ಬಸ್-ಕ್ಯಾಂಟರ್ ಡಿಕ್ಕಿ: ನಾಲ್ವರಿಗೆ ಗಾಯ
ಕ.ಪ್ರ.ವಾರ್ತೆ , ಹೊಳೆನರಸೀಪುರ , ಜ.7
ಮುಂದೆ ಹೋಗುತ್ತಿದ್ದ ಬಸ್ಸನ್ನು ಹಿಂದಿಕ್ಕಲು ಓವರ್ ಟೇಕ್ ಮಾಡುತ್ತಿದ್ದ ಕೆಎಸ್ಆರ್ಟಿಸಿ ಬಸ್ಸೊಂದು ಎದುರಿನಿಂದ ಬರುತ್ತಿದ್ದ ಕ್ಯಾಂಟರ್ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ನ ಚಾಲಕ ಸೇರಿದಂತೆ ನಾಲ್ವರಿಗೆ ತೀವ್ರ ಸ್ವರೂಪದ ಗಾಯಗಳಾದ ಘಟನೆ ಘಟನೆ ತಾಲೂಕಿನ ಹಳೇಕೋಟೆ ಬಳಿಯ ಹಾಸನ- ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಮಂಗಳವಾರ ಸಂಜೆ ಸಂಭವಿಸಿದೆ. ಗಾಯಗೊಂಡವರಲ್ಲಿ ಬಸ್ನ ಮೂವರು ಪ್ರಯಾಣಿಕರೂ ಸೇರಿದ್ದಾರೆ.
ಹೇಗಾಯ್ತು ಅಪಘಾತ?: ಮುಂದಿನ ನಿಲ್ದಾಣದಲ್ಲಿನ ಪ್ರಯಾಣಿಕರನ್ನು ಹತ್ತಿಸಿಕೊಳ್ಳಬೇಕೆನ್ನುವ ಭರದಲ್ಲಿ ಮೈಸೂರಿನಿಂದ ಚಿಕ್ಕಮಗಳೂರಿಗೆ ತೆರಳುತ್ತಿದ್ದ ಸಾರಿಗೆ ಬಸ್ನ ಚಾಲಕ ಮುಂದೆ ಹೋಗುತ್ತಿದ್ದ ಬಸ್ಸನ್ನು ಹಿಂದಿಕ್ಕಲು ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ರಸ್ತೆಯ ಬಲಭಾಗವನ್ನು ಹೆಚ್ಚು ಆಕ್ರಮಿಸಿಕೊಂಡು ಓವರ್ ಟೇಕ್ ಮಾಡುತ್ತಿದ್ದ ಸಂದರ್ಭದಲ್ಲಿ ಹಾಸನದ ಕಡೆಯಿಂದ ಬಟ್ಟೆಯ ಲೋಡನ್ನು ತುಂಬಿಕೊಂಡು ಮೈಸೂರಿಗೆ ತೆರಳುತ್ತಿತ್ತು ಎನ್ನಲಾದ ಕ್ಯಾಂಟರ್ಗೆ ಡಿಕ್ಕಿ ಹೊಡೆದ ರಭಸಕ್ಕೆ ಬಸ್ನ ಬಲಬದಿಯ ಮುಂಭಾಗ ಸಂಪೂರ್ಣ ನಜ್ಜುಗೊಜ್ಜಾಗಿದೆ.
ಕ್ಯಾಂಟರ್ಗೆ ಡಿಕ್ಕಿ ಹೊಡೆಯುವ ಸಂಭವವನ್ನು ತಪ್ಪಿಸಲು ಬಸ್ನ ಚಾಲಕ ಪ್ರಯತ್ನಿಸಿದ್ದು, ವಾಹನವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವಷ್ಟರಲ್ಲಿ ಬಸ್ ಕ್ಯಾಂಟರ್ನ ಹಿಂಬದಿಯ ಬಲಭಾಗಕ್ಕೆ ಡಿಕ್ಕಿ ಹೊಡೆದಿದೆ. ಈ ರಭಸಕ್ಕೆ ಕ್ಯಾಂಟರ್ ರಸ್ತೆಯ ಬದಿಯಲ್ಲಿ ಉರುಳಿ ಬಿದ್ದಿದೆ. ಆದರೂ ಕ್ಯಾಂಟರ್ನ ಚಾಲಕ ಹಾಗೂ ಕಂಡಕ್ಟರ್ಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಆದರೆ ಅಪಘಾತದ ರಭಸಕ್ಕೆ ಬಸ್ನ ಮುಂಬದಿಯ ಬಲಭಾಗಕ್ಕೆ ಹೆಚ್ಚು ಹಾನಿಯಾಗಿದ್ದು, ಬಸ್ ಚಾಲಕನ ಕಾಲಿಗೆ ತೀವ್ರ ಗಾಯವಾಗಿದೆ. ನಿರ್ವಾಹಕ, ಹಾಗೂ ಪ್ರಯಾಣಿಕರಿಗೂ ಗಾಯಗಳಾಗಿವೆ.
ಅಪಘಾತ ನಡೆದ ಕೂಡಲೇ ಎದುರಿನಲ್ಲಿಯೇ ಇದ್ದ ಹಳೇಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಗಾಯಾಳುಗಳನ್ನು ಸಾಗಿಸಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.