ಹೊಸಳ್ಳಿಯ ಹಳೇ ಸಮಸ್ಯೆಗಳು
ಕ.ಪ್ರ.ವಾರ್ತೆ , ರಾಮನಾಥಪುರ , ಜ.7
ಈ ಹೋಬಳಿಯ ಜೆ. ಹೊಸಹಳ್ಳಿ ಗ್ರಾಮವನ್ನು ಹಿಂದುಳಿದ ಮತ್ತು ಶೀತಪೀಡಿತ ಪ್ರದೇಶವೆಂದು ಘೋಷಿಸಿ ಸರ್ಕಾರ ಪುನರ್ವಸತಿ ಕಲ್ಪಿಸಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯಕ್ಕೊಳಗಾಗಿ 6 ವರ್ಷಗಳಿಂದ ಸರಿಯಾದ ಮೂಲಭೂತ ಸೌಲಭ್ಯವನ್ನು ಪಡೆಯದೆ ಇಲ್ಲಿನ ಗ್ರಾಮಸ್ಥರು ಕಂಗಾಲಾಗಿದ್ದಾರೆ.
ಸಮೀಪದ ಗಂಗೂರು ಪಂಚಾಯಿತಿ ವ್ಯಾಪ್ತಿಗೆ ಬರುವ ಜೆ. ಹೊಸಹಳ್ಳಿ ಗ್ರಾಮವನ್ನು ಹಿಂದುಳಿದ ಮತ್ತು ಶೀತಪೀಡಿತ ಪ್ರದೇಶವೆಂದು ಗುರುತಿಸಿ, 2005ರಲ್ಲಿ ಇಲ್ಲಿನ ಸ್ಥಳಾಂತರಗೊಂಡ ಗ್ರಾಮಸ್ಥರಿಗೆ ಒಟ್ಟು 160 ನಿವೇಶನಗಳನ್ನು ನಕ್ಷೆಯ ಮೇಲೆ ಮಂಜೂರು ಮಾಡಲಾಗಿದೆ. ಇದರಲ್ಲಿ 129 ನಿವೇಶನಗಳಿಗೆ ಮಾತ್ರ 25-03-2007ರಲ್ಲಿ ಹಕ್ಕು ಪತ್ರ ನೀಡಿದ್ದು, ಇನ್ನುಳಿದ 31 ನಿವೇಶನಗಳನ್ನು ಹಂಚಿರುವುದಿಲ್ಲ.
ಏತನ್ಮಧ್ಯೆ, ಇಲ್ಲಿನ ಪುನರ್ವಸತಿ ನಿವೇಶನ ಹಂಚಿಕೆಯಲ್ಲಿ ಮತ್ತು ಇಲ್ಲಿನ ರಸ್ತೆ ನಿರ್ಮಿಸುವಲ್ಲಿ ರಾಜಕೀಯ ತಾರತಮ್ಯ ತೋರಿ, ಕೆಲವು ಕಡೆ ರಸ್ತೆ ಸಾಕಷ್ಟು ಕಿರಿದಾಗಿಸಿ ಹಾಗೂ ನಿವೇಶನ ಪಡೆದ ಕೆಲವರಿಗೆ 75 ್ಢ 40 ವಿಸ್ತೀರ್ಣದ ನಿವೇಶನ ನೀಡಿ ಮತ್ತು ಕೆಲವರಿಗೆ 60 ್ಢ 40 ವಿಸ್ತೀರ್ಣದ ನಿವೇಶನ ನೀಡಿದ್ದು, ಇದರಲ್ಲಿ ಕೆಲವು ಸ್ಥಳೀಯ ರಾಜಕೀಯ ಪುಡಾರಿಗಳ ಜೊತೆ ಸೇರಿ ಹಾರಂಗಿ ಪುನರ್ವಸತಿ ಉಪವಿಭಾಗ ಕಾರ್ಯಪಾಲಕರು ನಡೆಸಿರುವ ಈ ಕೆಲಸ, ಇವರ ಆಡಳಿತ ದಕ್ಷತೆ ಮತ್ತು ಪ್ರಾಮಾಣಿಕತೆಗೆ ಹಿಡಿದ ಕನ್ನಡಿ.
ಬುಡ್ಡಿ ದೀಪವೇ ಗತಿ: ಸದ್ಯಕ್ಕೆ ಹಂಚಿಕೆಯಾಗಿರುವ ನಿವೇಶನಗಳಲ್ಲಿ ಪರಿಶಿಷ್ಠರಿಗೆ 24 ನಿವೇಶನ ನೀಡಲಾಗಿದ್ದು, ಅದರಲ್ಲಿ 12 ಜನ ಮನೆ ಕಟ್ಟಿದ್ದಾರೆ. ಮಿಕ್ಕವರು ಮನೆ ನಿರ್ಮಿಸುವ ಹಂತದಲ್ಲಿದ್ದಾರೆ. ಮುಂದುವರೆದ ವರ್ಗದವರ ಮನೆಗಳೂ ಸೇರಿದಂತೆ ಇಲ್ಲಿ ಒಟ್ಟು 70 ಮನೆಗಳಿದ್ದು, ಅದರಲ್ಲಿ ಪರಿಶಿಷ್ಟರ 20 ಮನೆಗಳು ಮಾತ್ರ 6 ವರ್ಷಗಳಿಂದ ವಿದ್ಯುತ್ ಸಂಪರ್ಕವಿಲ್ಲದೇ ಸೀಮೆಎಣ್ಣೆ ಬುಡ್ಡಿ ದೀಪದಲ್ಲಿ ದಿನನಿತ್ಯ ಜೀವನ ನಡೆಸುವ ಪರಿಸ್ಥಿತಿ ಇದೆ.
ಅಧಿಕಾರಿಗಳ ನಿರ್ಲಕ್ಷ್ಯ: ಇಲ್ಲಿ ರಾಜಕೀಯವಾಗಿ ಶಿಫಾರಸ್ಸು ಪಡೆದವರಿಗೆ ಮಾತ್ರ ವಿದ್ಯುತ್ ಕಂಬಗಳನ್ನು ನೀಡಲಾಗಿದೆ. ಇಲ್ಲಿ ಚರಂಡಿ ವ್ಯವಸ್ಥೆ ಸರಿಯಾಗಿಲ್ಲ. ಶೌಚಾಲಯ ಇರುವುದಿಲ್ಲ.
ಶಾಲೆ, ಅಂಗನವಾಡಿ ಇಲ್ಲವೇ ಇಲ್ಲ. ಇಲ್ಲಿ ವಾಸಿಸುತ್ತಿರುವ ಗ್ರಾಮಸ್ಥರ ಮಕ್ಕಳು ಶಾಲೆಗೆ ಪ್ರತಿದಿನ 5 ಕಿ.ಮೀ. ದೂರ ಕ್ರಮಿಸುವಂತಾಗಿದೆ. ಸ್ಥಳೀಯ ಜನಪ್ರತಿನಿಧಿಗಳು ತಮ್ಮ ಗ್ರಾಮಕ್ಕೆ ಇದೇ ಮಾರ್ಗವಾಗಿ ತಿರುಗುವ ರಸ್ತೆಯಲ್ಲೇ ಈ ಪುನರ್ವಸತಿ ನಿವೇಶನಗಳ ಬಡಾವಣೆ ಇದ್ದು, ಈ ಬಗ್ಗೆ ಸಾಕಷ್ಟು ಬಾರಿ ಇವರಲ್ಲಿ ಮನವಿ ಮಾಡಲಾಗಿದೆ.
ಜನಪ್ರತಿನಿಧಿಗಳೂ, ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದ್ದಾರೆ. ಆದರೂ, ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ.
ಎಚ್ಚರಿಕೆ: ಸಂಬಂಧಪಟ್ಟ ಹಾರಂಗಿ ಪುನರ್ವಸತಿ ಇಲಾಖೆ ರಾಮನಾಥಪುರ ಹಾಗೂ ಮೈಸೂರು ವಿಭಾಗಗಳಿಗೆ 6 ವರ್ಷಗಳಿಂದ ಸತತವಾಗಿ ತಿರುಗಿದರೂ, ಅಲ್ಲಿನ ಅಧಿಕಾರಿಗಳು ಮಾತ್ರ ಈ ವಿಚಾರದಲ್ಲಿ ತುಂಬಾ ನಿರ್ಲಕ್ಷ್ಯ ತೋರುತ್ತಿದ್ದು, ಮುಂಬರುವ ದಿನಗಳಲ್ಲಿ ಜಿಲ್ಲಾಧಿಕಾರಿ ಕಛೇರಿ ಎದುರು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಇಲ್ಲಿನ ಗ್ರಾಮಸ್ಥರಾದ ಕೃಷ್ಣಯ್ಯ, ಹುಚ್ಚಯ್ಯ, ತಮ್ಮಯ್ಯ, ಕಾಳಯ್ಯ, ಕಾಡಯ್ಯ, ಸಿಂಗ್ರಿ ತಿಮ್ಮಯ್ಯ ಎಚ್ಚರಿಸಿದ್ದಾರೆ.
ಈ ಜೆ.ಹೊಸಹಳ್ಳಿ ಶೀತಪೀಡಿತ ಪುನರ್ವಸತಿ ಗ್ರಾಮಸ್ಥರಿಗೆ ಇನ್ನಾದರೂ ಸರ್ಕಾರ ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡು ಮೂಲಭೂತ ಸೌಲಭ್ಯಗಳನ್ನು ಒದಗಿಸುವರೋ ಕಾದುನೋಡಬೇಕು.
ಜನ ಏನಂತಾರೆ...?
ಸ್ಥಳೀಯ ಹಾರಂಗಿ ಪುನರ್ವಸತಿ ವಿಭಾಗದ ಅಧಿಕಾರಿಗಳು ಸರಿಯಾಗಿ ಮಾಹಿತಿ ಇಲ್ಲಿಗೆ ರವಾನಿಸದೆ ಇಷ್ಟು ದಿನ ವಿಳಂಬವಾಗಿದೆ. ನಾನು ಇಲ್ಲಿಗೆ ಬಂದು 2 ವರ್ಷವಾಗಿದ್ದು, ಈಗ ಅಲ್ಲಿನ ಅವ್ಯವಸ್ಥೆ ಬಗ್ಗೆ ತಿಳಿದಿದ್ದರಿಂದ ಶೀಘ್ರದಲ್ಲೇ ಅವ್ಯವಸ್ಥೆ ಸರಿಪಡಿಸಲಾಗುವುದು.
- ಮಹಮ್ಮದ್ ಅಯೂಬ್, ಹಿರಿಯ ಅಧಿಕಾರಿ, ಹಾರಂಗಿ ಪುನರ್ವಸತಿ ವಿಭಾಗ, ಮೈಸೂರು
ಇಲ್ಲಿ ಶಾಲೆ ನಿರ್ಮಿಸಲೆಂದು ಕೃಷ್ಣೇಗೌಡ ಎಂಬುವರಿಂದ 1 ಎಕರೆ 25 ಗುಂಟೆ ಜಮೀನು ಖರೀದಿಸಿ ನಿಗದಿತ ಬೆಲೆ ನೀಡುವ ಬಗ್ಗೆ ಮುಂಚೆಯೇ ಮಾತನಾಡಿ, ಒಪ್ಪಿಗೆ ಪಡೆದು ಸ್ವಲ್ಪ ಹಣ ನೀಡಲಾಗಿದೆ. ಈ ಸ್ಥಳದಲ್ಲಿ ಶಾಲೆ ಕಟ್ಟಡ ನಿರ್ಮಿಸಲು ಮುಂದಾದಾಗ ಈ ಜಮೀನಿನವರು ಇನ್ನಷ್ಟು ಹಣ ಹೆಚ್ಚಾಗಿ ನೀಡಬೇಕೆಂದು ಅಡ್ಡಿಪಡಿಸಿದ್ದರಿಂದ ಶಾಲೆ ಕಟ್ಟಡ ನಿರ್ಮಾಣ ಸ್ಥಗಿತಗೊಂಡಿದೆ. ಈ ಕುರಿತು ಜಮೀನಿನ ಮಾಲೀಕರು ನ್ಯಾಯಾಲಯದ ಮೊರೆ ಹೋಗಿದ್ದು, ಈ ರೀತಿ ವಿಳಂಬವಾಗಿದೆ. ಇಲ್ಲಿಗೆ ಶಾಲೆ, ಸಮುದಾಯ ಭವನ, ಅಂಗನವಾಡಿ ಎಂದು ಸರ್ಕಾರದಿಂದ ಬಿಡುಗಡೆ ಮಾಡಿರುವ 25 ಲಕ್ಷ ಹಣ ಸದ್ಯಕ್ಕೆ ಇಲಾಖೆಯಲ್ಲಿ ಇದೆ.
- ಮೂಡಲಗಿರಿ, ಹಾರಂಗಿ ಪುನರ್ವಸತಿ ಸಹಾಯಕ ಕಾರ್ಯಪಾಲಕ, ರಾಮನಾಥಪುರ.
ಇಲ್ಲಿನ ಪರಿಶಿಷ್ಟರಿಗೆ ವಿದ್ಯುತ್, ಶೌಚಾಲಯ, ಶಾಲೆ ಇನ್ನಿತರ ಮೂಲಭೂತ ಸೌಲಭ್ಯಗಳನ್ನು ಒದಗಿಸದೆ ಸತತ 6 ವರ್ಷಗಳಿಂದ ಸಲ್ಲದ ಕಥೆಯನ್ನು ಹೇಳುತ್ತಾ ಕಾಲ ಹರಣ ಮಾಡುತ್ತಿರುವ ಸಂಬಂಧಪಟ್ಟ ಅಧಿಕಾರಿಗಳು ಇಲ್ಲಿನ ಆಸುಪಾಸಿನಲ್ಲಿ ಶಾಲೆ ನಿರ್ಮಿಸಲು ಮುಂದೆ ಬಂದರೆ ಅನೇಕ ರೈತರು ತಮ್ಮ ಜಮೀನು ನೀಡಲು ಸಹಕರಿಸುತ್ತಾರೆ. ಆದರೆ, ಅಧಿಕಾರಿಗಳು ಈ ಹಿಂದೆ ಜಮೀನಿನ ಖರೀದಿಯಲ್ಲಿ ಕಡಿಮೆ ಬೆಲೆಗೆ ವ್ಯವಹರಿಸಿ ಜಮೀನಿನವರು ಸರಿಯಾಗಿ ಸ್ಪಂದಿಸದೆ ಈಗ ಸ್ಥಗಿತಗೊಂಡಿದ್ದು, ರೋಗಿ ಬಯಸಿದ್ದೂ ಹಾಲು ಅನ್ನ ವೈದ್ಯ ಹೇಳಿದ್ದೂ ಹಾಲು ಅನ್ನ ಎನ್ನುವಂತಾಗಿದೆ. ಸರ್ಕಾರದಿಂದ ಬಿಡುಗಡೆಯಾಗಿರುವ ರು. 25 ಲಕ್ಷ ಹಣ ಇಲಾಖೆಯಲ್ಲೇ ಉಳಿಸಿಕೊಂಡಿರುವ ಅಧಿಕಾರಿಗಳು ಇಲ್ಲಿರುವ ಗ್ರಾಮಸ್ಥರಿಗೆ ಯಾವ ಸೌಲಭ್ಯವನ್ನೂ ನೀಡದೇ ಸತಾಯಿಸುತ್ತಿದ್ದಾರೆ.
- ಯಾಲಕ್ಕಿಗೌಡ, ಸ್ಥಳೀಯ ಗ್ರಾಮಸ್ಥ