ಸುದ್ದಿ ಸಂಕ್ಷೇಪ
ಏರ್ಮನ್ ಹುದ್ದೆಗಳಿಗೆ ಆಹ್ವಾನ
ಹಾಸನ: ಭಾರತೀಯ ವಾಯುಪಡೆಯಲ್ಲಿ ಗ್ರೂಪ್ ವೈ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಪಿ.ಯು.ಸಿ ಅಥವಾ ಡಿಪ್ಲೊಮೋನಲ್ಲಿ ಶೇ. 50ರಷ್ಟು ಅಂಕಗಳನ್ನು ಪಡೆದ ತೇರ್ಗಡೆ ಹೊಂದಿರಬೇಕು. 1994ರ ಫೆ. 1ರಿಂದ 1997ರ ನ. 30ರ ಅವಧಿಯಲ್ಲಿ ಜನಿಸಿರಬೇಕು. ಉತ್ತಮ ದೇಹದಾರ್ಢ್ಯತೆ ಹೊಂದಿರಬೇಕು. ಅರ್ಜಿ ಸಲ್ಲಿಸಲು ಜ.14 ಕಡೇ ದಿನ. ಭರ್ತಿ ಮಾಡಿದ ಅರ್ಜಿಯನ್ನು ಪ್ರೆಸಿಡೆಂಟ್, ಸೆಂಟ್ರಲ್ ಏರಮನ್ ಸೆಲೆಕ್ಷನ್ ಬೋರ್ಡ್, ಪೋಸ್ಟ್ ಬಾಕ್ಸ್ ನಂಬರ್ 11807, ನ್ಯೂ ದೆಹಲಿ-110010 ಗೆ ನೇರವಾಗಿ ಸಲ್ಲಿಸಬೇಕು. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಢಿಢಿಢಿ.್ಝಟಿಜ್ಝಛಟಿಛ್ಝ್ಠಜ್ಟ್ಠ್ಛಿಜ.ಟ್ಝ್ಛಿ.್ಝಟಿ ನಲ್ಲಿ ಅಥವಾ ದೂ. ಸಂ. 080-25592199 ನ್ನು ಸಂಪರ್ಕಿಸಲು ಕೋರಿದೆ. ಅಥವಾ ಸ್ಥಳೀಯ ಮಾಹಿತಿಗಾಗಿ ವಿಜಯಲಕ್ಷ್ಮಿ ಜೆ ಬಿ, ಉದ್ಯೋಗಾಧಿಕಾರಿ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಹಾಸನ ಇವರನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ 08172- 268374 ಅನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಲು ಸಹಾ ಕೋರಿದೆ.
ಪ್ರಬಂಧ ಸ್ಪರ್ಧೆ
ಹಾಸನ: ರಾಜ್ಯ ಸರ್ಕಾರವು ಬಾಲಭವನದ ವತಿಯಿಂದ 2013-14ನೇ ಸಾಲಿಗೆ ಜಿಲ್ಲೆಯಲ್ಲಿ ಬಾಲ ಸಾಹಿತಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಜಿಲ್ಲಾ ಮಟ್ಟದಲ್ಲಿ 1)ಕಥೆ 2) ಕವನ 3) ಪ್ರಬಂಧ ಈ ಮೂರು ಸೃಜನಾತ್ಮಕ ಬರವಣಿಗೆಯ ಕುರಿತು ಕಲಾಶ್ರೀ ಮಾದರಿಯಲ್ಲಿ ಹಾಗೂ ಸ್ಥಳದಲ್ಲಿಯೇ ವಿಷಯಗಳನ್ನು ನೀಡಿ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು. ಈ ಯೋಜನೆಯಡಿ 08 ರಿಂದ 16 ವರ್ಷದೊಳಗಿನ ಮಕ್ಕಳನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು. ಇಲ್ಲಿ ಆಯ್ಕೆಯಾದ ಮಕ್ಕಳನ್ನು ರಾಜ್ಯ ಮಟ್ಟದ ಸಾಹಿತ್ಯ ಕಮ್ಮಟಕ್ಕೆ ಕಳುಹಿಸಲಾಗುವುದು.
ಅರ್ಜಿ ಸಲ್ಲಿಸುವವರು, ಅರ್ಜಿಯ ಜೊತೆ ಮಗುವಿನ ಭಾವಚಿತ್ರ, ಹಾಗೂ ಈಗಾಗಲೇ ಈ ಮೇಲ್ಕಂಡ ಸ್ವರ್ಧೆಗಳಲ್ಲಿ ಭಾಗವಹಿಸಿರುವ ಬಗ್ಗೆ ವಿವರಣೆ, ಮಗುವಿನ ವಿಳಾಸ ಮತ್ತು ದೂರವಾಣಿ ಸಂಖ್ಯೆ, ಮಗುವಿನ ವಯಸ್ಸಿನ ಬಗ್ಗೆ ದೃಢೀಕೃತ ಪ್ರತಿಯನ್ನು ಲಗತ್ತಿಸತಕ್ಕದ್ದು. ಮೇಲ್ಕಂಡ ಎಲ್ಲಾ ದಾಖಲಾತಿಗಳನ್ನು ದಿ. 10.1.2012ರೊಳಗೆ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, 09ನೇ ಅಡ್ಡರಸ್ತೆ, ಕೆ.ಆರ್.ಪುರಂ, ಹಾಸನ ಇವರಿಗೆ ಸಲ್ಲಿಸುವುದು. ನಿಗದಿತ ದಿನಾಂಕದ ನಂತರ ಬಂದಂತಹ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ 267218 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.
ಪರಿಶೀಲನಾ ಸಭೆ
ಹಾಸನ: ಸಕಲೇಶಪುರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಂಜುಳ ಅಧ್ಯಕ್ಷತೆಯಲ್ಲಿ ಜ. 7ರಂದು ಬೆಳಗ್ಗೆ 11ಕ್ಕೆ ತಾಪಂ ಸಭಾಂಗಣದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಯಲಿದೆ.
ಚಿರತೆ ದಾಳಿಗೆ ಹಸು ಸಾವು
ಹೊಳೆನರಸೀಪುರ: ತಾಲೂಕಿನ ಜೋಡಿಗುಬ್ಬಿ ಗ್ರಾಮದಲ್ಲಿನ ರಾಮೇಗೌಡ ಎಂಬುವವರ ತೋಟದ ಮನೆಯಲ್ಲಿನ ಕೊಟ್ಟಿಗೆಯ ಹೊರಭಾಗದಲ್ಲಿ ಕಟ್ಟಿಹಾಕಲಾಗಿದ್ದ ಹಸುವೊಂದನ್ನು ಚಿರತೆ ತಿಂದುಹಾಕಿರುವ ಘಟನೆ ವರದಿಯಾಗಿದೆ.
ತೋಟದಲ್ಲಿನ ಒಂಟಿಮನೆಯ ಹೊರಭಾಗದಲ್ಲಿ ಕಟ್ಟಿಹಾಕಲಾಗಿದ್ದ ಹಸುವನ್ನು ರಾತ್ರಿ ವೇಳೆ ಚಿರತೆಯು ದಾಳಿ ನಡೆಸಿ ಹಸುವಿನ ಹೊಟ್ಟೆ ಹಾಗೂ ಹಿಂಬಾಗವನ್ನು ಸಂಪೂರ್ಣವಾಗಿ ತಿಂದುಹಾಕಿದೆ. ಈ ಹಿಂದೆ ಕೂಡ ಗ್ರಾಮದ ಸುತ್ತಮುತ್ತಲಿನ ಕೆಲ ತೋಟದ ಮನೆಗಳಲ್ಲಿನ ನಾಯಿಗಳನ್ನು ಚಿರತೆಯು ಹೊತ್ತೊಯ್ದು ತಿಂದು ಹಾಕಿರುವ ಘಟನೆಗಳು ನಡೆದಿವೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಪದೇ ಪದೇ ಹಾವಳಿ ನೀಡುತ್ತಿರುವ ಚಿರತೆಯನ್ನು ಹಿಡಿಯಲು ಬೋನನ್ನು ಇರಿಸುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಘಟನೆಯ ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ರವೀಂದ್ರ ಹಾಗೂ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಗ್ರಾಮಸಭೆ ಬಹಿಷ್ಕರಿಸಿದ ಗ್ರಾಮಸ್ಥರು
ಸಕಲೇಶಪುರ: ಅಧಿಕಾರಿಗಳ ಗೈರು ಹಾಜರಿನಿಂದಾಗಿ ಆಕ್ರೋಶಗೊಂಡ ಗ್ರಾಮಸ್ಥರು ಹಾನುಬಾಳ್ ೆಹೋಬಳಿ ಜನಸಂಪರ್ಕ ಸಭೆಯನ್ನು ಬಹಿಷ್ಕರಿಸಿದ ಘಟನೆ ಶನಿವಾರ ನಡೆಯಿತು.
ಗ್ರಾಪಂ ಅವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಗ್ರಾಮ ಸಭೆಗೆ ಕೆಲವೇ ಅಧಿಕಾರಿಗಳು ಆಗಮಿಸಿದ್ದರು. ಇದರಿಂದ ಕುಪಿತಗೊಂಡ ಗ್ರಾಮಸ್ಥರು ಹೋಬಳಿಯಲ್ಲಿರುವ ಪ್ರಮುಖ ಸಮಸ್ಯೆಗಳಾದ ವಿದ್ಯುತ್, ರಸ್ತೆ, ಕಾಡಾನೆ ಸಮಸ್ಯೆ ಕೇಳಲು ಯಾವುದೇ ಅಧಿಕಾರಿಗಳು ಆಗಮಿಸಿಲ್ಲ. ಅಲ್ಲದೇ, ಜನಸಂಪರ್ಕ ಸಭೆ ಆಯೋಜಿಸಿರುವ ಬಗ್ಗೆ ಪ್ರಚಾರವನ್ನೂ ನಡೆಸಿಲ್ಲ ಹಾಗೂ ಸಭೆಗೆ ಆಗಮಿಸುವುದಾಗಿ ಭರವಸೆ ನೀಡಿದ್ದ ಶಾಸಕ ಎಚ್.ಕೆ. ಕುಮಾರಸ್ವಾಮಿ ಕಳೆದ ಆರು ವರ್ಷಗಳಿಂದ ಹಾನುಬಾಳ್ ಹೋಬಳಿಯ ಜನಸಂಪರ್ಕ ಸಭೆಗೆ ಆಗಮಿಸಿಲ್ಲ. ಇದರಿಂದಾಗಿ, ಹೋಬಳಿಯಲ್ಲಿ ಕಾಡುತ್ತಿರುವ ಸಮಸ್ಯೆಗಳಿಗೆ ಪರಿಹಾರ ದೊರಕದಂತಾಗಿದೆ. ಈ ಸಭೆ ನಡೆದರೂ ಯಾವುದೇ ಉಪಯೋಗವಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಜನಸಂಪರ್ಕ ಸಬೆಗೆ ಶಾಸಕರು ಹಾಗೂ ಅಗತ್ಯ ಅಧಿಕಾರಿಗಳು ಆಗಮಿಸುವವರಗೆ ಸಭೆಯನ್ನು ಮುಂದೂಡುವಂತೆ ಒತ್ತಾಯಿಸಿ ಹಿನ್ನೆಲೆಯಲ್ಲಿ ಅಧಿಕಾರಿಗಳು ಸಭೆಯನ್ನು ಮುಂದೂಡಿದರು.
ಈ ಸಂದರ್ಭದಲ್ಲಿ ಅವರೇಕಾಡು ಪೃಥ್ವಿ,ನಾಗಣ್ಣ,ಮಲ್ಲಪ್ಪ ಅವರೇಕಾಡು ಕೃಷ್ಣ,ರವಿ ಮೊದಲಾದವರು ಇದ್ದರು.
ಕಾಡಾನೆಗಳ ದಾಳಿ: 10 ಕ್ವಿಂಟಲ್ ರಾಗಿ ಬೆಳೆ ನಾಶ
ಹಾಸನ: ಆಲೂರು ತಾಲೂಕು ಪಾಳ್ಯ ಹೋಬಳಿಯ ಶಿಂಗೋಡನಹಳ್ಳಿಯಲ್ಲಿ ಇತ್ತೀಚೆಗೆ ಕಾಡಾನೆಗಳು ಜಮೀನಿಗೆ ನುಗ್ಗಿ ದಾಳಿ ನಡೆಸಿದರ ಪರಿಣಾಮವಾಗಿ ದ್ಯಾವಯ್ಯ ಎಂಬವರಿಗೆ ಸೇರಿದ ಬೆಳೆ ಹಾಳಾಗಿ, ಅಪಾರ ನಷ್ಟ ಉಂಟಾಗಿದೆ.
