ವೃದ್ಧಾಶ್ರಮಗಳು ಹೆಚ್ಚಾದಲ್ಲಿ ಸಮಾಜಕ್ಕೆ ಮಾರಕ
ಕ.ಪ್ರ.ವಾರ್ತೆ , ಬೇಲೂರು , ಜ. 7
ಪ್ರಸಕ್ತ ದಿನಮಾನದಲ್ಲಿ ವೃದ್ಧರ ಬಗ್ಗೆ ಕಡೆಗಣನೆ ಹಿನ್ನೆಲೆಯಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ. ಇದು ಹೆಚ್ಚಾದಲ್ಲಿ, ಸದೃಢ ಸಮಾಜದ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎಂದು ಲಯನ್ ಸಂಸ್ಥೆ ಜಿಲ್ಲಾ ಉಪರಾಜ್ಯಪಾಲ ಮಂಜುನಾಥಮೂರ್ತಿ ಕಳವಳ ವ್ಯಕ್ತ ಪಡಿಸಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಬೇಲೂರು ಲಯನ್ಸ್ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಹಿರಿಯ ನಾಗರಿಕರ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೀನ ಸ್ಥಿತಿಗೆ ಬರುತ್ತೆ: ವಿದೇಶಿ ಸಂಸ್ಕೃತಿಯ ಪ್ರಭಾವದಿಂದ ಮತ್ತು ಮಕ್ಕಳಿಗೆ ನೈತಿಕ ಶಿಕ್ಷಣ ನೀಡದ ಹಿನ್ನೆಲೆಯಲ್ಲಿ ಅವಿಭಕ್ತ ಕುಟುಂಬಗಳು ಇಂದು ಛಿದ್ರವಾಗಿ ವಿಭಕ್ತ ಕುಟುಂಬಗಳಾಗುತ್ತಿವೆ. ಕುಟುಂಬ ಆಧಾರಸ್ತಂಭಗಳಾದ ತಂದೆ- ತಾಯಿರನ್ನು ಸಾಕುವ ಕನಿಷ್ಟ ಸೌಜನ್ಯ ಇಂದಿನ ಜನರಿಗೆ ಇಲ್ಲವಾಗಿದೆ. ಈ ದಿಸೆಯಲ್ಲಿ ಕಿಮೀ ಒಂದರಂತೆ ವೃದ್ಧಾಶ್ರಮ ಹುಟ್ಟುಕೊಳ್ಳುತ್ತವೆ. ಈ ಪರಿಸ್ಥಿತಿ ಮುಂದೆ ಹೋದ ಪಕ್ಷದಲ್ಲಿ ಸಮಾಜ ಹೀನ ಸ್ಥಿತಿಗೆ ಇಳಿಯುತ್ತದೆ ಎಂದರು.
ಕೆಟ್ಟ ಪರಿಣಾಮ: ಬೇಲೂರು ಲಯನ್ಸ್ ಸಂಸ್ಥೆ ಅಧ್ಯಕ್ಷ ಪೂವಯ್ಯ ಮಾತನಾಡಿ, ಹುಟ್ಟಿದ ಮನುಷ್ಯನಿಗೆ ಪ್ರಾಯ ಮುಪ್ಪು ಸಹಜ. ಅದರೆ ಕೆಲವರು ಈ ಸಂದೇಶವನ್ನು ತಿಳಿದು ಬಾಳುವಲ್ಲಿ ವಿಫಲರಾಗಿದ್ದಾರೆ. ಭಾರತ ದೇಶ ಹಲವು ಸಂಸ್ಕತಿಯಿಂದ ಕೂಡಿದ ವೈವಿಧ್ಯತೆಯ ಬೀಡು. ಇಲ್ಲಿ ಹಿರಿಯರಿಗೆ ಗೌರವ ನೀಡುವಂಥ ವಾತಾವರಣ ವಿದೇಶಗಳಲ್ಲಿಲ್ಲ. ಆದರೆ ಇಂದು ಭಾರತದಲ್ಲಿ ಹಿರಿಯ ನಾಗರಿಕರ ಕಡೆಗಣನೆ ಹೆಚ್ಚಳವಾಗಿದ್ದು, ಇದರಿಂದ ಮುಂದೆ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದರು.
ಈ ದಿಸೆಯಲ್ಲಿ ಬೇಲೂರು ಲಯನ್ಸ್ ಸಂಸ್ಥೆ ಹಿರಿಯ ನಾಗರಿಕರ ಬಗ್ಗೆ ಸಮಾಜದಲ್ಲಿ ಗೌರವ ಮೂಡಿಸಲು ಮತ್ತು ವೃದ್ಧರಿಗೆ ಅತ್ಮ ವಿಶ್ವಾಸ ಮೂಡಿಸುವ ಹಿನ್ನಲೆಯಲ್ಲಿ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಅವರಿಗೆ ಸಂಸ್ಥೆಯಿಂದ ಲಭ್ಯ ಇರುವ ಆರೋಗ್ಯ ಇನ್ನು ಮುಂತಾದ ಹಲವು ಕಾರ್ಯಗಳನ್ನು ಮಾಡಲಾಗುತ್ತದೆ. ಹಿರಿಯ ಜೀವಿಗಳ ನಾಡಿನ ಅಸ್ತಿ ಅವರನ್ನು ರಕ್ಷಣೆ ನಮ್ಮೆಲ್ಲರ ಮೂಲ ಕರ್ತವ್ಯ ಎಂದು ಮಂಜುನಾಥ್ ತಿಳಿಸಿದರು.
ಎಚ್ಚರ: ಲಯನ್ಸ್ ಸಂಸ್ಥೆ ರಾಜ್ಯಪಾಲ ಕಾರ್ಯದರ್ಶಿ ಹರೀಶ್ ಚಿಕ್ಕಮಗಳೂರು ಮಾತನಾಡಿ, ಬೆಳೆದ ಮಕ್ಕಳಿಗೆ ಪೋಷಕರು ಮಾಡಿರುವ ಆಸ್ತಿ ಮೇಲೆ ಇರುವ ವ್ಯಾಮೋಹ ಪೋಷಕರ ಮೇಲೆ ಇರುವುದಿಲ್ಲ. ಆದ್ದರಿಂದ ಮಕ್ಕಳಿಗೆ ಅಸ್ತಿ ಭಾಗ ಮಾಡುವಾಗ ಹಿರಿಯ ನಾಗರಿಕರು ಎಚ್ಚರ ವಹಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಲಯನ್ಸ್ ಸಂಸ್ಥೆ ಕಾರ್ಯದರ್ಶಿ ರಮೇಶ್ ಕುಮಾರ್, ಖಜಾಂಚಿ ಸುರೇಶ್, ಡಾ. ಚಂದ್ರಮೌಳಿ, ಡಾ. ಸಂತೋಷ್, ವೃತ್ತ ನಿರೀಕ್ಷಕ ಗಣೇಶ್, ಕೆನಾರ ಬ್ಯಾಂಕ್ ವ್ಯವಸ್ಥಾಪಕ ಉಡುಪ, ರವಿಕುಮಾರ್, ವಸಂತಕುಮಾರ್, ಚೇತನ್ ಕುಮಾರ್, ತೌಫಿಕ್, ತಾಲ್ಲೂಕು ಪಂಚಾಯಿತಿ ಸದಸ್ಯ ಸುಭಾನ್ ಇತರರು ಇದ್ದರು.
ಇದೇ ಸಂದರ್ಭದಲ್ಲಿ ಹಿರಿಯ ನಾಗರಿಕರ ಕ್ರೀಡಾಕೂಟ ಏರ್ಪಡಿಸಲಾಗಿತ್ತು.