ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅಕ್ರಮ ಮದ್ಯ ತಯಾರಿಕಾ ಅಡ್ಡೆ ಮೇಲೆ ದಾಳಿ

Vishwanath S
Updated On : 9 Jan 2014, 1:14 am

ಕ.ಪ್ರ.ವಾರ್ತೆ ,  ಅರಸೀಕೆರೆ ,  ಜ 8
ಅಕ್ರಮ ಮದ್ಯ ತಯಾರಿಸುತ್ತಿದ್ದ ಮನೆಯೊಂದರ ಮೇಲೆ ಬಾಣಾವಾರ ಪೊಲೀಸರು ದಿಢೀರ್ ದಾಳಿ ನಡೆಸಿ ಅಕ್ರಮ ಮಧ್ಯ ತಯಾರಿಸಲು ಸಂಗ್ರಹಿಸಿಟ್ಟಿದ್ದ 60 ಲೀಟರ್ ಸ್ಪಿರಿಟ್, 12 ಲೀಟರ್ ಬಣ್ಣ ಹಾಗೂ ತಯಾರಿಕೆಗೆ ಬೇಕಾದ ಉಪಕರಣಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂದಿಸಿದ್ದಾರೆ. ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಅಬಕಾರಿ ಸಿಬ್ಬಂದಿ ಶಾಮೀಲು?: ತಾಲೂಕಿನ ಬಾಣಾವರ ಹೋಬಳಿ ದೊಡ್ಡೇನಹಳ್ಳಿ ಗ್ರಾಮದ ಮನೆಯೊಂದರಲ್ಲಿ ಆಕ್ರಮವಾಗಿ ಸೆಕೆಂಡ್ಸ್ ಮದ್ಯ ತಯಾರಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಬಾಣಾವಾರ ಪೋಲಿಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ನರೇಂದ್ರಕುಮಾರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ಆರೋಪಿ ಚಂದ್ರಶೇಖರ್ (33) ಸಿಕ್ಕಿ ಬಿದ್ದಿದ್ದು, ಮತ್ತೊಬ್ಬ ಆರೋಪಿ ಲೊಕೇಶ್ ಎಂಬಾತ ಪರಾರಿಯಾಗಿದ್ದು ಆತ ಅಬಕಾರಿ ಇಲಾಖೆ ಜೀಪು ಚಾಲಕ ಎನ್ನಲಾಗಿದೆ.
ಅಕ್ರಮ ಮದ್ಯಕ್ಕೆ ಕಡಿವಾಣ ಹಾಕಬೇಕಾಗಿದ್ದ ಇಲಾಖೆ ನೌಕರನೇ ಈ ಅಕ್ರಮ ದಂಧೆಯಲ್ಲಿ ಸಿಕ್ಕಿಹಾಕಿ ಕೊಂಡಿರುವುದು ಅಚ್ಚರಿಯ ಜೊತೆಗೆ ಆತಂಕವನ್ನು ಉಂಟುಮಾಡಿದ್ದು, ತಲೆಮರೆಸಿಕೊಂಡಿರುವ ಲೊಕೇಶನನ್ನು ಪೊಲೀಸರು ಹುಡುಕುತ್ತಿದ್ದಾರೆ.
