ಸಕಲೇಶಪುರ ತಾ. ಅಭಿವೃದ್ಧಿ: ರು. 176 ಕೋಟಿ ಬಿಡುಗಡೆ
ಕ.ಪ್ರ.ವಾರ್ತೆ , ಸಕಲೇಶಪುರ , ಜ.9
ರಾಜ್ಯ ಕಾಂಗ್ರೆಸ್ ಸರ್ಕಾರ ತಾಲೂಕಿನ ರಸ್ತೆ ಅಭಿವೃದ್ಧಿಗೆ ನಾನಾ ಯೋಜನೆಗಳ ಮೂಲಕ 176 ಕೋಟಿ ರು. ಬಿಡುಗಡೆ ಮಾಡಿದೆ ಎಂದು ತಾಲೂಕು ಕಾಂಗ್ರೆಸ್ ಅಧ್ಯಕ್ಷ ವಿದ್ಯಾಶಂಕರ್ ಹೇಳಿದ್ದಾರೆ.
ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಚ್ಚು ಮಳೆ ಬೀಳುವ ತಾಲೂಕಿನಲ್ಲಿ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದರೂ ರಸ್ತೆ ದುರಸ್ತಿ ಅಥವಾ ಅಭಿವೃದ್ಧಿಗೆ ಕ್ಷೇತ್ರ ಶಾಸಕರು ಯಾವುದೇ ಆಸಕ್ತಿ ವಹಿಸದಿರುವುದನ್ನು ಮನಗಂಡ ಸ್ಥಳೀಯ ಕಾಂಗ್ರೆಸ್ ಸಮಿತಿ ಲೋಕೋಪಯೋಗಿ ಸಚಿವರು ಹಾಗೂ ಮುಖ್ಯಮಂತ್ರಿಗೆ ಇಲ್ಲಿನ ರಸ್ತೆ ಸ್ಥಿತಿಗತಿ ವಿವರಿಸಿದ ಪರಿಣಾಮ ರಸ್ತೆ ಅಭಿವೃದ್ಧಿಗೆ ನಾನಾ ಯೋಜನೆಗಳ ಮೂಲಕ ಅಪಾರ ಮೊತ್ತದ ಹಣ ಬಿಡುಗಡೆ ಮಾಡಿದೆ ಎಂದು ತಿಳಿಸಿದರು.
ಅಪೆಂಡಿಕ್ಸ್ ಬಜೆಟ್ನಲ್ಲಿ ತಾಲೂಕಿನ ಜನ್ನಾಪುರ, ಹಾನುಬಾಳ್, ಜಾನೆಕೆರೆ ಹೆತ್ತೂರು ಮಾರ್ಗ ಹಾಗೂ ಉಚ್ಚಂಗಿ-ಐಗೂರು, ಮಾರನಹಳ್ಳಿ-ಗುಡಾಣಕೆರೆ ರಸ್ತೆ ಮತ್ತು ಮಾರನಹಳ್ಳಿ ಮಾರ್ಗವಾಗಿ ಹೊಂಗಡಹಳ್ಳ ತಲುಪುವ ಮಹತ್ವಕಾಂಕ್ಷಿ ಯೋಜನೆಗೆ 40 ಕೋಟಿ ರು, ನಬಾರ್ಡ್ ಯೋಜನೆಯ ಒಂದು ಕೋಟಿ ಅನುದಾನದಲ್ಲಿ ಗುಳಗಳಲೆ-ಹೆಬ್ಬನಹಳ್ಳಿ ರಸ್ತೆ ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.
ಸಿ.ಆರ್.ಎಫ್ನ 4 ಕೋಟಿ ಹಣದಲ್ಲಿ ಆನೇಮಹಲ್ ಬೊಮ್ಮನಕೆರೆ-ಹೆತ್ತೂರು ರಸ್ತೆ ಅಭಿವೃದ್ಧಿ ಪಿಎಂಜಿಎಸ್ವೈ ಯೋಜನೆಯ 4.71 ಕೋಟಿ ಹಣದಲ್ಲಿ ಗುಡಾಣಕೆರೆ-ಹೆಗದ್ದೆರಸ್ತೆ ಅಭಿವೃದ್ಧಿ, ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯ 7.80 ಲಕ್ಷ ರು ವೆಚ್ಚದಲ್ಲಿ ವಡೂರು, ಕಳಲೇ ,ಚಿನ್ನಹಳ್ಳಿ, ಮೆಣಸಮಕ್ಕಿ, ಎರಗಳ್ಳಿ, ಬಾಣಗೆರೆ ಕಾಲೋನಿ ರಸ್ತೆ ಅಭಿವೃದ್ದಿ ಪಡಿಸಲಾಗುವುದು. ಎಂ.ಡಿ.ಆರ್ ರಸ್ತೆಗಳ ಅಭಿವೃದ್ಧಿಗೆ ಕೋಟಿ ರು. ಸೇರಿದಂತೆ ಒಟ್ಟು 176.16 ಕೋಟಿ ಬಿಡುಗಡೆ ಮಾಡಲಾಗಿದ್ದು, ತಾಲೂಕಿನ ಇತಿಹಾಸದಲ್ಲಿ ರಸ್ತೆ ಅಭಿವೃದ್ಧಿಗೆ ಇಷ್ಟು ದೊಡ್ಡ ಪ್ರಮಾಣದ ಹಣವನ್ನು ಯಾವುದೆ ಸರಕಾರವು ಬಿಡುಗಡೆ ಮಾಡಿರಲಿಲ್ಲ ಎಂದು ಹೇಳಿದರು.
ಮಾಜಿ ಶಾಸಕ ಡಿ.ಮಲ್ಲೇಶ್ ಮಾತನಾಡಿ, ತಾಲೂಕಿನ ರಸ್ತೆಗಳು ತೀವ್ರಮಟ್ಟದಲ್ಲಿ ಹದಗೆಡಲು ಸಂಬಂಧಪಟ್ಟ ಅಧಿಕಾರಿಗಳೇ ಕಾರಣರಾಗಿದ್ದು, ಉತ್ತಮ ಗುಣಮಟ್ಟದ ರಸ್ತೆಗಳನ್ನು ನಿರ್ಮಾಣ ಮಾಡಿದರೆ ಪ್ರತಿವರ್ಷ ರಸ್ತೆಗಳಿಗೆ ಹಣ ವ್ಯಯಿಸುವುದು ತಪ್ಪಲಿದೆ ಎಂದರು.
ಮುಖಂಡ ಪ್ರಧಾನ ಕಾರ್ಯದರ್ಶಿ ಗೊದ್ದುಲೋಕೇಶ್, ಕೊಲ್ಲಹಳ್ಳಿ ಸಲೀಂ, ಯುವ ಕಾಂಗ್ರೆಸ್ ಅಧ್ಯಕ್ಷ ಲೋಹಿತ್, ಬೈಕೆರೆ ದೇವರಾಜ್, ಬಾಗರವಳ್ಳಿ ಲಿಂಗಪ್ಪ ಇತರರು ಇದ್ದರು.