ಧ್ಯಾನ-ಯೋಗದಿಂದ ನೆಮ್ಮದಿಯ ಜೀವನ
ಕ.ಪ್ರ.ವಾರ್ತೆ , ಅರಸೀಕೆರೆ , ಜ.8
ಮನುಷ್ಯ ತನ್ನ ದಿನಚರಿಯಲ್ಲಿ ದಿನದ ಒಂದೆರಡು ಗಂಟೆಗಳನ್ನು ಧ್ಯಾನ ಮತ್ತು ಯೋಗಕ್ಕೆಂದು ಮೀಸಲಿಟ್ಟರೆ ಆರೋಗ್ಯವಂತನಾಗಿ ನೆಮ್ಮದಿಯ ಜೀವನ ನಡೆಸಲು ಸಾಧ್ಯವೆಂದು ಖ್ಯಾತ ಹೃದಯರೋಗ ತಜ್ಞ ಡಾ.ಬಿ.ಎಸ್. ಶಿವಕುಮಾರ್ ತಿಳಿಸಿದರು.
ಪಟ್ಟಣದ ಜ್ಞಾನಜ್ಯೋತಿ ಮಂದಿರದಲ್ಲಿ ಶ್ರೀ ಪರಮಹಂಸ ಯೋಗಾನಂದ ಯೋಗದ ಸತ್ಸಂಗ ಸೊಸೈಟಿ ಆಫ್ ಇಂಡಿಯಾ ಹಾಗೂ ಅರಸೀಕೆರೆ ಯೋಗದ ಸತ್ಸಂಗ ಜ್ಞಾನ ಮಂದಿರದಲ್ಲಿ ಶ್ರೀ ಪರಮಹಂಸ ಯೋಗಾನಂದರ 121ನೇ ವರ್ಷದ ಜನ್ಮದಿನೋತ್ಸವ ಆಚರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮೀಕರಿಸುವ ಉದ್ದೇಶ: ಸರಳ ಜೀವನ ಮತ್ತು ಉನ್ನತ ಚಿಂತನವನ್ನು ಪ್ರೋತ್ಸಾಹಿಸುವ ಮತ್ತು ಎಲ್ಲ ಜನಾಂಗಗಳ ಏಕತೆಯ ಶಾಶ್ವತ ಆಧಾರ ಭೂತವಾದ ಪರಮಾತ್ಮನೊಂದಿಗೆ ಆತ್ಮೀಯ ಸಾಮ್ಯತೆ ಬೆಸೆಯುವ ಮೂಲಕ ಅಂತಃಕರಣ ಪೂರ್ವಕ ಸೋದರಭಾವವನ್ನು ಹರಡುವ ಮತ್ತು ವಿಜ್ಞಾನ ಮತ್ತು ಧರ್ಮಗಳಲ್ಲಿ ಅಂತರ್ಗತವಾಗಿರುವ ತತ್ವಗಳ ಏಕತೆಯನ್ನು ಕಂಡುಕೊಳ್ಳುವುದರ ಮೂಲಕ ವಿಜ್ಞಾನ ಮತ್ತು ಧರ್ಮಗಳನ್ನು ಸಮೀಕರಿಸುವ ಉದ್ದೇಶ ವಿವರಿಸಿದರು.
ಸಾವು ನಿಶ್ಚಿತ ಬದುಕು ಆಕಸ್ಮಿಕ ನಮ್ಮ ಜೀವಿತದ ಕಾಲಾವಧಿಯನ್ನು ಒಳ್ಳೆಯ ಕಾರ್ಯಕ್ಕೆ ಉಪಯೋಗಿಸಿ ದೈವ ಸಾಕ್ಷಾತ್ಕಾರ, ಆತ್ಮ ಸಾಕ್ಷಾತ್ಕಾರ ಹೊಂದಬೇಕೆಂದರು. ಇಂದು ಆಧ್ಯಾತ್ಮಿಕದ ಕಡೆ ಒಲವು, ಅರಿವು ಬರಬೇಕಾದರೆ ಭಾರತದ ಕಡೆ ನೋಡಬೇಕು ಎಂದು ಪಾಶ್ಚಿಮಾತ್ಯರು ಹೇಳುತ್ತಾರೆ ಎಂದು ಹೇಳಿದ ಅವರು ಕ್ರಿಯಾ ಯೋಗದಿಂದ ಮನಸ್ಸು ಪರಿವರ್ತನೆಯಾಗಿ ಶರೀರವನ್ನು ಸುಸ್ಥಿತಿಯಲ್ಲಿಡಲು ಆಗುತ್ತದೆ. ಧ್ಯಾನದ ಉಪಯೋಗ ಅದನ್ನು ಮಾಡಿ ಅನುಭವಿಸಿದವರಿಗೆ ಗೊತ್ತು ಎಂದರು.