ರಾತ್ರಿ ವೇಳೆಯಲ್ಲಿ ಕಾಡಾನೆಗಳು ದ್ಯಾವಯ್ಯ ಅವರ 3 ಎಕರೆ ಕಾಫಿ ತೋಟಕ್ಕೆ ನುಗ್ಗಿ ಅಲ್ಲಿದ್ದ 1000 ಕಾಫಿ ಗಿಡ, 500 ಬಾಳೆ ಗಿಡಗಳು, ಅಲ್ಲದೇ ಒಂದು ಎಕರೆಯಲ್ಲಿ ಬೆಳೆದಿದ್ದ ರಾಗಿ ಬೆಳೆ (10 ಕ್ವಿಂಟಾಲ್) ಹಾಗೂ ತಂತಿ ಬೇಲಿಯನ್ನು ತುಳಿದು ಹಾನಿ ಮಾಡಿದೆ. ಇದರಿಂದ, ರು. 1.25 ಲಕ್ಷ ನಷ್ಟವಾಗಿದೆ ಎಂದು ದ್ಯಾವಯ್ಯ ತಿಳಿಸಿದ್ದಾರೆ.
ತಾನು ಬಡವನಾಗಿದ್ದು, ಸರ್ಕಾರದವರು ಈ ಬಗ್ಗೆ ಪರಿಶೀಲನೆ ಮಾಡಿ, ಸರ್ಕಾರದಿಂದ ಸೂಕ್ತ ರೀತಿಯಲ್ಲಿ ಪರಿಹಾರ ಹಣವನ್ನು ಮಂಜೂರು ಮಾಡಿಸಬೇಕಾಗಿ ಅವರು ಕೋರಿದ್ದಾರೆ.
ರಾಜ್ಯ ಮಟ್ಟಕ್ಕೆ ಆಯ್ಕೆ
ಹಾಸನ: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ 2013-14ನೇ ಸಾಲಿನ ಪ್ರತಿಭಾ ಕಾರಂಜಿಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಧಾರ್ಮಿಕ ಪಠಣ ಸ್ಪರ್ಧೆಯಲ್ಲಿ ನಗರದ ರಾಯಲ್ ಅಪೋಲೋ ಇಂಟರ್ ನ್ಯಾಷನಲ್ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಪ್ರಣವ್ ಎಸ್. ಭಾರದ್ವಾಜ್ ಅವರು ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕಸಾಪ ಸಮ್ಮೇಳನದಲ್ಲಿ ಸನ್ಮಾನ
ಹಾಸನ: ಮಡಿಕೇರಿಯಲ್ಲಿ ಜ.7, 8 ಮತ್ತು 9ರಂದು ನಡೆಯಲಿರುವ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಾನಾ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗೈದು ಕನ್ನಡ ನಾಡು-ನುಡಿಗೆ ಸೇವೆ ಸಲ್ಲಿಸಿದ ಹಾಸನ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ಮುಖಂಡ ಎ.ಜಿ. ಹರಿಗೋಪಾಲ್ ಅವರನ್ನು ಸನ್ಮಾನಿಸಲು ಆಯ್ಕೆ ಮಾಡಲಾಗಿದೆ.
ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಹಾಸನ: ಅರಸೀಕೆರೆ ತಾಲೂಕಿನ ಚಲುವನಹಳ್ಳಿ ಭೋವಿಕಾಲೋನಿ, ಸೈದರಹಳ್ಳಿ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಮಹಿಳಾ ಅಭ್ಯರ್ಥಿಗಳು ಜ. 18ರೊಳಗೆ ನಿಗದಿತ ಅರ್ಜಿ ಹಾಗೂ ಇತರ ದಾಖಲಾತಿಗಳೊಂದಿಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿರುತ್ತದೆ. ಹೆಚ್ಚಿನ ವಿವರಗಳಿಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಅರಸೀಕೆರೆ ಇವರನ್ನು ಕೋರಲಾಗಿದೆ.