ಮಾಲೇಕಲ್ಲು ತಿರುಪತಿಯಲ್ಲಿ ವೈಕುಂಠ ಏಕಾದಶಿ
ಕ.ಪ್ರ.ವಾರ್ತೆ , ಅರಸೀಕೆರೆ , ಜ. 10
ರಾಜ್ಯದ ತಿರುಪತಿಯೆಂದೇ ಇತಿಹಾಸ ಪ್ರಸಿದ್ಧ ಮಾಲೆಕಲ್ಲು ತಿರುಪತಿಯ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಶನಿವಾರ ವಿಶೇಷ ಪೂಜೆ ಕೈಂಕರ್ಯಗಳು ನಡೆಯಲಿವೆ.
ವಿಶೇಷ ಅಲಂಕಾರ: ವೈಕುಂಠ ಏಕಾದಶಿಯ ಪವಿತ್ರ ದಿನದಂದು ಬೆಟ್ಟದ ಮೇಲೆ ನೆಲೆಸಿರುವ ಪದ್ಮಾವತಿ ವೆಂಕಟರಮಣ ಸ್ವಾಮಿಗೆ ಹಾಗೂ ಬೆಟ್ಟದ ತಪ್ಪಲಿನಲ್ಲಿರುವ ಲಕ್ಷ್ಮೀ ಹಾಗೂ ಗೋವಿಂದರಾಜುಸ್ವಾಮಿಗೆ ನಾನಾ ಅಭಿಷೇಕ, ವಿಶೇಷ ಅಲಂಕಾರ ಹಾಗೂ ತೀರ್ಥಪ್ರಸಾದ ವಿನಿಯೋಗ ನಡೆಯಲಿದ್ದು ,ನಂತರ ಬೆಳ್ಳಗ್ಗೆ 7.30ರಿಂದ ಸಂಜೆ 6.30ರವರೆಗೆ ಗೋವಿಂದರಾಜುಸ್ವಾಮಿಗೆ ವೈಕುಂಠ ನಾರಾಯಣ ವಿಶೇಷ ಅಲಂಕಾರವನ್ನು ಏರ್ಪಡಿಸಲಾಗಿದೆ.
ಅನ್ನಸಂತರ್ಪಣೆ: ಶ್ರೀ ಲಕ್ಷ್ಮಿ ಹಾಗೂ ಗೋವಿಂದರಾಜುಸ್ವಾಮಿ ದರ್ಶನ ಮಾಡಿದ ಭಕ್ತರು ದೇವಾಲಯದ ಎಡಭಾಗದಲ್ಲಿರುವ ವೈಕುಂಠ ದ್ವಾರದ ಮೂಲಕ ನಿರ್ಗಮಿಸಲು ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಅಂದು ಸೇರುವ ಸಾವಿರಾರು ಭಕ್ತರಿಗೆ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ನಾರಾಯಣಗೌಡರಿಂದ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿದೆ.
ಅದೇ ರೀತಿ ಮುಜರಾಯಿ ಇಲಾಖೆಗೆ ಸೇರಿರುವ ತಾಲೂಕಿನ ಬಿಳಿಕಲ್ಲು ರಂಗನಾಥಸ್ವಾಮಿ, ಗುತ್ತಿನಕೆರೆ ರಂಗನಾಥಸ್ವಾಮಿ ಬೆಟ್ಟದಪುರದ ರಂಗನಾಥಸ್ವಾಮಿ ದೇವಾಲಯಗಳನ್ನು ವೈಕುಂಠ ಏಕಾದಶಿಯ ಪ್ರಯುಕ್ತ ವಿಶೇಷ ಪೂಜೆ ಹಾಗೂ ಭಕ್ತಾಧಿಗಳಿಗೆ ತೀರ್ಥ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿದೆ.