ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಚಾಲಕರಿಗೆ ರಸ್ತೆ ಸುರಕ್ಷತೆ ಬಗ್ಗೆ ಮಾಹಿತಿ

Vishwanath S
Updated On : 10 Jan 2014, 12:48 pm

ಬೇಲೂರು: ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಬೇಲೂರು ಪೊಲೀಸ್ ಠಾಣೆ ವತಿಯಿಂದ ಟ್ಯಾಕ್ಸಿ ಚಾಲಕರಿಗೆ ಮತ್ತು ಟೆಂಪೋ ಚಾಲಕರಿಗೆ ರಸ್ತೆ ಸುರಕ್ಷತೆ ಬಗ್ಗೆ ಇತ್ತೀಚೆಗೆ ಮಾಹಿತಿ ನೀಡಲಾಯಿತು.  ಈ ಸಂದರ್ಭದಲ್ಲಿ ಎ.ಎಸ್.ಐ ರಾಜಶೇಖರ್ ಮಾತನಾಡಿ, ರಸ್ತೆ ಸುರಕ್ಷತೆ ಬಗ್ಗೆ ಚಾಲಕರು ಹಾಗೂ ಸಾರ್ವಜನಿಕರು ಸಂಚಾರ ನಿಯಮಗಳನ್ನು ಪಾಲಿಸಿದಾಗ ಈಗ ಆಗುತ್ತಿರುವ ಅಪಘಾತಗಳನ್ನು ತಪ್ಪಿಸಬಹುದು. ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದಾಗ ಅಫಘಾತಗಳು ಸಂಭವಿಸುತ್ತಿದ್ದು,  ಚಾಲಕರು ಮತ್ತು ಸಾರ್ವಜನಿಕರು ರಸ್ತೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ನಿಯಮಗಳನ್ನು ಪಾಲಿಸಿದಾಗ ಸಾಕಷ್ಟು ಉತ್ತಮ ಬೆಳವಣಿಗೆಗಳನ್ನು ಕಾಣಬಹುದು ಎಂದು ತಿಳಿಸಿದರು.  ಕಾರ್ಯಕ್ರಮದಲ್ಲಿ ಆರಕ್ಷಕ ಶಿವು. ವಾಹನ ಚಾಲಕರಾದ ಹರೀಶ್, ರಘು, ಸಾದಿಕ್, ಪುಟ್ಟಸ್ವಾಮಿ, ಗಿರೀಶ್, ನಾಗು ಇತರರು ಇದ್ದರು.
ಸಾಲ ಬಾಧೆ: ರೈತ ಆತ್ಮಹತ್ಯೆ
ನುಗ್ಗೇಹಳ್ಳಿ: ಸಾಲ ಬಾಧೆಯಿಂದ ಬೇಸತ್ತು ರೈತರೊಬ್ಬರು ಗುರವಾರ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ನುಗ್ಗೇಹಳ್ಳಿ ಸಮೀಪದ ನವಿಲೆ ಗ್ರಾಮದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ತಿಮ್ಮಲಾಪುರದ ರೈತ ದೊಡ್ಡೇಗೌಡ ಮೃತಪಟ್ಟವರು. ವಿಷ ಸೇವಿಸಿ ಅಸ್ವಸ್ಥರಾದ ಇರವನ್ನು ತುಮಕೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಬ್ಯಾಂಕ್ ಹಾಗೂ ಖಾಸಗಿಯಾಗಿ ಮಾಡಿದ್ದ ಸಾಲ ತೀರಿಸಲಾಗದೇ ಇವರು ನೊಂದಿದ್ದರು ಎನ್ನಲಾಗಿದೆ. ನುಗ್ಗೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೆರೆ ಹೊರೆ ಶಾಲೆಗಳ ಮಾಹಿತಿ ಪ್ರಕಟ
ಹಾಸನ: ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ನಿಯಮ 2012ರ ನಿಯಮದನ್ವಯ ಹಾಸನ ಜಿಲ್ಲಾ ವ್ಯಾಪ್ತಿಗೆ ಬರುವ ನೆರೆ ಹೊರೆ ಶಾಲೆಗಳ ಮಾಹಿತಿಯನ್ನು ಅನುಬಂಧ-1, 2, 3, 4 ಮತ್ತು 5ರಲ್ಲಿ ಶೇಕಡ 25ರ ಪ್ರಮಾಣದಲ್ಲಿ ಪೂರ್ವ ಪ್ರಾಥಮಿಕ ತರಗತಿ ಅಥವಾ 1ನೇ ತರಗತಿಗೆ ದಾಖಲು ಮಾಡಿಕೊಳ್ಳಬೇಕಾದ ಮಕ್ಕಳ ಸಂಖ್ಯೆಯನ್ನು ಪ್ರಕಟಿಸಲಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಉಪೇಂದ್ರ ಪ್ರತಾಪಸಿಂಗ್ ತಿಳಿಸಿದ್ದಾರೆ.
