ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಹೆಚ್ಚುವರಿ ಶುಲ್ಕಕ್ಕೆ ಪ್ರತಿಭಟನೆ ರಸೀದಿ!

Mainashree
Updated On : 6 Jan 2014, 9:28 am

ಕ.ಪ್ರ. ವಾರ್ತೆ  ಹಾಸನ ಜ. 6
ಪದವಿ ಪೂರ್ವ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಏರಿಕೆ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ನಗರದ ಹೇಮಾವತಿ ಪ್ರತಿಮೆಯಿಂದ ಮೆರವಣಿಗೆ ಪ್ರಾರಂಭಿಸಿ ಎನ್.ಆರ್.ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಬಂದು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾದ ನಂತರ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಒಂದಿಲ್ಲೊಂದು ತೊಂದರೆ ನೀಡುತ್ತಲೇ ಬಂದಿದೆ. ಇದೀಗ ರಾಜ್ಯಾದ್ಯಂತ ಪದವಿ ಪೂರ್ವ ವಿದ್ಯಾರ್ಥಿಗಳ ಶುಲ್ಕ ಏರಿಕೆ ಮಾಡುವುದರ ಮೂಲಕ ಬಡ ವಿದ್ಯಾರ್ಥಿಗಳಿಗೆ ತೀವ್ರ ಅನ್ಯಾಯ ಮಾಡಿದೆ. ಸರ್ಕಾರಿ ಕಾಲೇಜುಗಳಲ್ಲಿ ಕಾಲೇಜು ಶುಲ್ಕ ಕಲಾ ಮತ್ತು ವಾಣಿಜ್ಯ ವಿಭಾಗಗಳಿಗೆ 173, ವಿಜ್ಞಾನ ವಿಭಾಗಗಳಿಗೆ 243 ಹೆಚ್ಚುವರಿ ಶುಲ್ಕ ವಿಧಿಸಲಾಗಿದೆ.
ಅನುದಾನಿತ ಮತ್ತು ಅನುದಾನ ರಹಿತ ಖಾಸಗಿ ಕಾಲೇಜುಗಳಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗಗಳಿಗೆ 341, ವಿಜ್ಞಾನ ವಿಭಾಗಗಳಿಗೆ 411 ಹೆಚ್ಚುವರಿ ಶುಲ್ಕ ವಿಧಿಸಲಾಗಿದೆ. ಪರೀಕ್ಷಾ ಶುಲ್ಕ 50 ಹೆಚ್ಚಳಗೊಳಿಸಿದೆ. ಮಾತ್ರವಲ್ಲ ವಿದ್ಯಾರ್ಥಿಗಳಿಗೆ ವಿಳಂಬ ದಾಖಲಾತಿ ಶುಲ್ಕ, ರಿಪೀಟರ್ ಪರೀಕ್ಷಾ ಶುಲ್ಕ, ತಡವಾಗಿ ಶುಲ್ಕ ತುಂಬುವ ವಿದ್ಯಾರ್ಥಿಗಳಿಗೆ ದಂಡ ಶುಲ್ಕ, ವಿಶೇಷ ದಂಡ ಶುಲ್ಕದಲ್ಲಿ ಏರಿಕೆ ಮಾಡಲಾಗಿದೆ. ಖಾಸಗಿ ಕಾಲೇಜುಗಳಿಗೆ ವಿಧಿಸುವ ಕಾಲೇಜು ಪ್ರಾರಂಭಿಸುವ ಶುಲ್ಕ, ನೋಂದಣಿ ಶುಲ್ಕ, ಹೊಸ ವಿಷಯಗಳ ಪ್ರಾರಂಭಿಸುವ ಶುಲ್ಕ, ವಾರ್ಷಿಕ ನವೀಕರಣ ಶುಲ್ಕದಲ್ಲಿ ಹೆಚ್ಚಳ ಮಾಡಲಾಗಿದೆ. ಈ ಶುಲ್ಕವನ್ನು ಖಾಸಗಿ ಕಾಲೇಜುಗಳು ವಿದ್ಯಾರ್ಥಿಗಳಿಂದಲೇ ಸಂಗ್ರಹಿಸಿಕೊಡಬೇಕಾಗಿರುವುದರಿಂದ ಇದು ಕೂಡ ವಿದ್ಯಾರ್ಥಿಗಳಿಗೆ ಹೊರೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ಅದೇಶದಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ಡಿ.18, 2013ರಂದು ಸುತ್ತೋಲೆ ಹೊರಡಿಸಿದ್ದು, ಸುತ್ತೋಲೆಯಲ್ಲಿ ಉಲ್ಲೇಖಿಸಿದಂತೆ ಈ ರೀತಿ ಶುಲ್ಕ ಏರಿಕೆ ಮಾಡಲಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಅನೇಕ ಕಷ್ಟಗಳೊಂದಿಗೆ ವಿದ್ಯಾಭ್ಯಾಸ ಮಾಡುತ್ತಾರೆ. ಆರ್ಥಿಕ ಸಮಸ್ಯೆಗಳ ಕಾರಣಕ್ಕಾಗಿಯೇ ವಿದ್ಯಾರ್ಥಿಗಳು ಇಂದಿಗೂ ಸರ್ಕಾರಿ ಕಾಲೇಜುಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಓದುವವರ ಸಂಖ್ಯೆ ದೊಡ್ಡ ಪ್ರಮಾಣದಲ್ಲೇ ಇದೆ. ಬಡ ವಿದ್ಯಾರ್ಥಿಗಳಿಗೆ ಈ ಶುಲ್ಕ ತುಂಬಾ ಹೊರೆಯಾಗಿದೆ. ಅನೇಕ ಕಡು ಬಡತನದ ವಿದ್ಯಾರ್ಥಿಗಳು ಇದನ್ನು ತುಂಬಲಾಗದೆ ಶಿಕ್ಷಣದಿಂದ ವಂಚಿತರಾಗುವ ಸಾಧ್ಯತೆಗಳು ಇದೆ. ಆದ್ದರಿಂದ ಈ ರೀತಿ ಏಕಾಏಕಿ ಏರಿಸಿರುವ ಶುಲ್ಕವನ್ನು ಹಿಂತೆಗೆದುಕೊಳ್ಳಬೇಕು ಎಂದು ಆರೋಪಿಸಿದರು.
ಚುನಾವಣೆ ತಂತ್ರ: ಶಿಕ್ಷಣಕ್ಕೆ ಉತ್ತೇಜನ ನೀಡಲು ಸರ್ಕಾರ ಒಂದೆಡೆ ಅನೇಕ ಆಕರ್ಷಕ ಯೋಜನೆ ರೂಪಿಸುತ್ತಿದೆ. ಇವೆಲ್ಲವು ಚುನಾವಣಾ ತಂತ್ರವಷ್ಟೆ ಎನ್ನುವುದು ಸರ್ಕಾರದ ನಡೆಯಿಂದ ಸ್ಪಷ್ಟವಾಗುತ್ತಿದೆ.
ಬಡವರನ್ನು ಶಿಕ್ಷಣದಿಂದ ವಂಚಿತರನ್ನಾಗಿಸುವ ಹುನ್ನಾರ ನಿರಂತರವಾಗಿ ರಾಜ್ಯ ಸರ್ಕಾರ ನಡೆಸಿದೆ. ಸರ್ಕಾರಿ ಕಾಲೇಜುಗಳಲ್ಲಿ ಉಚಿತ ಶಿಕ್ಷಣ ಸಿಗುವ ಕಾರಣಕ್ಕಾಗಿ ಕೂಲಿ ಕಾರ್ಮಿಕರ ಮಕ್ಕಳು, ಕಡುಬಡವರು, ಬಡತನ ರೇಖೆಗಿಂದ ಕೆಳಗಿನವರು ಶಿಕ್ಷಣ ಪಡೆದುಕೊಳ್ಳಲು ಸಾಧ್ಯವಾಗುತ್ತಿದೆ.
ಆದರೆ ಈ ರೀತಿ ಶುಲ್ಕವನ್ನು ಏಕಾಏಕಿ ಏರಿಕೆ ಮಾಡಿರುವುದರಿಂದ ಇಂತಹ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಸಾಧ್ಯವಾಗುವುದಿಲ್ಲ ಎಂಬುದು ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಸರ್ಕಾರ ಬಡವರಿಗೆ ಆಕರ್ಷಕ ಯೋಜನೆ ರೂಪಿಸುವ ಸಲುವಾಗಿ ಬಡತನವನ್ನೇ ಘೋಷಿಸುವತ್ತಿದೆಯೇ ಎಂಬ ಅನುಮಾನ ಉಂಟಾಗಿದೆ ಎಂದು ಕಿಡಿಕಾರಿದರು. ಆದ್ದರಿಂದ ಸರ್ಕಾರ ತನ್ನ ಶಿಕ್ಷಣ ವಿರೋಧಿ, ಬಡವರ ವಿರೋಧಿ ನೀತಿಯನ್ನು ತಕ್ಷಣ ನಿಲ್ಲಿಸಬೇಕು. ಏರಿಸಿರುವ ಶುಲ್ಕವನ್ನು ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ಕಣಕಟ್ಟೆ ಮಂಜು, ಸಹ ಸಂಚಾಲಕ ಅಮಿತ್, ಬಿಂದು, ಮಾಧವ ತಿಲಕ್, ರಂಗನಾಥ್, ಯತಿರಾಜ್, ಅರುಣ್ಕುಮಾರ್, ಚಂದನ್, ಸುಜಯ್, ಮೋಹನ್, ಸಂತೋಷ್ಕುಮಾರ್, ಪ್ರವೀಣ್, ಕಿರಣ್ಕುಮಾರ್, ಮಂಜುನಾಥ್, ಪುರುಷೋತ್ತಮ್, ಕುಮಾರ್, ರಾಜು, ರಮೇಶ್ಕುಮಾರ್, ಆನಂದ್, ರಂಗನಾಥ್, ನವೀನ್, ಮೋಹನ್, ಸುರೇಶ್ ಕುಮಾರ್ ಹಾಗೂ ಇತರರು ಇದ್ದರು.
ಬೇಡಿಕೆಗಳೇನು?
-  ಸರ್ಕಾರಿ, ಖಾಸಗಿ ಅನುದಾನಿತ ಮತ್ತು ಖಾಸಗಿ ಅನುದಾನಿತ ರಹಿತ ಕಾಲೇಜುಗಳಲ್ಲಿ ಏರಿಸಿರುವ ಎಲ್ಲಾ ರೀತಿಯ ಶುಲ್ಕವನ್ನು ತಕ್ಷಣ ಹಿಂಪಡೆಯಬೇಕು
-  ಈಗಾಗಲೇ ವಿದ್ಯಾರ್ಥಿಗಳಿಂದ ವಸೂಲಿ ಮಾಡಿರುವ ಹೆಚ್ಚುವರಿ ಶುಲ್ಕವನ್ನು ವಿದ್ಯಾರ್ಥಿಗಳಿಗೆ ಹಿಂತಿರುಗಿಸಬೇಕು
-  ಸರ್ಕಾರ ವಿದ್ಯಾರ್ಥಿ ವಿರೋಧಿ ನೀತಿಯನ್ನು ನಿಲ್ಲಿಸಬೇಕು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement