ಅಂಧ ಮಕ್ಕಳ ಶಾಲೆಯಲ್ಲಿ ಬ್ರೈಲ್ ದಿನ
ಕ.ಪ್ರ.ವಾರ್ತೆ ಹಾಸನ ಜ.5
ನಗರದ ಸಾಲಗಾಮೆ ರಸ್ತೆ ಶ್ರೀ ಕೃಷ್ಣ ಅಂಧ ಮಕ್ಕಳ ಶಾಲೆಯಲ್ಲಿ ಶನಿವಾರ ಲೂಹಿ ಬ್ರೈಲ್ ಜನ್ಮ ದಿನ ಆಚರಿಸಲಾಯಿತು.
ಅಂಧ ಮಕ್ಕಳ ಶಾಲೆಯ ವಿದ್ಯಾರ್ಥಿ ಅನುಕುಮಾರ್ ಮಾತನಾಡಿ, ಪ್ರತಿ ವರ್ಷ ಗಾಂಧಿ ಜಯಂತಿ, ಸ್ವಾತಂತ್ರ್ಯ ದಿನಾಚರಣೆ, ಕನ್ನಡ ರಾಜ್ಯೋತ್ಸವ, ಕುವೆಂಪು ದಿನಾಚರಣೆ ಸೇರಿದಂತೆ ಮಹನೀಯರ ಆಚರಣೆಯನ್ನು ಆಚರಿಸುವಂತೆ ಲೂಹಿ ಬ್ರೈಲ್ ಜನ್ಮದಿನ ಕೂಡ ಅಷ್ಟೇ ಮಹತ್ವವಾಗಿದೆ ಎಂದರು.
1809ರ ಜ. 4ರಂದು ಜನಿಸಿದ ಲೂಹಿ ಬ್ರೈಲ್ ಆಕಸ್ಮಿಕವಾಗಿ ಕಣ್ಣು ಕಳೆದುಕೊಂಡರು. ಮೊದಲು ಒಂದು ಕಣ್ಣು ಕತ್ತಲೆಯಾಗಿ ನಂತರ ಎರಡು ಕಣ್ಣುಗಳೂ ದೃಷ್ಟಿ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬಂದಿತು. ಕುಟುಂಬದವರು ಆತನನ್ನು ಅಂಧ ಮಕ್ಕಳ ಶಾಲೆಗೆ ಸೇರಿಸಿದರು.
ಈ ವೇಳೆ ಇತರೆ ವಿದ್ಯಾರ್ಥಿಗಳಿಗಿಂತ ಹೆಚ್ಚು ಬುದ್ದಿವಂತನಾಗಿದ್ದು, ಅಂದು ಕಂಡು ಹಿಡಿದ ಲಿಪಿಗೆ ಭಾರೀ ವಿರೋಧ ವ್ಯಕ್ತವಾದರೂ 1932ರಲ್ಲಿ ಅದಕ್ಕೆ ಮಾನ್ಯತೆ ದೊರಕಿತು. ಅಂದಿನಿಂದ ಇಂದಿನವರೆಗೂ ವಿಶ್ವದ ಎಲ್ಲಾ ಅಂಧ ಮಕ್ಕಳ ಶಾಲೆಯಲ್ಲೂ ಶಿಕ್ಷಣ ನೀಡಲಾಗುತ್ತಿದೆ ಎಂದು ಹೇಳಿದರು. ಅವರ ಜೀವನದ ಸಾಧನೆ ಹಾಗೂ ಸಾರ್ಥಕತೆ ಬಗ್ಗೆ ವಿಸ್ತಾರವಾಗಿ ತಿಳಿಸಲಾಯಿತು.
ಶ್ರೀ ಕೃಷ್ಣ ಅಂಧ ಮಕ್ಕಳ ಶಾಲೆಯ ಅಧ್ಯಕ್ಷ ಡಾ. ಹೆಚ್. ನಾಗರಾಜ್, ಕಾರ್ಯದರ್ಶಿ ಕಟ್ಟಾಯ ಶಿವಕುಮಾರ್, ನಿರ್ದೇಶಕರಾದ ಜಾನೆಕೆರೆ ಹೇಮಂತ್, ಮೋಹನ್, ಸುರೇಶ್ ಗುರೂಜಿ, ಸಂಗೀತ ಶಿಕ್ಷಕ ಮಂಜುನಾಥ್, ಉಪನ್ಯಾಸಕ ಪ್ರಕಾಶ್, ಶಂಕರೇಗೌಡ ಇದ್ದರು. ಅಂಧ ಮಕ್ಕಳ ಶಾಲೆಯ ವಿದ್ಯಾರ್ಥಿನಿ ವಿನೂತ ಹಾಗೂ ಅನುಪಮ ಪ್ರಾರ್ಥಿಸಿದರು. ಮುಖ್ಯೋಪಾಧ್ಯಾಯ ಬಸವಣ್ಣಪ್ಪ ಸ್ವಾಗತಿಸಿದರು.