ಬೇಸಾಯ ಕ್ರಮ: ತರಬೇತಿ ಶಿಬಿರ
ಹಾಸನ: ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರ, ಬಾಗಲಕೋಟ ರಾಜ್ಯಮಟ್ಟದ ಸಂಸ್ಥೆಯಾಗಿದ್ದು, ತರಕಾರಿ ಮತ್ತು ಪುಷ್ಪ ಬೆಳೆಗಳ ಸಂರಕ್ಷಿತ ಬೇಸಾಯ ಕ್ರಮಗಳ ಕುರಿತು ಮೂರು ದಿನಗಳ ರಾಜ್ಯ ಮಟ್ಟದ ತರಬೇತಿ ಶಿಬಿರ ಏರ್ಪಡಿಸಿದೆ. ಶಿಬಿರದಲ್ಲಿ ನಾನಾ ತರಕಾರಿ ಮತ್ತು ಪುಷ್ಪ ಬೆಳೆಗಳಲ್ಲಿ ಅಧಿಕ ಇಳುವರಿಗೆ ಅನುಸರಿಸಬೇಕಾದ ಆಧುನಿಕ ಸಂರಕ್ಷಿತ ಬೇಸಾಯ ಕ್ರಮಗಳು, ಸಾವಯವ ಕೃಷಿ ತಂತ್ರಜ್ಞಾನ, ಸೂಕ್ತ ನೀರಾವರಿ ಪದ್ಧತಿಗಳು, ಕೋಯ್ಲೋತ್ತರ ಹಾಗೂ ಸಂಸ್ಕರಣಾ ಕ್ರಮಗಳು, ಮಾರುಕಟ್ಟೆ ವಿಧಾನಗಳು, ಹಣಕಾಸಿನ ನಿರ್ವಹಣೆ ಇತ್ಯಾದಿ ವಿಷಯಗಳ ಬಗ್ಗೆ ತರಬೇತಿ ನೀಡಲಾಗುವುದು. ಶಿಬಿರಾರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆ ಇದ್ದು, ಆಸಕ್ತ ರೈತರು, ರೈತ ಮಹಿಳೆಯರು, ಸ್ವಸಹಾಯ ಸಂಘದ ಸದಸ್ಯರು, ಯುವಕರು ಇತ್ಯಾದಿ ತಮ್ಮ ಹೆಸರು, ವಿಳಾಸ, ದೂರವಾಣಿ, ಮೊಬೈಲ್ ಇತ್ಯಾದಿ ವಿವರಗಳನ್ನು  ಜ.18  ರೊಳಗಾಗಿ  ನೋಂದಾಯಿಸಲು ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಆರ್.ಹಿರೇಮಠ ತಿಳಿಸಿದ್ದಾರೆ.  ಹೆಚ್ಚಿನ ವಿವರಗಳಿಗೆ ಕಾರ್ಯನಿರ್ವಾಹಕ ನಿರ್ದೇಶಕರು, ಕೃಷಿಕರ ಸಂಪನ್ಮೂಲ ಕೇಂದ್ರ, ಬಿ.ವಿ.ವಿ.ಸಂಘದ ಸ್ಪಿನ್ನಿಂಗ್‌ಮಿಲ್ ಆವರಣ, ಗದ್ದನಕೇರಿ ರೋಡ್, ಬಾಗಲಕೋಟ-587103, ದೂರವಾಣಿ 08354-244028  244048, ಮೊ 8050502960 ಸಂಪರ್ಕಿಸಬಹುದಾಗಿದೆ.
