ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕುಡಿವ ನೀರಿನ ಬವಣೆ: ರು. 2 ಕೋಟಿ ಅನುದಾನಕ್ಕೆ ಬಾಲಕೃಷ್ಣ ಒತ್ತಾಯ

Vishwanath S
Updated On : 10 Jan 2014, 12:47 pm

ಚನ್ನರಾಯಪಟ್ಟಣ: ತಾಲೂಕಿನಲ್ಲಿ ಬರಗಾಲ ಉಲ್ಬಣಗೊಂಡಿದ್ದು, ಬೇಸಿಗೆ ಸಮೀಪಿಸುತ್ತಿರುವಂತೆ 200 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಸಂಭವವಿರುವುದರಿಂದ ಸರ್ಕಾರ ಹೆಚ್ಚಿನ ಅನುದಾನ ನೀಡಬೇಕೆಂದು ಶಾಸಕ ಬಾಲಕೃಷ್ಣ ಒತ್ತಾಯಿಸಿದರು.
ತಾಲೂಕಿನ ಮಟ್ಟನವಿಲೆಯಲ್ಲಿ ಮೈಸೂರು ಹಡಗಲಿ 13.65 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ತಾಲೂಕಿನಲ್ಲಿ ಮಳೆಯಿಲ್ಲದೆ ಬರಗಾಲ ಪೀಡಿತ ಪ್ರದೇಶಕ್ಕೆ ಸೇರಿದೆ. ಬೇಸಿಗೆಯಲ್ಲಿ ಕುಡಿಯುವ ನೀರಿನ ಬವಣೆ ತೀರಿಸಲು ಸರ್ಕಾರ ಎರಡು ಕೋಟಿ ಅನುದಾನವನ್ನು ನೀಡಬೇಕೆಂದು ಒತ್ತಾಯಿಸಿದರು.
ತಾಲೂಕಿನ 200 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಬವಣೆ ಪ್ರಾರಂಭವಾಗಲಿದ್ದು, ಏತ ನೀರಾವರಿ ಯೋಜನೆ ಮುಖೇನ ಶಾಶ್ವತ ಕುಡಿಯುವ ನೀರು ಸರಬರಾಜು ಯೋಜನೆಯನ್ನು ಕೈಗೊಳ್ಳುವಂತೆ  ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ತಾಲೂಕಿನ ಶ್ರವಣಬೆಳಗೊಳದ ಬಳಿ ಮೂರು ಕಿ.ಮೀ ಸೇರಿದಂತೆ ಮಟ್ಟನವಿಲೆಯಿಂದ 27 ಕಿ.ಮೀ ರಸ್ತೆಯನ್ನು ಅಗಲೀಕರಣ ಹಾಗೂ ನಿರ್ಮಿಸಲು ರಾಜ್ಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ ಶ್ರವಣಬೆಳಗೊಳದಿಂದ ನುಗ್ಗೇಹಳ್ಳಿ ಮಾರ್ಗವಾಗಿ  ತಿಪಟೂರಿಗೆ ಸಂಚರಿಸಲು ಜನತೆಗೆ ಅನುಕೂಲವಾಗಲಿದೆ ಎಂದರು.
ಚನ್ನರಾಯಪಟ್ಟಣದ ಹೊರವಲಯದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಬಳಿಯಿಂದ ನುಗ್ಗೇಹಳ್ಳಿವರೆಗೆ ಮೂರು ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾರ್ಯಕ್ಕೆ ಮುಂದಿನ ತಿಂಗಳಲ್ಲಿ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಲಾಗುವದು. ಚನ್ನರಾಯಪಟ್ಟಣ ಬಾಗೂರು ರಸ್ತೆ, ಹಿರೀಸಾವೆ ನುಗ್ಗೇಹಳ್ಳಿ ರಸ್ತೆ ಅಗಲೀಕರಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.  ಹೊನ್ನಮಾರನಹಳ್ಳಿ, ಬೆಳಗೀಹಳ್ಳಿ ಸೇರಿದಂತೆ ತಾಲೂಕಿನ ಹಲವು ಗ್ರಾಮಗಳಲ್ಲಿ ಪರಿಶಿಷ್‌ಠ ಜಾತಿ ಮತ್ತು ವರ್ಗದ ಕಾಲೋನಿಗಳಲ್ಲಿ ರಸ್ತೆ ಅಭಿವೃದ್ಧಿಗೆ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.  ತಾಲೂಕಿನಲ್ಲಿ ರಸ್ತೆ ಮತ್ತು ಕಟ್ಟಡ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಮುಗಿದಿದ್ದರೂ ಗುತ್ತಿಗೆದಾರರು ಹಲವು ತಾಂತ್ರಿಕ ಕಾರಣಗಳಿಂದ ಕಾಮಗಾರಿ ಪ್ರಾರಂಭಿಸಿಲ್ಲ. ಗುತ್ತಿಗೆದಾರರಿಗೆ ಅಗತ್ಯವಿರುವ ಜಲ್ಲಿ ಮತ್ತು ಮರಳಿನ ಕೊರತೆಯಿದೆ ಎಂದು ಹಲವು ಬಾರಿ ತಮ್ಮಲ್ಲಿ ಮನವಿ ಮಾಡಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಈ ನಿಟ್ಟಿನಲ್ಲಿ ಸಮಸ್ಯೆ ಬಗೆಹರಿಸಲು ಮುಂದಾಗಬೇಕು ಎಂದು ಕೋರಿದರು.
ರಾಜ್ಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದಿಂದ ತಾಲೂಕಿನಲ್ಲಿ ರಾಜ್ಯ ಹೆದ್ದಾರಿ ರಸ್ತೆಗಳ ಅಸುಪಾಸಿನಲ್ಲಿ ಬರುವ ಗ್ರಾಮಗಳ ನಾಮಫಲಕ ಹಾಕುವ ಕಾರ್ಯಕ್ಕೆ ಟೆಂಡರ್ ಕರೆದಿದ್ದು, ಸದ್ಯದಲ್ಲಿಯೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು. ಜಿಪಂ ಅಧ್ಯಕ್ಷೆ ಅಂಬಿಕಾ, ತಾಪಂ ಉಪಾಧ್ಯಕ್ಷೆ ಶಿಲ್ಪಾ ಶ್ರೀನಿವಾಸ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement