ನಾನಾ ಬೇಡಿಕೆ ಈಡೇರಿಕೆಗಾಗಿ ನಾಳೆ ಅಂಗವಿಕಲರ ಪ್ರತಿಭಟನೆ
ಕ.ಪ್ರ.ವಾರ್ತೆ ಹಾಸನ ಜ. 4
ಅಂಗವಿಕಲರ ಗೌರವಧನ ಹೆಚ್ಚಿಸುವುದು ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜ. 6ರಂದು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸುವುದಾಗಿ ಅಂಗವಿಕಲರ ಅಭಿಮಾನಿ ಪರಿಷತ್ನ ಕಾರ್ಯದರ್ಶಿ ಪಿ.ಎಸ್. ನಾಗರಾಜ್ ತಿಳಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮಾಂತರ ಪ್ರದೇಶದಲ್ಲಿರುವ ಹಿರಿಯ ಅಂಗವಿಕಲರಿಗೆ ಸರ್ಕಾರದ ಸೌಲಭ್ಯವನ್ನು ತಿಳಿಸುವಂಥ ಕೆಲಸವನ್ನು ಅಂಗವಿಕಲರ ಪರಿಷತ್ ಮಾಡಿದೆ. ಪ್ರತಿ ಗ್ರಾಮ ಪಂಚಾಯ್ತಿಯಲ್ಲಿ ಅಂಗವಿಕಲರ ಕುಂದು ಕೊರತೆಯ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಲು ನೇಮಿಸಿರುವ ನೌಕರರಿಗೆ ಗೌರವ ಧನ ಈಗ ರು. 1500 ಇದ್ದು, ಅದನ್ನು ರು. 5000ಗೆ ಏರಿಸಬೇಕು ಎಂದು ಅವರು ಆಗ್ರಹಿಸಿದರು.
ಬಸ್ಗಳಲ್ಲಿ ಹಾಗೂ ರೈಲುಗಳಲ್ಲಿ ಉಚಿತವಾಗಿ ಸಂಚರಿಸಲು ಪಾಸ್ ನೀಡಬೇಕು. ಶ್ರವಣದೋಷ ಇರುವ ಅಂಗವಿಕಲರಿಗೆ ಜಿಲ್ಲಾ ಮಟ್ಟದಲ್ಲಿ ಇರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಸರ್ಟಿಫಿಕೇಟ್ ನೀಡಿ ವೇತನ ಮಂಜೂರಾತಿ ನೀಡಲು ಅನುಮತಿ ನೀಡಬೇಕು. ಪ್ರತಿ ಪಂಚಾಯ್ತಿಯಲ್ಲಿ ಅಂಗವಿಕಲರಿಗೆ ಒಟ್ಟು ಶೇ. 3ರಷ್ಟು ಹಣ ಕಡ್ಡಾಯವಾಗಿ ಮೀಸಲು ಇಟ್ಟು ಆರೋಗ್ಯ ಮತ್ತು ವೈದ್ಯಕೀಯ ಖರ್ಚಿಗಾಗಿ ಮಾಶಾಸನ ಇಡಬೇಕೆಂದು ಆಗ್ರಹಿಸುವುದಾಗಿ ಹೇಳಿದರು.
ಸಹಾಯಧನ ನೀಡಬೇಕು: ಸರ್ಕಾರದಿಂದ ನಾನಾ ಯೋಜನೆಗಳು ಜಾರಿಯಾಗಿದ್ದರೂ ಸಮರ್ಪಕವಾಗಿ ಅಂಗವಿಕಲರಿಗೆ ಲಭ್ಯವಾಗುತ್ತಿಲ್ಲ ಎಂದ ಅವರು, ಶೇ. 40ರಲ್ಲಿ ಇರುವ ಅಂಗವಿಕಲರಿಗೂ 3 ಸಾವಿರ ಮಾಶಾಸನ ನೀಡಬೇಕು. ಉಚಿತವಾಗಿ 30 ಕೆಜಿ ಅಕ್ಕಿ ನೀಡಬೇಕು. ಅಂಗವಿಕಲರಿಗೆ ಪ್ರತ್ಯೇಕವಾಗಿ ನಿಗಮ ಸ್ಥಾಪಿಸಿ, ನಿಗಮದ ಮೂಲಕ ಸಾಲ ಸಹಾಯಧನ ನೀಡಬೇಕು. ಒಟ್ಟಾರೆಯಾಗಿ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜ. 6ರಂದು ಬೆಳಗ್ಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ಮಾಡುವ ಮೂಲಕ ಗಮನ ಸೆಳೆಯುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಅಂಗವಿಕಲರ ಅಭಿಮಾನಿ ಪರಿಷತ್ ಜಿಲ್ಲಾಧ್ಯಕ್ಷ ಕೆ. ಗೋಪಾಲಾಚಾರ್, ಖಜಾಂಚಿ ಹುಲೀಯಯ್ಯ (ಮುತ್ತಯ್ಯ), ಹಿಂದುಳಿದ ವರ್ಗಗಳ ಶಂಕರಾಚಾರ್, ಚಿಕ್ಕೇಗೌಡ ಇದ್ದರು.