ಸುದ್ದಿ ಸಂಕ್ಷೇಪ
ರಾಮನಾಥಪುರದಲ್ಲಿ ತಿಂಗಳ ರಥೋತ್ಸವ
ಅರಕಲಗೂಡು: ತಾಲೂಕಿನ ರಾಮನಾಥಪುರದ ಪ್ರಸನ್ನ ಸುಬ್ರಹ್ಮಣ್ಯೇಶ್ವರ ಸ್ವಾಮಿ ತಿಂಗಳ ಜಾತ್ರೋತ್ಸವದ ಅಂಗವಾಗಿ ಶ್ರೀಗಳ ಬ್ರಹ್ಮರಥೋತ್ಸವದಲ್ಲಿ ಸಾವಿರಾರು ಜನ ಭಕ್ತರು ಪಾಲ್ಗೊಂಡು ಭಕ್ತಿ ಬಾವಗಳಿಂದ ಪೂಜೆ ಸಲ್ಲಿಸಿದರು. ಕಳೆದೊಂದು ತಿಂಗಳಿನಿಂದ ನಡೆದ ಜಾತ್ರೋತ್ಸವದ ಅಂಗವಾಗಿ ದೇವಾಲಯದಲ್ಲಿ ಹಲವು ವಿಶೇಷ ಪೂಜೆಗಳು ಮತ್ತು ಉತ್ಸವಗಳು ನಡೆದವು. ಸೋಮವಾರ ಮುಂಜಾನೆಯಿಂದಲೇ ಸಹಸ್ರಾರು ಭಕ್ತರು ಕಾವೇರಿ ನದಿಯಲ್ಲಿ ಮಿಂದು ದೇವರ ದರ್ಶನ ಪಡೆದರು. ಧಾರ್ಮಿಕ ವಿಧಿ-ವಿಧಾನದಂತೆ ವೇದ ಘೋಷಗಳೊಂದಿಗೆ ಅಭಿಷೇಕ, ಮಹಾ ಮಂಗಳಾರತಿ ನಡೆದವು. ಮಧ್ಯಾಹ್ನ 12 ಗಂಟೆಗೆ ಪುಷ್ಪಲಂಕಾರದಿಂದ ಕೂಡಿದ್ದ ರಥದ ಮೇಲೆ ದೇವರನ್ನು ಕೂರಿಸಿ ಸಾವಿರಾರು ಜನರ ಹರ್ಷೋದ್ಗಾರದೊಂದಿಗೆ ರಥವನ್ನು ಮುನ್ನಡೆಸಲಾಯಿತು. ರಾಜ್ಯದ ವಿವಿದೆಡೆಗಳಿಂದ ಆಗಮಿಸಿದ್ದ ಭಕ್ತು ರಥಕ್ಕೆ ಹಣ್ಣು ದವನ ಎಸೆದು ಕೃತಾರ್ಥರಾದರು. ರಥದ ಮೇಲೆ ಉತ್ಸವ ಕೂರಿಸುತ್ತಿದ್ದಂತೆ ಪ್ರತಿ ವರ್ಷದ ಪವಾಡ ಎನ್ನುವಂತೆ ಗರುಡ ಪಕ್ಷಿ ಆಕಾಶದೆತ್ತರದಲ್ಲಿ ರಥದ ಸುತ್ತ ಸುತ್ತುವರೆಯಿತು.
ಪುರಸಭೆ ದುರಾಡಳಿತ ಖಂಡಿಸಿ ಪ್ರತಿಭಟನೆ
ಚನ್ನರಾಯಪಟ್ಟಣ: ಹೆದ್ದಾರಿಗೆ ಅಡ್ಡಿಯಾಗಿದ್ದ ಪಟ್ಟಣದ ಪುರಸಭೆಯ ಮುಂಭಾಗದಲ್ಲಿದ್ದ ಕಟ್ಟಡದ ಸ್ವಲ್ಪ ಭಾಗವನ್ನು ತೆರವುಗೊಳಿಸಿ ಉಳಿದ ಪ್ರದೇಶದಲ್ಲಿ ಮಳಿಗೆ ನಿರ್ಮಿಸುತ್ತಿರುವುದನ್ನು ಖಂಡಿಸಿ ಪುರಸಭೆಯ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಧರಣಿ ಕೈಗೊಂಡಿದ್ದಾರೆ. ಹೆದ್ದಾರಿಗೆ ಅಡ್ಡಿಯಾಗಿದ್ದ ಹಳೆ ಪುರಸಭೆ ಕಚೇರಿಯ ಸ್ವಲ್ಪ ಭಾಗವನ್ನು ತೆರವುಗೊಳಿಸಿ ಉಳಿದ ಭಾಗದಲ್ಲಿ ಗೋಡೆ ನಿರ್ಮಾಣಕ್ಕೆ ಟೆಂಡರ್ ಕರೆದು ರಾತ್ರೋರಾತ್ರಿ ವಾಣಿಜ್ಯ ಮಳಿಗೆ ನಿರ್ಮಾಣ ಮಾಡುತ್ತಿರುವುದನ್ನು ಖಂಡಿಸಿ ಪುರಸಭಾ ಕಾಂಗ್ರೆಸ್ ಸದಸ್ಯರು ಧರಣಿ ಕೈಗೊಂಡಿದ್ದಾರೆ. ಪುರಸಭೆಯ ಸಾಮಾನ್ಯ ಸಭೆಯ ಗಮನಕ್ಕೆ ಬಾರದೆ ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಬಾರದೆಂದು ಸಭೆ ನಿರ್ಧರಿಸಿದ್ದರೂ ಅಧ್ಯಕ್ಷರು ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡುತ್ತಿರುವುದು ಖಂಡನೀಯ. ಈ ಬಗ್ಗೆ ಮಾಹಿತಿ ಕೇಳಿದರೆ ಮುಖ್ಯಾಧಿಕಾರಿಗಳು ಹಾರಿಕೆ ಉತ್ತರ ನೀಡುತ್ತಿರುವುದರಿಂದ ನ್ಯಾಯಕ್ಕಾಗಿ ಬೀದಿಗಿಳಿದು ಹೋರಾಟ ಕೈಗೊಂಡಿದ್ದೇವೆ ಎಂದು ಬಿ.ನಾಗರಾಜು ತಿಳಿಸಿದರು. ಪುರಸಭಾ ಮುಂಭಾಗದಲ್ಲಿ ಪಾರ್ಕ್ ನಿರ್ಮಾಣಕ್ಕೆ ಕಳೆದ ಎರಡು ವರ್ಷಗಳ ಹಿಂದೆ ಅಂಗೀಕರಿಸಿ ಟೆಂಡರ್ ಕರೆಯಲಾಗಿದೆ. ಅದನ್ನು ಉಲ್ಲಂಘಿಸಿ ಬಸ್ ಶೆಟರ್ ನಿರ್ಮಿಸುತ್ತಿದ್ದು, ಇದಕ್ಕೆ ಸಾಮಾನ್ಯ ಸಭೆಯಲ್ಲಿ ಒಪ್ಪಿಗೆ ಪಡೆಯದೆ ಜಾಗವನ್ನು ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಲಾಗಿದೆ. ಅಗತ್ಯವಿದ್ದಲ್ಲಿ ಪುರಸಭೆ ವತಿಯಿಂದಲೇ ಬಸ್ ಶೆಟರ್ ನಿರ್ಮಿಸಬಹುದಾಗಿತ್ತು ಎಂದು ಆರೋಪಿಸಿದರು.
ನುಗ್ಗೇನಹಳ್ಳಿ ವಿವಾದಿತ ಸ್ಥಳಕ್ಕೆ ಡಿಸಿ ಭೇಟಿ
ಚನ್ನರಾಯಪಟ್ಟಣ: ಗ್ರಾಪಂ ವಶದಲ್ಲಿರುವ ಆಸ್ತಿಯನ್ನು ವ್ಯಕ್ತಿಯೊಬ್ಬರು ಮಂಜೂರು ಮಾಡಿಸಿಕೊಂಡಿದ್ದಾರೆಂದು ನುಗ್ಗೇಹಳ್ಳಿ ಗ್ರಾಮಸ್ಥರು ಮಾಡಿದ ಆರೋಪದನ್ವಯ ಜಿಲ್ಲಾಧಿಕಾರಿ ಅನ್ಬುಕುಮಾರ್ ಅವರು ನುಗ್ಗೇಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಸ್ಥಳ ಪರಿಶೀಲನೆ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಶೋಭಾಜಯರಾಜು ಹಾಗೂ ಆಸ್ತಿ ಮಂಜೂರಾತಿ ಮಾಡಿಸಿಕೊಂಡಿರುವ ಜಿಪಂ ಮಾಜಿ ಅಧ್ಯಕ್ಷೆ ಮಹದೇವಮ್ಮಶಂಕರ್ ಸೇರಿದಂತೆ ಜಮೀನು ಮಂಜೂರು ಮಾಡಿಸಿಕೊಂಡಿರುವವರನ್ನು ಭೇಟಿ ಮಾಡಿ ಅಭಿಪ್ರಾಯ ಸಂಗ್ರಹಿಸಿದರು.
ಹೊಳೆನರಸೀಪುರ ಖಾಸಗಿ ಶಾಲೆಯ ವಿದ್ಯಾರ್ಥಿಗಳಿಗೆ 'ಉತ್ತಮ ವಿದ್ಯಾರ್ಥಿ' ಪುರಸ್ಕಾರ
ಹೊಳೆನರಸೀಪುರ: ಇಂದಿನ ವಿದ್ಯಾರ್ಥಿಗಳೇ ಭವಿಷ್ಯದ ಮುಂದೆ ದೇಶದ ಭವಿಷ್ಯ ರೂಪಿಸುವ ರೂವಾರಿಗಳಾಗಿ ಭದ್ರ ಬುನಾದಿಗೆ ಕಾರಣವಾಗಲಿದ್ದಾರೆ. ಇಂಥ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಸಲುವಾಗಿ ಪಟ್ಟಣದ ಖಾಸಗಿ ಶಾಲೆಯ ಹತ್ತು ವಿದ್ಯಾರ್ಥಿಗಳಿಗೆ 'ಉತ್ತಮ ವಿದ್ಯಾರ್ಥಿ' ಎಂದು ಗುರುತಿಸಿ ಎಲ್ಐಸಿ ಗೌರವಿಸುತ್ತಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ಪದ್ಮನಾಭ್ ಭಟ್ ಹೇಳಿದರು. ಪಟ್ಟಣದ ಎಲ್ಐಸಿಯ ಹೊಳೆನರಸೀಪುರ ಶಾಖೆ ವತಿಯಿಂದ ಪಟ್ಟಣ ಗ್ರೀನ್ವುಡ್ ಅಂಗ್ಲಮಾಧ್ಯಮ ಶಾಲೆ ಹಾಗೂ ವಾಸವಿ ವಿದ್ಯಾ ಸಂಸ್ಥೆಯ 1 ರಿಂದ 10ನೇ ತರಗತಿಯ ಮಕ್ಕಳಿಗೆ ಪ್ರತಿಯೊಂದೂ ತರಗತಿಯಲ್ಲಿ ಒಬ ವಿದ್ಯಾರ್ಥಿಯನ್ನು 'ಬೆಸ್ಟ್' ಎಂದು ಪರಿಗಣಿಸಿ ಪಾರಿತೋಷಕವನ್ನು ವಿತರಿಸಿ, ಮಾತನಾಡಿದರು. ಎಲ್ಐಸಿ ತನ್ನ 50ನೇ ಸವರ್ಣ ಮಹೋತ್ಸವ ಸಂಭ್ರಮಾಚರಣೆಯ ಸವಿ ನೆನಪಿಗಾಗಿ ಪದವಿ ಪೂರ್ವ ವಿದ್ಯಾರ್ಥಿಗಳಿಂದ ವಿದ್ಯಾರ್ಥಿಗಳಿಂದ ಹಿಡಿದು ವೃತ್ತಿ ಶಿಕ್ಷಣ ವಿದ್ಯಾರ್ಥಿಗಳವರೆಗೆ ದೇಶದ್ಯಾಂತ 4661 ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ ಎಂದರು. ಇದೇ ಸಂದರ್ಭದಲ್ಲಿ ಮಾತನಾಡಿದ ಕಿರಿಯ ಪ್ರಬಂಧಕ ಜವರಯ್ಯ ಎಲ್ಐಸಿ ವ್ಯಾಪಾರ ವ್ಯವಹಾರದ ಜತೆಯಲ್ಲಿಯೇ ಸಮಾಜ ಮುಖಿ ಕಾರ್ಯವನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಈ ನಿಟ್ಟಿನಲ್ಲಿ ದೇಶದ್ಯಾಂತ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಮಾಸಿಕ 1 ಸಾವಿರ ವಿದ್ಯಾರ್ಥಿ ವೇತನವನ್ನು ಸಂಸ್ಥೆ ಬಡ ಮಕ್ಕಳಿಗೆ ನೀಡುತ್ತಿದೆ ಎಂದರು. ಗ್ರೀನ್ವುಡ್ ಇಂಗ್ಲೀಷ್ ಶಾಲೆಯ ಮುಖ್ಯೋಪದ್ಯಾಯಿನಿ ಶ್ರೀಮತಿ ಮಂಜುಳಾ, ಎಲ್ಐಸಿ ಪ್ರತಿನಿಧಿ ರವೀಶ್, ಗ್ರೀನ್ವುಡ್ ಇಂಗ್ಲಿಷ್ ಶಾಲೆಯ ದೈಹಿಕ ಶಿಕ್ಷಕ ಕೆಂಪೇಗೌಡ ಮತ್ತಿತರರು ಇದ್ದರು.