ಅವಘಡವಾದರೆ ಹೊಣೆ ಯಾರು?
ಕ.ಪ್ರ.ವಾರ್ತೆ , ರಾಮನಾಥಪುರ , ಜ 7
ಕಳೆದ 2 ದಿನಗಳಿಂದ ರಾಮನಾಥಪುರ ಮತ್ತು ಸುತ್ತಮುತ್ತಲ ಗ್ರಾಮಗಳಿಂದ ಶಾಲಾ ಮಕ್ಕಳಿಗೆ ಚಲನಚಿತ್ರ ಪ್ರದರ್ಶನವನ್ನು ಬಸವಾಪಟ್ಟಣದ ಚಿತ್ರಮಂದಿರಕ್ಕೆ ಕರೆತರಲಾಗುತ್ತಿದ್ದು, ಈ ಎಲ್ಲಾ ವಿದ್ಯಾರ್ಥಿಗಳನ್ನು 3 ಚಕ್ರದ ಸುರಕ್ಷಿತವಲ್ಲದ ವಾಹನದಲ್ಲಿ ಕರೆತರಲಾಗುತ್ತಿದೆ. ಇದು ನೋಡುಗರಲ್ಲಿ ಆತಂಕವನ್ನುಂಟು ಮಾಡಿದೆ.
ದಾರಿ ಸರಿಯಿಲ್ಲ: ವಾಹನ ಸಾಗುವ ದಾರಿ ಸರಿಯಿಲ್ಲ. ಗುಂಡಿ ಬಿದ್ದ ರಸ್ತೆಗಳಲ್ಲಿ ತುಂಬಿಕೊಂಡು ಬಂದು ಹೋಗಲಾಗುತ್ತಿದೆ. ಇದು ಅಪಾಯಕ್ಕೆ ಆಹ್ವಾನ ನೀಡಿದಂತಾಗುತ್ತಿದೆ. ರಸ್ತೆ ಪೂರ್ತಿ ಗುಂಡಿಗಳಿಂದಲೇ ಮುಚ್ಚಿ ಹೋಗಿದೆ. ಇಂಥ ಕೆಟ್ಟ ರಸ್ತೆಯಲ್ಲಿ ಆಪೆ ವಾಹನದಲ್ಲಿ ಮಕ್ಕಳನ್ನು ತುಂಬಿಕೊಂಡು ಬರಲಾಗುತ್ತಿದೆ.
ಅಪಘಾತ ನಡೆಯಲೇಬೇಕಾ?: ನಮ್ಮಲ್ಲೊಂದು ಬೇಜಬಾವ್ದಾರಿ ವ್ಯವಸ್ಥೆಯಿದೆ. ಅಪಘಾತವೋ, ಅವಗಢವೋ ಸಂಭವಿಸುವವರೆಗೂ ಈ ಬಗ್ಗೆ ಎಷ್ಟೇ ಎಚ್ಚರಿಸಿದರೂ, ಯಾರೂ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಅಂಥ ಅವಗಢ ಸಂಭವಿಸಿದರೆ ಮಾತ್ರ ಎಲ್ಲೆಡೆ ಸಂಚಲನ ಮೂಡುತ್ತದೆ. ಎಲ್ಲಾ ರಾಜಕೀಯ ವ್ಯಕ್ತಿಗಳೂ, ಜನಪ್ರತಿನಿಧಿಗಳೂ ಸುರಕ್ಷತೆ ಬಗ್ಗೆ ಬೊಬ್ಬೆ ಹಾಕಲು ಶುರು ಮಾಡುತ್ತಾರೆ. ಅಧಿಕಾರಿ ವರ್ಗವಂತೂ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡವರಂತೆ ಕೆಲಸ ಮಾಡುತ್ತಾರೆ. ಆದರೆ, ಇಂಥಾ ಅಪಘಾತಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕೆಂಬ ಕಿಂಚಿತ್ತು ಜವಾಬ್ದಾರಿಯನ್ನು ಯಾರೂ ಮೊದಲೇ ವಹಿಸುವುದಿಲ್ಲ. ಇದೇ ಮಾತು ಈಗ ಬಸವಾಪಟ್ಟಣದ ಚಿತ್ರಮಂದಿರಕ್ಕೆ ಮಕ್ಕಳನ್ನು ಕರೆತರುವ ವಿಷಯಕ್ಕೂ ಅನ್ವಯಿಸುತ್ತದೆ.
ಅಪಘಾತವೇನಾದರೂ ಸಂಭವಿಸಿದಲ್ಲಿ ಇದಕ್ಕೆ ಹೊಣೆ ಯಾರು ? ಶಿಕ್ಷಕರೇ ? ಶಿಕ್ಷಣ ಇಲಾಖೆಯೇ ? ಸರ್ಕಾರವೇ ? ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡಲಾರಂಭಿಸಿದೆ. ಅಪಘಾತ ಸಂಭವಿಸಿದ ನಂತರ ಪರಿಹಾರವನ್ನು ನೀಡಬಹುದು. ಆದರೆ, ಹೋದ ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವೆ ?
ಈಗ ಆಗಬೇಕಾದ್ದೇನು?: ಈ ಬಗ್ಗೆ ಶಿಕ್ಷಣ ಇಲಾಖೆ ಎಚ್ಚೆತ್ತುಕೊಳ್ಳಬೇಕಿದೆ. ಆದಷ್ಟು ಬೇಗನೇ ಈ ಬಗ್ಗೆ ಕ್ರಮಕೈಗೊಂಡು ಸುರಕ್ಷಿತ ವಾಹನಗಳಲ್ಲೇ ವಿದ್ಯಾರ್ಥಿಗಳನ್ನು ಕರೆದುಕೊಂಡು ಚಿತ್ರಪ್ರದರ್ಶನ ವೀಕ್ಷಿಸಲು ಅನುವು ಮಾಡಿಕೊಡಬೇಕಿದೆ. ಇಲ್ಲವಾದರೆ, ಸಿನಿಮಾ ನೋಡಲು ಬರುವ ಮಕ್ಕಳು ಅಪಘಾತಕ್ಕೀಡಾದರೆ, ಅವರೇ ಸಿನಿಮಾವೊಂದಕ್ಕೆ ಕಥಾ ವಸ್ತುವಾಗಬಹುದಾದ ಅಪಾಯವಿದೆ.