ಗಮಕ ಹಬ್ಬ, ಕವಿ ನಮನ ಕಾರ್ಯಕ್ರಮ
ಹಾಸನ: ನಗರದ ಸೀತಾರಾಮಾಂಜನೇಯ ದೇವಾಲಯದ ಸಪ್ತಪದಿ ಸೌದಾಮಿನಿ ಸಭಾಂಗಣದಲ್ಲಿ ಕರ್ನಾಟಕ ಹಾಗೂ ಜಿಲ್ಲಾ ಗಮಕ ಕಲಾ ಪರಿಷತ್, ಶ್ರೀ ಸೀತಾರಾಮಾಂಜನೇಯ ಸೇವಾ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕಾರ್ಪೋರೇಷನ್ ಬ್ಯಾಂಕ್, ಕೆನರಾ ಬ್ಯಾಂಕ್, ಮೈಸೂರು ಬ್ಯಾಂಕ್ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಗಮಕ ಹಬ್ಬ ಕವಿ ನಮನ ಕಾರ್ಯಕ್ರಮದಲ್ಲಿ ಎಚ್.ಎನ್. ಪ್ರೀತಿ ಗಾಯನ ನಡೆಸಿಕೊಟ್ಟರು. ಕಾರಗೂಡಿನ ಎನ್. ಶ್ರದ್ಧಾ ವ್ಯಾಖ್ಯಾನ ನಡೆಸಿಕೊಟ್ಟರು. ಮಹಾಕವಿ ಲಕ್ಷ್ಮೀಶನ ಜೈಮನಿ ಭಾರತದ ಬಗ್ಗೆ ಗಮಕ ಗೋಷ್ಠಿ ನಡೆಯಿತು. ಪರಿಷತ್ನ ಗಣೇಶ್ ಉಡುಪ ಇದ್ದರು.
ನೇಕಾರಿಕೆ ಆಂದೋಲನ ಕುರಿತು ಸಭೆ
ಹಾಸನ: ನಗರದ ಸಂಸ್ಕೃತ ಭವನದಲ್ಲಿ ಜ.12ರಂದು ಬೆಳಗ್ಗೆ 11ಕ್ಕೆ ಕೈಮಗ್ಗೆ ನೇಕಾರಿಕೆ ಆಂದೋಲನ ಕುರಿತು ಸಭೆ ಏರ್ಪಡಿಸಲಾಗಿದೆ. ಹೆಗ್ಗೋಡಿನ ದೇಸಿ ಹಾಗೂ ಚರಕ ಸಂಸ್ಥೆಗಳ ಸಂಸ್ಥಾಪಕ, ಕನ್ನಡದ ಲೇಖಕ ಹಾಗೂ ರಂಗನಿರ್ದೇಶಕ ಸಮುದಾಯ ಖ್ಯಾತಿಯ ಪ್ರಸನ್ನ ಅವರು ಕೈಮಗ್ಗ ನೇಕಾರಿಕೆ ಕ್ಷೇತ್ರಗಳಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧ ಅಖಿಲ ಭಾರತ ಕೈಮಗ್ಗ ಸಂಘಟನೆಯು ಕರೆಕೊಟ್ಟಿರುವ ರಾಷ್ಟ್ರೀಯ ಆಂದೋಲನ ವಿಷಯವಾಗಿ ಮಾತನಾಡಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ, ಜಿ.ಆರ್. ಮಂಜೇಶ್, ಸಂಚಾಲಕರು, (ಮೊ. 9448052513) ಅಖಿಲ ಭಾರತ ಕೈಮಗ್ಗ ಸಂಘಟನೆಗಳ ಒಕ್ಕೂಟ, ಹಾಸನ ಶಾಖೆ. ಇವರನ್ನು ಸಂಪರ್ಕಿಸಬಹುದು.ಪರೀಕ್ಷೆಗೆ ಹೆದರಿ
ಯುವತಿ ಆತ್ಮಹತ್ಯೆ
ಹಾಸನ: ಹೊಸಲೈನ್ ರಸ್ತೆ ಬಳಿ ಇರುವ ಮಹಮದ್ ರಫೀಕ್ ಎಂಬುವರ ಮಗಳಾದ ಕುಬ್ರಭಾನು (20) ಎಂಬ ಯುವತಿ ನೇಣಿಗೆ ಶರಣಾಗಿ ಸಾವನಪ್ಪಿದ್ದಾಳೆ. ಬಿಕಾಂ ಓದುತ್ತಿರುವ ಈಕೆ, ಎಂದಿನಂತೆ ಮನೆಗೆ ಬಂದಿದ್ದು, ಮನೆ ಒಳಗೆ ತನ್ನ ರೂಮ್ ಬೀಗ ಹಾಕಿಕೊಂಡು ಮಲಗಿದ್ದಳು. ಬೆಳಗ್ಗೆ ಎಷ್ಟು ಹೊತ್ತಾದರೂ, ಬಾಗಿಲು ಬಡೆದರೂ ಹೊರ ಬರದೆ ಇದ್ದಾಗ ಗಾಬರಿಯಿಂದ ಪೋಷಕರು ಬಾಗಿಲು ತೆಗೆದು ಮಾಡಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಪರೀಕ್ಷೆ ಎದುರಿಸಲು ಧೈರ್ಯ ಇಲ್ಲದೇ ಈ ಘಟನೆಯಿಂದ ನಡೆದಿರಬಹುದು ಎಂದು ಶಂಕಿಸಲಾಗಿದೆ. ಪೆನ್ಷನ್ ಮೊಹಲ್ಲಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪಿಎಸ್ಐ ಚೇತರಿಕೆಗೆ ವಿಶೇಷ ಪೂಜೆ
ಹಾಸನ: ಹಂತಕನ ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿರುವ ಗುಲ್ಬರ್ಗದ ಪಿಎಸ್ಐ ಮಲ್ಲಿಕಾರ್ಜುನ್ ಬಂಡೆ ಶೀಘ್ರ ಗುಣಮುಖರಾಗಲು ನಗರದಲ್ಲಿ ಭಾನುವಾರ ನಾನಾ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಗರದ ಶ್ರೀ ಸೀತಾರಾಮಾಂಜನೇಯ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು ವಿಶ್ವಹಿಂದು ಪರಿಷತ್ ಕಟ್ಟಾಯ ಶಿವಕುಮಾರ್, ಕಾವಲು ಪಡೆ ಜಿಲ್ಲಾಧ್ಯಕ್ಷ ನವೀನ್ ಕುಮಾರ್, ಶ್ರೀರಾಮ ಸೇನೆ ಅಧ್ಯಕ್ಷ ಜಾನೇಕೆರೆ ಹೇಮಂತ್, ವಿಷ್ಣುಸೇನೆ ಅಧ್ಯಕ್ಷ ಮಹಂತೇಶ್ ಇತರರು ಇದ್ದರು.
ಲೋಕ ಕಲ್ಯಾಣಾರ್ಥ ಚಂಡಿಕಾ ಹೋಮ
ಹಾಸನ: ಚನ್ನರಾಯಪಟ್ಟಣ ತಾಲೂಕಿನ ಕತ್ತರಿಘಟ್ಟ ಶ್ರೀ ಮೆಳಿಯಮ್ಮ ಆಧ್ಯಾತ್ಮಿಕ ಕೇಂದ್ರದಿಂದ ಜ.19ರಂದು ಲೋಕ ಕಲ್ಯಾಣಾರ್ಥ ಚಂಡಿಕಾ ಹೋಮ ನಡೆಯಲಿದೆ ಎಂದು ಚಂದ್ರಶೇಖರ ಗುರೂಜಿ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿ, ಜ.18ರ ಸಂಜೆ ಧಾರ್ಮಿಕ ಕಾರ್ಯಕ್ರಮಗಳು ಪುಣ್ಯಾಹ ಮಹಾಸಂಕಲ್ಪ ಚಂಡಿಕಾ ಪಾರಾಯಣ ಕಳಶ ಸ್ಥಾಪನೆ ಮಾಡಲಾಗುವುದು,.
ಜ. 19ರಂದು ಅಭಿಷೇಕ, ನವಗ್ರಹ ಪುರಸ್ಕಾರ, ಭಜನಾ ಕಾರ್ಯಕ್ರಮಗಳು ನಡೆಯಲಿದ್ದು ಚಂಡಿಕಾ ಹೋಮ, ಪೂರ್ಣಾಹುತಿ, ಮಹಾ ಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.
ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾ ಸ್ವಾಮೀಜಿಯವರು, ಡಾ. ಮಹರ್ಷಿ ದರ್ಪಣ ಆನಂದ ಗುರೂಜಿ, ಶ್ರೀ ಅಗೋರಿಬಾಬಾ, ಕುಂದೂರು ಮಠದ ಶ್ರೀ ಪರದೇಶಿರಾಮಯ್ಯ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ.
ವಿವೇಕಾನಂದರಜನ್ಮ ದಿನಾಚರಣೆ
ಹಾಸನ: ಟೈಮ್ಸ್ ಇಂಟರ್ ನ್ಯಾಷನಲ್ ಶಾಲೆಯ ಆವರಣದಲ್ಲಿ ಜ. 12ರಂದು ಬೆಳಗ್ಗೆ 10.30ಕ್ಕೆ ಸ್ವಾಮಿ ವಿವೇಕಾನಂದ ಅವರ 150ನೇ ಜನ್ಮ ದಿನಾಚರಣೆ ಹಮ್ಮಿಕೊಳ್ಳಲಾಗಿದೆ.
ಸ್ವಾಮಿ ವಿವೇಕಾನಂದ ಸಮಿತಿಯ ಜಿಲ್ಲಾ ಸಂಯೋಜಕ ಹರಿಹರಪುರ ಶ್ರೀಧರ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಕಾರ್ಯ ನಿರ್ವಾಹಕ ವಿಜಯ್ ಕುಮಾರ್ ಸಾರ್ವೆ, ಟೈಮ್ಸ್ ಇಂಟರ್ ನ್ಯಾಷನಲ್ ವಿದ್ಯಾಸಂಸ್ಥೆ ಅಧ್ಯಕ್ಷ ಸುರೇಂದ್ರ, ಅಧ್ಯಕ್ಷ ಗಂಗಾಧರ್, ಪ್ರಾಂಶುಪಾಲೆ ಉಮಾ ಎಸ್. ಪಾಟೀಲ್ ಭಾಗವಹಿಸುವರು.