'ಬಟ್ಟೆ ಹೊಲಿಗೆಯಲ್ಲಿ ವೈವಿಧ್ಯತೆ ಅವಶ್ಯ'
ಕ.ಪ್ರ.ವಾರ್ತೆ ಬೇಲೂರು ಜ.5
ಆಧುನಿಕ ಯುಗಕ್ಕೆ ತಕ್ಕಂತೆ ಬಟ್ಟೆ ಹೊಲಿಗೆಯಲ್ಲಿ ವೈವಿಧ್ಯತೆ ಅವಶ್ಯ ಇರುವ ದಿಸೆಯಲ್ಲಿ ಮಹಿಳಾ ಸಬಲೀಕರಣಕ್ಕೆ ನಾಂದಿಯಾಡುತ್ತದೆ ಎಂದು ತಾಲ್ಲೂಕು ಪಂಚಾಯ್ತಿ ಸದಸ್ಯ ಪರ್ವತಯ್ಯ ತಿಳಿಸಿದರು.
ತಾಲ್ಲೂಕಿನ ಹೆಬ್ಬಾಳು ಗ್ರಾಮದಲ್ಲಿ ಶನಿವಾರ ನಡೆದ ವೃತ್ತಿ ನಿರತ ಕೌಶಲ್ಯ ಒಂದು ತಿಂಗಳ ತರಬೇತಿ ಕಾರ್ಯಕ್ರಮದಲ್ಲಿ ಉದ್ಘಾಟನೆ ನಡೆಸಿ ಮಾತನಾಡಿದ ಅವರು ಕುಟುಂಬದ ನಾಲ್ಕು ಗೊಡೆ ಮಧ್ಯೆ ಇದ್ದ ಮಹಿಳೆ ಇಂದು ಸಮಾಜದ ಬಹುಮುಖ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾಳೆ ಎಂದರು.
ಸಂಪೂರ್ಣ ತೊಡಗಿಸಿಕೊಳ್ಳಬೇಕು: ರಾಜಕೀಯವಾಗಿ ಹಾಗೂ ಇನ್ನೂ ಕೆಲ ಕ್ಷೇತ್ರದಲ್ಲಿ ಸಬಲೆಯಾಗಿರುವ ಮಹಿಳೆಯನ್ನು ಆರ್ಥಿಕವಾಗಿ ಸದೃಢ ಮಾಡುವ ಮುಖ್ಯ ಹೊಣೆಗಾರಿಕೆ, ಇಂತಹ ತರಬೇತಿಗಳು ಎಂದ ಅವರು ಹೊಲಿಗೆ ತರಬೇತಿ ಮಹಿಳೆಯರಿಗೆ ಮೂಲ ಅವಶ್ಯ ಎಂದರು. ಪ್ರಸಕ್ತ ದಿನ ಮಾನದಲ್ಲಿ ಹೊಲಿಗೆ ಭಾರಿ ಪ್ರಮಾಣದ ಬೇಡಿಕೆ ಇದ್ದು ಮಹಿಳೆ ಇಂತಹ ತರಬೇತಿಯಲ್ಲಿ ಸಂಪೂರ್ಣ ತೊಡಗಿಸಿಕೊಳ್ಳಬೇಕು ಎಂದರು.
ಉದ್ದೇಶ: ಜಿಲ್ಲಾ ಯೋಜನಾಧಿಕಾರಿ ಟಿ.ಡಿ. ತಮ್ಮಣ್ಣಗೌಡ ಮಾತನಾಡಿ, ಈ ತರಬೇತಿ ಶ್ರೀ ಧರ್ಮಸ್ಥಳ ಗ್ರಾಮೀಣ ಉದ್ಯೋಗ ಸಂಸ್ಥೆ, ಕೆನರಾ ಬ್ಯಾಂಕ್ ಹಾಗೂ ನವ ಸಾಕ್ಷಕರ ಆಶ್ರಯದಲ್ಲಿ ನಡೆಯುತ್ತದೆ. ಪ್ರಸ್ತುತ, ಜಿಲ್ಲೆಯಲ್ಲಿ 18 ತರಬೇತಿಗಳನ್ನು ನೀಡಿ ಅವರಿಗೆ ಬ್ಯಾಂಕಿನಿಂದ ಸಾಲ ಸೌಲಭ್ಯ ನೀಡಲಾಗಿದೆ ಎಂದರು.
ಹಿಂದುಳಿದ ತಾಲೂಕುಗಳನ್ನು ಗುರುತಿಸಿ ಡಾ. ನಂಜುಂಡಪ್ಪ ವರದಿ ಆಧರಿಸಿ, ಹಿಂದುಳಿದ ಮಹಿಳೆಯರಿಗೆ ಆರ್ಥಿಕವಾಗಿ ಮುನ್ನಡೆಯಲು ಅವಕಾಶ ಮಾಡುವ ಪ್ರಮುಖ ಉದ್ದೇಶವಾಗಿದೆ ಎಂದರು.
ಕರೆ: ಮಕ್ಕಳಿಗೆ ಪೋಷಕರು ಹಣ ವ್ಯಾಮೋಹಕ್ಕಿಂತ ದುಡಿಮೆಯ ದಾರಿ ತೋರಿಸಿ ಆಗ ಮಾತ್ರ ದೇಶ ಅಭಿವೃದ್ಧಿಯಾಗುತ್ತದೆ, ಜಪಾನ್ ದೇಶದಲ್ಲಿ ಮಕ್ಕಳಿಗೆ ದೇಶದ ಬಗ್ಗೆ ಅಭಿಮಾನ ಹಾಗೂ ಸ್ವಾವಲಂಬಿ ಬದುಕು ಬಗ್ಗೆ ಶಿಕ್ಷಣ ನೀಡುವ ದಿಸೆಯಲ್ಲಿ ದೇಶ ವಿಶ್ವದ ಮಟ್ಟದಲ್ಲಿ ಉನ್ನತ ಸ್ಥಾನ ಪಡೆದಿದೆ, ಮಾನವ ಸಂಪನ್ಮೂಲವಾಗಬೇಕು, ಮಹಿಳೆಯರು ಈ ತರಬೇತಿಯ ಪ್ರತಿ ಕ್ಷಣದ ಸಮಯವನ್ನು ಉಪಯೋಗ ಮಾಡಿಕೊಳ್ಳಿ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ತಿಮ್ಮೇಗೌಡ, ಉಪಾಧ್ಯಕ್ಷೆ ತುಂಗಮ್ಮ ಹೊನ್ನಲಗಚಾರ್, ಸದಸ್ಯ ಗೋಪಾಲ್, ಸಂಪನ್ಮೂಲ ಅಧಿಕಾರಿ ಗಂಗಾಧರ್, ಮಾಜಿ ಅಧ್ಯಕ್ಷ ರತಿದೇವಿ, ಸಂಪರ್ಕ ಅಧಿಕಾರಿ ಶಿವಮೂರ್ತಿ, ಆಶಾ ಕಾರ್ಯಕರ್ತೆ ಸಿದ್ದಮ್ಮ, ತರಬೇತಿ ಶಿಕ್ಷಕಿ ಸುನಂದ, ರಂಜಿತಾ ಇತರರು ಇದ್ದರು.