ಒಂಟಿ ಸಲಗ ಸೆರೆ ಹಿಡಿಯಲು ಸಕಲ ಸಿದ್ಧತೆ
ಆಲೂರು: ತಾಲೂಕಿನ ಕೆಂಚಮ್ಮನ ಹೊಸಕೋಟೆ ಹೋಬಳಿ ಪುರಭೈರವನಹಳ್ಳಿ ಗ್ರಾಮದಲ್ಲಿ ಕಳೆದ ಗುರುವಾರ ಗ್ರಾಮದೊಳಗೆ ನುಗ್ಗಿ ಸರೋಜಮ್ಮ ಎಂಬವರನ್ನು ಹತ್ಯೆಗೈದಿದ್ದ ಒಂಟಿ ಸಲಗವೊಂದನ್ನು ಹಿಡಿಯಲು ಅರಣ್ಯ ಇಲಾಖೆ ಸಕಲ ಸಿದ್ಧತೆ ಕೈಗೊಂಡಿದೆ.
ಡೇರೆ ನಿರ್ಮಾಣ: ಕಳೆದ ಬಾರಿ ಕಾಡಾನೆಯನ್ನು ಹಿಡಿಯುವ ಸಂದರ್ಭದಲ್ಲಿ ಮಾಗಡಿಹಳ್ಳಿ ಬಳಿ ಕ್ಯಾಂಪ್ ನಿರ್ಮಿಸಿದ್ದ ಸ್ಥಳದಲ್ಲೇ ಈ ಬಾರಿಯೂ ಕ್ಯಾಂಪ್ ನಿರ್ಮಿಸಲಾಗಿದೆ. ಅಲ್ಲಿ ಆನೆಗಳಿಗೆ ಆಹಾರ, ಹಿಡಿದ ಆನೆ ಕಟ್ಟಲು ಬೇಕಾದ ಸೆಣಬಿನ ಹಗ್ಗ, ಕಾವಾಡಿಗಳು, ಮಾವುತರು, ವೈದ್ಯರು, ಶಾರ್ಪ್ ಶೂಟರ್ಗಳು ಸೇರಿತಂತೆ ನೂರಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಕುಳಿತುಕೊಳ್ಳಲು ಡೇರೆಗಳನ್ನು ನಿರ್ಮಿಸಲಾಗಿದೆ.
ಆನೆಗಳ ಆಗಮನ: ಶನಿವಾರ ಬೆಳಗ್ಗೆ ನಾಗರಹೊಳೆ ಕ್ಯಾಂಪಿನಿಂದ ಅರ್ಜುನ, ಅಭಿಮನ್ಯು, ಬಲರಾಮ ಆನೆಗಳು ಮಾಗಡಿ ಹಳ್ಳಿಯತ್ತ ಪ್ರಯಾಣ ಬೆಳೆಸಿದ್ದರೆ, ಕೆ. ಗುಡಿ ಕ್ಯಾಂಪ್ನಿಂದ ವಿಕ್ರಂ ಹಾಗೂ ಪ್ರಶಾಂತ್ ಎಂಬ ಆನೆಗಳೂ ಲಾರಿಯಲ್ಲಿ ಇಲ್ಲಿಗೆ ಬರುತ್ತಿವೆ.
ಡಿಸಿ ಸೂಚನೆ: ಈ 5 ಆನೆಗಳು ಶನಿವಾರ ರಾತ್ರಿ ವೇಳೆಗೆ ಕ್ಯಾಂಪ್ ಸೇರಲಿವೆ. ಶುಕ್ರವಾರ ಪುರಭೈರವನಹಳ್ಳಿ ಗ್ರಾಮದಲ್ಲಿ ಅರಣ್ಯ ಇಲಾಖೆಯವರು ಗ್ರಾಮಸ್ಥರೊಂದಿಗೆ ಸಭೆ ನಡೆಸಿದ ಸಂದರ್ಭದಲ್ಲಿ ಒಂದು ಆನೆಯನ್ನು ಹಿಡಿಯಲು ಪಿಸಿಸಿಎಫ್ನವರಿಗೆ ಅನುಮತಿ ನೀಡಲು ಅವಕಾಶ ಇರುವುದರಿಂದಾಗಿ ಶನಿವಾರದಿಂದಲೇ ಕಾರ್ಯಾಚರಣೆ ನಡೆಸಲು ಜಿಲ್ಲಾಧಿಕಾರಿ ತಿಳಿಸಿದ್ದರು.
ಗ್ರಾಮಸ್ಥರ ಕುತೂಹಲ: ಇದೇ ಸಂದರ್ಭದಲ್ಲಿ ಕೇಂದ್ರ ಅರಣ್ಯ ಸಚಿವರು, ಈ ಭಾಗದಲ್ಲಿ ಇರುವ ಎಲ್ಲಾ ಆನೆಗಳನ್ನು ಹಿಡಿಯಲು ಆದೇಶ ನೀಡಿರುವ ಪ್ರತಿಯ ಫ್ಯಾಕ್ಸ್ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಲುಪಿರುವುದಾಗಿ ತಿಳಿಸಿದ್ದರು. ಇದರಿಂದಾಗಿ ಸಭೆಯಲ್ಲಿ ಸೇರಿದ್ದ 30 ಹಳ್ಳಿಗಳಿಗೂ ಹೆಚ್ಚು ಗ್ರಾಮಸ್ಥರು ಎಲ್ಲ ಆನೆಗಳನ್ನು ಹಿಡಿದು ಸ್ಥಳಾಂತರಿಸಿ ತಾವು ಅನುಭವಿಸುತ್ತಿರುವ ನರಕಯಾತನೆ ಅಂತ್ಯವಾಯಿತು ಎಂದು ನಿಟ್ಟುಸಿರುಬಿಟ್ಟಿದ್ದರು. ಅದರಂತೆ, ಇಂದು ಕಾಡಾನೆಗಳು ಕ್ಯಾಂಪ್ನತ್ತ ಪ್ರಯಾಣ ಬೆಳೆಸಿರುವುದು ಅರಣ್ಯ ಇಲಾಖೆಯವರು ಮಾಗಡಿಹಳ್ಳಿಯಲ್ಲಿ ಕೈಗೊಂಡಿರುವ ಸಿದ್ಧತೆಗಳನ್ನು ವೀಕ್ಷಿಸಲು ಗ್ರಾಮಸ್ಥರು ತಂಡೋಪತಂಡವಾಗಿ ಮಾಗಡಿಹಳ್ಳಿಗೆ ಬಂದು ಕುತೂಹಲದಿಂದ ವೀಕ್ಷಿಸಿದರು.
ತಜ್ಞರ ಸಹಾಯ: ಈ ಸಂಬಂಧವಾಗಿ ಪತ್ರಿಕೆಯೊಂದಿಗೆ ಮಾತನಾಡಿದ ಆರ್ಎಫ್ಓ ದೇವರಾಜ್, ಈಗಾಗಲೇ ಸಾಕಾನೆಗಳು ಇತ್ತ ಪ್ರಯಾಣ ಬೆಳೆಸಿದ್ದು, ಒಟ್ಟು 10 ಆನೆಗಳು ಇಲ್ಲಿಗೆ ಬರಲಿವೆ. ಮೊದಲ ಹಂತವಾಗಿ ಅರ್ಜುನ, ಅಭಿಮನ್ಯು, ಬಲರಾಮ, ವಿಕ್ರಂ ಹಾಗೂ ಪ್ರಶಾಂತ್ ಆನೆಗಳು ಬರಲಿವೆ. ಇವು ಈ ಹಿಂದೆಯೂ ಹಲವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುವ ಅನುಭವಿ ಆನೆಗಳಾಗಿವೆ. ಇವುಗಳೊಂದಿಗೆ ವೈದ್ಯರಾದ ಚಿಟ್ಟಿಯಪ್ಪ, ಉಮಾಶಂಕರ್, ನಾಗರಾಜು ಹಾಗೂ ಶಾರ್ಪ್ ಶೂಟರ್ಗಳಾದ ಅಕ್ರಂ ಹಾಗೂ ಕರಂಬಯ್ಯ ಸೇರಿದಂತೆ ಅಧಿಕಾರಿ ವರ್ಗ, ಮಾವುತರು, ಕಾವಾಡಿಗಳು ಹಾಗೂ ಆನೆಗಳನ್ನು ಗುರುತಿಸಲು ಪರಿಣಿತ ತಜ್ಞರು ಬರಲಿದ್ದಾರೆ.
ಇವರೆಲ್ಲರಿಗೂ ಉಳಿದುಕೊಳ್ಳಲು ವಸತಿ ಹಾಗೂ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಹಿಡಿದ ಕಾಡಾನೆಯನ್ನು ಸಾಗಿಸಲು 10 ಚಕ್ರದ ಲಾರಿಯನ್ನು ಸಿದ್ಧಗೊಳಿಸಲಾಗಿದೆ.
ಪ್ರದೇಶ ಗುರುತು: ಶಾರ್ಪ್ ಶೂಟರ್ಗಳ ಜತೆ, ಸ್ಥಳೀಯರೇ ಆದ ಶಾರ್ಪ್ ಶೂಟರ್ ವೆಂಕಟೇಶ್ ಅವರು ಕಾರ್ಯಾಚಾರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಆನೆಗಳನ್ನು ಹಿಡಿದು ಕಟ್ಟಲು ಬೇಡಿ, ಸರಪಳಿ, ಹಗ್ಗಗಳನ್ನು ಸಿದ್ಧಪಡಿಸಲಾಗಿದೆ. ಶುಕ್ರವಾರದಿಂದಲೇ ಸಿಬ್ಬಂದಿಗಳೊಂದಿಗೆ ತಾವು ಇದೇ ಸ್ಥಳದಲ್ಲಿ ಬೀಡುಬಿಟ್ಟಿದ್ದು, ಆನೆಗಳಿರುವ ಪ್ರದೇಶಗಳನ್ನು ಗುರುತಿಸಿದ್ದೇವೆ ಎಂದರು.
ದೊಡ್ಡಬೆಟ್ಟ, ರಂಗನಬೆಟ್ಟ, ಕರಡಿಬೆಟ್ಟ, ಕೊಡಗಿನ ಹಂಪಾಪುರದ ಉಂಬಳಿಬೆಟ್ಟ ಹಾಗೂ ಸಕಲೇಶಪುರ ತಾಲೂಕಿನ ಕೆರೋಡಿ ಬೆಟ್ಟ ಅರಣ್ಯ ಪ್ರದೇಶದಲ್ಲಿ ಆನೆಗಳು ಇರುವುದನ್ನು ಗುರುತಿಸಲಾಗಿದೆ.
ಸಿದ್ಧತೆ: ಪ್ರಥಮವಾಗಿ ಹಿಡಿಯಲು ಆದೇಶ ಬಂದಿರುವ ಒಂಟಿಸಲಗವು ದೊಡ್ಡಬೆಟ್ಟ ಅರಣ್ಯ ಪ್ರದೇಶದಲ್ಲೇ ಬೀಡುಬಿಟ್ಟಿದ್ದು, ಆನೆ ಇದೇ ಸ್ಥಳದಲ್ಲಿ ನಾಳೆಯೂ ಇದ್ದರೆ ಹಿಡಿಯಲು ಅನುಕೂಲವಾಗುತ್ತದೆ. ಬೆಂಗಳೂರಿನಲ್ಲಿ ಶುಕ್ರವಾರ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ನಡೆದಿದ್ದು, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಸೇರಿದಂತೆ ಜಿಲ್ಲೆಯ ಎಲ್ಲಾ ಅರಣ್ಯಾಧಿಕಾರಿಗಳು ಪಾಲ್ಗೊಂಡಿದ್ದರು. ಈಗಾಗಲೇ ಮೊದಲ ಒಂದು ಆನೆ ಹಿಡಿಯಲು ಆದೇಶ ನೀಡಿರುವುದರಿಂದಾಗಿ ನಾವು ಭರದಿಂದ ಸಿದ್ಧತೆ ಕೈಗೊಂಡಿದ್ದೇವೆ ಎಂದು ವಿವರಿಸಿದರು.
ಈ ಸಂಬಂಧವಾಗಿ 'ಕನ್ನಡಪ್ರಭ'ದೊಂದಿಗೆ ಮಾತನಾಡಿದ ತಾಲೂಕು ಕಾಫಿ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಚಂದ್ರಶೇಖರ್, ಕಳೆದ ಬಾರಿ ಇದೇ ರೀತಿ ಭರವಸೆ ನೀಡಿ ಒಂದು ಆನೆ ಹಿಡಿದ ನಂತರ ಶಿಬಿರವನ್ನು ತೆರವುಗೊಳಿಸದೇ, ಹಂತಹಂತವಾಗಿ ಎಲ್ಲಾ ಆನೆ ಹಿಡಿಯುವ ಭರವಸೆ ನೀಡಿದ್ದರು. ಆದರೆ, ಈಗ ಗುರುತಿಸುತ್ತಿರುವ ದೊಡ್ಡ ಆನೆ ಮಕ್ನಾ ಎಂದು ಎಲ್ಲರೂ ಹೇಳುತ್ತಿದ್ದಾರೆ. ಆದರೆ, ಇದು ಮಕ್ನಾ ಆನೆಯಲ್ಲ ಎಂದು ಸ್ಥಳೀಯರು ತಿಳಿಸಿದ್ದು, ಈ ಭಾಗದಲ್ಲಿ ಇರುವ ಆನೆಗಳಲ್ಲೇ ಬಲಿಷ್ಠವಾದ 15 ಅಡಿಗೂ ಹೆಚ್ಚು ಎತ್ತರ ಇರುವ, ದೊಡ್ಡದಾದ ದಂತವನ್ನು ಹೊಂದಿರುವ ಒಂಟಿ ಸಲಗವಾಗಿದೆ. ಪ್ರಥಮವಾಗಿ ಆ ಆನೆಯನ್ನೇ ಹಿಡಿಯುತ್ತಾರೆಂಬ ಭರವಸೆಯಲ್ಲಿ ನಾವಿದ್ದೇವೆ ಎಂದರು. ಕಳೆದ ಬಾರಿ ಕೆರೋಡಿ ಬಳಿ ವ್ಯಕ್ತಿಯೊಬ್ಬರನ್ನು ಬಲಿ ತೆಗೆದುಕೊಂಡ ಆನೆ ಇದಾಗಿದ್ದು, ಕಳೆದ ಬಾರಿ ಮಾಡಿದಂತೆ ದೊಡ್ಡ ಆನೆಯನ್ನು ಹಿಡಿಯಲಾಗದೆ ಪುನಃ ಅದೇ ರೀತಿ ಚಿಕ್ಕ ಆನೆಯನ್ನು ಹಿಡಿದು ರಾತ್ರೋರಾತ್ರಿ ಜಾಗ ಖಾಲಿ ಮಾಡಿದಂತೆ ಈ ಬಾರಿ ಮಾಡಲು ನಾವು ಬಿಡುವುದಿಲ್ಲ. ಎಷ್ಟೇ ಕಷ್ಟವಾದರೂ ಮೊದಲಿಗೆ ಈ ಆನೆ ಹಿಡಿದು ನಂತರ ಮಕ್ನಾ ಆನೆ ಸೇರಿದಂತೆ ಉಳಿದ ಎಲ್ಲ ಆನೆಗಳನ್ನು ಹಿಡಿಯುವವರೆಗೂ ಕ್ಯಾಂಪನ್ನು ತೆರವುಗೊಳಿಸುವುದಿಲ್ಲ ಎಂದರು.
-ಎಚ್.ವಿ. ರಾಘವೇಂದ್ರ