ನಿಮಗಾಗದಿದ್ರೆ ಲಿಖಿತ ತಿಳಿಸಿ
ಕ.ಪ್ರ.ವಾರ್ತೆ, ಹಾಸನ, ಜ. 9
ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಜಿಲ್ಲೆಯ ಅಭಿವೃದ್ಧಿ ಕೆಲಸಗಳನ್ನು ಮಾಡಲು ಅಧಿಕಾರಿಗಳಿಗೆ ಹೆದರಿಕೆ ಇದ್ದರೆ ಅಥವಾ ಅವು ತಮ್ಮಿಂದ ಸಾಧ್ಯವಾಗದಿದ್ದರೆ, ಆ ಬಗ್ಗೆ ಲಿಖಿತವಾಗಿ ನೀಡಲಿ. ಇದರ ವಿರುದ್ಧ ಮುಖ್ಯಮಂತ್ರಿ ಮನೆ ಮುಂದೆ ಧರಣೆ ನಡೆಸುವುದಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೇಳಿದರು.
ಜಿಲ್ಲಾ ಪಂಚಾಯ್ತಿ ಹೊಯ್ಸಳ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹೆದರುವ ಅವಶ್ಯಕತೆಯಿಲ್ಲ: ಕುಡಿಯುವ ನೀರಿನ ಸಮಸ್ಯೆ, ಸಮುದಾಯ ಭವನ ನಿರ್ಮಾಣ, ರಸ್ತೆ ನಿರ್ಮಾಣ ಸೇರಿದಂತೆ ನಾನಾ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲು ಒಂದು ವೇಳೆ ಅಧಿಕಾರಿಗಳ ಮೇಲೆ ಬೆದರಿಕೆ ಹಾಕಿದ್ದರೆ, ಈ ಬಗ್ಗೆ ಅಧಿಕಾರಿಗಳು ವಾಸ್ತವಾಂಶ ನೀಡಿದರೆ ಈ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುತ್ತದೆ. ಅದನ್ನು ಬಿಟ್ಟು ಅಧಿಕಾರಿಗಳು ಕೆಲಸ ಮಾಡದೆ ಕೈಕಟ್ಟಿ ಕುಳಿತುಕೊಳ್ಳುವುದು ಸರಿಯಲ್ಲ. ಇಲ್ಲಿ ಯಾರಿಗೂ ಹೆದರಬೇಕಾದಂತಹ ಅವಶ್ಯಕತೆ ಇಲ್ಲ ಎಂದು ಅಧಿಕಾರಿಗಳಿಗೆ ಧೈರ್ಯ ತುಂಬಿದರು.
ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕು. ಈಗಾಗಲೇ ಕೆಲವು ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಮೇ ನಂತರದಲ್ಲಿ ಮಳೆಯಾಗದಿದ್ದರೆ ನೀರಿನ ಸಮಸ್ಯೆ ಮತ್ತಷ್ಟು ಹೆಚ್ಚಾಗಲಿದೆ. ಬೇಲೂರಿನಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿದೆ. ಅಧಿಕಾರಿಗಳು ಟ್ಯಾಂಕರ್ ಮೂಲಕವಾದರೂ ಕುಡಿಯುವ ನೀರನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದ ಅವರು, ಕುಡಿಯುವ ನೀರಿಗಾಗಿ ಉಪವಾಸ ಸತ್ಯಾಗ್ರಹ ಬೇಕಾದರೂ ಕೈಗೊಳ್ಳುವುದಾಗಿ ಹೇಳಿದರು.
ಕುಡಿಯುವ ನೀರು ಪೂರೈಸಲು ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು. ಅಧಿಕಾರಿಗಳು ಅಗತ್ಯ ವಸ್ತುಗಳು ಬಂದ ನಂತರ ಹಾಗೂ ಅರ್ಜಿಗಳು ಬಂದ ನಂತರ ಕೆಲಸ ಮಾಡುವುದಾಗಿ ಹೇಳಿದ್ದಾರೆ. ಆದ್ದರಿಂದ ಕೂಡಲೇ ಕಾಮಗಾರಿಗಳನ್ನು ನಡೆಸಬೇಕು ಎಂದರು.
18 ದಿನಗಳಿಂದ ಪ್ರತಿಭಟನೆ: ಜಿಲ್ಲೆಯ ರಸ್ತೆ ಕಾಮಗಾರಿಗಳಿಗೆ ಜಲ್ಲಿಯ ಸಮಸ್ಯೆ ಉಂಟಾಗಿದೆ ಎಂಬ ದೂರು ಬಂದಿದೆ. ಮರಳು ಲಾರಿಯವರು ಕಳೆದ 18 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ಅವರತ್ತ ಗಮನ ಹರಿಸುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಮಾರ್ಚ್ ಅಂತ್ಯದೊಳಗೆ ನಾನಾ ಯೋಜನೆಗಳಲ್ಲಿನ ವಸತಿಗಳನ್ನು ಪೂರ್ಣಗೊಳಿಸಬೇಕಾಗಿದೆ. ಆದರೆ ಪ್ರಗತಿ ಕಡಿಮೆಯಾಗಿದೆ ಎಂದು ನುಡಿದರು.
ಜಲಾನಯನ ಅಧಿಕಾರಿ ಮಾತನಾಡಿ, ಐಡಬ್ಲ್ಯೂಎಂಪಿ ಯೋಜನೆ ಮತ್ತು ಆರ್‌ಐಡಿಎಫ್‌ನಲ್ಲಿ ಸಹ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಆದರೆ ಇತ್ತೀಚೆಗೆ ಮಾಹಿತಿ ಹಕ್ಕಿನಲ್ಲಿ ಕೆಲವರು ಮಾಹಿತಿ ಕೇಳುತ್ತಿರುವುದರಿಂದ ಇಲಾಖೆಯ ಕೆಲಸಗಳಿಗೆ ತೊಡಕು ಉಂಟಾಗುತ್ತಿದೆ ಎಂದ ಅವರು, ಜಾವಗಲ್, ಹಳೇಬೀಡಿನಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ ಎಂದರು.
ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಬೋರ್‌ವೆಲ್ ಪಾಯಿಂಟ್ ಮಾಡಿರುವ ಕಡೆಗಳಲ್ಲಿ ನೀರು ಲಭ್ಯವಾಗುತ್ತಿಲ್ಲ. ಅಧಿಕಾರಿಗಳು ಆರ್‌ಟಿಐನಲ್ಲಿ ಮಾಹಿತಿ ಕೇಳಿದವರೆಗೆ ಮಾಹಿತಿ ನೀಡುವುದರಲ್ಲೇ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಇದರಿಂದ ಸಾರ್ವಜನಿಕ ಕೆಲಸಕ್ಕೆ ಅಡ್ಡಿಯಾಗಿದೆ. ಜೊತೆಗೆ ಸಮುದಾಯ ಭವನ ನಿರ್ಮಾಣದ ಕಾಮಗಾರಿಗಳು ಕೆಲವು ಕಡೆ ಪೂರ್ಣಗೊಂಡಿಲ್ಲ ಎಂದು ತಿಳಿಸಿದರು.
ಬೇಕಂತಲೇ ಕಾಂಗ್ರೆಸ್‌ನವರು ಅಡ್ಡಿ: 4 ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಚಲುವನಹಳ್ಳಿಯ 1 ಪ್ಲೋರ್ ಆಗಿದ್ದರೆ 2ನೇ ಪ್ಲೋರ್‌ನಲ್ಲಿ ಕೆಲಸ ಆಗಿಲ್ಲ. ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದ ಅವರು, ನನ್ನ ಕ್ಷೇತ್ರದಲ್ಲಿ ನಾನಾ ಅಭಿವೃದ್ಧಿಗೆ 13 ಕೋಟಿ ರು. ಬಂದಿದ್ದರು ಸಹ ಕೇವಲ 1 ಕೋಟಿ ರು. ಕೆಲಸ ಪ್ರಗತಿಯಲ್ಲಿದೆ. ಉಳಿದ 12 ಕೋಟಿ ರು. ಕಾಮಗಾರಿಗಳು ಆಗಿಲ್ಲ. ಎಸ್ಸಿ ಎಸ್ಟಿ ಕಾಲೋನಿ, ಗೊಲ್ಲರಹಟ್ಟಿ ಸೇರಿದಂತೆ ಇತರೆ ಕಡೆಗಳಲ್ಲಿ ಕಾಂಕ್ರಿಟ್ ರಸ್ತೆ ಮಾಡಲು ಆಗಿಲ್ಲ ಎಂದು ಹೇಳಿದರು.
ತಮ್ಮ ಕ್ಷೇತ್ರದಲ್ಲಿ ರಸ್ತೆ ಕಾಮಗಾರಿಗಳಿಗೆ ಬೇಕು ಅಂತಾನೆ ಕಾಂಗ್ರೆಸ್‌ನವರು ಅಡ್ಡಿ ಪಡಿಸುತ್ತಿದ್ದಾರೆ. ರಸ್ತೆ ಕಾಮಗಾರಿಗೆ ಜಲ್ಲಿ ತೆಗೆದುಕೊಂಡು ಹೋಗುವ ಲಾರಿಗಳನ್ನು ಅಡ್ಡಗಟ್ಟಿ ಬೆದರಿಸುತ್ತಿದ್ದಾರೆ. ಆದ್ದರಿಂದ ಜಿಲ್ಲಾಧಿಕಾರಿ ಜಲ್ಲಿಯನ್ನು ಕೊಡಿಸಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ದೇವೇಗೌಡರು ಪ್ರತಿಕ್ರಿಯಿಸಿ ಸರ್ಕಾರಿ ಕೆಲಸ ಕಾರ್ಯಗಳಿಗೆ ಜಿಲ್ಲಾಧಿಕಾರಿ ಜಲ್ಲಿಯನ್ನು ನೀಡುವ ಬಗ್ಗೆ ಅನುಮತಿ ನೀಡಿದರೆ ಸಮಸ್ಯೆ ಬಗೆಹರಿಯುವುದಾದರೆ ಅದನ್ನು ಕೊಡಿಸುವುದಾಗಿ ಹೇಳಿದರು.
ಶಾಸಕ ಎಚ್.ಡಿ.ರೇವಣ್ಣ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆ ಈಗಾಗಲೆ ಜಿಲ್ಲೆಯಲ್ಲಿ ಪ್ರಾರಂಭವಾಗಿದ್ದು, ನೀರಿಗೆ ಮೊದಲ ಆದ್ಯತೆ ನೀಡದಿದ್ದರೆ ಮುಂದೆ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳಲಿದೆ. ಆದ್ದರಿಂದ ಅದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಯಾವುದೇ ಕಾರಣಕ್ಕೂ ವಿದ್ಯುತ್ ಇಲ್ಲ ಇಲಾಖೆ ಅಂತ ಜವಾಬು ಹೇಳಬಾರದು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಚೆಸ್ಕಾಂ ಅಧಿಕಾರಿ, ವಿದ್ಯುತ ಪೂರೈಕೆಗೆ ಅಗತ್ಯ ವಸ್ತುಗಳು ಬಂದ ನಂತರ ಹಾಗೂ ಅರ್ಜಿಗಳು ಬಂದರೆ ಕಾಮಗಾರಿಯನ್ನು ನಡೆಸುವುದಾಗಿ ಭರವಸೆ ನೀಡಿದರು.
ಶಾಸಕ ಸಿ.ಎನ್.ಬಾಲಕೃಷ್ಣ, ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ, ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್, ಜಿಲ್ಲಾ ಎಸ್ಪಿ ರವಿ ಡಿ.ಚನ್ನಣ್ಣನವರ್ ಇತರರು ಇದ್ದರು.