ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಆರೋಗ್ಯ ಸೇವೆಯೇ ಗುರಿಯಾಗಬೇಕು

Vishwanath S
Updated On : 9 Jan 2014, 1:13 am

ಕ.ಪ್ರ.ವಾರ್ತೆ ,  ಹೊಳೆನರಸೀಪುರ ,  ಜ. 7
ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗಿರಿಸಿ ತ್ಯಾಗ ಮತ್ತು ಸೇವೆಯನ್ನು ಮುಖ್ಯ ಗುರಿಯಾಗಿಸಿಕೊಂಡು ಸಮಾಜಕ್ಕೆ ಆರೋಗ್ಯದ ಸೇವೆ ನೀಡುವುದು ನರ್ಸಿಂಗ್ ವಿದ್ಯಾರ್ಥಿಗಳ ಪ್ರಮುಖ ಗುರಿಯಾಗಲಿ ಎಂದು ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳು ಹಾಗೂ ಐಎಂಎ ತಾಲೂಕು ಅಧ್ಯಕ್ಷ  ಡಾ.ಟಿ.ಎಸ್. ಲಕ್ಷ್ಮೀಕಾಂತ್ ಹೇಳಿದರು. ಪಟ್ಟಣದಲ್ಲಿನ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ, ಪ್ರಥಮ ವರ್ಷದ ನರ್ಸಿಂಗ್ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ, ಸೇವಾ ದೀಪ ಬೆಳಗುವಿಕೆ ಮತ್ತು ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಉಳಿದೆಲ್ಲಾ ಕೋರ್ಸ್‌ಗಳನ್ನೂ ಬಿಟ್ಟು ನರ್ಸಿಂಗ್ ಕೋರ್ಸ್ ಅನ್ನು ಆಯ್ಕೆಮಾಡಿಕೊಂಡಿರುವ ವಿದ್ಯಾರ್ಥಿಗಳಿಗೆ ಸೇವೆಯೇ ಮುಖ್ಯ ಗುರಿಯಾಗಲಿ ಎಂದರು.
ಹಾರೈಕೆ: ಸೇವೆಯ ಪ್ರಮಾಣವಚನವನ್ನು ಹಾಗೂ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿರುವ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದ ನಂತರದ ಉದ್ಯೋಗದ ಸಂದರ್ಭದಲ್ಲಿ ಉತ್ತಮ ಶುಶ್ರೂಷಕ ಸೇವೆಯನ್ನು ನೀಡುವ ಮೂಲಕ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಸಹಕಾರ ನೀಡಲಿ ಎಂದರು.
ಕಿವಿಮಾತು: ಪ್ರತಿಜ್ಞಾವಿಧಿಯನ್ನು ಸಾಕ್ಷೀಕರಿಸಿದ ಬೆಂಗಳೂರಿನ ಸರ್ಕಾರಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ.ಸುವರ್ಣ ಬಿ.ತಳವಾರ್ ಮಾತನಾಡಿ, ಉಳಿದೆಲ್ಲಾ ಸಾರ್ವಜನಿಕ ಸೇವೆಗಳಿಗಿಂತಲೂ ಶುಶ್ರೂಷಕ ಸೇವೆಯು ಹೆಚ್ಚಿನ ಗೌರವ ಮತ್ತು ಅತ್ಯಗತ್ಯದ ಸೇವೆಯಾಗಿದ್ದು, ಕಾಳಜಿ, ಶ್ರದ್ಧೆ, ಕರುಣೆ, ನಿಸ್ವಾರ್ಥತೆಯ ಮೂಲಕ ಅರ್ಹರಿಗೆ ಆರೋಗ್ಯ ಸೇವೆಯನ್ನು ಪ್ರಾಮಾಣಿಕವಾಗಿ ಕೈಗೊಳ್ಳುವ ಮೂಲಕ ಶುಶ್ರೂಷಕ ವೃತ್ತಿಗೆ ಗೌರವ ತರುವಂತೆ ವಿದ್ಯಾರ್ಥ್ಥಿಗಳಿಗೆ ಕಿವಿಮಾತು ಹೇಳಿದರು.
ಸಲಹೆ: ಮೈಸೂರಿನ ಜೆಎಸ್‌ಎಸ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಶೀಲಾವಿಲಿಯಮ್ಸ್ ಮಾತನಾಡಿ, ಉತ್ತಮ ಚಾರಿತ್ರ್ಯದೊಂದಿಗೆ ಉತ್ತಮ ಸೇವೆಯನ್ನು ಸಮಾಜಕ್ಕೆ ನೀಡುವ ವಚನದೊಂದಿಗೆ ತಮ್ಮ ಶೈಕ್ಷಣಿಕ ಜೀವನವನ್ನು ಕೈಗೊಳ್ಳುವಂತೆ ಹೇಳಿದ ಅವರು, ಕಠಿಣ ಸಂದರ್ಭದಲ್ಲೂ ಪರಿಶ್ರಮ ಹಾಗೂ ಶ್ರದ್ಧೆಯೊಂದಿಗೆ ಸಮಾಜಮುಖಿಯಾಗಿ ಶುಶ್ರೂಷಕರು ಸಮಾಜಕ್ಕೆ ಮಾದರಿಯಾಗುವ ಸೇವೆ ನೀಡುವಂತೆ ಸಲಹೆ ನೀಡಿದರು.
ವಿದ್ಯಾರ್ಥಿನಿಯರಾದ ಅಂಬ್ಲಿ ಮತ್ತು ಶೃತಿ ಅವರು ಸ್ವಾಗತ ನೃತ್ಯ ಪ್ರಸ್ತುತಪಡಿಸಿದರು. 8ನೇ ತಂಡವಾದ ಪ್ರಸಕ್ತ ಮೊದಲ ವರ್ಷದ ನರ್ಸಿಂಗ್ ವಿದ್ಯಾರ್ಥಿಗಳನ್ನು ಹಿರಿಯ ವಿದ್ಯಾರ್ಥಿಗಳು ಹೂಗುಚ್ಛ ನೀಡಿ ಹಣೆಗೆ ತಿಲಕವನ್ನಿಟ್ಟು ಸಾಂಪ್ರದಾಯಿಕವಾಗಿ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ನರ್ಸಿಂಗ್ ಸೇವೆಯ ಸಂಸ್ಥಾಪಕಿ ಫ್ಲಾರೆನ್ಸ್ ನೈಟಿಂಗೇಲ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.  ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿಯನ್ನು ಉಪನ್ಯಾಸಕಿ ಸಾವಿತ್ರಮ್ಮ ಬೋಧಿಸಿದರು.
ಕಾರ್ಯಕ್ರಮದಲ್ಲಿ ಪ್ರಥಮ ವರ್ಷದ ನರ್ಸಿಂಗ್ ವಿದ್ಯಾರ್ಥಿಗಳ ಪೋಷಕರೂ ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಸಾಕ್ಷೀಕರಿಸಿದರು.
ಸಮಾರಂಭದಲ್ಲಿ ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎ. ನಾಗರಾಜ್, ಉಪ-ಪ್ರಾಂಶುಪಾಲೆ ಸೀತಮ್ಮ ಇದ್ದರು. ಕಾಲೇಜಿನ ಪ್ರಾಂಶುಪಾಲೆ ಆರ್. ಸರೋಜಿನಿದೇವಿ ಅಧ್ಯಕ್ಷತೆ ವಹಿಸಿದ್ದರು.
ಕವಿತ ತಂಡ ಪ್ರಾರ್ಥಿಸಿದರೆ, ಉಪನ್ಯಾಸಕಿ ಸರಸ್ವತಿ ಸ್ವಾಗತಿಸಿದರು. ಉಪನ್ಯಾಸಕಿ ಕೆ.ಜಿ. ಶೈಲಜ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement