ಸುದ್ದಿ ಸಂಕ್ಷೇಪ
ಮಹಿಳೆಯರಿಗೆ ಆರೋಗ್ಯ ತಿಳಿವಳಿಕೆ ಕಾರ್ಯಕ್ರಮ
ಹಾಸನ: ಮಹಿಳೆಯರು ತಮ್ಮ ಕುಟುಂಬದ ಬಗ್ಗೆ ಗಮನ ನೀಡುವ ಜತೆಗೆ ತಮ್ಮ ಆರೋಗ್ಯದ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸಬೇಕೆಂದು ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ.ಎ.ಸಾವಿತ್ರಿ ತಿಳಿಸಿದ್ದಾರೆ. ನಗರದ ಸಮೀಪ ಹರಳಹಳ್ಳಿ ಗ್ರಾಪಂಗೆ ಸೇರಿದ ಸರ್ಕಾರಿ ಶಾಲೆಯಲ್ಲಿ ಹರಳಹಳ್ಳಿ ಮತ್ತು ದಾಸರಕೊಪ್ಪಲು ಗ್ರಾಪಂ ಮತ್ತು ಹೇಮಾವತಿ ಮಹಿಳಾ ಸಂಘದ ವತಿಯಿಂದ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ ಮಹಿಳೆಯರಿಗಾಗಿ ಆರೋಗ್ಯ ತಿಳಿವಳಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾಯಿಲೆ ಬರುವುದು ಸಹಜ. ಆದರೆ ಕಾಯಿಲೆ ಬಾರದ ಹಾಗೇ ಮೊದಲೇ ಮುಂಜಾಗ್ರತೆ ಅನುಸರಿಸುವುದು ಮುಖ್ಯ ಎಂದರು. ಇದೇ ವೇಳೆ ಉಚಿತ ಆರೋಗ್ಯ ತಪಾಸಣೆ ಮಾಡಲಾಯಿತು. ಹರಳಹಳ್ಳಿ ಗ್ರಾಪಂ ಅಧ್ಯಕ್ಷೆ ಗುಣವತಿ, ಹೇಮಾವತಿ ಮಹಿಳಾ ಸಂಘದ ಅಧ್ಯಕ್ಷೆ ಪದ್ಮಶರ್ಮ, ಯುವತಿ ಮಂಡಳಿ, ಗ್ರಾಪಂ ಸದಸ್ಯೆ ಸರೋಜ ಇದ್ದರು.
ವ್ಯಾಪಾರದ ಅರಿವಿಗೆ ಮೆಟ್ರಿಕ್ ಮೇಳ ಅವಶ್ಯ
ಹೊಳೆನರಸೀಪುರ: ವಿದ್ಯಾರ್ಥಿ ಜೀವನದಲ್ಲಿಯೇ ವ್ಯಾಪಾರ ವಹಿವಾಟಿನ ಅರಿವು ಮೂಡಬೇಕಾದರೆ ಮಕ್ಕಳಿಗೆ ಮೆಟ್ರಿಕ್ ಮೇಳಗಳು ಅತ್ಯವಶ್ಯವೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಿವಮಾದಪ್ಪ ಹೇಳಿದರು.ತಾಲೂಕಿನ ಹಂಗರಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಮೆಟ್ರಿಕ್ ಮೇಳ, ಸೈಕಲ್ ವಿತರಣೆ ಹಾಗೂ ಹೊಸ ವರ್ಷಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ತಂದಿದ್ದ ಪದಾರ್ಥಗಳನ್ನು ಖರೀದಿ ಮಾಡುವ ಮೂಲಕ ಮೆಟ್ರಿಕ್ ಮೇಳಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ 8ನೇ ತರಗತಿ ಮಕ್ಕಳಿಗೆ ಸೈಕಲ್ ವಿತರಣೆ ಮಾಡಿ, ಸರ್ಕಾರ ವಿದ್ಯಾರ್ಥಿಗಳ ವ್ಯಾಸಂಗಕ್ಕಾಗಿ ಹಲವು ಯೋಜನೆಗಳನ್ನು ರೂಪಿಸಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿದ್ಯಾರ್ಥಿಗಳು ಮುಂದೆ ಬರಬೇಕಿದೆ ಎಂದರು. ತಾಪಂ ಮಾಜಿ ಅಧ್ಯಕ್ಷ ಎಚ್.