ಅಕ್ರಮವಾಗಿ ಸಾಗಿಸುತ್ತಿದ್ದ ಅನ್ನಭಾಗ್ಯ ಅಕ್ಕಿ ವಶ
ಕ.ಪ್ರ. ವಾರ್ತೆ, ಅರಸೀಕೆರೆ. ಜ 5
ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಆಕ್ರಮವಾಗಿ ದಾಸ್ತಾನು ಮಾಡಿಕೊಂಡು ಕಾಳಸಂತೆಗೆ ಮಾರಾಟ ಮಾಡಲು ಸಾಗಿಸುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ 162 ಅಕ್ಕಿ ಚೀಲ ಮತ್ತು 10 ಚೀಲ ಗೋಧಿ ವಶಪಡಿಸಿಕೊಂಡು ಪ್ರಕರಣವನ್ನು ದಾಖಲಿಸಿರುವ ಘಟನೆ ಭಾನುವಾರ ನಡೆದಿದೆ.
ಚೀಲಗಳ ವಶ: ಪಟ್ಟಣದ ಲಕ್ಷ್ಮೀಪುರ ಬಡಾವಣೆಯಲ್ಲಿನ ಡಬಲ್ ಟ್ಯಾಂಕ್ ರಸ್ತೆಯ ಒಂದನೇ ಕ್ರಾಸ್ನಲ್ಲಿ ಇರುವ ಎನ್.ಬಿ. ಜಯಣ್ಣ ಎಂಬುವರಿಗೆ ಸೇರಿದ ದಾಸ್ತಾನು ಮಳಿಗೆಯಲ್ಲಿ ಭಾನುವಾರ ಮಧ್ಯಾಹ್ನ ಆಕ್ರಮವಾಗಿ ದಾಸ್ತಾನು ಮಾಡಲಾಗಿದ್ದ, ನ್ಯಾಯಬೆಲೆ ಅಂಗಡಿ ಮೂಲಕ ಬಿಪಿಎಲಲ್ಪಡಿತರದಾರರಿಗೆ ಒಂದು ಕೆಜಿ ಗೆ ಒಂದು ರು. ಬೆಲೆಯಲ್ಲಿ ಮಾರಾಟ ಮಾಡಬೇಕಾದ 50 ಕೆಜಿ ತೂಕದ ಸರ್ಕಾರದ ಅಧಿಕೃತ ಮುದ್ರೆಗಳಿರುವ 82 ಚೀಲಗಳು ಇದರೊಂದಿಗೆ ಸರ್ಕಾರದ ಚೀಲ ಬದಲಿಸಿ ಓಂ, ಬ್ರಾಂಡ್ ಹೆಸರಿನ ಚೀಲಗಳಿಗೆ ಬದಲಾಯಿಸಿದ್ದ 80 ಚೀಲಗಳ ಅಕ್ಕಿಯ ಜೊತೆ 10 ಗೋಧಿ ಚೀಲಗಳನ್ನು ವಾಹನಕ್ಕೆ ತುಂಬುತ್ತಿದ್ದ ವೇಳೆಯಲ್ಲಿ ವ್ಯಕ್ತಿಯೊಬ್ಬರು ಪೊಲೀಸರಿಗೆ ನೀಡಿದ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ನಗರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಲೋಕೇಶ್ ನೇತೃತ್ವದ ತಂಡ ದಿಢೀರ್ ದಾಳಿ ನಡೆಸಿ ಆಕ್ರಮವಾಗಿ ಸಾಗಿಸುತ್ತಿದ್ದ ಅಕ್ಕಿಯ ಚೀಲಗಳನ್ನು ವಶಪಡಿಸಿಕೊಂಡಿತು.
ದಾಳಿಯ ವೇಳೆಯಲ್ಲಿ ಸ್ಥಳದಲ್ಲಿದ್ದ ದಾಸ್ತಾನು ಮಳಿಗೆ ಮಾಲೀಕ ಎನ್.ಬಿ. ಜಯಣ್ಣ ಪರಾರಿಯಾಗಿದ್ದು, ಪೊಲೀಸರು ಈ ಸಂಬಂದ ಪ್ರಕರಣ ದಾಖಲಿಸಿ ಕೊಂಡು ತೀವ್ರವಾದ ತನಿಖೆಯನ್ನು ನಡೆಸುತ್ತಿದ್ದಾರೆ. ದಾಳಿಯಲ್ಲಿ ಸಬ್ ಇನ್ಸ್ಪೆಕ್ಟರ್ ಲೋಕೇಶ್ ಅವರೊಂದಿಗೆ ಎಎಸ್ಐ ಚಂದ್ರಶೇಖರ್, ಪೇದೆಗಳಾದ ಜೇನುಕಲ್ಲೇಗೌಡ, ಧರ್ಮರಾಜ್, ಮೋಹನ್, ರವಿ ಮತ್ತು ಹೀರಾಸಿಂಗ್ ಇದ್ದರು.
ಅಧಿಕಾರಿಗಳ ಸ್ಪಷ್ಟನೆ: ತಾಲೂಕು ಆಹಾರ ಇಲಾಖೆ ಅಧಿಕಾರಿ ಬಾಲಚಂದ್ರ ಅವರು ಪ್ರಕರಣದ ಸ್ಥಳಕ್ಕೆ ಭೇಟಿನೀಡಿ ತನಿಖೆ ನಡೆಸಿದ್ದು, ಚೀಲಗಳ ಮೇಲೆ ಸರ್ಕಾರದ ಕೆಂಪು ಚೀಟುಗಳು ಇರುವುದರಿಂದ ಈ ಅಕ್ಕಿಯ ಚೀಲಗಳು ನ್ಯಾಯಬೆಲೆ ಅಂಗಡಿ ಮೂಲಕ ಬಿಪಿಎಲಲ್ಪಡಿತರದಾರರಿಗೆ ಮಾರಾಟ ಮಾಡಬೇಕಾದ ಅಕ್ಕಿಯ ಚೀಲಗಳೇ ಆಗಿದ್ದು, ದಾಸ್ತಾನು ಮಳಿಗೆ ಮಾಲೀಕರು ನ್ಯಾಯಬೆಲೆ ಅಂಗಡಿ ಮಾಲೀಕರು ಅಲ್ಲದಿದ್ದು, ಇಷ್ಟು ಪ್ರಮಾಣದ ಅಕ್ಕಿಯ ಚೀಲಗಳು ಇಲ್ಲಿಗೆ ಹೇಗೆ ಬಂತು ಎಂಬ ಬಗ್ಗೆ ತೀವ್ರವಾದ ತನಿಖೆ ಅವಶ್ಯಕವಾಗಿ ನಡೆಸಬೇಕಾಗಿದೆ ಎಂದು ತಿಳಿಸಿದರು.
ಆರೋಪ: ನ್ಯಾಯಬೆಲೆ ಅಂಗಡಿಗಳಿಗೆ ನೀಡುವ ಅಕ್ಕಿಯಲ್ಲಿ ಅಧಿಕಾರಿಗಳು ಒಂದು ಚೀಲದಿಂದ 1.300 ಗ್ರಾಂ ತೂಕದ ಅಕ್ಕಿಯನ್ನು ತೆಗೆದು ನೀಡುತ್ತಿದ್ದು, ಈ ಬಗ್ಗೆ ಅಂಗಡಿ ಮಾಲೀಕರು ಯಾರಾದರು ಪ್ರಶ್ನಿಸಿದರೆ ಅವರಿಗೆ ಅಧಿಕಾರಿಗಳು ಇನ್ನಿಲ್ಲದ ತೊಂದರೆಗಳನ್ನು ನೀಡುತ್ತಿದ್ದಾರೆ ಎಂದು ತಮ್ಮ ಹೆಸರು ಬಹಿರಂಗಪಡಿಸಲು ಇಚ್ಛಿಸದ ಕೆಲವು ನ್ಯಾಯಬೆಲೆ ಅಂಗಡಿಯ ಮಾಲೀಕರೇ ಸ್ವತ- ತಮ್ಮ ಅಳಲನ್ನು ಸಾರ್ವಜನಿಕರ ಎದುರೇ ತೋಡಿಕೊಂಡರು. ಈ ರೀತಿ ಚೀಲಗಟ್ಟಲೆ ಸಂಗ್ರಹಿಸಿದ ಅಕ್ಕಿಯನ್ನು ಮಧ್ಯವರ್ತಿಗಳಿಗೆ ಕಾಳಸಂತೆಯಲ್ಲಿ ಮಾರಾಟ ಮಾಡಲು ಕೊಡುತ್ತಿದ್ದಾರೆ ಎಂದು ಆರೋಪಿಸಿದರು.