾ ಕಾಲಂಗಳನ್ನು ಭರ್ತಿಮಾಡಿ, ಅರ್ಜಿಯ ಜತೆ ಪ.ಜಾತಿ, ಪ.ಪಂಗಡ, ಪ ವರ್ಗ 1 ,2ಎ, 2ಬಿ, 3ಎ, 3ಬಿ - ಈ ವರ್ಗಗಳಿಗೆ ಸೇರಿದವರು ಆದಾಯ ಪ್ರಮಾಣ ಪತ್ರ, ವಾಸಸ್ಥಳ ದೃಢೀಕರಣ ಪತ್ರ ಲಗತ್ತಿಸಬೇಕು. ಮಾಹಿತಿಗೆ: ಮೊ. 9480695233, 9964496537, 08177- 222278
ಪತಿ ನಾಪತ್ತೆ- ಪತ್ನಿ ದೂರು
ರಾಮನಾಥಪುರ: ಕೇರಳಾಪುರದ ಪಂಚಾಯ್ತಿ ವ್ಯಾಪ್ತಿಗೆ ಬರುವ ದೊಂಬರಕೊಪ್ಪಲು ಗ್ರಾಮ ನಿವಾಸಿ ಕೃಷ್ಣ ಎಂಬಾತ ಒಂದು ತಿಂಗಳಾಗುತ್ತಲಿದ್ದರೂ ಸುಳಿವು ದೊರಕದೆ ನಾಪತ್ತೆಯಾಗಿದ್ದಾನೆ. ಈ ಬಗ್ಗೆ ಪತ್ನಿ ಸರೋಜಮ್ಮ ಕೊಣನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಡಿ.10ರಂದು ಕೇರಳಾಪುರದಿಂದ ಸಂಜೆ 4.30ರಲ್ಲಿ ಸ್ವಗ್ರಾಮಕ್ಕೆ ಛಬಸ್ನಲ್ಲಿ ಪತ್ನಿಯೊಂದಿಗೆ ಹಿಂದಿರುಗಿದ್ದು, ಗ್ರಾಮ ಬಂದ ಕೂಡಲೆ ಹೆಂಡತಿ ಇಳಿದುಕೊಂಡರು. ಈತ ಮಾತ್ರ ಇಳಿಯದೆ, ಅದೇ ಬಸ್ಸಿನಲ್ಲಿ ಹೊರಟು ಹೋಗಿದ್ದು, ಒಂದು ತಿಂಗಳಾದರೂ ಹಿಂದಿರುಗಿಲ್ಲ. ಇವರ ಬಗ್ಗೆ ಎಲ್ಲಿಯೂ ಸುಳಿವು ಸಿಕ್ಕಿಲ್ಲ.
ಚಹರೆ: ಈತ, ಸಾಧಾರಣ ಮೈಕಟ್ಟು, 5.5 ಅಡಿ ಎತ್ತರ, ಗುಂಗುರು ಕೂದಲು ಹೊಂದಿರುವ ಈತ ಕನ್ನಡ- ತೆಲುಗು ಮಾತನಾಡಬಲ್ಲವನಾಗಿದ್ದು, ಬೆಕ್ಕಿನ ಕಣ್ಣನ್ನು ಹೊಂದಿದ್ದಾನೆ.
ಕೃಷ್ಣ ಕಾಣೆಯಾದ ದಿನ ಬಿಳಿ ಶರ್ಟ್, ಬಣ್ಣದ ಪಂಚೆ ಧರಿಸಿದ್ದು, ಸ್ವಲ್ಪ ದಿನಗಳಿಂದ ಮಾನಸಿಕ ಅಸ್ವಸ್ಥನಾಗಿದ್ದ ಎಂದು ಹೇಳಲಾಗಿದೆ. ಕೊಣನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸುಳಿವು ದೊರೆತವರು ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಲು ಕೋರಿದೆ.