ಈ ಆರೋಪಿಗಳಿಬ್ಬರೂ ಅಕ್ರಮವಾಗಿ ರಾಜ ಬ್ರಾಂಡ್‌ನ ವಿಸ್ಕಿಯ ನಕಲು ಮಧ್ಯ ತಯಾರಿಸಿ ಮಾರಾಟ ಮಾಡುತ್ತಿದ್ದರು ಎನ್ನುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಅಕ್ರಮವಾಗಿ ಮದ್ಯ ತಯಾರಿಕೆಯನ್ನು ಪತ್ತೇ ಹಚ್ಚಿದ ಸಬ್ ಇನ್ಸ್‌ಪೆಕ್ಟರ್ ನರೇಂದ್ರ ಕುಮಾರ್ ಹಾಗೂ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಎಲ್ಲಾ ಪೊಲೀಸ್ ಸಿಬ್ಬಂದಿಗಳ ಬಗ್ಗೆ ಡಿವೈಎಸ್ಪಿ ಮಂಜುನಾಥ್ ಮತ್ತು ಗ್ರಾಮಾಂತರ ಠಾಣೆ ವೃತ್ತ ನಿರೀಕ್ಷಕ ಗಂಗಾಧರಪ್ಪ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ನಕಲಿ ಬೇಳೆಕಾಳು ಮಾರಾಟ ಪತ್ತೆ
ಕ.ಪ್ರ.ವಾರ್ತೆ ,  ಆಲೂರು ,  ಜ 8
ಪಟ್ಟಣದಲ್ಲಿ ನಕಲಿ ಬೇಳೆ ಕಾಳು ಮಾರಾಟ ಸೇರಿದಂತೆ ಸೊಸೈಟಿಯಲ್ಲಿ ನೀಡುವ ಅಕ್ಕಿಯನ್ನು ಪಾಲೀಶ್ ಮಾಡಿಸಿ ಸೋನ ಮಸೂರಿ ಅಕ್ಕಿಯೆಂದು ಅಂಗಡಿಗಳಲ್ಲಿ ಮಾರಾಟ ಮಾಡುವುದು ಕಂಡು ಬಂದಿದೆ.
ಪಟ್ಟಣಕ್ಕೆ ವಿಶೇಷವಾಗಿ ಸಂತೆ ದಿನವಾದ ಬುಧವಾರ ದ್ವಿಚಕ್ರ ವಾಹನಗಳಲ್ಲಿ ಬರುವ ನಕಲಿ ಬೇಳೆ ಮಾರಾಟಗಾರರಿಂದ ಹಳ್ಳಿಯ ಜನತೆ ಕಡಿಮೆ ಬೆಲೆಯ ಆಮಿಷಕ್ಕೊಳಗಾಗಿ ಇಂತಹ ಕಳಪೆ ಮಟ್ಟದ ಆಹಾರ ಪದಾರ್ಥಗಳನ್ನು ಖರೀದಿಸುತ್ತಿದ್ದಾರೆ.
ಅಂಗಡಿಗಳ ಮಾಲೀಕರು 20-30 ರು.ಗಳಿಗೆ ಈ ಕಳಪೆ ಆಹಾರ ಪದಾರ್ಥಗಳನ್ನು ಖರೀದಿಸಿ ಅಂಗಡಿಗಳಲ್ಲಿಟ್ಟು ದುಪ್ಪಟ್ಟು ಬೆಲೆಗೆ ಮಾರಾಟಮಾಡಿ ಗ್ರಾಹಕರಿಗೆ ಮೋಸ ಮಾಡುತ್ತಿದ್ದಾರೆ. ಈ ಬಗ್ಗೆ ಗಾಹಕರು ತಾವು ಖರೀದಿಸುವ ವಸ್ತುಗಳ ಬಗ್ಗೆ ತೀವ್ರ ನಿಗಾ ವಹಿಸುವುದು ಅತೀ ಅವಶ್ಯಕವಾಗಿದೆ. ಹಾಗು ತಾವು ಖರೀದಿಸಿದ ವಸ್ತುಗಳಲ್ಲಿ ಯಾವುದೇ ಲೋಪ ದೋಷಗಳು ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಸಲ್ಲಿಸಬೇಕು.
ಸಂಬಂಧಪಟ್ಟ ಅಧಿಕಾರಿಗಳು ಇಂತಹ ವಾಪಾರಿಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವುದರ ಜೊತೆಗೆ ರೇಶನ್ ಕಾರ್ಡ್‌ಗೆ ನೀಡಬೇಕಾದ ಸೊಸೈಟಿ ಅಕ್ಕಿ ಅಂಗಡಿಗಳಿಗೆ ತಲುಪುತ್ತಿರುವುದು ಹೇಗೆಂದು ಪತ್ತೆಮಾಡಿ ಅಂತಹವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕಿದೆ.
ಜೂಜು: 18 ಮಂದಿ ಬಂಧನ, ನಗದು ವಶ
ಕ.ಪ್ರ.ವಾರ್ತೆ ,  ಹಾಸನ ,  ಜ. 8
ಜಿಲ್ಲೆಯು ನಾನಾ ಕಡೆಗಳಲ್ಲಿ ಜೂಜಾಡುತ್ತಿದ್ದ 18 ಮಂದಿಯನ್ನು  ಬಂಧಿಸಿರುವ ಪೊಲೀಸರು, ರು. 21,750 ನಗದು ವಶಪಡಿಸಿಕೊಂಡಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಆಲೂರು ತಾಲೂಕಿನ ರಾಯರ ಕೊಪ್ಪಲು ಗ್ರಾಮದ ಹಳೇ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿ ನಿಲಯದ ಹಿಂಭಾಗದಲ್ಲಿ ಅಂದರ್ ಬಾಹರ್ ಜೂಜಾಡುತ್ತಿದ್ದ ರಾಯರ ಕೊಪ್ಪಲು ಗ್ರಾಮದ  ಪ್ರಸನ್ನ ಮಂಜುನಾಥ, ನಾಗರಾಜ, ರಂಗಸ್ವಾಮಿ, ವೆಂಕಟೇಶ್, ಶಶಿ, ಬಾಲಚಂದ್ರ, ವೆಂಕಟೇಶ್, ಚಂದ್ರ , ನಂದೀಶ್ ಎಂಬವರನ್ನು ಬಂಧಿಸಿದ್ದಾರೆ. ಜೂಜಾಟದಲ್ಲಿ ಪಣಕ್ಕಿಟ್ಟದ್ದ ರು. 15,850 ನಗದನ್ನು ವಶಪಡಿಸಿಕೊಂಡಿರುವ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಹಾಸನದ ರಂಗೋಲಿ ಹಳ್ಳದಲ್ಲಿರುವ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಹತ್ತಿರ ಅಂದರ್ ಬಾಹರ್ ಜೂಜಾಡುತ್ತಿದ್ದ ಎನ್‌ಸಿಸಿ ಆಫೀಸ್ ಸಮೀಪದ ವಾಸಿ ಲೋಕೇಶ್ ಅಲಿಯಾಸ್ ಲೋಕಿ (23), ರಂಗೋಲಿಹಳ್ಳದ ವಾಸಿ  ವೆಂಕಟೇಶ್ (28), ವಿದ್ಯಾನಗರದ ಗಿರೀಶ್ (35) ಎಂಬವರನ್ನು  ಬಂಧಿಸಿದ್ದಾರೆ. ಜೂಜಾಟದಲ್ಲಿ ಪಣಕ್ಕಿಟ್ಟದ್ದ ರು. 4, 600 ನಗದನ್ನು ವಶಪಡಿಸಿಕೊಂಡಿರುವ ನಗರ ಠಾಣೆಯ  ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಹಾಸನ ತಾಲೂಕಿನ ಸಾಲಗಾಮೆ ರಸ್ತೆಯ ಎಪಿಎಂಸಿ ಮಾಕೇಟ್‌ನಲ್ಲಿ ಅಂದರ್ಬಾಹರ್ಜೂಜಾಡುತ್ತಿದ್ದ  ಸಾಲಗಾಮೆ ಸಣ್ಣಸ್ವಾಮಿ ( 48),  ಸಿದ್ದನಂಜಪ್ಪ (59),  ದೇವರಾಜ, ಆಲದಹಳ್ಳಿಯ ಸತೀಶ್, ಬಾಲೇನಹಳ್ಳಿಯ ಜಯಶಂಕರ (39),  ಹಲಸನಹಳ್ಳಿಯ ಹರೀಶ್ (38) ಎಂಬವರನ್ನು ಬಂಧಿಸಲಾಗಿದೆ. ಜೂಜಾಟಾದಲ್ಲಿ ಪಣಕ್ಕಿಟ್ಟದ್ದ ರು. 1,300 ನಗದನ್ನು ವಶಪಡಿಸಿಕೊಂಡಿರುವ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement