ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಆರೋಗ್ಯದೆಡೆ ಹೆಚ್ಚಿನ ಗಮನ ಹರಿಸಿ

Mainashree
Updated On : 6 Jan 2014, 9:27 am

ಕ.ಪ್ರ. ವಾರ್ತೆ  ಅರಸೀಕೆರೆ ಜ. 6
ಶ್ರೀಮಂತಿಕೆಯ ಬೆನ್ನು ಹತ್ತಿರುವ ಮನುಷ್ಯ ಕೇವಲ ಹಣ ಸಂಪಾದಿಸಲು ಹಗಲಿರುಳು ಎನ್ನದೇ ಶ್ರಮ ವಹಿಸಿ ದುಡಿಯುತ್ತಿದ್ದಾನೆ. ಆದರೆ ತನ್ನ ಆರೋಗ್ಯದ ಬಗ್ಗೆ ಗಮನ ನೀಡದ ಕಾರಣ ಅನೇಕ ಕಾಯಿಲೆಗಳಿಗೆ ಒಳಗಾಗುತ್ತಿದ್ದಾನೆ ಎಂದು ಮಾಡಾಳು ಶ್ರೀಗುರು ಶಿವಬಸವ ಕುಮಾರಾಶ್ರಮದ ಶ್ರೀತೊಂಟದಾರ್ಯ ಸ್ವಾಮೀಜಿ ವಿಷಾದಿಸಿದರು.
ತಾಲೂಕಿನ ಮಾಡಾಳು ಗ್ರಾಮದಲ್ಲಿ  ಶ್ರೀ ಗುರು ಶಿವಬಸವ ಕುಮಾರಾಶ್ರಮದಲ್ಲಿ ಲಿಂಗೈಕ್ಯ ಶ್ರೀನೀಲಾಲೋಚನ ಸ್ವಾಮೀಜಿಗಳ 21ನೇ ವರ್ಷದ ಪುಣ್ಯ ಸ್ಮರಣಾಧನೆ ಅಂಗವಾಗಿ ತುಮಕೂರು, ತಿಪಟೂರು ಹಾಗೂ ಕಡೂರು ರೋಟರಿ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಿದ್ದ ಉಚಿತ ನೇತ್ರಾ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ, ರಕ್ತ ಗುಂಪು ತಪಾಸಣೆ, ದಂತ ವೈದ್ಯಕೀಯ ಚಿಕಿತ್ಸೆ, ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಶ್ರೀಗಳು ಮಾತನಾಡಿದರು.
ಮನುಷ್ಯ ಪ್ರತಿನಿತ್ಯ ಕಷ್ಟಪಟ್ಟು ದುಡಿಯುವುದು ತಾನು ಮತ್ತು ತನ್ನ ಕುಟುಂಬ ಚೆನ್ನಾಗಿರಬೇಕೆಂಬ ಉದ್ದೇಶ ಹೊಂದಿದ್ದಾನೆ. ಆದರೆ, ಈ ಆಶಯದಿಂದ ಹಣವೇ ಮನುಷ್ಯನ ಎಲ್ಲ ಆಸೆಗಳನ್ನು ರೈಸುವ ಸಾಧನ ಎಂಬುದಾದರೆ ಹಣದಿಂದ ಆರೋಗ್ಯ ಭಾಗ್ಯವನ್ನು ಖರೀದಿಸಲು ಸಾಧ್ಯವಿಲ್ಲ. ತನ್ನ ಅವಶ್ಯಕತೆಗೆ ಹೆಚ್ಚು ಹಣ ದುಡಿಯುವ ಆಲೋಚನೆಯನ್ನು ಕೈ ಬಿಟ್ಟು ಧ್ಯಾನ, ಯೋಗ, ಭಜನೆ ಸತ್ಸಂಗ ಮಾಡುವ ಮೂಲಕ ಆರೋಗ್ಯ ಭಾಗ್ಯವನ್ನು ಪಡೆದುಕೊಳ್ಳಬಹುದು. ಆಗ ಮಾತ್ರ  ಮನುಷ್ಯ ಸುಖ, ಸಂತೋಷದಿಂದ ಯಾವ ರೋಗರುಜಿನಗಳಿಲ್ಲದೆ ನೆಮ್ಮದಿ ಜೀವನ ನಡೆಸಬಹುದು ಎಂದರು.
ಆಹಾರವೇ ವಿಷವಾಗಿದೆ: ರೋಟರಿ ಸಂಸ್ಥೆಯ ಅಧ್ಯಕ್ಷ ಪ್ರವೀಣ್ಕುಮಾರ್ ಮಾತನಾಡಿ ಆಧುನೀಕತೆ ಜೀವನಕ್ಕೆ ಮನುಷ್ಯ ಮಾರು ಹೋಗಿರುವ ಆರೋಗ್ಯದಿಂದ ದೀರ್ಘಕಾಲ ಬಾಳಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಇಂದು ನಾವು ಸೇವಿಸುತ್ತಿರುವ ಪ್ರತಿ ಆಹಾರ ಪದಾರ್ಥಗಳೂ ಸತ್ವ ರಹಿತವಾಗಿದ್ದು, ವಿಷಕಾರಕ ಪದಾರ್ಥಗಳೇ ಅವುಗಳಲ್ಲಿ ಹೆಚ್ಚುತ್ತಿವೆ ಎಂದರು.
ನಮ್ಮ ಪೂರ್ವಿಕರು ಸತ್ವಯುತ ಆಹಾರ ಸೇವಿಸುತ್ತಿದ್ದರು. ಆ ಕಾರಣ ಪ್ರತಿನಿತ್ಯ ಸೇವಿಸುವ ಆಹಾರ ಪದಾರ್ಥಗಳಲ್ಲಿಯೇ ಆರೋಗ್ಯಕ್ಕೆ ಅವಶ್ಯಕವಾದ ಔಷಧಿಗಳು ದೊರಕುತ್ತಿದ್ದವು. ಆದ್ದರಿಂದಲೇ ಅವರು ಆರೋಗ್ಯವಂತರಾಗಿ ಶತಾಯುಷಿಗಳಾಗಿ ಬದುಕುತ್ತಿದ್ದರು. ಆದರೆ ಇತ್ತೀಚಿನ ಫಾಸ್ಟ್ ಫುಡ್ ಜೀವನ ಶೈಲಿ ವಿವಿಧ ರೋಗಗಳನ್ನು ಆಹ್ವಾನಿಸುತ್ತಿದೆ ಎಂದು ಹೇಳಿದರು.
ಉಪ್ಪಿನಬೆಟಗೇರಿ ಮಠದ ಶ್ರೀಕುಮಾರ ವಿರೂಪಾಕ್ಷ ಸ್ವಾಮೀಜಿ ಮಾತನಾಡಿದರು. ತುಮಕೂರು ಸೆಂಟ್ರಲ್ ರೋಟರಿ ಅಧ್ಯಕ್ಷ ಪ್ರಕಾಶ್, ಕಡೂರು ರೋಟರಿ ಅಧ್ಯಕ್ಷ ಎಚ್.ಎಂ.ಶಿವಾನಂದಯ್ಯ. ಹುಳಿಯಾರು ರೋಟರಿ ಅಧ್ಯಕ್ಷ ರವೀಶ್, ತಿಪಟೂರು ರೋಟರಿ ಅಧ್ಯಕ್ಷ ನಟರಾಜು, ಸರ್ಕಾರಿ ಜೆ.ಸಿ.ಆಸ್ಪತ್ರೆ ವೈದ್ಯ ಪ್ರದೀಪ್ ರೋಟರಿ ಸಂಸ್ಥೆ ಮಾಜಿ ಅಧ್ಯಕ್ಷರಾದ ಬಿ.ಕೆ.ಯೋಗಿಶಾಚಾರ್, ಎನ್.ಜಿ.ಮಧು, ಶಾಂತಪ್ಪ ಮತ್ತಿತ್ತರಿದ್ದರು.
ನೂರಾರು ಗ್ರಾಮಸ್ಥರು ಈ ಶಿಬಿರದಲ್ಲಿ ಪಾಲ್ಗೊಂಡು ನಾನಾ ಕಾಯಿಲೆಗೆ ಸಂಬಂಧಿಸಿದಂತೆ ತಪಾಸಣೆ ಮಾಡಿಸಿಕೊಂಡರು. ಪ್ರತ್ಯೇಕ ಕೌಂಟರಿನಲ್ಲಿ ತಜ್ಞ ವೈದ್ಯರು ಶಿಬಿರಾರ್ಥಿಗಳಿಗೆ ತಪಾಸಣೆ ನಡೆಸಿ ಸಲಹೆ ಸೂಚನೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement