ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕಾಡಾನೆಗಳ ಹಾವಳಿ: ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ಪಾದಯಾತ್ರೆ

Mainashree
Updated On : 4 Jan 2014, 9:10 am

ಸಕಲೇಶಪುರ: ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಂಡು ಹಿಡಿಯುವಂತೆ ಒತ್ತಾಯಿಸಿ ತಾಲೂಕು ಬಿಜೆಪಿ ವತಿಯಿಂದ ಜ. 8ರಿಂದ ಅಹೋರಾತ್ರಿ ಪಾದಯಾತ್ರೆ ಹಾಗೂ ಪಂಜಿನ ಮೆರವಣಿಗೆ ನಡೆಸಲಾಗುವುದು ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಡಿ ರಾಜ್‌ಕುಮಾರ ಹೇಳಿದರು.
ದಾಂಧಲೆ: ಶುಕ್ರವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಕಲೇಶಪುರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಆನೆ ಹಾವಳಿ ಮೀತಿ ಮೀರಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾಡಾನೆ ಸಮಸ್ಯೆ ತಡೆಯಲು ವಿಫಲವಾಗಿರುವ ಪರಿಣಾಮ ತಾಲೂಕಿನಲ್ಲಿ ಸುಮಾರು 70 ಕ್ಕೂ ಹೆಚ್ಚಿನ ಕಾಡಾನೆಗಳು ದಾಂಧಲೆಯಲ್ಲಿ ನಿರತವಾಗಿವೆ ಎಂದು ಹೇಳಿದರು.
ಪಾದಯಾತ್ರೆ: ದಶಕದಿಂದ 35 ರೈತರು ಕಾಡಾನೆಗೆ ಸಿಲುಕಿ ಸಾವಿಗೀಡಾಗಿದ್ದರೆ, ಸುಮಾರು ರು. 10 ಕೋಟಿಗೂ ಹೆಚ್ಚಿನ ಬೆಳೆ ಹಾನಿಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಯಸಳೂರು, ಹೆತ್ತೂರು, ಹಾನುಬಾಳ್, ಕಸಬಾ ಹಾಗೂ ಆಲೂರು ತಾಲೂಕಿನ ಕೆಂಚಮ್ಮನ ಹೊಸಕೋಟೆ ಹೋಬಳಿಯಲ್ಲಿ ಹಗಲುವೇಳೆಯೆ ಜನರು ಸಂಚರಿಸುವುದು ಕಷ್ಟವಾಗಿದೆ. ಈ ಬಗ್ಗೆ ಹಲವು ಬಾರಿ ಪ್ರತಿಭಟನೆ ನಡೆಸಿದರು ಯಾವುದೇ ಉಪಯೋಗವಾಗಿಲ್ಲ ಎಂದು ದೂರಿದರು.
ಇತ್ತೀಚೆಗೆ, ರಾಜ್ಯ ಅರಣ್ಯ ಮಂತ್ರಿಗಳು ಜನವರಿ ತಿಂಗಳಿನಲ್ಲಿ ಕಾಡಾನೆ ಹಿಡಿಯಲಾಗುವುದು ಎಂಬ ಹೇಳಿಕೆ ನೀಡಿದ್ದರು. ಆದರೆ, ಕಾರ್ಯಗತವಾಗುವ ಯಾವುದೇ  ಲಕ್ಷಣಗಳಿಲ್ಲ. ಆದ್ದರಿಂದ ತಾಲೂಕಿನಲ್ಲಿ ಹೆಚ್ಚಿರುವ ಕಾಡಾನೆಗಳನ್ನು ಇಲ್ಲಿಂದ ಸ್ಥಳಾಂತರಿಸುವ ಮೂಲಕ ಶಾಶ್ವತ ಪರಿಹಾರ ಕಂಡುಹಿಡಿಯ ಬೇಕು ಎಂದು ಒತ್ತಾಯಿಸಿ ಜ. 8ರಿಂದ ಚಂಗಡಿಹಳ್ಳಿ ಗ್ರಾಮದಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಆಲೂರು ತಾಲೂಕಿನ ಹೊಸಕೋಟೆ ಮಾರ್ಗವಾಗಿ ತಾಲೂಕು ಕೇಂದ್ರದವರೆಗೆ ಎರಡು ದಿನಗಳ ಬೃಹತ್ ಪಾದಯಾತ್ರೆ ಹಾಗೂ ಪಂಜಿನ ಮೆರವಣಿಗೆ ನಡೆಸುವ ಮೂಲಕ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಕಾರ್ಯದರ್ಶಿ ಸಂದೇಶ್ ಹೆಬ್ಬನಹಳ್ಳಿ, ಮುಖಂಡರಾದ ಮಂಜುನಾಥ್ ಸಂಘ್ವಿ, ಮಾಸವಳ್ಳಿ ಚಂದ್ರು, ಅಣ್ಣಪ್ಪ ಮತ್ತು ಸುಧೀರ್ ಭಟ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement