ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮುಖ್ಯಸ್ಥರಿಂದಲೇ ಧ್ವಜಾರೋಹಣ: ಡಿಸಿ

Mainashree
Updated On : 4 Jan 2014, 9:09 am

ಹಾಸನ: ಗಣರಾಜ್ಯೋತ್ಸವ ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ಅಂದು ಎಲ್ಲಾ ಕಚೇರಿಗಳಲ್ಲಿ ಕಚೇರಿಯ ಮುಖ್ಯಸ್ಥರು ಹಾಜರಿದ್ದು ಕಡ್ಡಾಯವಾಗಿ ಧ್ವಜಾರೋಹ ಕಾರ್ಯಕ್ರಮ ನೆರವೇರಿಸುವಂತೆ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ತಿಳಿಸಿದರು.
ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಗಣರಾಜ್ಯೋತ್ಸವ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಗ್ಗೆ 9ಕ್ಕೆ ರಾಷ್ಟ್ರ ಧ್ವಜಾರೋಹಣವನ್ನು ಜಿಲ್ಲಾ ಉಸ್ತುವಾರಿ ಸಚಿವರಿಂದ ಅಥವಾ ಸರ್ಕಾರದಿಂದ ಆದೇಶವಾದಂತಹ ಗಣ್ಯರಿಂದ ನೆರವೇರಿಸಲು ತೀರ್ಮಾನಿಸಲಾಯಿತು.
ಶಿಸ್ತು ಕ್ರಮದ ಎಚ್ಚರಿಕೆ: ರಾಷ್ಟ್ರೀಯ ಹಬ್ಬವನ್ನು ಎಲ್ಲರೂ ಗೌರವಿಸಬೇಕು. ಅಧಿಕಾರಿ, ಸಿಬ್ಬಂದಿ ಕಡ್ಡಾಯವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಗೈರು ಹಾಜರಿಯಾಗುವ ಅಧಿಕಾರಿ, ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಕಾಯ್ದೆಯಡಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಎಲ್ಲಾ ಸರ್ಕಾರಿ ಕಟ್ಟಡಗಳಿಗೆ ಆಯಾಯಾ ಇಲಾಖಾ ವತಿಯಿಂದ 2 ದಿನಗಳ ಕಾಲ ದೀಪಾಲಂಕಾರ ಮಾಡಬೇಕು. ಗಣರಾಜ್ಯೋತ್ಸವ ದಿನದಂದು ನಗರದ ಪ್ರಮುಖ ವೃತ್ತಗಳು, ಕಟ್ಟಡಗಳಿಗೆ ದೀಪಾಲಂಕಾರ ವ್ಯವಸ್ಥೆಯನ್ನು ನಗರಸಭೆ ನಿರ್ವಹಿಸಬೇಕು ಹಾಗೂ ಪಟ್ಟಣದ ವರ್ತಕರು ಕೂಡ ತಮ್ಮ ಕಟ್ಟಡಗಳಿಗೆ ದೀಪಾಲಂಕಾರ ಮಾಡುವಂತೆ ಮನವಿ ಮಾಡಿದ ಅವರು ಅರ್ಥಪೂರ್ಣ ಹಾಗೂ ವಿಜೃಂಭಣೆಯಿಂದ ಈ ಬಾರಿ ಗಣರಾಜ್ಯೋತ್ಸವ ಆಚರಿಸುವ ವ್ಯವಸ್ಥೆ ಮಾಡುವಂತೆ ನಾನಾ ಸಮಿತಿ ಮುಖ್ಯಸ್ಥರಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಸಮಿತಿಗಳ ನೇಮಕ: ಜಿಲ್ಲೆಯ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು, ಜಿಲ್ಲಾ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಗಣ್ಯ ವ್ಯಕ್ತಿಗಳನ್ನು ಸಮಾರಂಭಕ್ಕೆ ಆಹ್ವಾನಿಸಲು ವ್ಯವಸ್ಥೆ ಮಾಡಲಾಯಿತು.
ಕಾರ್ಯಕ್ರಮದ ಅಂಗವಾಗಿ ಸ್ವಾಗತ ಸಮಿತಿ, ಪರೇಡ್ ಸಮಿತಿ, ಸಾಂಸ್ಕತಿಕ ಸಮಿತಿ, ಸನ್ಮಾನ ಸಮಿತಿಗಳನ್ನು ರಚಿಸಲಾಯಿತು. ಇದರ ಅಂಗವಾಗಿ ನಾನಾ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲು ತೀರ್ಮಾನಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ರಿಹರ್ಸಲ್ ಹಾಗೂ ಕಾರ್ಯಕ್ರಮದಂದು ಕ್ರೀಡಾಂಗಣದಲ್ಲಿ ಸಾಕಷ್ಟು ಕುಡಿಯುವ ನೀರು ಹಾಗೂ ಸ್ವಚ್ಛತೆಯ ವ್ಯವಸ್ಥೆಯನ್ನು ನೋಡಿಕೊಳ್ಳಲು ನಗರಸಭೆ ಹಾಗೂ ಲೋಕೋಪಯೋಗಿ ಇಲಾಖೆಗೆ ಸೂಚಿಸಲಾಯಿತು. ಸಮಾರಂಭದಂದು ಧ್ವಜಾರೋಹಣ ಸ್ಥಳದಲ್ಲಿ ಧ್ವನಿವರ್ಧಕ, ಆಸನ ವ್ಯವಸ್ಥೆ, ಶಾಮಿಯಾನ ಹಾಕುವ ಜವಾಬ್ದಾರಿಯನ್ನು ನಗರಸಭೆ ಆಯುಕ್ತರಿಗೆ ವಹಿಸಲಾಯಿತು.
