ಆನೆ ಉಪಟಳ: ನಾಳೆ, ನಾಡಿದ್ದು ಅಹೋರಾತ್ರಿ ಪಾದಯಾತ್ರೆ
ಹಾಸನ: ಆನೆ ಹಾವಳಿ ತಡೆಗೆ ಆಗ್ರಹಿಸಿ ಜ.8 ಹಾಗೂ 9ರಂದು ಅಹೋರಾತ್ರಿ ಬೃಹತ್ ಪಾದಯಾತ್ರೆ ಹಮ್ಮಿಕೊಂಡಿರುವುದಾಗಿ ಬಿಜೆಪಿ ಸಕಲೇಶಪುರ ಮಂಡಲದ ಅಧ್ಯಕ್ಷ ಕ್ಯಾಮನಹಳ್ಳಿ ಡಿ.ರಾಜ್ಕುಮಾರ್ ತಿಳಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚಂಗಡಹಳ್ಳಿಯಿಂದ ಸಕಲೇಶಪುರದವರೆಗೂ ಅಹೋರಾತ್ರಿ ಬೃಹತ್ ಪಾದಯಾತ್ರೆ ನಡೆಸಲಾಗುವುದು. ಚಂಗಡಹಳ್ಳಿಯಲ್ಲಿ ಜ.8ರಂದು ಬೆಳಗ್ಗೆ 9ಕ್ಕೆ ಪಾದಯಾತ್ರೆ ಉದ್ಘಾಟನೆಗೊಳ್ಳಲಿದೆ. ಜ.9ರಂದು ಗುರುವಾರ ಮಧ್ಯಾಹ್ನ 2ಕ್ಕೆ ಸಕಲೇಶಪುರದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ ಎಂದರು. ಸಕಲೇಶಪುರ ಮತ್ತು ಆಲೂರು ತಾಲೂಕಿನಲ್ಲಿ ಆನೆ ಹಾವಳಿ ಹೆಚ್ಚಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆನೆ ಸಮಸ್ಯೆ ತಡೆಯುವಲ್ಲಿ ಸಂಪೂರ್ಣ ವಿಫಲವಾಗಿದೆ. ರೈತರು ಬೆಳೆದ ಬೆಳೆ ನಾಶ ಮಾಡಿ, ಸಿಕ್ಕ ಸಿಕ್ಕ ರೈತರ ಪ್ರಾಣವನ್ನು ತೆಗೆಯುತ್ತಿವೆ. ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಹಾಗೂ ಕೆಲವು ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿದರು. ಪಾದಯಾತ್ರೆಯು ಚಂಗಡಳ್ಳಿ-ಯಸಳೂರು-ಮಾಗಲು-ಹರಿಹಳ್ಳಿ-ಕೆಂಚಮ್ಮನ ಹೊಸಕೋಟೆ-ಕುನಿಗನಹಳ್ಳಿಗೆ ತಲುಪಿ ಅಲ್ಲಿ ಬಹಿರಂಗ ಸಭೆ ಮಾಡಿ ನಂತರ ಮಂಜಿನ ಮೆರವಣಿಗೆ ಮೂಲಕ ಬಾಳ್ಳುಪೇಟೆಯಲ್ಲಿ ತಂಗಲಾಗುತ್ತದೆ ಎಂದರು. ತಾಲೂಕು ಪ್ರಧಾನ ಕಾರ್ಯದರ್ಶಿ ಸಂದೇಶ್, ಚಂದ್ರು, ಉದಯಕುಮಾರ್ ಹಾಗೂ ಇತರರು ಇದ್ದರು.