ನಾಲೆ ಏರಿ ಒಡೆದು ಬತ್ತದ ಬೆಳೆ ಹಾನಿ
ಹೊಳೆನರಸೀಪುರ: ತಾಲೂಕಿನ ಕಡವಿನಕೋಟೆ ಗ್ರಾಮದ ರೈತರ ಭೂಮಿಗೆ ಹೇಮಾವತಿ ಎಡದಂಡೆ ನಾಲೆಯ ಏರಿ ಒಡೆದು ರೈತರ ಭೂಮಿಗೆ ನೀರು ನುಗ್ಗಿದ ಪರಿಣಾಮ ಅಪಾರ ಪ್ರಮಾಣದ ಬತ್ತದ ಬೆಳೆ ಸಂಪೂರ್ಣ ಮಣ್ಣುಪಾಲಾದ ಘಟನೆ ನಡೆದಿದೆ.
ರೈತರು ಭೂಮಿಯ ಬತ್ತದ ಪಸಲು ನೀರಿನಲ್ಲಿ ಕೊಚ್ಚಿ ಹೋಗಿರುವುದರಿಂದ ಅಪಾರ ಪ್ರಮಾಣದ ನಷ್ಟವುಂಟಾಗಿದೆ ಎಂದು ರೈತ ಮಂಜೇಗೌಡ ಅಳಲು ತೋಡಿಕೊಂಡಿದ್ದಾರೆ. ನಾಲೆಯ ಏರಿ ಒಡೆದ ವಿಷಯ ತಿಳಿದಿದ್ದರೂ ಹಳೇಕೋಟೆ ನೀರಾವರಿ ಎಂಜಿನಿಯರ್ ಸೊಮಯ್ಯ ಸ್ಥಳಕ್ಕೆ ಆಗಮಿಸದೆ ಬೇಜಾವ್ದಾರಿತನದಿಂದ ನಡೆದುಕೊಂಡಿದ್ದಾರೆ ಎಂದು ರೈತರು ದೂರಿದ್ದಾರೆ. ನಾಲೆಯ ಏರಿ ಒಡೆದಿದ್ದರಿಂದ ಸುಮಾರು ಹತ್ತು ಎಕರೆ ಪ್ರದೇಶದಲ್ಲಿ ಬೆಳೆದಿರುವ ಬತ್ತದ ಬೆಳೆ ನಾಶವಾಗಿದೆ. ಈ ಸಂಬಂಧ ತಾಲೂಕು ಆಡಳಿತ ನಷ್ಟಕ್ಕೆ ಒಳಗಾಗಿರುವ ರೈತರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.