ಸೂಚನೆ: ಸಮಾರಂಭದ ಅಂಗವಾಗಿ ಹಾಸನ ಕಲಾಕ್ಷೇತ್ರವನ್ನು ರಿಹರ್ಸಲ್ ಹಾಗೂ ಕಾರ್ಯಕ್ರಮದಂದು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು 3 ದಿವಸ ಕಾಯ್ದಿರಿಸುವಂತೆ ಕನ್ನಡ ಸಂಸ್ಕೃತಿ ಇಲಾಖೆಗೆ ಸೂಚಿಸಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ 5000 ಹಾಲು ಪ್ಯಾಕ್ ವಿತರಿಸುವ ವ್ಯವಸ್ಥೆ ಮಾಡಲು ಕೆ.ಎಂ.ಎಫ್. ಹಾಸನ ಘಟಕ ಇವರಿಗೆ ಸೂಚಿಸಲಾಯಿತು. ಪರೆಡ್ ಕಾರ್ಯಕ್ರಮವನ್ನು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ವ್ಯವಸ್ಥೆಗಾಗಿ ಜಿಲ್ಲಾ ಆರಕ್ಷಕ ಅಧೀಕ್ಷಕರು ಸಮಿತಿ ರಚಿಸಿಕೊಂಡು ಸೂಕ್ತ ವ್ಯವಸ್ಥೆ ಮಾಡುವಂತೆ ಹಾಗೂ ಕಾರ್ಯಕ್ರಮಕ್ಕೆ ಆಗಮಿಸುವ ಶಾಲಾ ಮಕ್ಕಳು ಸಮವಸ್ತ್ರ ಧರಿಸಿ ಶಿಸ್ತುಬದ್ಧವಾಗಿ ಸಾಲಾಗಿ ಬರುವ ವ್ಯವಸ್ಥೆ ಮಾಡಲು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿ ಸೂಚಿಸಿದರು. ವೇದಿಕೆಯಲ್ಲಿನ ಗಣ್ಯರಿಗೆ ಪತ್ರಿಕಾ ಪ್ರತಿನಿಧಿಗಳಿಗೆ ಲಘು ಉಪಹಾರ ವ್ಯವಸ್ಥೆಗೆ ಆಹಾರ ಇಲಾಖೆಗೆ ವಹಿಸಲಾಯಿತು.
ತೀರ್ಮಾನ: ಕಾರ್ಯಕ್ರಮದ ಅಂಗವಾಗಿ 20 ನಿಮಿಷಗಳ ಭಾವೈಕ್ಯತಾ ಕಾರ್ಯಕ್ರಮ ಏರ್ಪಡಿಸುವುದರೊಂದಿಗೆ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಾಸನ ಕಲಾ ಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಶಿಕ್ಷಣ ಇಲಾಖೆಗಳು ನಿರ್ವಹಿಸಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಶ್ರೀವಿದ್ಯಾ, ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎನ್. ಗೋಪಾಲಕೃಷ್ಣ, ಜಿಲ್ಲಾ ಪಂಚಾಯ್ತಿ  ಉಪ ಕಾರ್ಯದರ್ಶಿ ಪುಟ್ಟಸ್ವಾಮಿ, ಉಪವಿಭಾಗಾಧಿಕಾರಿ ಶರತ್ ಹಾಗೂ ನಾನಾ ಇಲಾಖಾ ಮುಖ್ಯಸ್ಥರು ಇದ್ದರು.
ಸಭೆಯ ಪ್ರಮುಖ ನಿರ್ಧಾರಗಳು...
- ಜಿಲ್ಲಾ ಕ್ರೀಡಾಂಗಣದಲ್ಲಿ ಜ. 26ರ ಬೆಳಗ್ಗೆ 9 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಅಥವಾ ಸರ್ಕಾರದಿಂದ ಆದೇಶವಾದ ಗಣ್ಯರಿಂದ ಧ್ವಜಾರೋಹಣ
- ಧ್ವಜಾರೋಹಣ ಸಮಾರಂಭಕ್ಕೆ ಗೈರು ಹಾಜರಾಗುವ ಎಲ್ಲಾ ಅಧಿಕಾರಿಗಳು, ಸಿಬ್ಬಂದಿಗೆ ಕ್ರಿಮಿನಲ್ ಕಾಯ್ದೆಯಡಿ ಶಸ್ತು ಕ್ರಮ: ಜಿಲ್ಲಾಧಿಕಾರಿ ಎಚ್ಚರಿಕೆ
- ಕಾರ್ಯಕ್ರಮದ ಸುಗಮ ಆಯೋಜನೆಗಾಗಿ ವಿವಿಧ ಸಮಿತಿ ನೇಮಕ; ಎಲ್ಲಾ ಸರ್ಕಾರಿ ಕಟ್ಟಡಗಳಿಗೆ ಆಯಾ ಇಲಾಖೆ ವತಿಯಿಂದ ಎರಡು ದಿನಗಳ ದೀಪಾಲಂಕಾರ
- ಜಿಲ್ಲೆಯ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು, ಜಿಪಂ ಅಧ್ಯಕ್ಷರು ಸೇರಿದಂತೆ ಇತರ ಪ್ರಮುಖರಿಗೆ ಆಹ್ವಾನಿಸಲು ತೀರ್ಮಾನ
- ಸಮಾರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಲಿರುವ ಸುಮಾರು 5000 ವಿದ್ಯಾರ್ಥಿಗಳಿಗೆ ಹಾಲಿನ ಪ್ಯಾಕ್ ವಿತರಿಸಲು ಹಾಸನ ಕೆಎಂಎಫ್‌ಗೆ ಡಿಸಿ ಸೂಚನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement