'ವಿದ್ಯಾರ್ಥಿಗಳು ಎಚ್ಐವಿ ಸೋಂಕಿನ ಬಗ್ಗೆ ಜಾಗೃತರಾಗಬೇಕು'
ಬೇಲೂರು: ಇತ್ತೀಚಿನ ದಿನಗಳಲ್ಲಿ ಶೋಕಿ ಜೀವನ ನಡೆಸುವುದಕ್ಕೋಸ್ಕರ ಕೆಲವರು ಅಡ್ಡ ದಾರಿ ಹಿಡಿದು ಎಚ್ಐವಿ ಸೋಂಕನ್ನು ಬಳುವಳಿಯಾಗಿ ಪಡೆಯುತ್ತಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ಎಚ್ಐವಿ ಸೋಂಕಿನ ಬಗ್ಗೆ ತಿಳಿದುಕೊಂಡು ಜಾಗೃತರಾಗಬೇಕು ಎಂದು ಹಾಸನ ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಜಿಲ್ಲಾ ಮೇಲ್ವಿಚಾರಕ ರವಿಕುಮಾರ್ ತಿಳಿಸಿದರು.
ಪಟ್ಟಣದ ವಿವೇಕಾನಂದ ಪದವಿ ಪೂರ್ವ ಕಾಲೇಜು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಏರ್ಪಡಿಸಿದ್ದ ರೆಡ್ ರಿಬ್ಬನ್ ಘಟಕದ ಉದ್ಘಾಟನೆ ಮತ್ತು ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಚನ್ನರಾಯಪಟ್ಟಣ ಮತ್ತು ಹಾಸನ ತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಏಡ್ಸ್ ರೋಗಿಗಳಿದ್ದಾರೆ. ನಂತರದಲ್ಲಿ ಸಕಲೇಶಪುರ ಮತ್ತು ಬೇಲೂರು ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಏಡ್ಸ್ ರೋಗಿಗಳು ಹೆಚ್ಚುತ್ತಿದ್ದಾರೆ. ಇದನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಮೀಪದ ಗುಪ್ತ ಸಮಾಲೋಚನ ಕೇಂದ್ರಕ್ಕೆ ತೆರಳಿ ಸಂಪೂರ್ಣವಾದ ಮಾಹಿತಿ ಪಡೆದುಕೊಳ್ಳಬಹುದು. ಪ್ರತಿಯೊಬ್ಬರು ಐಸಿಟಿಸಿ ಕೇಂದ್ರಕ್ಕೆ ತೆರಳಿ ಏಡ್ಸ್ ಬಗ್ಗೆ ಪರೀಕ್ಷೆ ಮಾಡಿಸಿಕೊಳ್ಳಬಹುದು ಎಂದರು. ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಕಾರ್ಯದರ್ಶಿ ಆರ್.ಎಸ್.ಸುಬ್ರಹ್ಮಣ್ಯ ಮಾತನಾಡಿ, ವಿದ್ಯಾರ್ಥಿಗಳು ಮೊದಲು ದುಶ್ಚಟಗಳಿಂದ ದೂರವಿದ್ದು ಮಾನಸಿಕವಾಗಿ ಸದೃಢರಾಗಿರಬೇಕು. ನಮ್ಮ ಜೀವನ ನಮ್ಮ ಕೈಯಲ್ಲಿರುವುದರಿಂದ ಯಾವುದೇ ರೀತಿಯ ಕೆಟ್ಟ ಆಕರ್ಷಣೆಗಳಿಗೆ ಒಳಗಾಗಬಾರದು ಎಂದರು. ಆಪ್ತ ಸಮಾಲೋಚಕಿ ಶಾಂತ ಮಾತನಾಡಿದರು. ಪ್ರಾಂಶುಪಾಲ ಶಿವಕುಮಾರ್, ಐಸಿಟಿಸಿ ಕೇಂದ್ರದ ರೇಣುಕಾಪ್ರಸಾದ್, ಪ್ರಾಧ್ಯಾಪಕರಾದ ಪ್ರಕಾಶ್, ಮಹೇಶ್ ಇತರರು ಇದ್ದರು.