ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಶಾಂತಿಗಾಗಿ ಧರ್ಮದ ಪರಿಪಾಲನೆ ಅಗತ್ಯ

Vishwanath S
Updated On : 10 Jan 2014, 12:47 pm

ಕ.ಪ್ರ.ವಾರ್ತೆ ,  ಅರಸೀಕೆರೆ ,  ಜ.9
ಮನುಷ್ಯ ಸುಖ, ಶಾಂತಿ, ನೆಮ್ಮದಿಯ ಬದುಕಿಗೆ ಧರ್ಮದ ಪರಿಪಾಲನೆ ಅತ್ಯಗತ್ಯ ವಾಗಿದೆ ಎಂದು ಕುಪ್ಪೂರು ಮಠದ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಪ್ರತಿಪಾದಿಸಿದರು.
ತಾಲೂಕಿನ ಮಾಡಾಳು ಗುರು ಶಿವಬಸವ ಕುಮಾರಾಶ್ರಮದಲ್ಲಿ ಒಂದು ವಾರ ನಡೆದ ಪರಮ ತಪಸ್ವೀ ಹಾಗೂ ಪವಾಡ ಪುರುಷ ಹಾರನಹಳ್ಳಿ ಕೋಡಿಮಠದ ಲಿಂ. ಶಿವಲಿಂಗಜ್ಜಯ್ಯ ಸ್ವಾಮೀಜಿ ಪುರಾಣ ಪ್ರವಚನ  ಹಾಗೂ ನೀಲಲೋಚನ ಸ್ವಾಮೀಜಿ 21ನೇ ವರ್ಷದ ಪುಣ್ಯ ಸ್ಮರಣಾರಾಧನೆ  ಸಮಾರೋಪದ ಸಾನಿಧ್ಯ ವಹಿಸಿ ಶ್ರೀಗಳು ಆರ್ಶೀವಚನ ನೀಡಿದರು.
ಆಧ್ಯಾತ್ಮಿಕ ಕೇಂದ್ರಗಳು ಧರ್ಮ ಮತ್ತು ಆದರ್ಶಗಳ ಸಂಗಮವೇ ಆಗಿದ್ದು, ಉತ್ತಮ ಸಂಸ್ಕಾರ ನೀಡುವ ಮೂಲಕ ಮನುಷ್ಯನ ಉನ್ನತಿಗೆ ಪ್ರೇರಕ ಶಕ್ತಿ ನೀಡುತ್ತಿವೆ. ವೀರಶೈವ ಧರ್ಮ ಸಕಲರಿಗೂ ಲೇಸನ್ನೇ ಬಯಸಿದೆ, ಬಡವ, ಬಲ್ಲಿದ ಎನ್ನದೇ ಸಮಾಜದಲ್ಲಿ ಎಲ್ಲರಿಗೂ ಸಮಾನತೆಯ ಅವಕಾಶ ಕೊಟ್ಟಿದೆ ಎಂದರು.
ವೀರಶೈವ ಧರ್ಮ ವ್ಯಕ್ತಿ ಪ್ರಧಾನವಾಗದೇ ತತ್ವ ಪ್ರಧಾನವಾಗಿದೆ. ಸಾಮಾಜಿಕ ಚಿಂತನೆ ಮೈಗೂಡಿಸಿಕೊಂಡು ಸಕಲ ಜೀವಾತ್ಮಗಳ ಏಳಿಗೆಗಾಗಿ ಶ್ರಮಿಸಿದೆ. ಜಾತಿ ಭೇಧಗಳ ಭಾವನೆಗಳನ್ನು ಬೇರು ಸಮೇತ ಕಿತ್ತು ಹಾಕಿ ಮಾನವೀಯ ಮೌಲ್ಯಗಳನ್ನು ಬಿತ್ತುವ ಕಾರ್ಯ ಮಾಡುತ್ತಿದೆ. ಇಂತಹ ಪವಿತ್ರ ಧರ್ಮವನ್ನು ಒಡೆಯುವ ಹುನ್ನಾರವನ್ನು ಕೆಲವರು ಮಾಡುತ್ತಿರುವುದು ದುರ್ದೈವದ ಸಂಗತಿ ಎಂದು ವಿಷಾದಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಅಡವಿ ಅಮರೇಶ್ವರ ಮಠದ  ಶಾಂತಮಲ್ಲ ಸ್ವಾಮೀಜಿ ಮಾತನಾಡಿ ಗುರುವಿನ ಮಾರ್ಗದರ್ಶನ ಪಡೆದು ಧರ್ಮ ಮಾರ್ಗದಲ್ಲಿ ನಡೆದರೆ ನಿಶ್ಚಿತ ಗುರಿ ಸಾಧಿಸಲು ಸಾಧ್ಯವಾಗುತ್ತದೆ. ಗುರು ಪರಂಪರೆಯಲ್ಲಿ ಬೆಳೆದು ಬಂದ ಉನ್ನತ ಸಂಸ್ಕತಿಯನ್ನು ನಮ್ಮ ದೇಶ ಹೊಂದಿದೆ. ಆದ್ದರಿಂದ ಇಂದಿಗೂ ಅನೇಕ ಸಾಧು, ಸಂತರು, ಮಹಾಪುರುಷರ ಹಾಗೂ ಬಸವಾದಿ ಶಿವಶರಣರ ಬಗ್ಗೆ ಆಪಾರ ಗೌರವವಿದ್ದು ಇಂದಿಗೂ ಜನರು ವಿಧೇಯರಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಮಹಾ ತಪಸ್ವಿಗಳು, ಪವಾಡ ಪುರುಷರು ಆದ ಲಿಂ. ಶಿವಲಿಂಗಜ್ಜಯ್ಯ ಸ್ವಾಮೀಜಿ ಮತ್ತು ಸರಳ ಸಂಪನ್ನರೂ, ಕಾಯಕ ಯೋಗಿಗಳೂ,ಇಷ್ಟಲಿಂಗ ಪೂಜಾ ನಿಷ್ಠರೂ ಆದ ಲಿಂ. ನೀಲಲೋಚನ ಸ್ವಾಮೀಜಿ ನುಡಿ, ತತ್ವ, ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ರೂಢಿಸಿಕೊಂಡರೆ ಜೀವನ ಹಸನಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸದಾಶಿವಪೇಟೆಯ ಗದ್ದಿಗೇಶ್ವರಸ್ವಾಮೀಜಿ  ಆರ್ಶೀವಚನ ನೀಡಿದರು. ತಿಪಟೂರು ಷಡಕ್ಷರಿ ಮಠದ ರುದ್ರಮುನಿ ಸ್ವಾಮೀಜಿ, ಧಾರವಾಡ ಕಮತಗಿಯ ಹುಚ್ಚೇಶ್ವರ ಸ್ವಾಮೀಜಿ, ಹೊಸಪೇಟೆ ವಾಣಿಜ್ಯೋದ್ಯಮಿ ಚನ್ನಬಸವರಾಜು, ಜಿಪಂ ಮಾಜಿ ಸದಸ್ಯ ಡಿ.ಎಂ ತಮ್ಮಯ್ಯ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement