ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸಿ: ರಾಜೇಶ್ವರಿ ಪೂರ್ಣಚಂದ್ರ ತೇಜಸ್ವಿ
ಜಾವಗಲ್: ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ವಿಜ್ಞಾನದ ಮೇಲೆ ಒಲವಿರುತ್ತದೆ. ಪ್ರಶ್ನೆ ಕೇಳುವ ಮೂಲಕ ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಬೇಕು. ಪರಿಸರ ಸಂರಕ್ಷಣೆ ಎಲ್ಲರ ಆದ್ಯ ಕರ್ತವ್ಯವಾಗಿದೆ. ಮಕ್ಕಳ ಹೃದಯದಲ್ಲಿ ಪರಿಸರ ಪ್ರಜ್ಞೆ ಮೂಡಿಸಬೇಕು ಎಂದು ರಾಜೇಶ್ವರಿ ಪೂರ್ಣಚಂದ್ರ ತೇಜಸ್ವಿ ತಿಳಿಸಿದರು.
ಜಾವಗಲ್ ಮಾಡೆಲ್ ಶಾಲೆಯಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ವರ್ಷದ ಹರ್ಷ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸಬೇಕು. ಮಕ್ಕಳ ಆಲೋಚನೆಗಳು ಉತ್ತಮವಾಗಿರಬೇಕು. ದೂರದರ್ಶನದ ವ್ಯಾಮೋಹ ಕಡಿಮೆ ಮಾಡಿ ಆಟೋಟಗಳಲ್ಲಿ ಭಾಗವಹಿಸಿ ಆರೋಗ್ಯವಂತರಾಗಿ, ದೈಹಿಕವಾಗಿ ಸದೃಡರಾಗಿ ಕಲೆ, ಸಾಹಿತ್ಯ, ವಿಜ್ಞಾನ ಸಂಸ್ಕೃತಿಗಳ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕೆಂದರು.
ಹಾಸನ ಎ.ವಿ.ಕೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಎಚ್.ಎಲ್. ಮಲ್ಲೇಗೌಡ ಮಾತನಾಡಿ, ಪ್ರಸ್ತುತ ಶಿಕ್ಷಣ ಕ್ಷೇತ್ರವು ಎಲ್ಲಾ ಪ್ರೋತ್ಸಾಹಗಳ ನಡುವೆಯೂ ಅನಾಥವಾಗಿದೆ. ಸರ್ಕಾರದ ಶ್ರಮ, ದಾನಿಗಳ ಶ್ರಮ, ಶಿಕ್ಷಣ ತಜ್ಞರ ಕಾಳಜಿ ಇದ್ದರೂ ಶಿಕ್ಷಣ ಕ್ಷೇತ್ರ ತಬ್ಬಲಿಯಾಗಿದೆ. ಅಪಾರ ಶಿಕ್ಷಣ ಸಂಸ್ಥೆಗಳು, ಶಿಕ್ಷಕರು, ವಿದ್ಯಾರ್ಥಿಗಳಿದ್ದರೂ ನಿರೀಕ್ಷಿತ ಗುರಿ ಸಾಧಿಸಲಾಗುತ್ತಿಲ್ಲ ಎಂದರು. ಚಿಕ್ಕಮಗಳೂರು ಕುವೆಂಪು ವಿದ್ಯಾನಿಕೇತನ ಟ್ರಸ್ಟ್ ಕಾರ್ಯದರ್ಶಿ ಶಂಕರ್ ಮಾತನಾಡಿ, ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಶಾಲೆ, ಪೋಷಕರ ಜವಾಬ್ಧಾರಿ ಸಮಾನವಾಗಿದೆ. ಮಕ್ಕಳು ಶಾಲೆಯಲ್ಲಿ ಕಲಿಯುತ್ತಿರುವುದರ ಬಗ್ಗೆ ಪೋಷಕರು ಆಲೋಚಿಸಬೇಕೆಂದರು.
ಸಂಸ್ಥೆಯ ಕಾರ್ಯದರ್ಶಿ ಡಾ. ಎಸ್.ವಿ. ನಾಯಕ ಮಾತನಾಡಿ, ವಿದ್ಯಾಥಿಗಳು ಅಂಕ ಗಳಿಸುವುದಕ್ಕೆ ಮಹತ್ವ ನೀಡದೇ ಬದುಕನ್ನು ಗೆಲ್ಲುವ ಶಕ್ತಿಯನ್ನು ಬೆಳೆಸಿಕೊಳ್ಳಬೇಕೆಂದರು.ಸಂಸ್ಥೆ ಉಪಾಧ್ಯಕ್ಷ ಎಸ್.ಬಿ ಮಹಾಲಿಂಗಸ್ವಾಮಿ ಪ್ರಾಂಶುಪಾಲ ಎಸ್.ಎಂ. ಮಲ್ಲೇಶಪ್ಪ ಮುಖ್ಯೋಪಾಧ್ಯಾಯ ಪ್ರಸನ್ನ ಕುಮಾರ್, ಶಿಕ್ಷಕರಾದ ರಾಜೇಶ್ವರಿ, ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಮಲ್ಲಮ್ಮ ಶೇಖರೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಸಂಯೋಜಕ ಯೋಗೀಶ್, ನಚಿಜಮ್ಮ ಸದಾಶಿವಪ್ಪ, ವೆಂಕಟೇಶ್ವರ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಹರ್ಷ ಇದ್ದರು.
ಕಳೆದ ಸಾಲಿನ ಎಸ್ಸೆಸ್ಸೆಲ್ಸಿಯಲ್ಲಿ ಶೇ.100ರಷ್ಟು ಫಲಿತಾಂಶ ದೊರಕಿಸಿಕೊಟ್ಟ ವಿದ್ಯಾರ್ಥ್ಥಿಗಳನ್ನು ಪುರಸ್ಕರಿಸಲಾಯಿತು. ಸಾಲುಮರದ ತಿಮ್ಮಕ್ಕ ಶಾಲಾ ಆವರಣದಲ್ಲಿ ಈ ಹಿಂದೆ ಸಸಿಗಳನ್ನು ನೆಟ್ಟಿದ್ದರ ನೆನಪಿಗಾಗಿ ಸಾಲುಮರದ ತಿಮ್ಮಕ್ಕ ಶಾಲಾ ಉದ್ಯಾನವನವನ್ನು ಸಾಹಿತಿ ರಾಜೇಶ್ವರಿ ಪೂರ್ಣಚಂದ್ರ ತೇಜಸ್ವಿ ಉದ್ಘಾಟಿಸಿದರು.