ಕಳಂಕಿತರ ವಿರುದ್ಧ ಬಿಜೆಪಿ ಕಹಳೆ
ಹಾಸನ: ಅಕ್ರಮಗಳಲ್ಲಿ ಭಾಗಿಯಾಗಿರುವ ಡಿ.ಕೆ.ಶಿವಕುಮಾರ್ ಹಾಗೂ ರೋಷನ್ ಬೇಗ್ಗೆ ಸಚಿವ ಸ್ಥಾನ ನೀಡಿರುವುದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು. ಅಕ್ರಮ ಗಣಿಗಾರಿಕೆ ವಿರುದ್ಧ ಬೆಂಗಳೂರಿನಿಂದ ಬಳ್ಳಾರಿಯವರೆಗೆ ಕುಣಿದು ನರ್ತನ ಮಾಡಿದ ಕಾಂಗ್ರೆಸ್ನವರು ಇವತ್ತು ಅದೇ ಅಕ್ರಮ ಗಣಿ ಆರೋಪಗಳನ್ನು ಹೊತ್ತಿರುವ ಡಿ.ಕೆ.ಶಿವಕುಮಾರ್ ಮತ್ತು ವಕ್ಫ್ ಆಸ್ತಿ ಅಕ್ರಮಗಳ ಆಪಾದನೆ ಎದುರಿಸುತ್ತಿರುವ ರೋಷನ್ ಬೇಗ್ ಅವರನ್ನು ಸಚಿವರನ್ನಾಗಿ ಮಾಡಿ ಅದೇ ಖಾತೆಯನ್ನು ನೀಡಿರುವುದು ಕಾಂಗ್ರೆಸ್ನ ನಿಜವಾದ ಸೋಗಲಾಡಿತವನ್ನು ಪ್ರತಿಬಿಂಬಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂತೋಷ್ ಲಾಡ್ರನ್ನು ಮಂತ್ರಿಮಂಡಲದಿಂದ ಹೊರ ಹಾಕಿ ಅತಿ ಹೆಚ್ಚಿನ ಭ್ರಷ್ಟಾಚಾರ ಆಪಾದನೆ ಇರುವ ಕಾರಣ ಸಂತೋಷ್ ಲಾಡ್ರಿಂದ ಸಚಿವ ಸ್ಥಾನಕ್ಕೆ ರಾಜಿನಾಮೆಯನ್ನು ಪಡೆಯಲಾಯಿತು. ಆದರೆ ಈಗ ಕಾಂಗ್ರೆಸ್ನವರು ಮತ್ತೆ ಅಕ್ರಮ ಗಣಿಗಾರಿಕೆಯಲ್ಲಿ ಪಾಲ್ಗೊಂಡಿರುವ ಡಿ.ಕೆ.ಶಿವಕುಮಾರ್ ಹಾಗೂ ಅಕ್ರಮವಾಗಿ ವಕ್ಫ್ ಆಸ್ತಿಯನ್ನು ಕಬಳಿಸುವಂಥ ರೋಷನ್ ಬೇಗ್ಗೆ ಸಚಿವ ಸ್ಥಾನವನ್ನು ನೀಡುವ ಮೂಲಕ ಭ್ರಷ್ಟಾಚಾರಕ್ಕೆ ಮತ್ತೆ ಕಾಂಗ್ರೆಸ್ನವರೇ ಎಡೆ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದರು.
ಭ್ರಷ್ಟಾಚಾರ ಹಾಗೂ ಅಕ್ರಮ ಗಣಿಗಾರಿಕೆಯ ವಿರುದ್ಧ ಹೋರಾಡುವುದಾಗಿ ಹೇಳಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೇತೃತ್ವದಲ್ಲಿ ಹಿಂದೆ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದ ಸಂದರ್ಭದಲ್ಲಿ ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಮಾಡುವ ಮೂಲಕ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿದ್ದರು. ಆದರೆ ಆಗ ಆವರೇ ತಮ್ಮ ಸಚಿವ ಸಂಪುಟಕ್ಕೆ ಇಬ್ಬರು ಅಕ್ರಮ ಎಸಗಿರುವಂಥವರನ್ನು ಸಚಿವ ಸ್ಥಾನ ನೀಡಿರುವುದು ನಾಚಿಗೇಡಿನ ಸಂಗತಿಯಾಗಿದೆ ಎಂದು ದೂರಿದರು.
ಇತರೆ ಪಕ್ಷಗಳು ಆಡಳಿತ ನಡೆಸುತ್ತಿರುವ ಸಂದರ್ಭದಲ್ಲಿ ಭ್ರಷ್ಟಾಚಾರ, ಅಗ್ರಮ ಗಣಿಗಾರಿಕೆಯ ವಿರುದ್ಧ ಹೋರಾಡುವಂತವರು ಭ್ರಷ್ಟಾಚಾರ ಎಸಗಿರುವಂಥವರಿಗೆ ಸಚಿವ ಸ್ಥಾನ ನೀಡಿರುವುದು ಹೇಯ ಕೃತ್ಯವಾಗಿದೆ. ಸಂತೋಷ್ ಲಾಡ್ರಿಂದ ರಾಜಿನಾಮೆ ಪಡೆದ ಮೇಲೆ ಆ ಸ್ಥಾನಕ್ಕೆ ಬೇರೆಯವರಿಗೆ ಸಚಿವ ಸ್ಥಾನ ನೀಡುಬೇಕಿತ್ತು. ಅದನ್ನು ಬಿಟ್ಟು ಅಕ್ರಮ ಎಸಗಿದವರಿಗೆ ಕಾಂಗ್ರೆಸ್ ಮಣೆ ಹಾಕಿದೆ ಎಂದು ಕಿಡಿಕಾರಿದರು. ಆದ್ದರಿಂದ ಮುಖ್ಯಮಂತ್ರಿಗಳು ಭ್ರಷ್ಟಾಚಾರ ವಿರೋಧಿಗಳು ಸ್ವಚ್ಛ ಎನ್ನುವವವರು ತಕ್ಷಣ ಡಿ.ಕೆ.ಶಿವಕುಮಾರ್ ಮತ್ತು ರೋಷನ್ ಬೇಗ್ರನ್ನು ಮಂತ್ರಿಮಂಡಲದಿಂದ ವಜಾಗೊಳಿಸಲು ರಾಜ್ಯಪಾಲರು ಮುಖ್ಯಮಂತ್ರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಪಟ್ಟು ಹಿಡಿದರು.
ಜಿಲ್ಲಾಧ್ಯಕ್ಷ ವೇಣುಕುಮಾರ್, ಮಾಜಿ ಅಧ್ಯಕ್ಷ ಕೃಷ್ಣೇಗೌಡ, ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ನವಿಲೆ ಅಣ್ಣಪ್ಪ, ಮುಖಂಡರಾದ ಎಚ್.ಎಸ್.ಕಿಶೋರ್ಗೌಡ, ಚನ್ನಕೇಶವ್, ಪ್ರಶಾಂತ್ ಹೊಸಮನೆ, ಎಚ್.ಎನ್.ನಾಗೇಶ್, ವೆಂಕಟಲಕ್ಷ್ಮೀ, ಪ್ರೇಮ, ಕುಮಾರ್, ಸಂತೋಷ್, ಕೆ.ಆರ್.ಹರ್ಷ, ವಿಜಯಕುಮಾರ್ ಇತರರು ಇದ್ದರು.