ಆರ್.ಮುಕುಂದೇಗೌಡ ಸೈಕಲ್ ವಿತರಣೆ ಮಾಡಿ, ಸೈಕಲ್ ಪಡೆದ ಮಕ್ಕಳು ಸರ್ಕಾರ ನೀಡುವ ಸವಲತ್ತುಗಳನ್ನು ಪಡೆಯುವುದರ ಜತೆಗೆ ತಮಗೆ ವಿದ್ಯಾಭ್ಯಾಸಕ್ಕೆ ನೆರವಾದ ಶಾಲೆ ಮತ್ತು ಶಿಕ್ಷಕರಿಗೆ ಒಳ್ಳೆಯ ಹೆಸರು ತರುವಂತೆ ಶುಭ ಕೋರಿದರು. ಸಮಾರಂಭದಲ್ಲಿ ದ್ಯುತಿ ಚಾರಿಟೆಬಲ್ ಟ್ರಸ್ಟ್ನ ಡಾ.ಬಿ.ವಿ.ಚಿತ್ರ, ನಾಗೇಂದ್ರ, ಗ್ರಾಮದ ಮುಖಂಡ ಲಕ್ಷ್ಮಣ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೃಷ್ಣೆಗೌಡ, ರಂಗನಾಥ್ ಇದ್ದರು. ಶಾಲೆಯ ಮುಖ್ಯೋಪಾಧ್ಯಾಯ ವೈ.ಪರುಶರಾಮಪ್ಪ, ಮಧುಸೂಧನ್, ಮಂಜುಳ ಮತ್ತು ಧನಂಜಯ ಇತರರು ಇದ್ದರು.
ಹಲ್ಲೆ ಮಾಡಿದ ಆರೋಪಿಗಳ ಬಂಧನ
ಹಾಸನ: ಮರಳು ಲಾರಿ ತಡೆಯಲು ಯತ್ನಿಸಿ, ಪೊಲೀಸರ ಮೇಲೆ ನಡೆಸಿದ ಹಲ್ಲೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಜನವರಿ 2ರ ರಾತ್ರಿ ಸಮಾರು 11-40ರ ಸಮಯದಲ್ಲಿ ಬೇಲೂರು ಪಟ್ಟಣದ ಬಸವೇಶ್ವರ ಸರ್ಕಲ್ ಹತ್ತಿರ ಎರಡು ಕಾರುಗಳಲ್ಲಿ ಬಂದ ಬಿಕ್ಕೋಡಿನ ದಿನೇಶ್ ಹಾಗೂ ಬೇಲೂರಿನ ಕರ್ಣಸಾಗರ, ಅಗ್ಗಡಲಿನ ಸುನೀಲ್ ಮತ್ತು ಮಧು ಎಂಬವವರು ಕರ್ತವ್ಯದಲ್ಲಿದ್ದ ಪೇದೆ ಹನುಮಂತಪ್ಪನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಅಲ್ಲದೇ ಎದೆಗೆ ಹೊಡೆದು ಮರಳು ಲಾರಿ ತಡೆಯಲು ಬಂದರೆ ನಿನ್ನ ಮೇಲೆ ಲಾರಿ ಹತ್ತಿಸುವುದಾಗಿ ಬೆದರಿಕೆ ಹಾಕಿದ್ದಲ್ಲದೆ ಪೊಲೀಸರು ನಮ್ಮನ್ನು ಏನು ಮಾಡಲೂ ಸಾಧ್ಯವಿಲ್ಲ ಎಂದು ನಿಂದಿಸಿದ್ದಾರೆ ಎಂದು ಪೊಲೀಸ್ ಪೇದೆ ಹನುಮಂತಪ್ಪ ದೂರು ನೀಡಿದ್ದರು. ಸರ್ಕಾರಿ ಕೆಲಸಕ್ಕೆ ಅಡಚಣೆ ಮಾಡಿರುವ ಹಿನ್ನೆಲೆಯಲ್ಲಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ ಮೊಕದ್ದಮೆ ದಾಖಲಿಸಿದ್ದಾರೆ.