ಕೋಟಿ ಜನರಿಗೆ ಪ್ರಯೋಜನ: ದಂತ ವೈದ್ಯ ಪಿ.ಎನ್. ಜಗದೀಶ್ ಮಾತನಾಡಿ, ಧ್ಯಾನ ಮತ್ತು ಯೋಗದಲ್ಲಿ ಪಾಲ್ಗೊಳ್ಳುವ ವ್ಯಕ್ತಿ ದೈಹಿಕ ಹಾಗೂ ಮಾನಸಿಕವಾಗಿ ಇತರರಿಗಿಂತ ಸದೃಢವಾಗಿರಲು ಸಾಧ್ಯ. ಅಲ್ಲದೇ, ತನ್ನ ಮನಸ್ಸನ್ನು ನಿಯಂತ್ರಣವಾಗಿಟ್ಟುಕೊಂಡು ಏಕಾಗ್ರತೆ ಸಾಧಿಸುವ ಮನುಷ್ಯ ಜಗತ್ತಿನಲ್ಲಿ ಏನು ಬೇಕಾದರು ಸಾಧಿಸಬಲ್ಲ ಇದನ್ನ ಅರಿತಿದ್ದ ಪರಮಹಂಸ ಯೋಗಾನಂದರು ಅನೇಕ ಪುಸ್ತಕಗಳನ್ನ ಪ್ರಕಟಿಸಿದ್ದಾರೆ. ಆ ಪುಸ್ತಕಗಳನ್ನು ಓದುವ ಮೂಲಕವೇ ದೇಶ- ವಿದೇಶದ ಕೋಟ್ಯಾಂತರ ಜನ ಯೋಗ ಮತ್ತು ಧ್ಯಾನದಲ್ಲಿ ತೊಡಗಿಸಿಕೊಳ್ಳುವ ಮೂಲಕ ಆರೋಗ್ಯವಂತ ಜೀವನ ನಡೆಸುತ್ತಿದ್ದಾರೆ ಎಂದರು.
ಮನವಿ: ಡಾ.ಬಿಸಿ. ನಳಿನ ಮಾತನಾಡಿ, ಪರಮಹಂಸ ಯೋಗಾನಂದರ ಅನುಯಾಯಿಗಳು ಪಟ್ಟಣದ ಶಿವಾನಂದ ಕಾಲೋನಿಯಲ್ಲಿರುವ ಗುರು ಮಹಿಮದಲ್ಲಿ ಜಾತಿ ಭೇದವಿಲ್ಲದೆ ಯೋಗದ ಸತ್ಯಂಗ ಧ್ಯಾನ ಮಂಡಳಿ ನಡೆಸುತ್ತ ಬಂದಿದ್ದು ಆಸಕ್ತರು ಸಂಘದ ಸದಸ್ಯತ್ವ ಪಡೆದು ಸಾಮೂಹಿಕ ಯೋಗ ಮತ್ತು ಧ್ಯಾನದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಡಾ. ಬಸವರಾಜ್ ಮಾತನಾಡಿ, ಧ್ಯಾನ ಮಾಡುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ದೈಹಿಕ ಮಾನಸಿಕ ತೊಂದರೆಗಳು ಕಡಿಮೆಯಾಗುತ್ತದೆ ಹಾಗೂ ಸಾಮಾಜಿಕ ಆರ್ಥಿಕ ಸಮತೋಲನ ಸಾಧ್ಯ. ಮನಸ್ಸಿನ ಕ್ರೋಧ ಕಡಿಮೆಯಾಗಿದೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು. ಸಾಮೂಹಿಕ ಧ್ಯಾನ ಭಜನೆ, ಸಾಮೂಹಿಕ ಗುಣಕಾರಿ ಪ್ರಾರ್ಥನೆ ಈ ಸಂದರ್ಭದಲ್ಲಿ ನಡೆಯಿತು. ಅತ್ಯಂತ ವ್ಯವಸ್ಥಿತವಾಗಿ ನಡೆದ ಈ ಕಾರ್ಯಕ್ರಮ ಅಧ್ಯಾತ್ಮ ಜೀವಿಗಳನ್ನು ಒಂದೆಡೆ ಸೇರಿಸುವಲ್ಲಿ ಯಶಸ್ವಿಯಾಯಿತು.