ಅಡುಗೆ ಅನಿಲ, ತೈಲ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ
ಕ.ಪ್ರ.ವಾರ್ತೆ , ಅರಸೀಕೆರೆ , ಜ. 10
ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅನಿಲ ಹಾಗೂ ತೈಲ ಬೆಲೆಯನ್ನು ಪದೇ ಪದೇ ಏರಿಕೆ ಮಾಡುತ್ತಿರುವ ನೀತಿಯನ್ನು ಖಂಡಿಸಿ ಶುಕ್ರವಾರ ತಾಲ್ಲೂಕು ಬಿಜೆಪಿ ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಸೈಕಲ್ ಮೇಲೆ ಖಾಲಿ ಸಿಲಿಂಡರ್ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.
ಕಿಡಿ: ಪ್ರತಿಭಟನಾ ನಿರತರನ್ನು ಉದ್ದೇಶಿಸಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಹರಳಕಟ್ಟ ರಮೇಶ್ ಮಾತನಾಡಿ, ಕೇಂದ್ರದ ಯು.ಪಿ.ಎ. ಸರ್ಕಾರ ಮನ ಬಂದಂತೆ ಅಡುಗೆ ಅನಿಲ ಹಾಗೂ ತೈಲ ಬೆಲೆ ಹೆಚ್ಚಳ ಮಾಡುವ ಮೂಲಕ ಸಾಮಾನ್ಯ ಜನರ ಬದುಕಿನೊಂದಿಗೆ ಚೆಲ್ಲಾಟವಾಡತೊಡಗಿದೆ. ಮುಂಬರುವ ದಿನಗಳಲ್ಲಿ ಇದರ ಪ್ರಾಯಃಶ್ಚಿತ ಅನುಭವಿಸಬೇಕಾಗುತ್ತದೆ ಎಂದು ಕಿಡಿಕಾರಿದರು.
ಜನತೆಯಿಂದ ತಕ್ಕ ಉತ್ತರ: ತಾಲ್ಲೂಕು ಬಿ.ಜೆ.ಪಿ. ವಕ್ತಾರ ವೈ.ಕೆ. ದೇವರಾಜ್ ಮಾತನಾಡಿ, ಕೇಂದ್ರದ ಯುಪಿಎ. ಸರ್ಕಾರ ಲಕ್ಷಾಂತರ ಕೋಟಿ ಬ್ರಹ್ಮಾಂಡ, ಭ್ರಷ್ಟಾಚಾರವೆಸಗಿ ದೇಶದ ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡಿ ಜನರನ್ನು ಬೆಲೆ ಏರಿಕೆಯ ಕೂಪಕ್ಕೆ ತಳ್ಳಿ ಈಗ ಅನಿಲ ಬೆಲೆ ಏರಿಕೆ ಮಾಡುವ ಮೂಲಕ ಬಡ ಆಟೋ ರಿಕ್ಷಾ ಚಾಲಕರ ಅನ್ನಕ್ಕೆ ಕಲ್ಲು ಹಾಕಿದೆ. ಇಂತಹ ಕಾರ್ಯಗಳನ್ನು ಮಾಡಿಕೊಂಡು ಬಂದಿರುವ ಕೇಂದ್ರ ಸರ್ಕಾರಕ್ಕೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜನತೆ ತಕ್ಕ ಉತ್ತರ ಹೇಳಲಿದ್ದಾರೆ ಎಂದು ತಿಳಿಸಿದರು.
ಯುವಮೋರ್ಚಾ ಅಧ್ಯಕ್ಷ ದುಮ್ಮೇನಹಳ್ಳಿ ರಮೇಶ್ ಮಾತನಾಡಿ, ತೈಲ ಹಾಗೂ ಅನಿಲ ಬೆಲೆ ನಿಯಂತ್ರಣದಲ್ಲಿಡಲು ವಿಫಲವಾಗಿರುವ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ತಮ್ಮ ಸ್ಥಾನಕ್ಕೆ ಕೂಡಲೇ ರಾಜಿನಾಮೆ ನೀಡಬೇಕು. ಕೇಂದ್ರದಲ್ಲಿ ಯು.ಪಿ.ಎ. ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಬಡಜನರ ಬದುಕಿನೊಂದಿಗೆ ಒಂದಿಲ್ಲೊಂದು ರೀತಿಯಲ್ಲಿ ತೊಂದರೆ ನೀಡುವ ಕೆಲಸ ಮಾಡಿಕೊಂಡು ಬಂದಿದೆ. ಇಂತಹ ಸರ್ಕಾರ ಅಧಿಕಾರದಲ್ಲಿ ಮುಂದುವರೆಯಲು ನೈತಿಕ ಹಕ್ಕಿಲ್ಲ. ಕೂಡಲೇ ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸಬೇಕೆಂದು ಆಗ್ರಹಿಸಿದರು.
ಜಿಲ್ಲಾ ವಕ್ತಾರ ಎನ್.ಡಿ. ಪ್ರಸಾದ್, ನಗರಾಧ್ಯಕ್ಷ ಹಿರಿಯಣ್ಣ, ಎ.ಪಿ.ಎಂ.ಸಿ.ಸದಸ್ಯ ದುಮ್ಮೇನಹಳ್ಳಿ ಗಂಗಾಧರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಂಜಿಗೆರೆ ಬಸವರಾಜ್, ತಾ.ಪಂ. ಸದಸ್ಯ ದಿನೇಶ್, ಚೇತನ್, ಮನೋಜ್ ಕುಮಾರ್, ಪ್ರಭು, ಯತೀಶ್, ಇನ್ನಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.