ಚುಚ್ಚುಮದ್ದು ನೀಡುವ ವೇಳೆ ಸೂಜಿ ಮುರಿದು ಹುಣ್ಣಾಗಿಸಿದ ವೈದ್ಯ!
ರಾಮನಾಥಪುರ: ಇಲ್ಲಿನ ಆಯುರ್ವೆದಿಕ್ ಆಸ್ಪತ್ರೆ ವೈದ್ಯಾಧಿಕಾರಿ ಚಿಕಿತ್ಸೆಗೆಂದು ಬಂದ ವೃದ್ಧೆ ಮಾಳಮ್ಮನಿಗೆ ಚುಚ್ಚುಮದ್ದು ನೀಡುವಾಗ ಸೂಜಿ ಮುರಿದು ದೇಹಸ್ಥಿತಿ ಗಂಭೀರವಾಗಿ ಉಲ್ಭಣಿಸಿದ ಘಟನೆ ನಡೆದಿದೆ. ವೈದ್ಯರ ನಿರ್ಲಕ್ಷ್ಯವೇ ಇದಕ್ಕೆ ಕಾರಣವೆಂದು ಬಂಧುಗಳಾದ ಕುಮಾರ್ ಮತ್ತು ಪಾರ್ವತಮ್ಮ ಆರೋಪಿಸಿದ್ದಾರೆ.
ಹಿರೆಹಳ್ಳಿ ಕೊಪ್ಪಲು ಗ್ರಾಮ ನಿವಾಸಿ ಮಾಳಮ್ಮ 75 ವರ್ಷದ ವೃದ್ಧೆ ಸಮೀಪದ ರಾಮನಾಥಪುರದ ಆಯುರ್ವೇದಿಕ್ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಿದ್ದರು. ಇಲ್ಲಿನ ಆಸ್ಪತ್ರೆ ವೈದ್ಯಾಧಿಕಾರಿ ಮೋಹನ್ ಎಂಬಾತ ಚುಚ್ಚುಮದ್ದು ಔಷಧಿ ನೀಡಿ ಕಳುಹಿಸಿದ್ದರು. ವಾರ ಕಳೆದರೂ ರೋಗ ವಾಸಿಯಾಗದೆ ಚುಚ್ಚುಮದ್ದು ಪಡೆದಿರುವ ಸೊಂಟದ ಬಳಿಯೂ ಗಂಟು ಉಂಟಾಗಿದೆ.
ವಾಪಸ್ ಆಸ್ಪತ್ರೆಗೆ ಬಂದ ವೃದ್ಧೆಯನ್ನು ಪರೀಕ್ಷಿಸಿದ ವೈದ್ಯರು ಅಂಥದ್ದೇನಿಲ್ಲ ಬಿಡಮ್ಮ. ಅವತ್ತು ಇಂಜೆಕ್ಷನ್ ಕೊಡುವಾಗ ಸ್ವಲ್ಪ ಸೂಜಿ ಮುರಿದು ಹೋಗಿದೆ ಅಷ್ಟೆ ಎಂದು ಗಂಟನ್ನು ಬ್ಲೇಡ್ನಿಂದ ಕೊಯ್ದು ಹೆಚ್ಚಿನ ಚಿಕಿತ್ಸೆ ನೀಡದೆ ಕಳುಹಿಸಿದ್ದಾರೆ. ಆದರೆ ಸೂಜಿ ಮುರಿದು ಹೊರತೆಗೆದ ಜಾಗ ಸೇರಿದಂತೆ ಅಂಗೈ ಅಗಲದಷ್ಟು ಜಾಗ ಮತ್ತೆ ಉಲ್ಭಣಿಸಿದೆ. ಸರಿಯಾಗಿ ಚಿಕಿತ್ಸೆ ನೀಡದೆ ಈ ರೀತಿ ಅವಘಡ ಸಂಭವಿಸಲು ಇಲ್ಲಿನ ವೈದ್ಯಾಧಿಕಾರಿ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ್ದಾರೆ.
ಹೆಸರಿಗೆ ಮಾತ್ರ ಸರ್ಕಾರಿ ಆಯುರ್ವೇದಿಕ್ ಆಸ್ಪತ್ರೆ. ಆದರೆ ಇಲ್ಲಿ ಚಿಕಿತ್ಸೆ ನೀಡುವುದು ಮಾತ್ರ ಇಂಗ್ಲಿಷ್ ಮೆಡಿಸಿನ್. ಬರುವ ರೋಗಿಗಳಿಂದ ಹೆಚ್ಚು ಚಿಕಿತ್ಸಾ ಶುಲ್ಕ ವಸೂಲು ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಇಷ್ಟಾದರೂ ಜಿಲ್ಲಾ ಹಿರಿಯ ಆಯುರ್ವೇದಿಕ್ ವೈದ್ಯಾಧಿಕಾರಿ ಯಾವುದೇ ಕ್ರಮ ಕೈಗೊಂಡಿಲ್ಲ.