ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಜಿಲ್ಲೆಯಾದ್ಯಂತ ಶೇ. 88 ಮತದಾನ

Mainashree
Updated On : 5 Jan 2014, 11:08 am

ಕನ್ನಡಪ್ರಭ ವಾರ್ತೆ, ಹಾಸನ, ಜ. 5
ರಾಜ್ಯ ವಕ್ಕಲಿಗರ ಸಂಘದ ಜಿಲ್ಲೆಯ 3 ನಿರ್ದೇಶಕರ ಸ್ಥಾನಗಳ ಚುನಾವಣೆಗೆ ಭಾನುವಾರ ನಡೆದ ಮತದಾನ ಶಾಂತಿಯುತವಾಗಿತ್ತು. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಶೇ. 88.97ರಷ್ಟು ಮತದಾನವಾಗಿದೆ.
ಜಿಲ್ಲೆಯ 25,944 ಮತಗಳ ಪೈಕಿ 23,081 ಮತಗಳು ಚಲಾವಣೆಯಾದವು. ಹಾಸನ ತಾಲೂಕಿನಲ್ಲಿ 10,499 ಮತದಾರರ ಪೈಕಿ 8,936 ಮತಗಳು ಚನಾವಣೆಯಾಗುವ ಮೂಲಕ ಶೇ. 85.25ರಷ್ಟು, ಹೊಳೆನರಸೀಪುರ ತಾಲೂಕಿನಲ್ಲಿ 1,111 ಮತಗಳ ಪೈಕಿ 966 ಮತ ಚಲಾವಣೆಯಾಗುವ ಮೂಲಕ ಶೇ. 86.95ರಷ್ಟು, ಚನ್ನರಾಯಪಟ್ಟಣ ತಾಲೂಕಿನಲ್ಲಿ 7,408 ಮತಗಳ ಪೈಕಿ 6,953 ಮತ ಚನಾವಣೆಯಾಗುವ ಮೂಲಕ 83.6ರಷ್ಟು, ಅರಸೀಕೆರೆ ತಾಲೂಕಿನಲ್ಲಿ 2,149 ಮತಗಳ ಪೈಕಿ 2,020 ಮತಗಳು ಚಲಾವಣೆಯಾಗುವ ಮೂಲಕ ಶೇ.94ರಷ್ಟು ಮತದಾನವಾಗಿದೆ.
ಬೇಲೂರು ತಾಲೂಕಿನಲ್ಲಿ 1,664 ಮತಗಳ ಪೈಕಿ 1,448 ಮತಗಳು ಚಲಾವಣೆಯಾಗುವ ಮೂಲಕ 87.02ರಷ್ಟು, ಸಕಲೇಶಪುರ ತಾಲೂಕಿನಲ್ಲಿ 1,666 ಮತಗಳ ಪೈಕಿ 1450 ಮತಗಳು ಚಲಾವಣೆಯಾಗುವ ಮೂಲಕ 87.03ರಷ್ಟು, ಆಲೂರು ತಾಲೂಕಿನಲ್ಲಿ 645 ಮತಗಳ ಪೈಕಿ 585 ಮತಗಳು ಚಲಾವಣೆಯಾಗುವ ಮೂಲಕ ಶೇ.90.70ರಷ್ಟು ಮತ್ತು ಅರಕಲಗೂಡು ತಾಲೂಕಿನಲ್ಲಿ 802 ಮತಗಳ ಪೈಕಿ 723 ಮತಗಳು ಚಲಾವಣೆಯಾಗುವ ಮೂಲಕ ಶೇ. 95.5ರಷ್ಟು ಮತದಾನವಾಗಿದೆ.
ಮಂದಗತಿಯ ಆರಂಭ: ಬೆಳಗ್ಗೆ ಮಂಜು ಕವಿದ ವಾತಾವರಣವಿದ್ದರಿಂದ ಮತದಾನ ಮಂದಗತಿಯಲ್ಲಿ ಪ್ರಾರಂಭವಾಗಿ ಬಿಸಿಲು ನೆತ್ತಿಮೇಲೆ ಏರುತ್ತಿದ್ದಂತೇ ಮತದಾರರು ಮತಗಟ್ಟೆಯತ್ತ ಧಾವಿಸಿ ಸರದಿ ಸಾಲಿನಲ್ಲಿ ನಿಂತ ತಮ್ಮ ಹಕ್ಕನ್ನು ಚಲಾಯಿಸಿದರು. ಕೆಲ ಅಭ್ಯರ್ಥಿಗಳು ಬೆಳಗ್ಗೆ ಬೇಗ ಎದ್ದು ದೇವಾಲಯಗಳಿಗೆ ತೆರಳಿ ಪೂಜೆಯನ್ನು ಸಲ್ಲಿಸಿ, ನಂತರ, ಮತದಾನ ಪ್ರಾರಂಭವಾಗುವ ಮುನ್ನ ಕುಟುಂಬ ಸಮೇತರಾಗಿ ಮತಕೇಂದ್ರಗಳಿಗೆ ತೆರಳಿ ಮತದಾನದ ಹಕ್ಕನ್ನು ಚಲಾಯಿಸಿದರು.
