ರಸ್ತೆ ಅವ್ಯವಸ್ಥೆ ಖಂಡಿಸಿ ಎಬಿವಿಪಿ ಪ್ರತಿಭಟನೆ
ಕ.ಪ್ರ.ವಾರ್ತೆ , ಹಾಸನ , ಜ. 10
ಜಿಲ್ಲಾದ್ಯಂತ ರಸ್ತೆಗಳು ಹಾಳಾಗಿರುವುದನ್ನು ವಿರೋಧಿಸಿ ನಗರದಲ್ಲಿ ಶುಕ್ರವಾರ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಶ್ರೀಮತಿ ಎಲ್.ವಿ. ಪಾಲಿಟೆಕ್ನಿಕ್ ಕಾಲೇಜಿನಿಂದ ಮೆರವಣಿಗೆ ಹೊರಟ ಕಾರ್ಯಕರ್ತರು ಹಾಲಿನ ಡೈರಿ ವೃತ್ತದಲ್ಲಿ ರಸ್ತೆತಡೆ ಹಾಗೂ ಮಾನವ ಸರಪಳಿ ನಿರ್ಮಿಸಿದರು. ಇದರಿಂದ ಕೆಲ ಕಾಲ ವಾಹನ ಸಂಚಾರಕ್ಕೆ ವ್ಯತ್ಯಯವಾಯಿತು.
ಎಬಿವಿಪಿ ಮುಖಂಡರು ಮಾತನಾಡಿ, ಜಿಲ್ಲಾದ್ಯಂತ ಹಲವು ರಸ್ತೆಗಳು ಹಾಳಾಗಿವೆ. ಇದರಿಂದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ. ರಸ್ತೆಯ ಧೂಳಿನಿಂದ ಸಾರ್ವಜನಿಕರು ಹಾಗೂ ಯುವ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಆದ್ದರಿಂದ ಎಲ್ಲ ರಸ್ತೆಗಳ ಕಾಮಗಾರಿಶೀಘ್ರವೇ ಆರಂಭಿಸಿ ಜನರಿಗೆ ನ್ಯಾಯ ಒದಗಿಸಬೇಕಾಗಿ ಕೋರಿದ್ದಾರೆ.
ಒತ್ತಾಯ: ಎನ್‌ಎಚ್ ಹುಳಿಯಾರ್, ಕಣಕಟ್ಟೆ, ಬಾಣಾವರ, ಜಾವಗಲ್, ಬೇಲೂರು ಮಾರ್ಗವಾಗಿ ಇರುವ ರಸ್ತೆಯನ್ನು ಶೀಘ್ರವಾಗಿ ಕಾರ್ಯಾರಂಭ ಮಾಡಬೇಕು. ಹಾಸನ - ದುದ್ದ - ಅರಸೀಕೆರೆ ಮತ್ತು ತಿಪಟೂರು ಮಾರ್ಗವಾಗಿರುವ ಎನ್.ಎಚ್. ಹೆದ್ದಾರಿ ಕಾಮಗಾರಿಯನ್ನು ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.
ಆಗ್ರಹ: ಹಾಸನ ಮಾರ್ಗವಾಗಿ ರಾಮನಾಥಪುರ ಅರಕಲಗೂಡಿನ ರಸ್ತೆಯ ಕಾಮಗಾರಿಯನ್ನು ಶೀಘ್ರವಾಗಿ ಮುಗಿಸಬೇಕು. ಹಾಸನ ಜಿಲ್ಲಾದ್ಯಂತ ಇರುವ ಎಲ್ಲಾ ಹೆದ್ದಾರಿಗಳನ್ನು ಈ ಕೂಡಲೇ ಸಂಚರಿಸಲು ಅನುಕೂಲವಾಗುವಂತೆ ಸರಿಪಡಿಸಬೇಕು. ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಧೂಳು ಕಡಿಮೆ ಮಾಡಲು ನೀರನ್ನು ಹಾಕಿಸಬೇಕು. ಟೆಂಡರ್ ನೀಡಿರುವ ಎನ್.ಎಚ್. ಖಾಸಗಿ ಕಂಪನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಬಿವಿಪಿ ಜಿಲ್ಲಾ ಸಂಚಾಲಕ ಕಣಕಟ್ಟೆ ಮಂಜು, ಸಂಘಟನಾ ಕಾರ್ಯದರ್ಶಿ ಅಭಿಷೇಕ್, ತಾಲೂಕು ಪ್ರಮುಖರಾದ ಯತಿರಾಜ್, ಜೀವನ್, ನಗರ ಕಾರ್ಯದರ್ಶಿಗಳಾದ ಕೇಶವ, ಅಮಿತ್, ಲೋಕೇಶ್, ವಿದ್ಯಾರ್ಥಿ ಮುಖಂಡರಾದ ಜೀವನ್, ಮಧುಸೂದನ್, ಕೀರ್ತಿರಾಜ್, ಮಂಜುನಾಥ್ ಪಾಲ್ಗೊಂಡಿದ್ದರು.