ನಿಗದಿತ ಸ್ಥಳದಲ್ಲೇ ಈದ್ ಮೆರವಣಿಗೆ
ಕ.ಪ್ರ.ವಾರ್ತೆ , ಹಾಸನ , ಜ.11
ಈದ್ ಮಿಲಾದ್ ಹಬ್ಬವನ್ನು ಶಾಂತಿಯುತವಾಗಿ ನಡೆಸಿ, ನಿಗದಿತ ಸ್ಥಳದಲ್ಲಿಯೇ ಮೆರವಣಿಗೆ ನಡೆಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ ಹೇಳಿದ್ದಾರೆ.
ನಗರದ ಜಿಲ್ಲಾ ಪೊಲೀಸ್ ಕಚೇರಿಯ ಸಭಾಂಗಣದಲ್ಲಿ ಭಾನುವಾರ ಈದ್ ಮಿಲಾದ್ ಹಾಗೂ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ನಡೆದ ಶಾಂತಿ ಸುವ್ಯವಸ್ಥೆ ಕುರಿತು ಸಮಾಜದ ಮುಖಂಡರ ಸಮಾಲೋಚನೆ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಸಲಹೆ: ಯಾವುದೇ ಧರ್ಮ ಆಗಿರಲಿ ದ್ವೇಷಿಸದೆ, ಪರಸ್ಪರ ಪ್ರೀತಿಸುವ ಮೂಲಕ ಶಾಂತಿ ಕಾಪಾಡಬೇಕು. ಪ್ರತಿಯೊಬ್ಬರೂ ತಮ್ಮ ಹಬ್ಬದ ಉದ್ದೇಶವನ್ನು ಅರ್ಥ ಮಾಡಿಕೊಂಡು ಸಮಾಜದಲ್ಲಿ ಯಾವ ಕೆಟ್ಟ ಯೋಚನೆ ಮಾಡದೆ ನಡೆದುಕೊಳ್ಳುವ ಮೂಲಕ ತಮ್ಮ ಮಕ್ಕಳಿಗೂ ಅದನ್ನು ಅರ್ಥೈಸಬೇಕು ಎಂದು ಸಲಹೆ ನೀಡಿದರು.
ಮನವರಿಕೆ ಅವಶ್ಯಕ: ಹಬ್ಬ ಮಾಡುವುದರ ಮೂಲಕ ತಮ್ಮ ಬದುಕನ್ನು ಅರ್ಥ ಮಾಡಿಕೊಂಡು ಸಾರ್ಥಕತೆ ಮಾಡಿಕೊಳ್ಳಬೇಕು ಎಂದು ಹೇಳಿದ ಅವರು, ಯಾರೇ ತಪ್ಪು ದಾರಿಗೆ ಹೋಗುವುದು ಕಂಡು ಬಂದಾಗ ಗುರುಗಳು ಅವರಿಗೆ ತಿದ್ದಿ ಹೇಳುವ ಮೂಲಕ ಮನವರಿಕೆ ಮಾಡಿಕೊಡುವುದು ಅವಶ್ಯಕ. ಏನೇ ಕೆಲಸ ಮಾಡುವ ಮೊದಲು ಕಾನೂನು ಅಡಿಯಲ್ಲಿ ಇರುವಂತೆ ನಡೆದುಕೊಳ್ಳಬೇಕು ಎಂದರು.
ಬಿಗಿ ಭದ್ರತೆ: ಈದ್ ಮಿಲಾದ್ ಹಬ್ಬದ ಹಿನ್ನಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಮುನ್ನೆಚ್ಚರಿಕೆ ಕ್ರಮವಾಗಿ 6 ಜನ ಇನ್ಸ್‌ಪೆಕ್ಟರ್, 20 ಜನ ಸಬ್ ಇನ್ಸ್‌ಪೆಕ್ಟರ್, 2 ಜನ ಡಿವೈಎಸ್ಪಿ, ಎಎಸ್ಪಿ, 50 ಜನ ಹೋಮ್ ಗಾರ್ಡ್ಸ್, ಕೆ.ಎಸ್.ಆರ್.ಪಿ. ಡಿ.ಆರ್ ಪಡೆಯನ್ನು ನಿಯೋಜಿಲಾಗುವುದು. ವಿಡಿಯೋ ಚಿತ್ರೀಕರಣ ಇರುತ್ತದೆ. ಹಬ್ಬ ಮಾಡಿ ಯುವಕರಿಗೆ ಉತ್ತಮ ಸಂದೇಶ ನೀಡಿ. ಧಾರ್ಮಿಕ ಬಾಂಧವ್ಯ ಹಾಗೂ ಅನ್ಯೋನ್ಯತೆ ಬೆಳೆಸಿಕೊಳ್ಳುವಂತೆ ನೆರೆದಿದ್ದ ಹಿಂದೂ ಮತ್ತು ಮುಸ್ಲಿಂ ಭಾಂದವರಿಗೆ ಅವರು ಕರೆ ನೀಡಿದರು.
ಸಲಹೆ: ಅಪರ ಪೊಲೀಸ್ ವರಿಷ್ಠಾಧಿಕಾರಿ ಜೆ.ಕೆ. ರಶ್ಮಿ ಮಾತನಾಡಿ, ನಾಯಕತ್ವದ ಕೊರತೆ ಇರಬಾರದು. ಎಲ್ಲರೂ ನಾಯಕರಾಗಲು ಸಾಧ್ಯವಿಲ್ಲ. ಮುಖಂಡತ್ವ ವಹಿಸಿಕೊಂಡು ಮೆರವಣಿಗೆಯನ್ನು ಶಾಂತಿಯುತವಾಗಿ ನಡೆಸುವ ಜವಾಬ್ದಾರಿ ಮುಖಂಡರ ಮೇಲಿದೆ.
ಮೆರವಣಿಗೆ ಮೊದಲು ಸಾಗುತ್ತಿದ್ದ ಮಾರ್ಗದಲ್ಲಿ ಸಾಗಬೇಕು. ಯಾವ ಮತದ ಬಗ್ಗೆಯೂ ಅವಹೇಳನಕಾರಿ ಮಾತುಗಳನ್ನು ಹೇಳದೆ, ವೈಯಕ್ತಿಕ ದ್ವೇಷವನ್ನು ಇಟ್ಟುಕೊಳ್ಳದೇ ಹಬ್ಬದ ಉದ್ದೇಶವಾಗಿ ಮಾತ್ರ ಮೆರವಣಿಗೆ ನಡೆಸುವಂತೆ ಸಲಹೆ ನೀಡಿದರು.
ಧ್ವನಿ ವರ್ಧಕಗಳ ಮೂಲಕ ಶಬ್ದವನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ ಎಂದ ಅವರು, ದ್ವಿ ಚಕ್ರ ವಾಹನಗಳನ್ನು ಬಳಸಬೇಡಿ. ಜೊತೆಯಲ್ಲಿ ಚಿಕ್ಕ ಮಕ್ಕಳನ್ನು ಕರೆದೊಯ್ಯಬೇಡಿ. ಈ ಜಿಲ್ಲೆ ಇತರೆ ಜಿಲ್ಲೆಗಳಿಗೆ ಮಾದರಿಯಾಗಿ ಬಿಂಬಿಸುವಂತೆ ಕೆಲಸ ಮಾಡುವಂತೆ ಅವರು ಸಲಹೆ ನೀಡಿದರು.
ಸಭೆಯಲ್ಲಿ ಡಿವೈಎಸ್ಪಿ ಪರಮೇಶ್ವರ್ ಭೀಮಕ್ಕನವರ, ಹಾಸನ ನಗರಠಾಣೆ ಇನ್ಸ್‌ಪೆಕ್ಟರ್ ಸಂಜೀವೇಗೌಡ, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಶ್ರೀನಿವಾಸ್ ಗೌಡ, ಪ್ರಧಾನ ಕಾರ್ಯದರ್ಶಿ ಕಟ್ಟಾಯ ಶಿವಕುಮಾರ್, ಕಾವಲು ಪಡೆ ಜಿಲ್ಲಾಧ್ಯಕ್ಷ ನವೀನ್ ಕುಮಾರ್, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಸಿ.ಡಿ. ಮನುಕುಮಾರ್, ಶ್ರೀರಾಮ ಸೇನೆ ಅಧ್ಯಕ್ಷ ಜಾನೇಕೆರೆ ಹೇಮಂತ್, ವಿಷ್ಣುಸೇನೆ ಅಧ್ಯಕ್ಷ ಮಹಂತೇಶ್, ನಗರಸಭೆ ಮಾಜಿ ಅಧ್ಯಕ್ಷ ಅಕ್ಬರ್ ಇತರರು ಭಾಗವಹಿಸಿದ್ದರು.