ಆಜ್ಞೆ ಉಲ್ಲಂಘನೆ: ಮಂದಗತಿಯಲ್ಲಿ ಪ್ರಾರಂಭವಾದ ಮತದಾನವು ಒಬ್ಬೊಬ್ಬರಾಗಿಯೇ ಮನೆಯಿಂದ ಬಂದು ಮತದಾನ ಮಾಡಿದರು. ಮತದಾರರನ್ನು ವಾಹನಗಳಲ್ಲಿ ಕರೆತರುವಂತಿಲ್ಲ ಹಾಗೂ ಮತಗಟ್ಟೆಯಿಂದ 100 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ವಾಹನಗಳನ್ನು ನಿಲ್ಲಿಸುವಂತಿಲ್ಲವಾದರೂ ಸಹ ಮತಗಟ್ಟೆಯ ಸಮೀಪವೇ ವಾಹನಗಳನ್ನು ನಿಲ್ಲಿಸಿಕೊಂಡಿದ್ದರು.
ಮತದಾನ ಭಾನುವಾರ ಬೆಳಗ್ಗೆಯಿಂದ ಆರಂಭವಾಗಿ ಸಂಜೆ 4ರವರೆಗೆ ನಡೆಯಿತು. ಮತಗಟ್ಟೆಗಳ ಬಳಿ ಅಭ್ಯರ್ಥಿ ಹಾಗೂ ಮತ್ತವರ ಬೆಂಬಲಿಗರು ಅಂತಿಮ ಕ್ಷಣದ ಮತಯಾಚನೆ ಮಾಡಿದರು.
ನಿರ್ಬಂಧ: ಹಾಸನ ಜಿಲ್ಲೆಯಿಂದ ಮೂವರು ನಿರ್ದೇಶಕರನ್ನು ಆಯ್ಕೆ ಮಾಡಬೇಕಾಗಿದ್ದು, 21 ಮಂದಿ ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ಮತದಾನ ದಿನ ಹಾಗೂ ಮತ ಎಣಿಕೆ ಸಮಯಕ್ಕೆ ಒಬ್ಬ ಅಭ್ಯರ್ಥಿಗೆ  ತಾಲೂಕಿಗೆ ಒಬ್ಬ ಏಜೆಂಟರಂತೆ ನೇಮಕ ಮಾಡಲು ಅವಕಾಶ ನೀಡಲಾಗಿತ್ತು. ಮತದಾನ ಕೇಂದ್ರದಲ್ಲಿ ಮೊಬೈಲ್ ಬಳಕೆಯನ್ನು ನಿಷೇಧಿಸಲಾಗಿತ್ತು. ಮತದಾನ ಮಾಡಲು ಒಕ್ಕಲಿಗರ ಸಂಘದ ಗುರುತಿನ ಚೀಟಿ ಕಡ್ಡಾಯವಾಗಿತ್ತು ಹಾಗೂ ಬೇರೆ ಯಾವುದೇ ದಾಖಲೆಗಳನ್ನು ಪರಿಗಣಿಸಿ ಮತದಾನಕ್ಕೆ ಅವಕಾಶ ನೀಡಲಿಲ್ಲ.
ಜಿಲ್ಲೆಯಲ್ಲಿ ಒಟ್ಟು 25,944 ಮತದಾರರು ಇದ್ದಾರೆ. ಹಾಸನ-10,499, ಹೊಳೆನರಸೀಪುರ-1111, ಚನ್ನರಾಯಪಟ್ಟಣ -7408,  ಅರಸೀಕೆರೆ -2149, ಬೇಲೂರು - 1664,  ಸಕಲೇಶಪುರ - 1666, ಆಲೂರು - 645, ಅರಕಲಗೂಡು - 802 ಮತದಾರರು ಇದ್ದಾರೆ. ಜಿಲ್ಲೆಯಲ್ಲಿನ ಎಲ್ಲ ಮತ ಕೇಂದ್ರಗಳಿಗೆ ಮೀಸಲು ಸಿಬ್ಬಂದಿ ಸೇರಿ ಒಟ್ಟು 280 ಸಿಬ್ಬಂದಿಗಳನ್ನು ಮತ್ತು ಭದ್ರತಾ ವ್ಯವಸ್ಥೆಗಾಗಿ 206 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳಲಾಗಿತ್ತು.
ಇದರೊಂದಿಗೆ ಎಲ್ಲ ತಾಲೂಕು ಮತ ಕೇಂದ್ರಗಳಿಗೆ ಜಿಲ್ಲಾ ಸಶಸ್ತ್ರ ಪಡೆ ಮತ್ತು ರಾಜ್ಯ ಮೀಸಲು ಪಡೆ ಪೊಲೀಸರನ್ನು ಬಳಸಿಕೊಳ್ಳಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement