ಸೆಮಿಸ್ಟರ್ ಪದ್ಧತಿ ಕೈ ಬಿಡಲು ಹೋರಾಟ
ಹಾಸನ: ಐಟಿಐನಲ್ಲಿ ಸೆಮಿಸ್ಟರ್ ಪದ್ಧತಿಯನ್ನು ಕೈ ಬಿಡಲು ಆಗ್ರಹಿಸಿ ಜ.8ರಿಂದ ಹೋರಾಟ ಆರಂಭವಾಗಲಿದೆ ಎಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ತಿಳಿಸಿದೆ. ಪ್ರಸಕ್ತ ತರಬೇತಿಯ ಪಠ್ಯಕ್ರಮದ ಬಗ್ಗೆ ಶಿಕ್ಷಕರ ತರಬೇತಿಯ ಬಗ್ಗೆ ಯಾವುದೇ ಪೂರ್ವ ತಯಾರಿಯನ್ನೂ ನಡೆಸದೇ ಇದ್ದ ರಾಜ್ಯ ಡಿಇಟಿ ಈಗ ಜನವರಿ ಅಥವಾ ಫೆಬ್ರವರಿಯಲ್ಲಿ ಪರೀಕ್ಷೆಯ ತಯಾರಿಯಲ್ಲಿ ತೊಡಗಿ, ರಾಜ್ಯಾದ್ಯಂತ ಐಟಿಐ ವಿದ್ಯಾರ್ಥಿಗಳಲ್ಲಿ ತೀವ್ರ ಆತಂಕ ಸೃಷ್ಟಿಸಿದೆ ಎಂದು ಅಧ್ಯಕ್ಷ ರಾಮಾಂಜನಪ್ಪ ತಿಳಿಸಿದ್ದಾರೆ.
ರಾಜ್ಯ ಸಮಿತಿ ನಿರ್ಧಾರ: ಈ ನಿಟ್ಟಿನಲ್ಲಿ ಐಟಿಐ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಿರುವ ಸೆಮಿಸ್ಟರ್ ಪದ್ಧತಿಯ ವಿರುದ್ಧ ಹೋರಾಟವನ್ನು ಇನ್ನು ಉನ್ನತ ಹಂತಕ್ಕೆ ಕೊಂಡೊಯ್ದು, ಮುಂದುವರಿಸುವ ಉದ್ದೇಶದಿಂದ ಜ. 8ರಿಂದ ನಾನಾ ರೀತಿಯ ಚಳವಳಿಗಳನ್ನು ನಡೆಸಲು ಎಐಡಿವೈಓ ರಾಜ್ಯ ಸಮಿತಿ ನಿರ್ಧರಿಸಿದೆ ಎಂದು ಹೇಳಿದ್ದಾರೆ.
ಹಲವು ರೀತಿಯಲ್ಲಿ ಪ್ರತಿಭಟನೆ: ಜ.8 ರಂದು ರಾಜ್ಯಾದ್ಯಂತ ಐಟಿಐ ತರಬೇತಿಯ ತರಗತಿ ಬಹಿಷ್ಕಾರ ಹೋರಾಟವನು ಹಮ್ಮಿಕೊಳ್ಳಲಾಗಿದೆ. ಜಿಲ್ಲಾಧಿಕಾರಿಗಳ ಕಚೇರಿಗಳ ಬಳ ಪ್ರತಿಭಟನೆ ಮತ್ತು ಧರಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಐಟಿಐ ವಿದ್ಯಾರ್ಥಿಗಳ ಆತಂಕಕ್ಕೆ ಸರ್ಕಾರವು ಸ್ಪಂದಿಸಿ, ಸೆಮಿಸ್ಟರ್ ಪದ್ಧತಿಯನ್ನು ಕೈ ಬಿಡದಿದ್ದಲ್ಲಿ ಹೋರಾಟದ ನಾನಾ ಸ್ವರೂಪಗಳನ್ನೂ ಚಳವಳಿಗಳಲ್ಲಿ ಅಳವಡಿಸಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಐಟಿಐ ವಿದ್ಯಾರ್ಥಿಗಳು ಎಚ್ಚರ ತಪ್ಪದೇ ಹೋರಾಟಕ್ಕೆ ಸದಾ ಸನ್ನದ್ಧರಾಗಬೇಕು. ಐಟಿಐ ವಿದ್ಯಾರ್ಥಿ ವಿರೋಧಿ, ಅವೈಜ್ಞಾನಿಕ ಸೆಮಿಸ್ಟರ್ ಪದ್ಧತಿ ರದ್ದಾಗುವವರೆಗೂ ವಿಶ್ರಮಿಸಬಾರದು ಎಂದು ಅವರು ಕರೆ ನೀಡಿದ್ದಾರೆ.