ಮನ್ಸೂರ್ ಶಿಕ್ಷಣ ಸಂಸ್ಥೆ ವಾರ್ಷಿಕೋತ್ಸವ
ಆಲೂರು: ಯಾವ ಪಾಲಕರು ಮಕ್ಕಳಿಗೆ ಶಿಕ್ಷಣ ಕೊಡಿಸುವುದಿಲ್ಲವೋ ಅವರು ಮಕ್ಕಳ ಉತ್ತಮ ಭವಿಷ್ಯಕ್ಕೆ ಕಂಟಕರಾಗುತ್ತಾರೆ ಎಂದು ಮನ್ಸೂರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಅಬ್ದುಲ್ ಜಾವಿದ್ ಹೇಳಿದರು. ಪಟ್ಟಣದ ಅರೇಬಿಕ್ ಕಾಲೇಜ್ ಮನ್ಸೂರ್ ಶಿಕ್ಷಣ ಸಂಸ್ಥೆ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತನ್ನನ್ನು ತಾನು ಅರಿಯುವಂತೆ ಮಾಡುವುದೇ ಶಿಕ್ಷಣ ಸಂಸ್ಥೆಯ ಮುಖ್ಯ ಗುರಿಯಾಗಿದೆ  ಎಂದು ಹೇಳಿದರು. ಮಲ್ಲಾರ್ ಗ್ರೂಪ್ ಇಂಡಸ್ಟ್ರೀಸ್ ಮುಖ್ಯಸ್ಥ ಎ.ಜಿ.ಖಾಜಿ ಮಾತನಾಡಿ, ದೇವರ ಆರಾಧನೆ ಜೊತೆಗೆ ಮನುಷ್ಯ ಉತ್ತಮ ಕರ್ಮಗಳನ್ನು ಮಾಡಬೇಕು ಎಂದರು. ಮಂಗಳೂರಿನ ಆಖಿಲ್ ಅಹಮ್ಮದ್ ಮಾತನಾಡಿದರು. ಮನ್ಸೂರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅಬ್ದುಲ್ ಹಸೀಬ ಮಾತನಾಡಿ, ಮನ್ಸೂರ ಶಿಕ್ಷಣ ಸಂಸ್ಥೆಯು ಆಧುನಿಕ ಶಿಕ್ಷಣದ ಜೊತೆಗೆ ಧಾರ್ಮಿಕ ಶಿಕ್ಷಣ ನೀಡುವ ದಕ್ಷಿಣ ಭಾರತದ ಏಕೈಕ ಶಿಕ್ಷಣ  ಸಂಸ್ಥೆಯಾಗಿದೆ ಎಂದರು. ಪ್ರಾಂಶುಪಾಲ ಮುನವರ್‌ಪಾಷ ನಿರೂಪಿಸಿದರು. ಯಾಸೀನ್ ಶರೀಫ್ ಸ್ವಾಗತಿಸಿದರು.
12ಕ್ಕೆ ವಿವೇಕಾನಂದ ಜಯಂತಿ ಆಚರಣೆ
ಹಾಸನ: ವೇದಸುಧೆ ವತಿಯಿಂದ ಹೊಯ್ಸಳನಗರದ  ಶಕ್ತಿಗಣಪತಿ ದೇವಾಲಯ ರಸ್ತೆಯಲ್ಲಿರುವ ಈಶಾವಾಸ್ಯಮ್‌ನಲ್ಲಿ  ಜ.12 ರಂದು  ಸಂಜೆ  5.30 ರಿಂದ  ಸ್ವಾಮಿ ವಿವೇಕಾನಂದರ ಜಯಂತಿ ಏರ್ಪಡಿಸಲಾಗಿದೆ. ಅಗ್ನಿಹೋತ್ರ ನಂತರ ವಿವೇಕಾನಂದ ಚಿಂತನಗೋಷ್ಠಿ ನಡೆಯಲಿದೆ. ಪೊನ್ನಂಪೇಟೆಯ ಶ್ರೀರಾಮಕೃಷ್ಣ ಶಾರದಾಶ್ರಮದ ಯುಕ್ತೇಶಾನಂದಜಿ ಮಹಾರಾಜ್ ಉಪನ್ಯಾಸ ನೀಡುವರು. ವೇದಸುಧೆ ಅಧ್ಯಕ್ಷ ಕವಿನಾಗರಾಜ್ ಅಧ್ಯಕ್ಷತೆ ವಹಿಸುವರು. ರಾಮಕೃಷ್ಣ ವಿದ್ಯಾಲಯದ ಪ್ರಾಂಶುಪಾಲ ಸಿ.ಎಸ್.ಕೃಷ್ಣಸ್ವಾಮಿ,  ಅಮೋಘ್ ವಾಹಿನಿಯ  ಮುಖ್ಯ ವ್ಯವಸ್ಥಾಪಕ ಕೆ.ಪಿ.ಎಸ್. ಪ್ರಮೋದ್, ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಚ್.ಎಲ್.ಜನಾರ್ದನ್,  ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಚಾಲಕ  ಪಾರಸ್‌ಮಲ್, ಸಮಾಜ ಸೇವಕ ಗುರುರಾಜ ಹೆಬ್ಬಾರ್ ಇತರರು ಭಾಗವಹಿಸುವರು.
ಯೋಧರ ಸಭೆ
ಹಾಸನ: ಜಿಲ್ಲಾ ನಿವೃತ್ತ ಅರೆಸೇನಾ ಪಡೆ ಯೋಧರ ಒಕ್ಕೂಟದ ಸಭೆ ಜ.12 ರಂದು ಭಾನುವಾರ ಬೆಳಗ್ಗೆ 9 ಗಂಟೆಗೆ ಆರ್.ಸಿ. ರಸ್ತೆಯಲ್ಲಿರುವ ಒಕ್ಕೂಟದ ಕಚೇರಿಯಲ್ಲಿ ಕರೆಯಲಾಗಿದೆ. ಅರೆಸೇನಾ (ಬಿಎಸ್‌ಎಫ್, ಸಿಆರ್‌ಪಿಎಫ್, ಸಿಐಎಸ್‌ಎಫ್, ಐಟಿಬಿಪಿ, ಎಸ್‌ಎಸ್‌ಬಿ ಪಡೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಯೋಧರು ಸಭೆಯಲ್ಲಿ ಭಾಗವಹಿಸುವಂತೆ ಒಕ್ಕೂಟದ ಅಧ್ಯಕ್ಷ ಆರ್.ಎಂ. ಹನುಮಂತಪ್ಪ ಮನವಿ ಮಾಡಿದ್ದಾರೆ. ಮಾಹಿತಿಗೆ ದೂ. 9686811183 ಸಂಪರ್ಕಿಸಿ.
ಮಕ್ಕಳ ಸಾಹಿತ್ಯ ಕಮ್ಮಟ, ಉಪನ್ಯಾಸ
ಹಾಸನ: ತಾಲೂಕಿನ ಶಿಶು ಅಭಿವೃದ್ಧಿ ಯೋಜನೆ ಹಾಗೂ ಬಾಲಭವನ ವತಿಯಿಂದ ಬಾಲ ಸಾಹಿತಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ 8 ರಿಂದ 16 ವರ್ಷದೊಳಗಿನ ಮಕ್ಕಳಿಗೆ ಕಥೆ, ಕವನ ಹಾಗೂ ಪ್ರಬಂಧ ಸ್ಪರ್ಧೆ ಹಾಗೂ ಹಿರಿಯ ಸಾಹಿತಿಗಳಿಂದ ಉಪನ್ಯಾಸ ಏರ್ಪಡಿಸಲಾಗಿದೆ.
 ತಾಲೂಕು ವ್ಯಾಪ್ತಿಯ ಕಥೆ, ಕವನ ಹಾಗೂ  ಪ್ರಬಂಧದಲ್ಲಿ ಆಸಕ್ತಿ ಇರುವ ಮಕ್ಕಳು ರಾಮಕೃಷ್ಣ ವಿದ್ಯಾಲಯ ರವೀಂದ್ರ ನಗರ, ಹಾಸನ ಇಲ್ಲಿ ಜ.17 ರಂದು ಬೆಳಿಗ್ಗೆ 10 ಗಂಟೆಗೆ ಹಾಜರಾಗುವುದು.
 ಜೊತೆಗೆ ಶಾಲಾ ದೃಢೀಕರಣ ಹಾಗೂ ಭಾವ ಚಿತ್ರ ತರಬೇಕು. ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ದಿ ಯೋಜನಾಧಿಕಾರಿ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ, ಹಾಸನ, ದೂ. 267223 ಅಥವಾ 9844511424ನ್ನು ಸಂಪರ್ಕಿಸಿ.
ಭಾರೀ ಗಾತ್ರದ ಭೂತಾಯಿ ಮೀನು...
ಸಕಲೇಶಪುರ: ಇತಿಹಾಸದಲ್ಲೇ ಮೊದಲ ಬಾರಿಗೆ ಭಾರೀ ಗಾತ್ರದ ಭೂತಾಯಿ ಮೀನು ಮಾರುಕಟ್ಟೆಗೆ ಬಂದಿದ್ದು, ಶಾಖಾಹಾರಿಗಳು ಈ ಮೀನು ಕಂಡು ಚಕಿತಗೊಂಡಿದ್ದಾರೆ. ಪಟ್ಟಣದ ಮೀನು ಅಂಗಡಿಗಳಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಗಾತ್ರದ ಭೂತಾಯಿ ಮೀನು(ಮತ್ತಿ) ಭರದಿಂದ ಮಾರಾಟವಾಗುತ್ತಿದೆ. ಸಾಮನ್ಯವಾಗಿ ಭೂತಾಯಿ ಮೀನು 40 ರಿಂದ 60 ಗ್ರಾಂ ತೂಗುವುದು ಸಾಮಾನ್ಯ. ಕಳೆದ ಎರಡು ದಿನಗಳಿಂದ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಮೀನಿನ ತೂಕ ಬರೋಬ್ಬರಿ  200 ರಿಂದ 250 ಗ್ರಾಂಗಳಾಗಿದೆ. ಇಷ್ಟು ದೊಡ್ಡ ಗಾತ್ರದ ಭೂತಾಯಿ ಮೀನು ಕಳೆದ 60 ವರ್ಷಗಳಲ್ಲೇ ಪ್ರಥಮ ಬಾರಿಗೆ ನಾನು ನೋಡಿದ್ದು ಎನ್ನುತ್ತಾರೆ ಮೀನುಮಾರಾಟಗಾರ ಮೊಣುಕಾಕ. ಅಪರೂಪಕ್ಕೆ ಮಾರುಕಟ್ಟೆಗೆ ಬಂದಿರುವ ಭಾರೀ ಗಾತ್ರದ ಈ ಮೀನು ಕೊಳ್ಳಲು ಜನ ಮುಗಿಬಿದ್ದಿರುವುದರಿಂದ ಮತ್ತಿ ಮೀನಿನ ಧಾರಣೆ ಸಹ ಹೆಚ್ಚಾಗಿದೆ.
18 ರಿಂದ ಕ್ರೀಡಾಕೂಟ
ಹಾಸನ: ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಜ.18 ರಿಂದ 20 ರ ವರೆಗೆ ಬೆಂಗಳೂರಿನ ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ.
 ಕ್ರೀಡಾ ಕೂಟದಲ್ಲಿ ಡಿ.14 ರಂದು ಜಿಲ್ಲಾ ಕ್ರೀಡಾಂಗಣ ಹಾಸನದಲ್ಲಿ ನಡೆದ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾ ಕೂಟದಲ್ಲಿ  ವೈಯಕ್ತಿಕ ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದವರು ಮತ್ತು ತಂಡ ಸ್ಪರ್ಧೆಯಲ್ಲಿ (ರಿಲೇ ಸೇರಿದಂತೆ) ಪ್ರಥಮ ಸ್ಥಾನ ಪಡೆದವರು ಜ.17 ರಂದು ಸಂಜೆ ಶ್ರೀಕಂಠೀರವ ಕ್ರೀಡಾಂಗಣದಲ್ಲಿ  ಗುರುತಿನ ಚೀಟಿಯೊಂದಿಗೆ ವರದಿ ಮಾಡಲು ಕೋರಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement